ಅಮೆರಿಕದಲ್ಲಿ ಟ್ರಂಪ್ ನಡೆ ಮತ್ತು ಹುಟ್ಟೂರು ಯಾವುದೆಂಬ ಬಹುಕಾಲದ ಪ್ರಶ್ನೆ: ಸಂದಿಗ್ಧ ಕಾಲದಲ್ಲಿ ಉತ್ತರ ಹುಡುಕುವುದು ಸುಲಭವಲ್ಲ -ರಂಗನೋಟ ಅಂಕಣ
ರಂಗಸ್ವಾಮಿ ಮೂಕನಹಳ್ಳಿ ಬರಹ: ಮೂರ್ನಾಲ್ಕು ದಶಕಗಳ ಹಿಂದೆ ನಿಮ್ಮ ಹುಟ್ಟೂರು ಯಾವುದು ಎಂದರೆ ಹೆಸರಿನ ಮುಂದೆ ಒಂದೊಳ್ಳೆ ಹೆಸರು ಕಡ್ಡಾಯವಾಗಿ ಇರುತ್ತಿತ್ತು. ಬದಲಾದ ಸಮಯ, ಇದನ್ನು ಬದಲಿಸಿ ಬಿಟ್ಟಿದೆ. ಈ ನೆಪದಲ್ಲಿ ನಮ್ಮೂ ಊರುಗಳನ್ನು ನೆನಪಿಸಿಕೊಳ್ಳೋಣ.

ನೀವು ಎಲ್ಲಿ ಹುಟ್ಟಿದ್ದು? ಎನ್ನುವ ಪ್ರಶ್ನೆಗೆ ನಾವೆಲ್ಲರೂ ಬಹಳ ಖುಷಿಯಿಂದ ನಾವು ಹುಟ್ಟಿದ ಊರಿನ ಹೆಸರು ಹೇಳುತ್ತೇವೆ ಅಲ್ವಾ? ಮಗು ಏರ್ ಬಾರ್ನ್ ಅಥವಾ ಸ್ಕೈ ಬಾರ್ನ್ ಆದರೆ? ಅಂದರೆ ಮಗು ವಿಮಾನದಲ್ಲಿ ಪ್ರಯಾಣ ಮಾಡುವಾಗ ಹುಟ್ಟಿದ್ದರೆ? ಆ ಮಗುವಿನ ಹುಟ್ಟೊರು ಯಾವುದು ಅಂತ ನಮೂದಿಸುವುದು? ಇಂತಹ ಒಂದು ಸನ್ನಿವೇಶದ ಬಗ್ಗೆ ನಾನು ಯೋಚಿಸಿರಲಿಲ್ಲ. ನಿತ್ಯ ರಾತ್ರಿ ಊಟವಾದ ಬಳಿಕ ನನ್ನ ಮಗಳು ಅನ್ನಿ ಜೊತೆ ಪಾರ್ಕ್‌ನಲ್ಲಿ ಎರಡು ಕಿಲೋಮೀಟರ್ ವಾಕ್ ಮಾಡುವುದು ಅಭ್ಯಾಸ. ಆಗವಳು ಕೇಳುವ ಪ್ರಶ್ನೆಗಳು ಅನೇಕ. ನಿನ್ನೆಯ ಪ್ರಶ್ನೆ, 'ಮಗು ವಿಮಾನದಲ್ಲಿ ಹುಟ್ಟಿದರೆ ಯಾವ ಊರು ಅಂತ ಹೇಳಬೇಕು' ಅನ್ನುವುದು. ಇದರ ಬಗ್ಗೆ ಒಂದಿಷ್ಟು ಸಂಶೋಧನೆ ಮಾಡಿದಾಗ ತಿಳಿದದ್ದು ನಿಮಗಾಗಿ ಇಲ್ಲಿದೆ.
ಸಾಮನ್ಯವಾಗಿ ತುಂಬು ಗರ್ಭಿಣಿಯರನ್ನು ವಿಮಾನದಲ್ಲಿ ಪ್ರಯಾಣ ಮಾಡಲು ಬಿಡುವುದಿಲ್ಲ. ಹೀಗಾಗಿ ಇಂತಹ ಘಟನೆಗಳು ಬಹಳ ಕಡಿಮೆ. 1929 ರಿಂದ ಇಲ್ಲಿಯವರೆಗೆ ಒಂದಿಷ್ಟು ಡಜನ್ ಮಕ್ಕಳು ವಿಮಾನದಲ್ಲಿ ಹುಟ್ಟಿದ್ದಾರೆ. ಎಷ್ಟು ವಾರದ ವರೆಗೆ ಬಿಡಬೇಕು ಎನ್ನುವುದು ಆಯಾ ವಿಮಾನ ನಡೆಸುವ ಸಂಸ್ಥೆಗಳಿಗೆ ಬಿಟ್ಟಿದ್ದು. ಕೆಲವು ಸಂಸ್ಥೆಗಳು 28 ವಾರಗಳ ನಂತರ ಬಿಡುವುದಿಲ್ಲ. ಕೆಲವು ನಿಗದಿತ ದಿನಾಂಕಕ್ಕೆ ಒಂದು ವಾರ ಮುಂಚಿನವರೆಗೆ ಬಿಡುತ್ತವೆ. ಆಫ್‌ಕೋರ್ಸ್ ಡಾಕ್ಟರ್ ಸರ್ಟಿಫಿಕೇಟ್ ಇರಬೇಕು.
ಹಾಗೊಮ್ಮೆ ಮಗು ಮಿಡ್ ಏರ್‌ನಲ್ಲಿ (ವಾಯು ಮಾರ್ಗದಲ್ಲಿ) ಜನಿಸಿದರೆ ಹಲವು ಸಾಧ್ಯತೆಗಳಿವೆ
ಸಾಧ್ಯತೆ- 1: ಅಪ್ಪ ಅಮ್ಮನ ದೇಶ ಯಾವುದೋ ಅದನ್ನೇ ಮಗುವಿನ ಹುಟ್ಟೂರು ಅಥವಾ ಹುಟ್ಟಿದ ದೇಶ ಎನ್ನುವುದು.
ಸಾಧ್ಯತೆ- 2: ಮಗು ಜನಿಸಿದಾಗ ವಿಮಾನವು ಯಾವ ದೇಶದ ವಾಯುವಲಯದಲ್ಲಿತ್ತೋ (ಏರ್ ಸ್ಪೇಸ್) ಆ ದೇಶದಲ್ಲಿ ಹುಟ್ಟಿದ್ದು ಎನ್ನುವುದು. ಜಗತ್ತಿನಲ್ಲಿ ಹಲವಾರು ದೇಶಗಳು ಆ ದೇಶದ ಸರಹದ್ದಿನಲ್ಲಿ ಹುಟ್ಟಿದ ಮಕ್ಕಳನ್ನು ತನ್ನ ದೇಶದ ಪ್ರಜೆಗಳು ಎಂದು ಗುರುತಿಸುತ್ತದೆ.
ಸಾಧ್ಯತೆ- 3: ವಿಮಾನಯಾನ ಸಂಸ್ಥೆಯು ಯಾವ ದೇಶದಲ್ಲಿ ನೋಂದಾಯಿತವಾಗಿರುತ್ತದೆಯೋ ಮಗು ಆ ದೇಶಕ್ಕೆ ಸೇರಿದ್ದು ಎನ್ನುವ ಘಟನೆಗಳು ಕೂಡ ಇವೆ.
ವಿಮಾನದಲ್ಲಿ ಮಗು ಹುಟ್ಟುವುದು ಬಹಳ ವಿರಳ. ಹೀಗಾಗಿ ಇಲ್ಲಿ ಮಗುವಿನ ಹುಟ್ಟೂರು ಮತ್ತು ಪೌರತ್ವದ ಬಗ್ಗೆ ಸಾಕಷ್ಟು ಗೊಂದಲವಿದೆ. ಮೇಲೆ ಹೇಳಿದ ಮೂರು ಸಾಧ್ಯತೆಗಳಲ್ಲಿ ಒಂದು ಮಗುವಿಗೆ ದಕ್ಕುತ್ತದೆ.
ಫ್ರೀ ಟಿಕೆಟ್ ಎನ್ನುವುದು ಸುಳ್ಳು
ಇನ್ನು ಹೀಗೆ ವಿಮಾನದಲ್ಲಿ ಹುಟ್ಟಿದ ಮಗುವಿಗೆ ಜೀವಮಾನ ಪೂರ್ತಿ ಉಚಿತ ಏರ್ ಟಿಕೆಟ್ ಸಿಗುತ್ತದೆ ಎನ್ನುವುದು ಶುದ್ಧ ಸುಳ್ಳು. ಆದರೆ ಅವರ ಪ್ರತಿ ಜನ್ಮದಿನದಂದು ವಿಮಾನಯಾನ ಸಂಸ್ಥೆಯು ಉಚಿತ ಟಿಕೆಟ್ ಕೊಟ್ಟ ಉದಾಹರಣೆ ಇದೆ. ಒಂದಿಷ್ಟು ಮೈಲ್ಸ್ (ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್ ಥರ) ಮಗುವಿನ ಹೆಸರಲ್ಲಿ ನೀಡುವುದು ಉಂಟು. ಹೀಗೆ ಹಲವಾರು ಉಡುಗೊರೆ ಸಿಗುತ್ತದೆ. ಆದರೆ ಅದ್ಯಾವುದು ಕೊಡಲೇಬೇಕು ಎನ್ನುವ ಲೆಕ್ಕದ್ದಲ್ಲ. ಇದೆಲ್ಲ ಆಯಾ ವಿಮಾನಯಾನ ಸಂಸ್ಥೆಗಳ ನಿರ್ಧಾರ ಅವಲಂಬಿಸಿದೆ.
ಜೆಟ್ ಏರ್‌ವೇಸ್‌ನಲ್ಲಿ 2017 ರಲ್ಲಿ ಒಂದು ಮಗು ಜನಿಸಿತ್ತು. ಜೆಟ್ ಏರ್‌ವೇಸ್ ಆ ಮಗುವಿಗೆ ಜೀವಮಾನ ಪೂರಾ ಉಚಿತ ಟಿಕೆಟ್ ಕೊಡುವುದಾಗಿ ಘೋಷಿಸಿತ್ತು. ಆದರೇನು ಇದೀಗ ಜೆಟ್ ಏರ್‌ವೇಸ್ ಸಂಸ್ಥೆಯೇ ಇಲ್ಲವಲ್ಲ. ನೀವೇನೇ ಹೇಳಿ ಸ್ವಾಮಿ ಹುಟ್ಟಿದ ಊರು ಯಾವುದು ಅಂದರೆ ನಮ್ಮೂರಿನ ಹೆಸರು ಹೇಳುವುದರಲ್ಲಿ ಬರುವ ಮಜಾ ಮಿಡ್ ಏರ್ ಅಥವಾ ಏರ್ ಬಾರ್ನ್ (ಆಗಸದಲ್ಲಿ ಜನಿಸಿದ್ದು) ಎನ್ನುವುದರಲ್ಲಿ ಬರುವುದಿಲ್ಲ ಅಲ್ವಾ? ಇದೆಲ್ಲಾ ಸರಿ ಇಷ್ಟೊಂದು ಪೀಠಿಕೆ ಏಕೆ ಎಂದಿರಾ? ಅದಕ್ಕೂ ಎರಡು ಕಾರಣಗಳಿವೆ.
ಸ್ಪೇನ್ ದೇಶದ ನಿಯಮಗಳು ಹೀಗಿವೆ
ನಾನು ವಾಸವಿದ್ದ ಸ್ಪೇನ್‌ನ ಕತಲೂನ್ಯದಲ್ಲಿ ಕೂಡ ಇಂತಹುದೇ ಒಂದು ನಿಯಮ ಉಂಟು. ಈ ರಾಜ್ಯದಲ್ಲಿ ಹುಟ್ಟಿದ ಮಗುವನ್ನು ಅವರು ತಮ್ಮ ರಾಜ್ಯದ ಮಗು ಎಂದು ಪರಿಗಣಿಸುತ್ತಾರೆ. ಅಂದರೆ ಅಪ್ಪ-ಅಮ್ಮ ವಲಸಿಗರಾಗಿದ್ದರೂ ಕೂಡ, ಅವರ ಬಳಿ ಲೀಗಲ್ ರೆಸಿಡೆನ್ಸಿಯಲ್ ಸ್ಟೇಟಸ್ ಇದ್ದರೆ ಸಾಕು. ಈ ನೆಲದಲ್ಲಿ ಹುಟ್ಟಿದ ಮಗುವನ್ನ ಈ ದೇಶದ, ರಾಜ್ಯದ ಪ್ರಜೆ ಎಂದು ಕರೆಯುತ್ತಾರೆ. ಹೀಗಾಗಿ ಮಗುವಿಗೆ ಬೇರೆ ಯಾವುದೇ ರೀತಿಯ ಅಡಚಣೆಗಳಿಲ್ಲದೆ ಅಲ್ಲಿನ ಪೌರತ್ವ ನೀಡಲಾಗುತ್ತದೆ. ಹೀಗಾಗಿ ಅನನ್ಯ ಹುಟ್ಟಿದ್ದಾಗ ಇಲ್ಲಿನ ವೈದ್ಯರು ಮಗುವನ್ನು ಕೈಗಿಡುತ್ತಾ ಇನ್ನೊಬ್ಬಳು ಕತಲಾನಾ ಹುಟ್ಟಿದಳು ಎಂದಿದ್ದರು.
ಉಳಿದಂತೆ ಸ್ಪ್ಯಾನಿಷ್ ಭಾಷೆಯನ್ನ ಮಾತನಾಡಲು ಬಾರದ ದೇಶದಿಂದ ಹೋದ ವಲಸಿಗರು 10 ವರ್ಷ ಅಲ್ಲಿ ಜೀವನ ಮಾಡಬೇಕು. ಅಲ್ಲಿನ ಸಮಾಜಕ್ಕೆ ಹೊಂದಿಕೊಳ್ಳಬೇಕು. ಕೆಲಸ ಮಾಡುತ್ತಿರಬೇಕು. ನ್ಯಾಯಯುತವಾಗಿ ತೆರಿಗೆ ಸಲ್ಲಿಸುತ್ತಿರಬೇಕು. ಇಷ್ಟೆಲ್ಲಾ ಸರಿಯಾಗಿದೆ ಎಂದರೆ ಆಗ ನೀವು ಈ ದೇಶದ ಪೌರತ್ವಕ್ಕೆ ಅರ್ಹರು. ಅಂದಮಾತ್ರಕ್ಕೆ ಎಲ್ಲವೂ ಬೇಗ ಆಗಿಬಿಡುತ್ತದೆ ಎನ್ನುವಂತಿಲ್ಲ. ನೀವು ಕೇವಲ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಅಷ್ಟೇ! ಆ ನಂತರದ್ದು ಇನ್ನೊಂದು ಸಾಹಸಗಾಥೆ.
ಅಮೆರಿಕ ವಿಚಾರ ಮತ್ತೊಂದು ಬಗೆ
ಮೊದಲಿನಿಂದಲೂ ಅಮೇರಿಕದಲ್ಲಿ ಹುಟ್ಟಿದ ಮಗು ಅಮೆರಿಕನ್ ಪ್ರಜೆ ಎನ್ನಿಸಿಕೊಳ್ಳುತ್ತಿತ್ತು. ಮಗುವಿನ ಹೆತ್ತವರು ಆ ದೇಶದಲ್ಲಿ ಪ್ರವಾಸಿಗರಾಗಿದ್ದರೂ ಅಥವಾ ಅಕ್ರಮ ವಲಸಿಗರಾಗಿದ್ದರೂ ಕೂಡ ಅವರು ಹೆತ್ತ ಮಗು ಅಮೆರಿಕನ್ ಆಗುತ್ತಿತ್ತು. ಈಗ ಟ್ರಂಪ್ ಇದಕ್ಕೆ ಬ್ರೇಕ್ ಹಾಕಿದ್ದಾರೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಕಾರ್ಯಸೂಚಿಯನ್ನು ಹೊರಡಿಸಿದ್ದಾರೆ. ಇದನ್ನು ವಿರೋಧಿಸಿ ಬಹಳಷ್ಟು ರಾಜ್ಯಗಳು ದಾವೆ ಹೂಡಿವೆ. ನಮ್ಮ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾನು ಹೊಸ ಬದಲಾವಣೆ ಮಾಡಿಲ್ಲ. ನಮ್ಮ ಕಾನೂನಿನ ನಿಜವಾದ ಅರ್ಥ ಏನು ಎನ್ನುವುದನ್ನು ವ್ಯಾಖ್ಯಾನಿಸಿದ್ದೇನೆ (ಇಂಟೆರ್ಪ್ರಿಟ್) ಮಾಡಿದ್ದೇನೆ ಅಷ್ಟೇ ಎನ್ನುತ್ತಾರೆ ಟ್ರಂಪ್. ಒಟ್ಟಾರೆ ಹೇಳಬೇಕೆಂದರೆ ಟ್ರಂಪ್ ವಿಜಯದ ನಗೆ ಬಿರುವುದು ಗ್ಯಾರಂಟಿ.
ಇವತ್ತು ಜಾಗತೀಕರಣದ ಪ್ರಭಾವದ ಕಾರಣ ಇಷ್ಟೆಲ್ಲಾ ಗಲಾಟೆ ಆಗುತ್ತಿದೆ. ಮೂರ್ನಾಲ್ಕು ದಶಕಗಳ ಹಿಂದೆ ನಿಮ್ಮ ಹುಟ್ಟೂರು ಯಾವುದು ಎಂದರೆ ಹೆಸರಿನ ಮುಂದೆ ಒಂದೊಳ್ಳೆ ಹೆಸರು ಕಡ್ಡಾಯವಾಗಿ ಇರುತ್ತಿತ್ತು. ಬದಲಾದ ಸಮಯ, ಇದನ್ನು ಬದಲಿಸಿ ಬಿಟ್ಟಿದೆ.


