ಸಾಕುಪ್ರಾಣಿಗಳನ್ನು ಸಾಕುವುದೆಂದರೆ ನಿಮಗೂ ಇಷ್ಟವೇ? ಅದಕ್ಕೆ ತಗುಲುವ ವೆಚ್ಚ ಕೇಳಿದ್ರೆ ಅಚ್ಚರಿಯಾಗೋದು ಪಕ್ಕಾ
ನಾಯಿಗಳನ್ನು ಸಾಕುವುದು ಒಂದೆಡೆ ಹವ್ಯಾಸವಾದರೆ, ಇನ್ನೂ ಕೆಲವರಿಗೆ ಅದು ಪ್ರತಿಷ್ಠೆಯಾಗಿದೆ. ಪೆಟ್ ಕೇರ್ ಮಾರುಕಟ್ಟೆ ಕೂಡ ದೊಡ್ಡದಾಗಿ ಬೆಳೆಯುತ್ತಿದೆ. ಸಾಕು ಪ್ರಾಣಿಗಳನ್ನು ಸಾಕುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ತಗುಲುವ ವೆಚ್ಚ ಕೂಡಾ ದೊಡ್ಡ ಸಂಖ್ಯೆಯಲ್ಲೇ ಇರುತ್ತದೆ.
ಶ್ವಾನವನ್ನು ಸಾಕುಪ್ರಾಣಿಯಾಗಿ ಸಾಕಲು ಬಹುತೇಕರು ಇಷ್ಟಪಡುತ್ತಾರೆ. ಯಾಕೆಂದರೆ ಅದರಲ್ಲಿರುವ ಸ್ವಾಮಿನಿಷ್ಠೆ. ಎಂಥ ಕಷ್ಟದ ಪರಿಸ್ಥಿತಿಯಲ್ಲೂ ತನ್ನ ಮಾಲೀಕರನ್ನು ಪ್ರಾಣ ಕೊಟ್ಟಾದರೂ ಅದು ಕಾಪಾಡುತ್ತದೆ. ಯಾಕೆಂದರೆ ಅನ್ನ ಹಾಕಿದ್ದಾರೆ ಎನ್ನುವ ಒಂದೇ ಕಾರಣದಿಂದ. ಅದಕ್ಕೆ ಹಿರಿಯರು ಹೇಳುವುದು- ನಾಯಿಗಿರುವ ನಿಯತ್ತು, ಮನುಷ್ಯನಿಗಿಲ್ಲ ಎಂದು.
ಮನೆಗೆ ಕಳ್ಳರು ಬಂದರೆ ನಾಯಿಯು ಬೊಗಳಿ ಮನೆಯವರನ್ನು ಎಚ್ಚರಿಸುತ್ತದೆ. ಈ ಕಾರಣಕ್ಕಾಗಿ ಬಹುತೇಕರು ಶ್ವಾನವನ್ನು ಸಾಕಲು ಇಷ್ಟಪಡುತ್ತಾರೆ. ಕೆಲವರು ಮನೆಗೊಂದು ಶ್ವಾನ ಇದ್ದರೆ ಸಾಕು ಅಂತಾ ಜಾತಿ ನಾಯಿಯನ್ನು ಸಾಕದೆ ಬೀದಿ ನಾಯಿ (ಭಾರತ ಮೂಲದ ನಾಯಿ) ಯನ್ನು ಸಾಕುತ್ತಾರೆ. ಆದರೆ, ಇನ್ನೂ ಕೆಲವು ಶ್ವಾನ ಪ್ರಿಯರು ವಿಭಿನ್ನ ಜಾತಿ ನಾಯಿಗಳನ್ನು ಸಾಕಲು ಇಷ್ಟಪಡುತ್ತಾರೆ. ಭಾರತದಲ್ಲೂ ಅನೇಕರು ಸಾವಿರಾರು ಅಥವಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮಗೆ ಬೇಕಾದ ತಳಿಯ ಶ್ವಾನಗಳನ್ನು ಸಾಕುತ್ತಾರೆ.
ವಿಭಿನ್ನ ಜಾತಿಯ ನಾಯಿಗಳನ್ನು ಸಾಕುವುದರಿಂದ ಪೆಟ್ ಕೇರ್ ಮಾರುಕಟ್ಟೆ ಕೂಡ ಬೆಳೆದಿದೆ. ಸಂಶೋಧನೆಯೊಂದರ ಮಾಹಿತಿ ಪ್ರಕಾರ, ಭಾರತದಲ್ಲಿ 2021ರಲ್ಲಿ ಪೆಟ್‌ಕೇರ್ ಮಾರುಕಟ್ಟೆಯ ಗಾತ್ರವು 7,400 ಕೋಟಿ ರೂಪಾಯಿಗಳಷ್ಟಿತ್ತು. 2032ರ ವೇಳೆಗೆ ಇದು 21,000 ಕೋಟಿ ರೂಪಾಯಿಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಾಕು ಪ್ರಾಣಿಗಳ ವೆಚ್ಚ ಭರಿಸಲು ಮಾಲೀಕರು ಯಾವುದೇ ಯೋಚನೆಯನ್ನು ಮಾಡದೆ ಖರ್ಚು ಮಾಡಲು ಸಿದ್ಧರಾಗಿರುತ್ತಾರೆ.
ಮಧ್ಯಮ ಗಾತ್ರದ, ಉದ್ದ ಕೂದಲಿನ ನಾಯಿಗೆ ಒಂದು ಬಾರಿಯ ವೆಚ್ಚ ಎಷ್ಟಿದೆ ಗೊತ್ತೇ? ಜೀವಮಾನದ ಕೆನಲ್ ಕ್ಲಬ್ ಆಫ್ ಇಂಡಿಯಾ ನೋಂದಣಿಯೊಂದಿಗೆ ಮೈಕ್ರೋಚಿಪ್ ರೂಪಾಯಿ 1,500 ಇದ್ದರೆ, ಜಿಪಿಎಸ್ ಟ್ರ್ಯಾಕರ್ ಗೆ 4,500 ರೂ.ಗಳಿವೆ.
ಇದನ್ನೂ ಓದಿ | Pet Health: ಹೆಚ್ಚಾಗಿದೆ ಸುಡು ಬಿಸಿಲಿನ ತಾಪ: ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಆಹಾರದ ಬಗ್ಗೆ ಇರಲಿ ಗಮನ
ಜಾತಿ ನಾಯಿಗಳನ್ನು ಸಾಕುವುದೆಂದರೆ ಅಷ್ಟು ಸುಲಭವಲ್ಲ. ಸಣ್ಣ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ಅವುಗಳನ್ನು ನೋಡಿಕೊಳ್ಳಬೇಕು. ಅವುಗಳಿಗೆ ಆಟಿಕೆಗಳು ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಶ್ವಾನ ಆಟವಾಡಲು ಕಾಂಗ್ ಬಾಲ್ ಖರೀದಿಸಬೇಕು. ಅದರ ಬೆಲೆ 700 ರೂ. ಇದ್ದರೆ, ವಿಷರಹಿತ (non toxix) ಆಟಿಕೆಗಳಿಗೆ 1,000 ರೂ. ಇರುತ್ತದೆ. ಶ್ವಾನ ಮಲಗಲು ಹಾಸಿಗೆಗೆ 1,500 ರೂಪಾಯಿಗಳಿವೆ. ಬಾರು (ಸರಪಳಿ) ಮತ್ತು ಕಾಲರ್‌ಗೆ 700 ರೂಪಾಯಿ ವೆಚ್ಚವಾಗುತ್ತದೆ.
ಇನ್ನು ಶ್ವಾನವನ್ನು ಸಾಕಿದರೆ ಸಾಲುವುದಿಲ್ಲ. ನಿಯಮಿತವಾಗಿ ಪಶುವೈದ್ಯರನ್ನು ಭೇಟಿ ಮಾಡಬೇಕು. ಪಶುವೈದ್ಯರ ಒಂದು ಭೇಟಿಗೆ ಕನಿಷ್ಠ 500 ರೂ. ಇದ್ದರೆ, ವಾರ್ಷಿಕ ಲಸಿಕೆಗೆ ರೂ. 1,000 ವೆಚ್ಚವಾಗುತ್ತದೆ.
ಸಾಮಾನ್ಯವಾಗಿ ಮಧ್ಯಮ ಗಾತ್ರದ ಶ್ವಾನವು ದಿನಕ್ಕೆ ಸುಮಾರು 300 ಗ್ರಾಂನಷ್ಟು ಒಣ ಆಹಾರ ಸೇವಿಸಬೇಕು. ಇದಕ್ಕೆ ಪ್ರತಿ ಕೆ.ಜಿಗೆ 400 ರೂ.ಗಳಾಗುತ್ತದೆ. ಆಮದು ಮಾಡಲಾಗುವ ಒಣ ಆಹಾರಕ್ಕೆ 9,000 ರೂ. ವೆಚ್ಚವಾಗುತ್ತದೆ. ಶ್ವಾನಕ್ಕೆ ತಾಜಾ ಆಹಾರ ಸೇವನೆಗೆ 500 ರೂ. ವೆಚ್ಚವಾಗುತ್ತದೆ. ಶ್ವಾನಗಳಿಗೆಂದೇ ತಯಾರಿಸಲಾಗುವ ವಿಶೇಷ ಆಹಾರಗಳಿಗೆ (ಕೇಕ್, ಪಿಜ್ಜಾ, ಕಪ್‌ಕೇಕ್‌ಗಳು) ಪ್ರತಿ ತುಂಡಿಗೆ 400 ರೂ. ವೆಚ್ಚವಾಗುತ್ತದೆ.
ಶ್ವಾನಗಳ ಉಡುಪು, ಸ್ನಾನಕ್ಕೂ ಆಗುತ್ತೆ ದುಬಾರಿ ವೆಚ್ಚ
ಇನ್ನು ಶ್ವಾನಕ್ಕೆ ಬಟ್ಟೆ ತೊಡಿಸಬೇಕೆಂದರೆ, ಟೀ ಶರ್ಟ್‌ಗಳಿಗೆ ಸರಿಸುಮಾರು 600 ರೂಪಾಯಿ, ಸ್ವೆಟರ್ ಗೆ 1,000 ರೂ. ವಿಶೇಷ ಉಡುಪುಗಳಿಗೆ (ಲೆಹೆಂಗಾ, ಬಿಕಿನಿ ಇತ್ಯಾದಿ) 2,000 ರೂ.ಗಳಿವೆ. ಹಾಗೆಯೇ ಅದರ ಸೌಂದರ್ಯಕ್ಕೂ ದುಬಾರಿ ವೆಚ್ಚವಿದೆ. ನಿಯಮಿತ ಸ್ಪಾ (ಸ್ನಾನ ಮಾತ್ರ) ಮಾಡಿಸಲು ರೂ 1,000 ಇದ್ದರೆ, ಐಷಾರಾಮಿ ಸ್ಪಾ (ಮಸಾಜ್, ಉಗುರು ಕ್ಲಿಪಿಂಗ್, ಹಲ್ಲುಗಳು, ಕಿವಿ ಮತ್ತು ಕಣ್ಣುಗಳನ್ನು ಸ್ವಚ್ಛಗೊಳಿಸುವುದು): ಕನಿಷ್ಠ 2,500 ರೂ.ಗಳಿವೆ. ಮನೆಯಲ್ಲೇ ಸ್ನಾನ ಮಾಡಿಸುತ್ತೀರಾ ಎಂದಾದರೆ 600 ರೂ. ಖರ್ಚಾಗುತ್ತದೆ. ಕ್ಷೌರ ಮತ್ತು ಬ್ಲೋ ಡ್ರೈಗೆ 1,000 ರೂಪಾಯಿ ವೆಚ್ಚವಾಗುತ್ತದೆ.
ತರಬೇತಿ ಇನ್ನಿತರೆ ಕೆಲಸಗಳಿಗೆ ತಗುಲುವ ವೆಚ್ಚ ಎಷ್ಟು ಗೊತ್ತಾ?
ಶ್ವಾನವನ್ನು ವಿಶೇಷವಾಗಿ ತರಬೇತಿ ಮಾಡಬೇಕು ಎಂದಾದರೆ, ಅವುಗಳನ್ನು ತರಬೇತಿ ಕೇಂದ್ರಗಳಿಗೆ ಕಳುಹಿಸಬೇಕು. ಇದಕ್ಕೆ ಗಂಟೆಗೆ ತಗುಲುವ ವೆಚ್ಚ 2,000 ರೂಪಾಯಿ. ಹುಟ್ಟುಹಬ್ಬದ ಪಾರ್ಟಿ (ಕೇಕ್, ಪೂಲ್, ಚಿತ್ರಗಳು, ಇತ್ಯಾದಿ ಚಟುವಟಿಕೆ) ಗಳಿಗೆ ತಗಲುವ ವೆಚ್ಚ 8,000 ರೂಪಾಯಿ. ಸ್ವಿಮ್ಮಿಂಗ್ ಪೂಲಿಗೆ 500 ರೂಪಾಯಿ ಇದ್ದರೆ, ಶ್ವಾನವನ್ನು ಡೇಕೇರ್‌ನಲ್ಲಿ ಬಿಡುತ್ತೀರಾ ಎಂದಾದರೆ ದಿನಕ್ಕೆ 500 ರೂ. ಆಗುತ್ತದೆ. ರಾತ್ರಿಯ ತಂಗುವಿಕೆಗೆ ಒಂದು ರಾತ್ರಿಗೆ 600 ರೂ.ಗಳಾಗುತ್ತದೆ. ಐಷಾರಾಮಿ ಹೋಟೆಲ್‌ಗೆ ಕರೆದೊಯ್ಯುವಿರಾದರೆ ರಾತ್ರಿಗೆ 5,000 ರೂ. ವೆಚ್ಚವಾಗುತ್ತದೆ. ಮಾತೃತ್ವದ ಫೋಟೋಶೂಟ್‌ಗೆ 5,000 ರೂಪಾಯಿ ವೆಚ್ಚವಾಗುತ್ತದೆ. ಇನ್ನು ಡೇಟಿಂಗ್ ಅಥವಾ ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್ ಗೆ 200 ರೂ.ಗಳಾಗುತ್ತದೆ.
ನೀವು ಸಾಕುಪ್ರಾಣಿ ಖರೀದಿಸಲು ಬಯಸುವಿರಾ? ಎಷ್ಟು ವೆಚ್ಚವಾಗುತ್ತದೆ?
ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ನೋಂದಣಿಯೊಂದಿಗೆ ಶುದ್ಧ ತಳಿಯ ಶ್ವಾನಗಳಿಗೆ ಬೆಲೆಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
- ಭಾರತೀಯ ನಾಯಿ: ಉಚಿತ
- ಗೋಲ್ಡನ್ ರಿಟ್ರೈವರ್: 40,000 ರೂ.
- ಲ್ಯಾಬ್ರಡಾರ್ ರಿಟ್ರೈವರ್: 25,000 ರೂ.
- ಬೀಗಲ್: 35,000 ರೂ.
- ಪಗ್: 20,000 ರೂ.
- ಶಿಹ್ ತ್ಸು: 50,000 ರೂ.
- ಜರ್ಮನ್ ಶೆಫರ್ಡ್: 40,000 ರೂ.
- ಕಾಕರ್ ಸ್ಪೈನಿಯೆಲ್: 40,000 ರೂ.
- ಬಾಕ್ಸರ್: 40,000 ರೂ.
- ಗ್ರೇಟ್ ಡೇನ್: 70,000 ರೂ.
- ಟಿಬೆಟಿಯನ್ ಮಾಸ್ಟಿಫ್: 2 ಲಕ್ಷ ರೂ.
- ಡ್ಯಾಷ್‌ಶಂಡ್: 15,000 ರೂ.
- ಪೊಮೆರೇನಿಯನ್: 50,000 ರೂ.
- ಡಾಬರ್ಮನ್: 25,000 ರೂ.
- ಡಾಲ್ಮೇಷಿಯನ್: 35,000 ರೂ.
- ರೊಟ್ವೀಲರ್: 70,000 ರೂ.
- ಸೈಬೀರಿಯನ್ ಹಸ್ಕಿ: 80,000 ರೂ.
- ಸೇಂಟ್ ಬರ್ನಾರ್ಡ್: 1 ಲಕ್ಷ ರೂ.
ಶ್ವಾನಗಳಷ್ಟೇ ಅಲ್ಲ ಬೆಕ್ಕುಗಳನ್ನು ಕೂಡ ಅನೇಕರು ಸಾಕುತ್ತಾರೆ. ಫೆಲೈನ್ ಕ್ಲಬ್ ಆಫ್ ಇಂಡಿಯಾ ನೋಂದಣಿಯೊಂದಿಗೆ ಶುದ್ಧ-ತಳಿ ಬೆಕ್ಕುಗಳ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ .
- ಭಾರತೀಯ: ಉಚಿತ
- ಸಯಾಮಿಸ್: 40,000 ರೂ.
- ಪರ್ಷಿಯನ್: 20,000 ರೂ.
- ಬಾಂಬೆ: 15,000 ರೂ.
- ರಷ್ಯನ್ ಬ್ಲೂ: 1 ಲಕ್ಷ ರೂ.
- ರಾಗ್ಡಾಲ್: 60,000 ರೂ.
- ಬ್ರಿಟಿಷ್ ಶೋರ್ಥೈರ್: 50,000 ರೂ.
- ಬರ್ಮಾ: 25,000 ರೂ.
- ಹಿಮಾಲಯನ್: 30,000 ರೂ.
- ಸ್ಕಾಟಿಷ್ ಫೋಲ್ಡ್: 50,000 ರೂ.
ಶ್ವಾನ, ಬೆಕ್ಕುಗಳು ಮಾತ್ರವಲ್ಲದೆ ಇನ್ನೂ ಕೆಲವು ಜೀವಿಗಳನ್ನು ಜನರು ಸಾಕುಪ್ರಾಣಿಗಳಂತೆ ಸಾಕುತ್ತಾರೆ. ಅವುಗಳ ಬೆಲೆ ಇಲ್ಲಿದೆ.
- ಬಿಯರ್ಡೆಡ್ ಡ್ರ್ಯಾಗನ್: 35,000 ರೂ.
- ಗ್ರೀನ್ ವಿಂಗ್ ಡ್ ಮಕಾವ್: 1.5 ಲಕ್ಷ ರೂ.
- ಇಗುವಾನಾ: 5,000 ರೂ.
- ಅಂಗೋರಾ ಮೊಲ: 6,000 ರೂ.
- ಕಾಕಟೂ: 20,000 ರೂ.
- ಟೂಕನ್: ಒಂದು ಜೋಡಿಗೆ 15 ಲಕ್ಷ ರೂ.
- ಆಫ್ರಿಕನ್ ಬೂದು ಗಿಳಿ: 70,000 ರೂ.
- ಕಾರ್ನ್ ಹಾವು: 20,000 ರೂ.
- ಬಾಲ್ ಪೈತಾನ್ (ಒಂದು ಜಾತಿಯ ಹೆಬ್ಬಾವು): 35,000 ರೂ.
- ಗೋಸುಂಬೆ: 6,000 ರೂ.
- ಮಾರ್ವಾರಿ ಕುದುರೆ: 6 ಲಕ್ಷ ರೂ.
ಸಾಕುಪ್ರಾಣಿಗಳನ್ನು ಸಾಕುವುದೆಂದರೆ ಅಷ್ಟು ಸುಲಭವಲ್ಲ. ಅದನ್ನು ತೆಗೆದುಕೊಳ್ಳುವಾಗ ನಾವು ಎಷ್ಟು ಹಣ ವ್ಯಯಿಸುತ್ತೇವೆಯೋ, ತದನಂತರೂ ಅದರ ವೆಚ್ಚ ಹೆಚ್ಚಿರುತ್ತದೆ. ಇಷ್ಟೆಲ್ಲಾ ವೆಚ್ಚ ಭರಿಸುವುದಿದ್ದರೆ ಮಾತ್ರ ಉತ್ತಮ ತಳಿಯ ಸಾಕುಪ್ರಾಣಿಗಳನ್ನು ಸಾಕುವ ಯೋಚನೆ ಮಾಡಬಹುದು.
ವಿಭಾಗ