ಕನ್ನಡ ಸುದ್ದಿ  /  Lifestyle  /  Column Sri Lanka Puts Board To Conserve Peacocks Rangaswamy Mookanahalli On Importance Of Wildlife Conservation Dmg

ಅಪಾಯದಲ್ಲಿವೆ ನವಿಲುಗಳು: ಭೂಮಿಯ ಮೇಲೆ ನನ್ನದೇ ಆಧಿಪತ್ಯ ಇದ್ದರೆ ಸಾಕು ಎನ್ನುವ ಮನುಷ್ಯನಿಗೆ ಏನು ಹೇಳುವುದು? -ರಂಗ ನೋಟ

ರಂಗಸ್ವಾಮಿ ಮೂಕನಹಳ್ಳಿ: ಕಾಡು ಇದ್ದ ಜಾಗದಲ್ಲಿ ಹೆದ್ದಾರಿಯೊಂದು ಬಂದರೆ ವನ್ಯಜೀವಿಗಳ ಜೀವಕ್ಕೆ ಅಪಾಯ. ಶ್ರೀಲಂಕಾದಲ್ಲಿ ನವಿಲುಗಳ ನಿತ್ಯ ಸಾವಿನ ದುರಂತ ಕಥೆ ಇದು. ಮನುಷ್ಯನ ದುರಾಸೆಗೆ ಕಾಡುಪ್ರಾಣಿಗಳು ಬಲಿಯಾಗುವುದು ನಿಲ್ಲುವುದಾದರೂ ಎಂದು? ಜಗತ್ತಿನ ಎಲ್ಲೆಡೆ ಇದೇ ವ್ಯಥೆ.

ಶ್ರೀಲಂಕಾದ ಕಲುತರ-ಉದ್ದಳವೇ ರಾಷ್ಟ್ರೀಯ ಉದ್ಯಾನದಲ್ಲಿ ನವಿಲುಗಳ ಸಂಚಾರದ ಬಗ್ಗೆ ಎಚ್ಚರಿಸುವ ಫಲಕ
ಶ್ರೀಲಂಕಾದ ಕಲುತರ-ಉದ್ದಳವೇ ರಾಷ್ಟ್ರೀಯ ಉದ್ಯಾನದಲ್ಲಿ ನವಿಲುಗಳ ಸಂಚಾರದ ಬಗ್ಗೆ ಎಚ್ಚರಿಸುವ ಫಲಕ (ರಂಗಸ್ವಾಮಿ ಮೂಕನಹಳ್ಳಿ)

ಅಪಾಯದಲ್ಲಿ ನವಿಲುಗಳು: ಮನುಷ್ಯನಷ್ಟು ಕ್ರೂರ ಪ್ರಾಣಿ ಈ ಜಗದಲ್ಲಿ ಇಲ್ಲ. ಕೋತಿ , ಕರಡಿ , ಹಾವು , ಹೆಬ್ಬಾವು, ಗಿಣಿ, ನಾಯಿ, ಬೆಕ್ಕು ಜೊತೆಗೆ ಮೊಸಳೆಯ ಮರಿಗಳನ್ನು ಕೂಡ ಸಾಕುವುದು ಮಾರುವುದು ಮಾಡುತ್ತಿದ್ದಾನೆ. ಇವುಗಳನ್ನು ಕುಣಿಸಿ, ತೋರಿಸಿ ಹೊಟ್ಟೆ ಕೂಡ ಹೊರೆಯುತ್ತಿದ್ದಾನೆ. ಪ್ರಾಣಿಗಳು ನೆಮ್ಮದಿಯಾಗಿದ್ದ ಕಡೆಯೆಲ್ಲಾ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಾ ಹೋಗಿದ್ದಾನೆ. ಭಗವಂತನ ದಯೆಯಿಂದ ಜಗತ್ತಿನ ಹಲವಾರು ದೇಶಗಳನ್ನು ನೋಡುವ ಸೌಭಾಗ್ಯ ನನ್ನದು. ಬಹಳಷ್ಟು ಕಡೆ ಜಿಂಕೆ , ಕರಡಿ, ನರಿ, ಆನೆ, ಕೊನೆಗೆ ಬಾತುಕೋಳಿ ರಸ್ತೆ ಕ್ರಾಸ್ ಮಾಡುತ್ತದೆ ಹುಷಾರು ಎನ್ನುವ ಬೋರ್ಡ್ ನೋಡಿದ್ದೆ. ಪ್ರಥಮ ಬಾರಿಗೆ ಶ್ರೀಲಂಕಾದಲ್ಲಿ 'ಮುದ್ದಾದ ನವಿಲುಗಳು ಇದ್ದಾವೆ, ಎಚ್ಚರ' ಎನ್ನುವ ಬೋರ್ಡ್ ನೋಡಿದೆ.

ನನ್ನ ಸಾರಥಿ ಪ್ರಭಾತ್ ರತ್ನಾಯಕೆಯನ್ನು 'ಇದೇನು ಮಾರಾಯ' ಎಂದು ಕೇಳಿದೆ. ಆತ 'ಇದು ಕಡಿದಾದ ಕಾಡು ಇದ್ದ ಜಾಗ , ಅದನ್ನು ಕಡಿದು ನಾವು ಹೈ ವೇ ಮಾಡಿದ್ದೇವೆ . ಇದು ಅವುಗಳ ಜಾಗ ನಾವು ಇಂಟ್ರೂಡ್ (ಅತಿಕ್ರಮಣ) ಮಾಡಿದ್ದೇವೆ. ನಿತ್ಯವೂ ಕನಿಷ್ಠ ಹತ್ತಾರು ನವಿಲುಗಳು ರಸ್ತೆಯಲ್ಲಿ ಕಾರಿಗೆ, ಬಸ್ಸಿಗೆ ಸಿಕ್ಕಿ ಸಾಯುತ್ತವೆ' ಎಂದರು. ನನಗೆ ನಂಬಿಕೆ ಬರಲಿಲ್ಲ. ನಮ್ಮೂರಲ್ಲಿ ರಸ್ತೆಯಲ್ಲಿ ನಾಯಿ ಸಾಯುವುದು ಕಾಮನ್. ಅದನ್ನು (ಸತ್ತ ಪ್ರಾಣಿಗಳ ಕಳೇಬರ) ಎತ್ತದಿರುವುದು ಇನ್ನೂ ಕಾಮನ್. ದುರ್ನಾತ ಸೇವಿಸುತ್ತಾ, ಬಯ್ದು ಕೊಂಡು ಹೋಗುವುದು ಇನ್ನೂ ಇನ್ನೂ ಕಾಮನ್.

ಇಲ್ಲಿ ನಮ್ಮ ಪ್ರಭಾತ್‌ಗೆ ನವಿಲು ರಸ್ತೆಯಲ್ಲಿ ಸಾಯುವುದು ಕಾಮನ್. ಆದರೆ ನನಗೆ ಕಾಮನ್ ಅಲ್ಲದ ಕಾರಣ ನಂಬಿಕೆ ಬರಲಿಲ್ಲ. ಒಂದು ತಾಸು ಹೈವೇಯಲ್ಲಿ ಸಾಗುವುದರಲ್ಲಿ ಐದು ನವಿಲುಗಳ ಕಳೇಬರಗಳನ್ನು ಕಂಡ ಮೇಲೆ ನಂಬಿಕೆ ಬಂತು. 'ನಾನು ಹೇಳಲಿಲ್ಲವೇ?' ಎನ್ನುವಂತೆ ಪ್ರಭಾತ್ ರತ್ನಾಯಕೆ ನನ್ನ ಮುಖ ನೋಡಿದರು. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ 'ಅಲ್ಲ ಇವಕ್ಕೆ ರೆಕ್ಕೆಯಿದೆ ಹಾರಬಲ್ಲವು ಆದರೂ ಅದು ಹೇಗೆ ವಾಹನಕ್ಕೆ ಸಿಕ್ಕಿ ಸಾಯುತ್ತವೆ' ಎಂದು ಪ್ರಶ್ನಿಸಿದೆ. ಆತ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ.

'ಅಯ್ಯೋ ಮಂಕೆ ಸ್ವಲ್ಪ ತಾಳು, ನಮ್ಮ ಪ್ರಯಾಣ ಮುಗಿಯುವುದರಲ್ಲಿ ಒಂದು ಲೈವ್ ಅಪಘಾತ ನೋಡಬಹುದು ನೀನು' ಎಂದುಕೊಂಡಿರಬೇಕು ಆತ. ಹದಿನೈದು ನಿಮಿಷದಲ್ಲಿ ನಮ್ಮ ಮುಂದಿನ ಟೊಯೋಟಾ ಗಾಡಿಗೆ ಧಡ್ ಎಂದು ನವಿಲು ಬಡಿಯಿತು ಆಕಾಶಕ್ಕೆ ಹಾರಿ ಧೊಪ್ಪನೆ ನೆಲಕ್ಕೆ ಬಿದ್ದಿತು. ಪ್ರಭಾತ್ ಊಹಿಸಿ ಗಾಡಿಯನ್ನು ಬೇರೆ ಟ್ರಾಕ್ ಗೆ ಎಳೆದುಕೊಳ್ಳದಿದ್ದರೆ ನಮ್ಮ ವಾಹನದ ಮೇಲೆ ಬೀಳುತ್ತಿತ್ತು . ನವಿಲುಗಳು ಹಾರುತ್ತವೆ , ಆದರೆ ಹೆಚ್ಚು ಎತ್ತರಕ್ಕೆ ಹಾರುವುದಿಲ್ಲ , ಹೀಗಾಗಿ ಅವು ಹಾರಿದ ಎತ್ತರದಿಂದ ಚಕ್ರಕ್ಕೆ ಸಿಲುಕುವುದರಿಂದ ಬಚಾವಾಗುತ್ತವೆ ಆದರೆ ವಾಹನದ ಯಾವುದೋ ಒಂದು ಭಾಗಕ್ಕೆ ಬಡಿದು, ವೇಗದ ಕಾರಣ ನೆಲಕ್ಕೆ ಬೀಳುತ್ತವೆ. ಮುಕ್ಕಾಲು ಪಾಲು ಹಿಂದಿನಿಂದ ವೇಗವಾಗಿ ಬರುವ ವಾಹನಗಳ ಚಕ್ರಕ್ಕೆ ಆಹುತಿಯಾಗುತ್ತವೆ.

ರಂಗ ನೋಟ ಅಂಕಣ
ರಂಗ ನೋಟ ಅಂಕಣ (Rangaswamy Mookanahalli)

ನಿತ್ಯ ಸಾವಿನ ಅಪಾಯ ಎದುರಿಸುವ ನವಿಲು

ಭಾರತದ ರಾಷ್ಟ್ರೀಯ ಪಕ್ಷಿ ಶ್ರೀಲಂಕಾದಲ್ಲಿ ನಿತ್ಯವೂ ರಸ್ತೆಯಲ್ಲಿ ಸಾವಿಗೀಡಾಗುತ್ತಿದೆ. ಮನುಷ್ಯನ ಬೇಟೆಯಿಂದ ಹಸಿರು ನವಿಲು ಅಳಿವಿನ ಅಂಚಿಗೆ ಭಾರತದಲ್ಲಿ ಬಂದು ನಿಂತಿದೆ. ನಮಗೆ ಅದ್ಯಾವುದೂ ಬೇಸರ ತರಿಸುವುದಿಲ್ಲ. ಭೂಮಿಯ ಮೇಲೆಲ್ಲಾ ಕೇವಲ ನನ್ನದೆ ಆಧಿಪತ್ಯ ಇದ್ದರೆ ಸಾಕು ಎನ್ನುವ ಮನುಷ್ಯನ ಹೀನ ಗುಣಕ್ಕೆ ಏನು ಹೇಳುವುದು? ನವಿಲುಗಳ ಸಾವಿಗೆ ನಾವು ಪ್ರವಾಸಿಗರೂ ಕಾರಣ ಎನ್ನಿಸಿತು. ಪ್ರವಾಸೋದ್ಯಮ ಬೆಳೆಯದಿದ್ದರೆ ಅವರು ಹೈ ವೇ ಮಾಡುತ್ತಿರಲಿಲ್ಲ ಅಲ್ಲವೇ?

ಹೆದ್ದಾರಿ ನಿರ್ಮಾಣವಾಗುವವರೆಗೆ ಕಲುತರದಿಂದ ಉದ್ದವಳವೇ ನ್ಯಾಷನಲ್ ಪಾರ್ಕ್‌ವರೆಗೆ ಹಿಂದೆ ಕ್ರಮಿಸಲು ನಾಲ್ಕೂವರೆ ತಾಸು ಹಿಡಿಯುತ್ತಿತ್ತು. ಇದೀಗ, ಎರಡು ಗಂಟೆಯಲ್ಲಿ ಪ್ರಯಾಣ ಮುಗಿಯುತ್ತದೆ. ಪ್ರವಾಸಿಗರಿಗೆ ಸಮಯ ಉಳಿಯಿತು. ಸರಕಾರ ಟೋಲ್ ಹೆಸರಲ್ಲಿ ಹಣವನ್ನು ಗಳಿಸಿತು. ಮಧ್ಯದಲ್ಲಿ ಟ್ಯಾಕ್ಸಿ ಮಾಲೀಕರು ಕೂಡ ಸಿರಿವಂತರಾದರು . ಪ್ರೊಟೆಸ್ಟ್ ಮಾಡಲು ಬಾರದ ಪಾಪದ ನವಿಲುಗಳು ಮಾತ್ರ ರಸ್ತೆಯಲ್ಲಿ ಜೀವ ಬಿಡುತ್ತಿವೆ. ಶ್ರೀಲಂಕಾದಲ್ಲಿ ಕೂಡ ಇವುಗಳು ಅಳಿವಿನ ಅಂಚಿಗೆ ಬರುವವರೆಗೆ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಕೇವಲ ಹತ್ತಾರು ಮಾತ್ರ ಉಳಿದಿವೆ ಎಂದಾಗ ಅದಕ್ಕೊಂದು ಸಮಿತಿ ನೇಮಿಸಿ, ಬಜೆಟ್‌ನಲ್ಲಿ ಹತ್ತಾರು ಕೋಟಿ ಹಣವನ್ನು ತೆಗೆದಿರಿಸಿ ನಾವೆಷ್ಟು ಪರಿಸರ ಪ್ರೇಮಿ , ಪ್ರಾಣಿ ಪಕ್ಷಿ ಪ್ರೇಮಿ ಸರಕಾರ ನೋಡಿ ಎಂದು ಹತ್ತಾರು ನ್ಯೂಸ್ ಪೇಪರ್‌ಗಳಲ್ಲಿ ಪುಟಗಟ್ಟಲೆ ಜಾಹಿರಾತು ಕೊಡುವುದು ಮಾಡಬೇಕಲ್ಲ!

ಜೀವಸಂಕುಲಗಳಲ್ಲಿ ಸಮತೋಲನ ಕಾಯ್ದು ಕೊಳ್ಳುವುದು ಅತ್ಯಂತ ಮುಖ್ಯ. ಈ ಭೂಮಿ ಕೇವಲ ನಮ್ಮ ಸ್ವತ್ತಲ್ಲ. ಅದು ಇಲ್ಲಿನ ಎಲ್ಲಾ ಜೀವ ಜಂತುಗಳಿಗೆ ಸೇರಿದ್ದು ಎನ್ನುವುದನ್ನು ಮನುಷ್ಯ ಪ್ರಾಣಿ ಬೇಗ ಅರಿತುಕೊಂಡರೆ ಒಳಿತು. ಇಲ್ಲವಾದಲ್ಲಿ ಅದು ಮನುಷ್ಯನ ಅಳಿವಿಗೂ ಮುನ್ನಡಿಯಾದೀತು ಎಚ್ಚರ ! ಇಂದಿನ ಗದ್ದಲದ ಯುಗದಲ್ಲಿ , ಜಿಡಿಪಿ ಅಬ್ಬರದ ಸದ್ದಿನಲ್ಲಿ ಇದೆಲ್ಲಾ ಆತನಿಗೆ ಹೇಗೆ ಕೇಳಿತು ? ಹಣ ಬದುಕಿಗೆ ಬೇಕು , ಅದೇ ಪ್ರಮುಖವಾಗಬಾರದು ಎನ್ನುವ ವಿವೇಚನೆ ಆತನಿಗೆ ಬರುವುದೆಂದು ? ಅಭಿವೃದ್ಧಿಯ ಹೆಸರಿನಲ್ಲಿ ಕಂಡದ್ದೆಲ್ಲಾ ಕಬಳಿಸುತ್ತಾ , ನಾನು ಇನ್ನಷ್ಟು ಮತ್ತಷ್ಟು ಬಲಶಾಲಿ , ಶ್ರೀಮಂತನಾದೆನು ಎಂದು ಉಬ್ಬುವ ಮನುಷ್ಯನಿಗೆ ತಾನು ಅದಕ್ಕಾಗಿ ಕಳೆದುಕೊಳ್ಳುತ್ತಿರುವುದರ ಮೌಲ್ಯ ಮಾತ್ರ ಅರಿವಿಗೆ ಬರದೇ ಹೋಗುತ್ತಿರುವುದು ವಿದ್ಯಾವಂತ ನಾಗರೀಕ ಸಮಾಜದ ಅಣಕ.