ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ; ಮುರಳೀಧರ ಖಜಾನೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ; ಮುರಳೀಧರ ಖಜಾನೆ ಬರಹ

ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ; ಮುರಳೀಧರ ಖಜಾನೆ ಬರಹ

ಕವಿ, ನಾಟಕಾರ, ರಂಗನಿರ್ದೇಶಕ, ರಂಗ ವಿನ್ಯಾಸಕ, ನಟ ರಘುನಂದನ ಅವರ ʻತುಯ್ತವೆಲ್ಲ ನವ್ಯದತ್ತ ಅದರತ್ತರ ಉಯ್ಯಾಲೆ ಮತ್ತ ಅದರ ಸುತ್ತ' ಕೃತಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಪ್ರತಿಷ್ಠಾನದ ವಿ.ಎಂ. ಇನಾಂದಾರ್‌ ಪ್ರಶಸ್ತಿ ಲಭ್ಯವಾಗಿದೆ. ತನ್ನಿಮಿತ್ತವಾಗಿ ರಘುನಂದನರ ವ್ಯಕ್ತಿ-ಕೃತಿ-ಸಂಸ್ಕೃತಿಯ ಕಡೆಗೆ ಇಣುಕು ನೋಟ.(ಬರಹ- ಮುರಳೀಧರ ಖಜಾನೆ, ಬೆಂಗಳೂರು)

ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ
ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ

ತಮ್ಮನ್ನು ತಾವು “ಸಾಹಿತ್ಯ ವಿಮರ್ಶಕನಲ್ಲ. ಕಾವ್ಯದ ಕುಡುಕ ಗಂಡಂಗಿಗ; ಅದರ ಈಡಿಗ ಮತ್ತು ಈದಿಗ” ಎಂದೆಲ್ಲ ಟೀಕಿಸಿಕೊಳ್ಳುವ ಕವಿ, ನಾಟಕಾರ, ರಂಗನಿರ್ದೇಶಕ, ರಂಗ ವಿನ್ಯಾಸಕ, ನಟ ರಘುನಂದನ ಅವರ ʻತುಯ್ತವೆಲ್ಲ ನವ್ಯದತ್ತ ಅದರತ್ತರ ಉಯ್ಯಾಲೆ ಮತ್ತ ಅದರ ಸುತ್ತ….ಕೃತಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ವಿ.ಎಂ. ಇನಾಂದಾರ್‌ ಪ್ರಶಸ್ತಿ ಪುರಸ್ಕಾರ ಲಭ್ಯವಾಗಿದೆ. ಇದನ್ನೇ ನೆವವಾಗಿಸಿಕೊಂಡು ರಘುನಂದನ ಅವರ ವ್ಯಕ್ತಿ-ಕೃತಿ-ಸಂಸ್ಕೃತಿಯ ಇಣುಕು ನೋಟ ಬೀರುವ ಪ್ರಯತ್ನವಿದು.

ಕಾವ್ಯ-ನಾಟಕ ಗುಡಿಗಾರ ರಘುನಂದನಗೆ ಇನಾಂದಾರ್‌ ಪ್ರಶಸ್ತಿಯ ಗೌರವ ಪುರಸ್ಕಾರ

ಪ್ರಶಸ್ತಿಗಳು, ಅಧಿಕಾರಸ್ಥ ಸ್ಥಾನಗಳು ಬಿಕರಿಯಾಗುತ್ತಿರುವ ಇಂದಿನ ಸಾಂಸ್ಕೃತಿಕ ಸಂದರ್ಭದಲ್ಲಿ ʻʻಪಾತ್ರʼ ರಿಗೆ ಅವರ ಜ್ಞಾನಾಧಾರಿತ ಪ್ರಶಸ್ತಿಗಳ ಬಂದಾಗ ಅಚ್ಚರಿಯಾಗುತ್ತದೆ. ಆದರೆ ಅದು ಮಾಧ್ಯಮಗಳಿಗೆ ಸುದ್ದಿಯಾಗುವುದೇ ಇಲ್ಲ. ಏಕೆಂದರೆ ಇಂಥ ಪ್ರಶಸ್ತಿಗಳನ್ನು ಪಡೆದುಕೊಂಡವರಿಂದ, ಅಥವ ಇಂಥ ಸ್ಥಾನಗಳಿಗೆ ಯಾವುದೇ ರೀತಿಯಲ್ಲೂ, ಪ್ರಭಾವ ಬೀರದೆ ಆಯ್ಕೆಯಾಗಿರುವವರಿಂದ ಯಾರಿಗೂ ಲಾಭವಿಲ್ಲ ಮತ್ತು ನಷ್ಟವೂ ಇಲ್ಲ.

ಈ ಮಾತುಗಳನ್ನು ಹೇಳಬೇಕಾಗಿ ಬಂದಿದ್ದು, ನಮ್ಮ ನಡುವಣ ಸಂವೇದನಾಶೀಲ ಕವಿ, ನಾಟಕಕಾರ, ರಂಗ ನಿರ್ದೇಶಕ-ರಘುನಂದನ ಅವರಿಗೆ ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಪ್ರತಿಷ್ಠಾನ ಇತ್ತೀಚೆಗೆ 2024ನೇ ಸಾಲಿನ ವಿ.ಎಂ. ಇನಾಂದಾರ್‌ ಪ್ರಶಸ್ತಿ ನೀಡಿ ಗೌರವಿಸಿರುವ ಹಿನ್ನೆಲೆಯಲ್ಲಿ.

ಈ ರಘುನಂದನ ಇಂದಿನ ಅಸಹಿಷ್ಣುತೆ, ದ್ವೇಷಮಯ ವಾತಾವರಣದಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ನಮ್ರವಾಗಿ ಪ್ರತಿಭಟಿಸುವುದು ಹೇಗೆಂದು ಮಾದರಿ ಹಾಕಿಕೊಟ್ಟ ಕೆಲವೇ ಮಂದಿಯ ಪೈಕಿ ಒಬ್ಬರು. ಕೇಂದ್ರ ಸಂಗೀತ-ನಾಟಕ ಅಕಾಡೆಮಿ 2018ರಲ್ಲಿ ಇವರಿಗೆ ಪ್ರಶಸ್ತಿ ನೀಡಿದಾಗ “ಇಂದಿನ ಅಸಹಿಷ್ಣುತೆ ಮತ್ತು ದ್ವೇಷಮಯ ವಾತಾವರಣದಲ್ಲಿ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ನೀಡುತ್ತಿರುವ ಪ್ರಶಸ್ತಿಯನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ” ಎಂದು ತಿರಸ್ಕರಿಸಿದ್ದರು. ರಘುನಂದನ್‌ ಅವರ ನಿರಾಕರಣೆ ೨೦೧೫ರಲ್ಲಿ ಆರಂಭವಾದ ಪ್ರಶಸ್ತಿ ವಾಪಸಾತಿ ಅಹಿಂಸಾತ್ಮಕ ಆಂದೋಲನದ ಒಂದು ಮುಂದುವರೆದ ಭಾಗವಾಗಿತ್ತು.

ಪುರಸ್ಕಾರ-ತಿರಸ್ಕಾರ ಪ್ರಸಿದ್ಧರೇನಲ್ಲ

“ದೇವರ ಮತ್ತು ಧರ್ಮದ ಹೆಸರಿನಲ್ಲಿ ಹಿಂಸಾತ್ಮಕ ಗುಂಪು ಹತ್ಯೆ, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರು ಹಲ್ಲೆ ಯತ್ನವನ್ನು ವಿರೋಧಿಸಿ, ಪ್ರಶಸ್ತಿಯನ್ನು ನಾನು ತಿರಸ್ಕರಿಸುತ್ತಿದ್ದೇನೆ” ಎಂದು ನಮ್ರವಾಗಿಯೇ ಪ್ರತಿಭಟಿಸಿದ್ದರು. ಆಗ ಈ ಬರಹಗಾರನೊಂದಿಗೆ ಮಾತನಾಡಿದ್ದ ರಘುನಂದನ; “ದೇಶದಲ್ಲಿ ಪ್ರಜ್ಞಾವಂತ, ಮುಗ್ಥ ಜನರ ಮೇಲೆ ನಡೆಯುತ್ತಿರುವ ಅನ್ಯಾಯ ನನ್ನನ್ನು ಕಂಗೆಡಿಸಿದೆ. ನನ್ನ ಆತ್ಮಸಾಕ್ಷಿ, ನನ್ನ ಅಂತರ್ಯಾಮಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಅನುಮತಿ ನೀಡುತ್ತಿಲ್ಲ. ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿ ಮೇಲೆ ನನಗೆ ಗೌರವವಿದೆ. ಈ ಹಿಂದೆ ಮತ್ತು ಈಗ ಪ್ರಶಸ್ತಿ ಸ್ವೀಕರಿಸುವವರನ್ನು ಸಹ ನಾನು ಗೌರವದಿಂದಲೇ ನೋಡುತ್ತೇನೆ. ಆದರೆ ನನ್ನ ಅಸಹಾಯಕತೆ, ವಿಷಾದಗಳಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲ. ಇದಕ್ಕೆ ನಾನು ಅಕಾಡೆಮಿಗೆ ಕ್ಷಮೆ ಕೇಳುತ್ತೇನೆ”, ಎಂದು ನಮ್ರವಾಗಿಯೇ ತಮ್ಮ ಗಾಂಧಿ ನಿಲುವುಗಳ ಮಾದರಿಯಲ್ಲಿಯೇ ಹೇಳಿದ್ದು, ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಇದೇ ರೀತಿ ರಘುನಂದನ 2002ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದೂ ನೆನಪಾಗುತ್ತಿದೆ. ಹಾಗೆಂದು ಇವರು ಪ್ರಶಸ್ತಿ ಪುರಸ್ಕಾರಗಳ ತಿರಸ್ಕಾರ ಪ್ರಸಿದ್ಧರೇನಲ್ಲ.

ರಘುನಂದನ ಅವರ ಪುಸ್ತಕ
ರಘುನಂದನ ಅವರ ಪುಸ್ತಕ

ದಟ್ಟಿ ಪಂಚೆ, ತುಂಡು ತೋಳಿನ ಅಂಗಿ ಮತ್ತು ದುಂಡು ಕನ್ನಡಕ

ಹಾಗೆಂದು, ಇವತ್ತಿನ ಪ್ರತಿಭಟನಾಕಾರರ ಯಾವ ಚಹರೆಯೂ ಇಲ್ಲದ ಸೌಮ್ಯ ವ್ಯಕ್ತಿತ್ವದ ಮಟ್ಟಸವಾದ ವ್ಯಕ್ತಿ ರಘುನಂದನ. ಒಂದು ದಟ್ಟಿ ಪಂಚೆ, ತುಂಡುತೋಳಿನ ಅಂಗಿ ಎಷ್ಟು ಬೇಕೋ ಅಷ್ಟು ಮಾತು, ಬಾಕಿಯಂತೆ ತಮಗಿಷ್ಟ ಬಂದವರೊಂದಿಗೆ ಮಾತು, ಸಾಂದರ್ಭಿಕವಾಗಿ ಪ್ರೀತಿಯ ಹಾಗೂ ಸಿದ್ಧಾಂತಾಧಾರಿತ ಜಗಳ..ಇತ್ತೀಚೆಗೆ ಈ ಬರಹಗಾರನನ್ನು ಭೇಟಿಮಾಡಿದಾಗ “ನನ್ನ ಕವನ ಸಂಕಲನ ಓದಿದಿರಾ?” ಇಲ್ಲವೆಂದಾಗ ಚಾರುಮತಿ ಪ್ರಕಾಶನದ ವಿದ್ಯಾರಣ್ಯರನ್ನು ಕರೆದು “ಇವರಿಗೊಂದು ಪ್ರತಿಕೊಡಿ” ಎಂದು ತಾಕೀತು ಮಾಡಿ. “ನೀವು ಓದಿ ನಂತರ ಮಾತನಾಡೋಣ” ಎಂದವರು ರಘುನಂದನ. ಆದರೆ ಅಂದು ಅಪರೂಪಕ್ಕೆ ಪ್ಯಾಂಟ್‌ ಧರಿಸಿ ಬಂದಿದ್ದರು. ಕೈಯಲ್ಲಿ ಕಾವ್ಯವನ್ನು ತಪ್ಪುತಪ್ಪಾಗಿ ಅರ್ಥೈಸುವವರನ್ನು ಬೆದರಿಸಲೆಂದೆ ಇಟ್ಟುಕೊಂಡಂತೆ ಛತ್ರಿ ಇತ್ತು.

ಉಯ್ಯಾಲೆಯ ಧ್ಯಾನ

ಇಂಥ ರಘುನಂದನ್‌ಗೆ ವಿ.ಎಂ ಇನಾಂದಾರ್‌ ಪ್ರಶಸ್ತಿ ಲಭ್ಯವಾಗಿರುವುದು. ಒಂದು ರೀತಿಯಲ್ಲಿ ಭುವನದ ಭಾಗ್ಯ. ಈ ಪ್ರಶಸ್ತಿ ಅವರಿಗೆ ಲಭ್ಯವಾಗಿರುವುದು ʻತುಯ್ತವೆಲ್ಲ ನವ್ಯದತ್ತ ಅದರತ್ತರ ಉಯ್ಯಾಲೆ ಮತ್ತ ಅದರ ಸುತ್ತ….ಕೃತಿಗೆ ಲಭ್ಯವಾಗಿದೆ ಈ ಕೃತಿಯ ʻಮೊದಲಿಗೆ ಮುನ್ನʼದಲ್ಲಿ ರಘುನಂದನ್‌ ಹೇಳಿರುವ ಮಾತುಗಳಿವು; “ನಾನು ಸಾಹಿತ್ಯ ವಿಮರ್ಶಕನಲ್ಲ. ಕಾವ್ಯದ ಕುಡುಕ ಗಂಡಂಗಿಗ; ಅದರ ಈಡಿಗ ಮತ್ತು ಈದಿಗ. ಈಗ ನೀವು ಓದುತ್ತಿರುವುದು ಸಾಹಿತ್ಯ ವಿಮರ್ಶೆಯ ಪುಸ್ತಕವೆಂದು ಕರೆಯಲು ನನಗಂತೂ ಮನಸ್ಸಿಲ್ಲ. ಇಲ್ಲಿರುವುದು ಕೇವಲ ಸಾಹಿತ್ಯ ವಿಮರ್ಶೆಯೆಂದು ಕರೆಯಲು ಆಗದ ಬರಹವೆಂದೇ ಅನ್ನಿಸುತ್ತಿದೆ. ಬೇಂದ್ರೆ ಅವರ ಕಾವ್ಯವನ್ನು ಓದುತ್ತಾ, ಆನಂದದ ಲೆಕ್ಕವಿಲ್ಲದಷ್ಟು ಗಳಿಗೆ ಪಡೆದವನು ನಾನು, ಪಡೆಯುತ್ತಾ ಇರುವವನು. ಆ ಆನಂದವನ್ನು ಹಿರಿಕಿರಿಯ ಸ್ನೇಹಿತರ ಜೊತೆ ಹಂಚಿಕೊಂಡು ಹರಟುತ್ತಾ, ತೊಡಕಿನ ವಿಷಯಗಳನ್ನು ಚರ್ಚಿಸುತ್ತಾ ಬಂದವನು, ಬೇಂದ್ರೆ ಅವರ ʻಕೃಷ್ಣಕುಮಾರಿʼ ಎಂಬ ಕಥನ ನೀಳ್ಗವನ ಹಾಗೂ ಅವರ ಕವನದ್ದೇ ಕಥಾವಸ್ತು, ವಿಷಯ ಹಾಗೂ ಹೆಸರು ಇರುವ, ಸೇಡಿಯಾಪು ಕೃಷ್ಣಭಟ್ಟರ ʻಕೃಷ್ಣಕುಮಾರಿʼ ಎಂಬ ಕವನ ಎರಡನ್ನೂ ಪರಸ್ಪರ ಸಂದಿಲ್ಲದಂತೆ ಬೆಸೆದು, ಹೊಸೆ-ಹೆಣೆದು ʻಅರಸು ವಿಚಾರʼ ಎಂಬ ರಂಗಪ್ರಯೋಗವನ್ನು ಕೂಡ ನಿರ್ದೇಶಿಸಿದವನು ಆದರೆ, ಬೇಂದ್ರೆ ಕುರಿತಾಗಲಿ ಅವರ ಕಾವ್ಯವನ್ನು ಕುರಿತಾಗಲಿ ಬರೆಯುತ್ತೇನೆ ಎಂದು ಯಾವತ್ತೂ ಎಣಿಸಿರಲಿಲ್ಲ. ಈಗ ಈ ಪುಸ್ತಕ ಬಂದಿದೆ. ಬೇಂದ್ರೆ ಅವರ ಉಯ್ಯಾಲೆಯ ಧ್ಯಾನ ಎಲ್ಲೆಲ್ಲಿಗೆ ಹೇಗೆ ಹೇಗೆ ನನ್ನನ್ನು ಕೊಂಡು ಹೋಯಿತೋ, ಆ ಎಲ್ಲೆಡೆಗೆ ಆ ಹಾಗೆ ಹಾಗೆ ತುಯ್ಯುತ್ತಾ ಬರೆಯುತ್ತಾ ಹೋದೆ. ಆ ತುಯ್ತವೆಲ್ಲ ಕೂಡಿ ಈ ಪುಸ್ತಕವಾಗಿದೆ. ಈ ಪುಸ್ತಕದ ಅತಿ ದೀರ್ಘ ಕಂಡಿಕೆ ಎಂದರೆ ಅದೇ. ಅನುಭಾವ, ಅನುಭೂತಿ, ಆಧ್ಯಾತ್ಮ ಮತ್ತು ಅಧಿಭೂತತೆ ಎಂಬವುಗಳ ತತ್ವಜಿಜ್ಞಾಸೆಯಿರುವ ಕಂಡಿಕೆಯೇ ತತ್ವಶೋಧದ ಭಾಗವಾಗಿ (ಹಾಗೂ ಮತ್ತೆ ಅನಿವಾರ್ಯವಾಗಿ, ಕಳೆದ ಶತಮಾನ ಹಾಗೂ ನಾವಿರುವ ಶತಮಾನ, ಈ ಎರಡೂ ಶತಮಾನಗಳ ಕೆಲವು ಮುಖ್ಯ ಸಾಮಾಜಿಕ ಆಗು-ಹೋಗು ವಿಚಾರ ಮತ್ತು ತತ್ವಗಳನ್ನು ನಿರುಕಿಸಬೇಕಾಗಿ ಬಂತಲ್ಲದೆ, ಅವುಗಳನ್ನು ಆಧರಿಸಿ, ನಾವು ಮನುಷ್ಯರು (ಮತ್ತು ಈ ಪುಸ್ತಕದ ನೇರ ಕಾಳಜಿಯ ನೆಲೆಯಲ್ಲಿ ಕವಿಗಳು, ಕಲಾವಿದರು) ತಳೆಯುವ ನಿಲುವುಗಳನ್ನು ಪರೀಕ್ಷಿಸಬೇಕಾಗಿ ಬಂತು…” ಎನ್ನುತ್ತಾರೆ ರಘುನಂದನ.

ಕಾವ್ಯೇಶು ನಾಟಕಂ ರಮ್ಯಂ

“ಕಾವ್ಯೇಶು ನಾಟಕಂ ರಮ್ಯಂ ತತ್ರ ರಮ್ಯಾ ಶಕುಂತಲಾ ತತ್ರಾಪಿ ಚ ಚತುರ್ಥೋಕಸ್ತರ ಶ್ಲೋಕ ಚತುಷ್ಟಯಂ. ಈ ಸಾಲುಗಳನ್ನು ಕವಿ ಕಾಳಿದಾಸ ಹೇಳಿದ್ದು ಎಂದು ಕೆಲವರು ತಪ್ಪಾಗಿ ಗ್ರಹಿಸಿದ್ದಾರೆ. ಲೇಖಕ, ಬರಹಗಾರ ಶಶಿಕಾತ ಯಡಹಳ್ಳಿ ಅವರು ಹೇಳುವಂತೆ. ಈ ಶ್ಲೋಕವನ್ನು ಹೇಳಿದ್ದು ಕಾಳಿದಾಸನಲ್ಲ. ಕಾಳಿದಾಸ ಬರೆದ ಅಭಿಜ್ಞಾನ ಶಾಕುಂತಲ ನಾಟಕ ಕುರಿತ ವಿಮರ್ಶೆ ಮಾಡುವ ಒಬ್ಬ ಕಾವ್ಯ ಮೀಮಾಂಸಕಾರನು ಈ ರೀತಿ ಹೇಳಿದ್ದಾನೆ ಎನ್ನುತ್ತಾರೆ. ಇದರರ್ಥವೆಂದರೆ…ಕಾವ್ಯಗಳಲ್ಲಿ ನಾಟಕವೇ ರಮ್ಯವಾದದ್ದು. ನಾಟಕಗಳಲ್ಲಿ ಶಾಕುಂತಲ ನಾಟಕವೇ ರಮ್ಯವಾದದ್ದು, ಅದರಲ್ಲಿ ಕೂಡ ನಾಲ್ಕನೇ ಅಂಕವೇ ರಮ್ಯವಾದದ್ದು. ಅದರಲ್ಲಿಯೂ ಆ ನಾಲ್ಕು ಶ್ಲೋಕಗಳೇ ರಮ್ಯವಾದದ್ದು. ಆದರೆ ಹೀಗೆಂದು ಬರೆದಿರುವುದನ್ನು ಸಾರ್ವಕಾಲಿಕ ಸತ್ಯವೆಂದು ನಂಬುವುದು ಯಾಕೆ ಎಂಬ ಸಂದೇಹವನ್ನು ಶಶಿಕಾಂತ ವ್ಯಕ್ತಪಡಿಸಿದ್ದರು.

ನಾಟಕವು ಕಾವ್ಯ ದೃಶ್ಯ ಕಾವ್ಯ

ಆದರೆ ರಘುನಂದನ ಕಾವ್ಯ ಮತ್ತು ನಾಟಕವನ್ನು ತಮ್ಮ ಜೀವನ್ಮರಣದ ಪ್ರಶ್ನೆಯಂತೆ ಪ್ರೀತಿಸಿ, ಆರಾಧಿಸಿದವರು. . ಅವರ ʻಎತ್ತ ಹಾರಿದೆ ಹಂಸʼ ಕೃತಿಗೆ 2011ರ ಪು.ತಿ.ನ. ಕಾವ್ಯ ನಾಟಕ ಪ್ರಶಸ್ತಿ ಲಭ್ಯವಾಗಿತ್ತು. ಅದನ್ನು ಅವರು ನಮ್ರವಾಗಿಯೇ ಸ್ವೀಕರಿಸಿದ್ದರು. ಅವರ ಇತ್ತೀಚಿನ; ʻನಾನು ಸತ್ತ ಮೇಲೆʼ- ಕವನ-ಆಟದ ಹಾಡು ಕಬ್ಬ. ಚಾರುಮತಿ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕವನ್ನು ಅವರು “ಆಟದ ಕಬ್ಬ ಕಟ್ಟುತ್ತಾ, ಕಬ್ಬದಾಟ ಆಡುತ್ತಾ, ಅನುವು ಮಾಡಿಕೊಟ್ಟ ಸಮುದಾಯ ರಂಗಾಯಣ ಮತ್ತು ನೀನಾಸಂ ಎಂಬ ಮೂರು ಕೂಡಲಕ್ಕೆ ಅರ್ಪಿಸಿದ್ದಾರೆ. ಈ ಹೊತ್ತಿಗೆಯಲ್ಲಿ ಮೂರುಪಾಲುಗಳಿವೆ. ʻನಾನು ಸತ್ತಮೇಲೆʼ ಅನ್ನುವ ಹೆಸರಿನಡಿ ʻಇವು ಕವಿತೆಗಳುʼ ಎಂದು ಸಾಧಾರಣವಾಗಿ ಜನ ಕರೆಯುತ್ತಾರಲ್ಲ ಅಂಥವುಗಳಿವೆ ಎಂದು ನಾನು ಬಗೆಯುತ್ತ ಬಂದಿರುವ ಪದ್ಯಗಳಿವೆ. ʻಕನ್ನಡಿಸಿದ ಕವಿತೆಗಳ ಅನ್ನುವುದರಡಿಯಲ್ಲಿ ಬೇರೆ ನುಡಿಗಳಿಂದ ಕನ್ನಡಕ್ಕೆ ತಂದ ಪದ್ಯಗಳಿವೆ. ʼಆಟದ ಹಾಡು, ಕಬ್ಬʼ ಅನ್ನುವುದರಡಿಯಲ್ಲಿ ನಾನು ಸ್ವತಂತ್ರವಾಗಿ ಬರೆದ ನಾಟಕಗಳಲ್ಲಿನ ಹಾಡು ಕಬ್ಬಗಳಿವೆ; ಬೇರೆ ನುಡಿಗಳಲ್ಲಿರುವ ನಾಟಕಗಳನ್ನು ಕನ್ನಡಿಸುವಾಗ ಬರೆದವಿವೆ; ಹಾಗೂ ನಾಲ್ಕು ರಂಗ ಪ್ರಯೋಗಗಳಿಗೆ ಬರೆದ ಪ್ರಸ್ತಾವನೆಯ ದೃಶ್ಯಗಳಿವೆ. ಈ ಪುಸ್ತಕದಲ್ಲಿ ನಾಟಕದ ಹಾಡು ಕಬ್ಬಗಳು ಕೂಡ ಇರುವುದಕ್ಕೆ ಕಾರಣಗಳನ್ನು ನೀಡುವ ರಘುನಂದನ; “ನಾಟಕವು ಕಾವ್ಯ; ದೃಶ್ಯಕಾವ್ಯ ; ನೋಡಲು, ಆಡಲೆಂದು ಬರೆದ ಕಾವ್ಯ, ಕೇಳು, ಓದು ನೋಡು, ಆಡು , ಕೇಳೋದು-ನೋಡಾಡು ಕಬ್ಬ” ಎನ್ನುತ್ತಾರೆ.

ಇತಿಹಾಸದ ಮೂರು ವಿರಾಟ್‌ ಕಥನಗಳನ್ನು ಪರಿಶೀಲಿಸುವ ಪ್ರಯತ್ನ

ರಘುನಂದನ ಅವರ ʻಎತ್ತ ಹಾರಿದೆ ಹಂಸʼ -ಒಂದು ಮೆಲೋಡ್ರಾಮ ೨೦೧೧ ರಲ್ಲಿ ಪ್ರಕಟವಾದ ಕೃತಿ. ಈ ಪುಸ್ತಕವನ್ನು ಅಕ್ಷರ ಪ್ರಕಾಶನ ಪ್ರಕಟಿಸಿದೆ. 1930ರ ದಶಕದ ಭಾರತದ ಇತಿಹಾಸದ ಮೂರು ವಿರಾಟ್‌ ಕಥನಗಳನ್ನು ಪರಿಶೀಲಿಸುವ ಒಂದು ಪ್ರಯತ್ನವನ್ನು ಈ ನಾಟಕ ಕೈಗೆತ್ತಿಕೊಳ್ಳುತ್ತದೆ. ಹಾಗಂತ ನಾಟಕಕಾರರಿಗೆ ಈ ಕಾಲದ ಇತಿಹಾಸದ ಅಧಿಕೃತ ಚಿತ್ರಣ ನೀಡುವುದರಲ್ಲೇನೂ ಆಸಕ್ತಿ ಇಲ್ಲ. ಬದಲು ರಘುನಂದನ ಅವರ ನಾಟಕದ ಕೇಂದ್ರ ಕಾಳಜಿಯು ಇಂಥ ಇತಿಹಾಸದ ಘಟನಾವಳಿಗಳು ಹೇಗೆ ಸಾಧಾರಣ ಬದುಕನ್ನು ಪ್ರಭಾವಿಸಿವೆ ಎಂಬುದನ್ನು ಗ್ರಹಿಸುವುದು ಮತ್ತು ಇಂಥ ಘಟನೆಗಳನ್ನು ತಮ್ಮದೇ ಮಿತಾಕಾಂಕ್ಷೆ ಮತ್ತು ಘನತೆಗಳೊಂದಿಗೆ ಬದುಕುವ ಸಾದಾ ಜನರು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಗುರುತಿಸುವುದು ಈ ನಾಟಕದ ಮೂಲ ಕಾಳಜಿ. ಇತಿಹಾಸ ಎಂದರೆ ಅಂಥ ಜನರಿಗೆ ಯಾವುದು? ಮೇಲ್ನೋಟಕ್ಕೆ ರಾಜಕೀಯ-ವಿಮುಖರೆಂದು ಕಾಣುವ ಈ ಬಗ್ಗೆಯ ಜನರ ನಿಜ ರಾಜಕಾರಣ ಯಾವ ಬಗೆಯದು? ಇಂಥ ಇತಿಹಾಸ ನಿರ್ದಿಷ್ಟ ಸಂದರ್ಭದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬ ಹೇಗೆ ತನ್ನ ವೈಯಕ್ತಿಕ-ಕೌಟುಂಬಿಕ ಒತ್ತಡಗಳನ್ನು, ರಾಷ್ಟ್ರ ನಿರ್ಮಾಣದ ಕೆಲಸವನ್ನು ಒಟ್ಟೊಟ್ಟಿಗೆ ನಿಭಾಯಿಸುತ್ತಾನೆ?-ಈ ಮೊದಲಾದ ಹಲವು ಪ್ರಶ್ನೆಗಳು ಈ ನಾಟಕದುದ್ದಕ್ಕೂ ಪ್ರತಿಧ್ವನಿಸುತ್ತಲೇ ಇರುತ್ತದೆ. ಇಂಥ ಐತಿಹಾಸಿಕ ಸಾಂದರ್ಭಿಕ ವಿಚಾರಗಳನ್ನು ಪರಿಶೀಲನೆ ಮಾಡುತ್ತಿದ್ದರೂ, ಕೂಡ ಪ್ರಸ್ತುತ ನಾಟಕವು ವಾಸ್ತವವಾದಿ ಪಾತಳಿಯಲ್ಲಿ ಸಾಗುವುದಿಲ್ಲ ಎಂಬುದು ಗಮನಾರ್ಹ. ನಾಟಕಕಾರರು ಈ ಮಾರ್ಗವನ್ನು ಪ್ರಜ್ಞಾಪೂರ್ವಕವಾಗಿ ಬಿಟ್ಟಿದ್ದಾರೆ. ಬದಲಾಗಿ, ತುಂಬಾ ಸೂಕ್ಷ್ಮವಾಗಿ ಮತ್ತು ಕೌಶಲ್ಯಪೂರ್ಣವಾಗಿ ಅರು ಹಲವು ಬಗೆಯ ದೇಶಿ ಕಥನ ಕಾವ್ಯ-ನಾಟಕ ಮಾದರಿಗಳನ್ನು ಜತೆಗೆ ತಮ್ಮ ನಾಟಕೀಯ ನಿರೂಪಣೆಯನ್ನು ಕಸಿ ಮಾಡಿದ್ದಾರೆ. ಈ ನಾಟಕದ ನಿರೂಪಣೆಯಲ್ಲಿ ನಾಟಕಕಾರರು ತುಂಬಾ ಎಚ್ಚರದಿಂದ ಆಯ್ದ ಜನಪದ ಗೀತೆಗಳನ್ನು ಬಳಸುತ್ತಾರೆ. ಸಾಂಪ್ರದಾಯಿಕವಾಗಿ ಮತ್ತು ಆಧುನಿಕ ಕಾವ್ಯಭಾಗಗಳನ್ನು ಬಳಸುತ್ತಾರೆ. ಮತ್ತು ಇವೆಲ್ಲ ಕೂಡಿ ವಾಗ್ವಿಲಾಸವೊಂದನ್ನು ಈ ನಾಟಕವು ಕಟ್ಟಿಕೊಂಡಿದೆ. ಇಂಥ ಭಾಷಾ ಭಿತ್ತಿ ಇರುವ ಕಾರಣದಿಂದಲೇ, ಈ ನಾಟಕವು ನಿರ್ದಿಷ್ಟ ದೇಶಕಾಲದ ಐತಿಹಾಸಿಕ ಘಟನೆ-ವ್ಯಕ್ತಿ, ಸ್ಥಳಗಳನ್ನು ಬಿಂಬಿಸುತ್ತಲೇ ಅದನ್ನೊಂದು ಶ್ರೀಮಂತ ಪುರಾಣವಾಗಿ ಹೆಣೆಯಲು ಸಫಲವಾಗಿದೆ.

ಆನೆ ನಡೆದದ್ದೇ ದಾರಿ

ತಮ್ಮನ್ನು ತಾವು “ಸಾಹಿತ್ಯ ವಿಮರ್ಶಕನಲ್ಲ. ಕಾವ್ಯದ ಕುಡುಕ ಗಂಡಂಗಿಗ; ಅದರ ಈಡಿಗ ಮತ್ತು ಈದಿಗ” ಎಂದೆಲ್ಲ ಟೀಕಿಸಿಕೊಳ್ಳುವ ಕವಿ, ನಾಟಕಾರ, ರಂಗನಿರ್ದೇಶಕ, ರಂಗ ವಿನ್ಯಾಸಕ, ನಟ ರಘುನಂದನ ಅವರ ಸೃಜನಶೀಲ ಪ್ರತಿಭೆಯ ವಿಸ್ತಾರ, ವಿಸ್ತರಣೆಗಳು ಹಲವು ಆಯಾಮಗಳಲ್ಲಿ ಚಾಚಿಕೊಳ್ಳುತ್ತಾ ಬಂದಿರುವುದನ್ನು ಕನ್ನಡ ರಂಗಭೂಮಿ 1978ರಲ್ಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು ಬರುವ ಮೊದಲಿನಿಂದಲೇ ಗಮನಿಸಿಕೊಂಡು ಬಂದಿದೆ.

ರಘುನಂದನ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಓದಿದ್ದು ಓದಿದ್ದು 1978-82ರ ನಡುವೆ. 1978-81 ಮೂರು ವರ್ಷದ ವಾಡಿಕೆಯ ವ್ಯಾಸಂಗ ಅದು. 1981-82 - ರಂಗನಿರ್ದೇಶನದ ವಿಶೇಷ ವ್ಯಾಸಂಗ: advanced study course in stage directing. 1977ರಲ್ಲಿ ರಘುನಂದನ ಸಮುದಾಯದ ಸಂಘಟನೆಯ ಭಾಗವಾದರು. 1978ರಲ್ಲಿ ರಾಷ್ಟ್ರೀಯ ನಾಟಕ ಶಾಲೆಗೆ ಹೋದಮೇಲೂ ಸಮುದಾಯದ ಭಾಗವಾಗಿಯೇ ಇದ್ದರು. ಚಳಿಗಾಲ. ಬೇಸಿಗೆಯ ರಜೆಗೆ ಊರಿಗೆ ಮರಳಿದಾಗಲೆಲ್ಲ, ಕೆಲಸ ಸಮುದಾಯದೊಂದಿಗೇ, ಸಮುದಾಯಕ್ಕಾಗಿಯೇ: ಜಾಥಾ, ರಂಗಕಮ್ಮಟ, ಬರಹ ಇತ್ಯಾದಿ. 1982ರಲ್ಲಿ ಮರಳಿಬಂದಮೇಲೆ 1989ರವರೆಗೆ ಮತ್ತೆ ಪೂರ್ತಿ ಸಮುದಾಯ ತಂಡದಲ್ಲಿ ಕ್ರಿಯಾಶೀಲರಾಗಿದ್ದರು. 1989ರಿಂದ ರಂಗಾಯಣ, 12 ವರ್ಷಗಳ ಕಾಲ - ಅಭಿನಯ ಪ್ರಶಿಕ್ಷಕರಾಗಿ, ಸಂಸ್ಥೆಯಲ್ಲಿಯೇ ಇರುವ ಒಬ್ಬ ರಂಗನಿರ್ದೇಶಕ, ಹಾಗೂ ಡ್ರಾಮಾಟೂರ್ಗ್ (ರಂಗಪಠ್ಯಕಾರ) ಆಗಿ ದುಡಿದರು.

1984ರಿಂದ 2001ರವರೆಗೆ ಮೈಸೂರಿನ ರಂಗಾಯಣದಲ್ಲಿ ಸ್ವಲ್ಪಕಾಲ ಬಿ.ವಿ. ಕಾರಂತರ ಹೆಗಲಾದವರು ಇವರು. ಶಿಕ್ಷಕರಾಗಿ ರಂಗಾಯಣದ ವಿದ್ಯಾರ್ಥಿಗಳಿಗೆ ಪಾಠ ಕಲಿಸಿದವರು. ತಾವೇ ಕಲಿತ ರಾಷ್ಟ್ರೀಯ ನಾಟಕ ಶಾಲೆಯ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ ದುಡಿದವರು. ಅಭಿನಯವೂ ಸೇರಿದಂತೆ ರಂಗಭೂಮಿಯ ವಿವಿಧ ಕಲೆಗಳ ಅಧ್ಯಯನ ಮಾಡಿ ಅವುಗಳಲ್ಲಿ ತಜ್ಞರಾದವರು ರಘುನಂದನ. ರಂಗಾಯಣ, ನೀನಾಸಂ, ಹುಬ್ಬಳ್ಳಿ ಸಂಸ್ಕೃತಿ ಶಾಲೆ, ಧಾರವಾಡದ ರಂಗಾಯಣ, ಕೇರಳದ ತ್ರಿಶೂರ್‌ ನ ನಾಟಕ ಶಾಲೆ , ಲಖನೋವಿನ ಭರತೇಂದು ಅಕಾಡೆಮಿಯ ಫ್ಲೇಮ್‌ ಸ್ಕೂಲ್‌ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಇಲ್ಲೆಲ್ಲ ನೂರಾರು ಕಲಾವಿದರನ್ನು ರಂಗತಜ್ಞರನ್ನು ರೂಪಿಸಿದ ಕೀರ್ತಿ ರಘುನಂದನ ಅವರದು.

ರಘುನಂದನ ಕಾವ್ಯ-ರಂಗಭೂಮಿ ಎರಡೂ ಕಡೆ ಸಲ್ಲುವವರು. ಇಬ್ಸನ್‌, ಷೆಕಾಫ್‌, ಬ್ರೆಕ್ಟ್‌ , ಬೆಕೆಟ್‌ ಮುಂತಾದ ಪಾಶ್ಚಾತ್ಯ ನಾಟಕಕಾರರ ಕೃತಿಗಳ ಕನ್ನಡ ಅವತರಣಿಕೆ ರೂಪಿಸಿ ನಿರ್ದೇಶಿಸಿದ ಕೀರ್ತಿ ಕೂಟ ರಘುನಂದನ ಅವರದು. ಭಾಸ, ಶೂದ್ರಕ, ಸಂಸ, ಮಾಸ್ತಿ, ಲಂಕೇಶ್‌ ಮೊದಲಾದವರ ನಾಟಕಗಳ ರಂಗ ಅವತರಣದ ಮೂಲಕ ರಘುನಂದನ ಕನ್ನಡ ರಂಗಭೂಮಿಯಲ್ಲಿ ತಮಗೊಂದು ಸ್ಥಾನ-ಮಾನ ಪಡೆದು ತಮ್ಮದೇ ಛಾಪು ಮೂಡಿಸಿದ್ದಾರೆ ಎಂಬುದರೊಂದಿಗೆ ಹಾರಿದ ಹಂಸ ಸದ್ಯಕ್ಕೆ ತತ್-ಕ್ಷಣದ ದಣಿವು ಆರಿಸಿಕೊಳ್ಳುತ್ತಿದೆ ಎನ್ನಬಹುದು.

(ಬರಹ- ಮುರಳೀಧರ ಖಜಾನೆ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.