ಅಡುಗೆಮನೆಯ ಕೆಲಸಗಳಿಗೆ ಈ ರೀತಿಯ ಜಾಣ್ಮೆ ತೋರಿಸಿ: ಹತ್ತೇ ನಿಮಿಷದಲ್ಲಿ ತಯಾರಿಸಬಹುದು ರುಚಿಕರವಾದ ಅಡುಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆಮನೆಯ ಕೆಲಸಗಳಿಗೆ ಈ ರೀತಿಯ ಜಾಣ್ಮೆ ತೋರಿಸಿ: ಹತ್ತೇ ನಿಮಿಷದಲ್ಲಿ ತಯಾರಿಸಬಹುದು ರುಚಿಕರವಾದ ಅಡುಗೆ

ಅಡುಗೆಮನೆಯ ಕೆಲಸಗಳಿಗೆ ಈ ರೀತಿಯ ಜಾಣ್ಮೆ ತೋರಿಸಿ: ಹತ್ತೇ ನಿಮಿಷದಲ್ಲಿ ತಯಾರಿಸಬಹುದು ರುಚಿಕರವಾದ ಅಡುಗೆ

ನಿಮ್ಮ ಹೆಚ್ಚಿನ ಸಮಯ ಅಡುಗೆ ಮಾಡಲು ಕಳೆದುಹೋಗುತ್ತಿದೆಯಾ? ಹಾಗಾದರೆ ಅಡುಗೆಮನೆಯ ಕೆಲಸಗಳಿಗೆ ನೀವು ಒಂದಿಷ್ಟು ಜಾಣ್ಮೆ ತೋರಿಸಬೇಕಾಗುತ್ತದೆ. ಆಗ ನಿಮಗೆ ಸಮಯವಿಲ್ಲದಿದ್ದರೂ ಕೂಡಾ ರುಚಿರುಚಿಯಾದ ಪಾಕಗಳನ್ನು ಸಿದ್ಧಪಡಿಸಬಹುದು. ಅಡುಗೆಯ ಕೆಲಸಗಳಲ್ಲಿ ನಿಮಗೆ ಸಹಾಯ ಮಾಡುವ ಸಿಂಪಲ್‌ ಟಿಪ್ಸ್‌ಗಳು ಇಲ್ಲಿವೆ.

ಅಡುಗೆಮನೆಯ ಕೆಲಸಗಳಿಗೆ ಈ ರೀತಿಯ ಜಾಣ್ಮೆ ತೋರಿಸಿ: ಹತ್ತೇ ನಿಮಿಷದಲ್ಲಿ ತಯಾರಿಸಬಹುದು ರುಚಿಕರವಾದ ಅಡುಗೆ
ಅಡುಗೆಮನೆಯ ಕೆಲಸಗಳಿಗೆ ಈ ರೀತಿಯ ಜಾಣ್ಮೆ ತೋರಿಸಿ: ಹತ್ತೇ ನಿಮಿಷದಲ್ಲಿ ತಯಾರಿಸಬಹುದು ರುಚಿಕರವಾದ ಅಡುಗೆ (PC: Freepik)

ಅಡುಗೆ ಮಾಡುವುದು ಸುಲಭವಲ್ಲ. ರುಚಿಯಾದ ಅಡುಗೆ ತಯಾರಿಸಲು ಸಮಯದ ಜೊತೆಗೆ ಎಲ್ಲಾ ಪದಾರ್ಥಗಳನ್ನು ಹದವಾಗಿ ಬೆರೆಸುವುದು ಅಷ್ಟೇ ಮುಖ್ಯ. ಆಗ ಮಾತ್ರ ಅದು ಬಾಯಲ್ಲಿ ನೀರೂರಿಸುವಂತಾಗುತ್ತದೆ. ಯಾವುದಾದರೂ ಒಂದು ಪದಾರ್ಥ ಮಿಸ್‌ ಆದರೂ ಸಾಕು ಅಡುಗೆ ಸ್ವಾದ ಕಳೆದುಕೊಳ್ಳುತ್ತದೆ. ಆದರೆ ಈಗ ಸಮಯದ ಅಭಾವ ಎಲ್ಲರಲ್ಲೂ ಇದೆ. ಬೆಳಗ್ಗಿನ ಗಡಿಬಿಡಿಯಲ್ಲಿ ಅಡುಗೆ ಮಾಡುವುದೆಂದರೆ ಕಷ್ಟವೇ ಸರಿ. ಸಮಯದ ಕೊರತೆಯಿಂದ ಅಡುಗೆಗೆ ಪ್ರಮುಖವಾಗಿ ಸೇರಿಸಬೇಕಾದದ್ದನ್ನೇ ಮರೆಯಬಹುದು. ಅದಕ್ಕಾಗಿ ಕೆಲವು ತಯಾರಿಗಳನ್ನು ಮಾಡಿಟ್ಟುಕೊಂಡರೆ ಯಾವುದೇ ಪದಾರ್ಥಗಳು ಮಿಸ್‌ ಆಗದಂತೆ ನೋಡಿಕೊಳ್ಳಬಹುದು. ಆಗ ನೀವೆಷ್ಟೇ ಬ್ಯೂಸಿ ಇದ್ದರೂ ಕೂಡ ರುಚಿಯಾದ ಖಾದ್ಯ ತಯಾರಿಸಬಹುದು. ತರಕಾರಿಗಳನ್ನೆಲ್ಲಾ ಮುಂಚಿತವಾಗಿ ಕತ್ತರಿಸಿಟ್ಟುಕೊಳ್ಳುವಂತೆ ಅಡುಗೆಗೆ ಪ್ರಮುಖವಾಗಿ ಬೇಕಾಗುವ ಕೆಲವೊಂದನ್ನು ಮೊದಲೇ ತಯಾರಿಸಿ ಫ್ರೀಜರ್‌ನಲ್ಲಿಟ್ಟುಕೊಳ್ಳಬಹುದು. ಆಗ ರುಚಿಯಾದ ಭಕ್ಷ್ಯಗಳನ್ನು ತಯಾರಿಸಬಹುದು.

ಕಡಿಮೆ ಸಮಯದಲ್ಲಿ ಅಡುಗೆ ಮಾಡಲು ಈ ಟಿಪ್ಸ್‌ ಪಾಲಿಸಿ

ಹುಣಸೆ ಹಣ್ಣಿನ ರಸ: ಸಾಮಾನ್ಯವಾಗಿ ನಾವು ತಯಾರಿಸುವ ಎಲ್ಲ ಅಡುಗೆಗಳಿಗೂ ಹುಣಸೆ ಹಣ್ಣಿನ ರಸ ಬೇಕು. ಸಾಂಬಾರ್‌, ತಿಳಿ ಸಾರು, ಗೊಜ್ಜು ಎಲ್ಲದಕ್ಕೂ ರುಚಿ ಹೆಚ್ಚಿಸಲು ಹುಣಸೆಹಣ್ಣು ಬೇಕು. ಹಾಗಾಗಿ ಹುಣಸೆ ಹಣ್ಣಿನ ರಸವನ್ನು ಮೊದಲೇ ತಯಾರಿಸಿಟ್ಟುಕೊಳ್ಳಬಹುದು. ಮೊದಲಿಗೆ ಹುಣಸೆಹಣ್ಣನ್ನು ಸ್ವಚ್ಛಗೊಳಿಸಿ. ನಂತರ ಅದನ್ನು ಬಿಸಿ ನೀರಿಗೆ ಹಾಕಿ ಅರ್ಧ ಗಂಟೆ ನೆನೆಸಿ. ನಂತರ ಅದನ್ನು ಕೈಯಿಂದ ಸ್ಮಾಶ್‌ ಮಾಡಿ ಇಲ್ಲವೇ ಮಿಕ್ಸರ್‌ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ಪಾನ್‌ಗೆ ಹಾಕಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವವರೆಗೆ ಬೇಯಿಸಿ. ಹುಣಸೆ ಹಣ್ಣಿನ ರಸ ತಣ್ಣಗಾದ ಮೇಲೆ ಗಾಜಿನ ಬಾಟಲಿಯಲ್ಲಿ ಹಾಕಿ ಫ್ರಿಜ್‌ನಲ್ಲಿಡಿ. ಅಗತ್ಯವಿದ್ದಾಗ ಚಮಚದ ಸಹಾಯದಿಂದ ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಿ.

ನಿಂಬೆ ಐಸ್‌ಕ್ಯೂಬ್‌ಗಳು: ನಮ್ಮಲ್ಲಿ ಬಹಳಷ್ಟು ಜನರಿಗೆ ಬೆಳಿಗ್ಗೆ ನೀರಿಗೆ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯುವ ಅಭ್ಯಾಸವಿರುತ್ತದೆ. ಅಷ್ಟೇ ಅಲ್ಲದೇ ನಿಂಬೆ ರಸವನ್ನು ಅಡುಗೆಗೂ ಬಳಸುತ್ತಾರೆ. ಅದಕ್ಕಾಗಿ ನಿಂಬೆರಸದ ಐಸ್‌ಕ್ಯೂಬ್‌ಗಳನ್ನು ತಯಾರಿಸಿಟ್ಟುಕೊಂಡರೆ ನಿಮ್ಮ ಕೆಲಸಗಳು ಸುಲಭದಲ್ಲಿ ಆಗುತ್ತದೆ. ನಿಮ್ಮ ಫ್ರೀ ಟೈಮ್‌ನಲ್ಲಿ ನಿಂಬೆ ಹಣ್ಣಿನಿಂದ ರಸ ತೆಗೆಯಿರಿ. ಅದನ್ನು ಐಸ್‌ಕ್ಯೂಬ್‌ ತಯಾರಿಸುವ ಟ್ರೇಗೆ ಹಾಕಿ ಡೀಪ್‌ ಫ್ರೀಜರ್‌ನಲ್ಲಿಡಿ. ಬೇಕಾದಾಗ ಅದನ್ನು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಸಮಯ ಉಳಿಯುತ್ತದೆ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್‌: ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಎರಡರಿಂದ ಮೂರು ತಿಂಗಳವರೆಗೆ ತಾಜಾವಾಗಿಡಲು ಇರುವ ಉತ್ತಮ ಮಾರ್ಗವೆಂದರೆ ಅದನ್ನು ಫ್ರಿಜ್‌ನಲ್ಲಿ ಶೇಖರಿಸಿಟ್ಟುಕೊಳ್ಳುವುದು. ಒಂದು ಕಪ್‌ ಶುಂಠಿ–ಬೆಳ್ಳುಳ್ಳಿ ಪೇಸ್ಟಿಗೆ ಒಂದು ಚಮಚ ಎಣ್ಣೆ ಮತ್ತು ಒಂದು ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಆ ಮಿಶ್ರಣವನ್ನು ಒಂದು ಚಮಚದ ಸಹಾಯದಿಂದ ಚಿಕ್ಕ ಚಿಕ್ಕ ಉಂಡೆಗಳಂತೆ ಮಾಡಿಕೊಳ್ಳಿ. ಅದನ್ನು ತಟ್ಟೆಯಲ್ಲಿ ಹಾಕಿ ಡೀಪ್ ಫ್ರೀಜರ್‌ನಲ್ಲಿ ಇರಿಸಿ. ಅದನ್ನು ಉಂಡೆಗಳಾಗಿ ಮಾಡುವ ಬದಲಿಗೆ ಜಿಪ್ ಲಾಕ್ ಬ್ಯಾಗ್‌ನಲ್ಲಿ ಹಾಕಿ ಸಹ ಫ್ರಿಜ್‌ನಲ್ಲಿ ಇಡಬಹುದು. ಅಗತ್ಯವಿದ್ದಷ್ಟನ್ನು ಮಾತ್ರ ತೆಗೆದುಕೊಂಡು ಉಳಿದಿದ್ದನ್ನು ಮತ್ತೆ ಫ್ರೀಜರ್‌ನಲ್ಲಿಡಿ. ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಅನ್ನು ಐಸ್ ಕ್ಯೂಬ್ ಟ್ರೇ ಯಲ್ಲೂ ಸಂಗ್ರಹಿಸಿಟ್ಟುಕೊಳ್ಳಬಹುದು.

ಕರಿ ಬೇಸ್: ಕರಿ ಬೇಸ್‌ ಅಥವಾ ಗ್ರೇವಿಯನ್ನು ಸಹ ಮೊದಲೇ ತಯಾರಿಸಿಟ್ಟುಕೊಳ್ಳಬಹುದು. ಇದರಿಂದ ನೀವು ಯಾವುದೇ ರೀತಿಯ ಕರಿಯನ್ನು ಸುಲಭವಾಗಿ ತಯಾರಿಸಬಹುದಾಗಿದೆ. ನಿಮಗೆ ಸಮಯವಿಲ್ಲದಿದ್ದಾಗ ಈ ಟ್ರಿಕ್‌ ನಿಮಗೆ ಬಹಳ ಉಪಯೋಗಕ್ಕೆ ಬರುತ್ತದೆ. ಎಣ್ಣೆ ಬಿಸಿ ಮಾಡಿ ಅದಕ್ಕೆ ತರಕಾರಿಗಳನ್ನು ಹಾಕಿ ಬೇಯಿಸಿ, ಈ ಕರಿ ಬೇಸ್‌ ಅನ್ನು ಸೇರಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿದರೆ ಫಟಾಫಟ್‌ ಆಗಿ ವೆಜಿಟೇಬಲ್‌ ಕರಿ ಸಿದ್ಧವಾಗುತ್ತದೆ. ಕರಿ ಬೇಸ್‌ ತಯಾರಿಸಲು ಗೋಡಂಬಿ, ಕಲ್ಲಂಗಡಿ ಹಣ್ಣಿನ ಬೀಜಗಳು ಮತ್ತು ಟೊಮೆಟೊವನ್ನು ಎಣ್ಣೆಯಲ್ಲಿ ಮೃದುವಾಗುವವರೆಗೆ ಬೇಯಿಸಿ. ನಂತರ ಅದು ತಣ್ಣಗಾಗಲು ಬಿಡಿ. ಈ ಮತ್ತೊಂದು ಪ್ಯಾನ್‌ಗೆ ಲವಂಗ, ಜಾಪತ್ರೆ, ದಾಲ್ಚಿನ್ನಿ, ಏಲಕ್ಕಿ, ಮೆಣಸು ಹುರಿದುಕೊಳ್ಳಿ. ನಂತರ ಬೇಯಿಸಿಟ್ಟುಕೊಂಡ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಉಪ್ಪು ಹಾಕಿ ನೀರು ಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದನ್ನು ಒಂದು ಏರ್‌ಟೈಟ್‌ ಡಬ್ಬದಲ್ಲಿ ಹಾಕಿ ಫ್ರೀಜರ್‌ನಲ್ಲಿಡಿ. ನಾಲ್ಕೈದು ದಿನದವರೆಗೆ ಇದನ್ನು ಬಳಸಿಕೊಂಡು ದಿಢೀರ್‌ ಅಂತ ಕರಿ ತಯಾರಿಸಬಹುದು.

Whats_app_banner