2023 Mauni Amavasya: 12 ಅಮವಾಸ್ಯೆಗಳಲ್ಲಿ ಬಹಳ ಶ್ರೇಷ್ಠ ಈ 'ಮೌನಿ ಅಮವಾಸ್ಯೆ'..ಪಿತೃದೋಷ ಕಳೆಯುವ ಈ ದಿನದ ಶುಭ ಮುಹೂರ್ತ ತಿಳಿದುಕೊಳ್ಳಿ
ಯಾರ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದಾನೋ ಅವರೆಲ್ಲರೂ ಮೌನಿ ಅಮವಾಸ್ಯೆಯಂದು ಹಸುವಿಗೆ ಮೊಸರನ್ನ ತಿನ್ನಿಸಬೇಕು. ಹೀಗೆ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಮತ್ತು ಚಂದ್ರನಿಗೆ ಸಂಬಂಧಿಸಿದ ದೋಷಗಳು ದೂರವಾಗುತ್ತವೆ. ಮೌನಿ ಅಮವಾಸ್ಯೆಯ ದಿನ ಬೆಳ್ಳಿ ನಾಗರ ಹಾವಿಗೆ ಪೂಜೆ ಸಲ್ಲಿಸಿ, ಹರಿಯುವ ನೀರಿನಲ್ಲಿ ಬಿಳಿ ಹೂಗಳನ್ನು ಹಾಕಿದರೆ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಮೌನಿ ಅಮಾವಾಸ್ಯೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ 'ಮೌನಿ' ಎಂಬುದು ಸಂಸ್ಕೃತ ಪದ. ಆದ್ದರಿಂದಲೇ ಮೌನಿ ಎಂಬ ಪದವು ಮೌನದಿಂದ ಹುಟ್ಟಿದೆ. ಮೌನಿ ಎಂದರೆ 'ಸಂಪೂರ್ಣ ಮೌನ' ಎಂದು ಅರ್ಥ. ಈ ದಿನ ಕೆಲವರು ಉಪವಾಸ ಮಾಡಿ ಮೌನವ್ರತ ಕೂಡಾ ಮಾಡುತ್ತಾರೆ. ಪುರಾಣಗಳ ಪ್ರಕಾರ, ಅಮವಾಸ್ಯೆಯ ದಿನ ತಾಯಿ ಗಂಗಮ್ಮ ಆಕಾಶದಿಂದ ಅಮೃತದಂತೆ ಧರೆಗೆ ಇಳಿಯುತ್ತಾಳೆ ಎಂಬ ನಂಬಿಕೆ ಇದೆ.
ಟ್ರೆಂಡಿಂಗ್ ಸುದ್ದಿ
ಮೌನಿ ಅಮವಾಸ್ಯೆಯಂದು ಅನೇಕ ಮಂದಿ ಗಂಗಾ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಈ ವ್ರತವನ್ನು ಪುಷ್ಯ ಪೂರ್ಣಿಮೆಯ ದಿನದಿಂದ ಮಾಘ ಪೂರ್ಣಿಮೆಯವರೆಗೆ ಆಚರಿಸಲಾಗುತ್ತದೆ. ಹಾಗಾಗಿಯೇ ಈ ಮೌನಿ ಅಮವಾಸ್ಯೆಗೆ ಹೆಚ್ಚಿನ ಮಹತ್ವ ಬಂದಿದೆ. ಈ ಬಾರಿ ವರ್ಷದ ಮೊದಲ ಅಮವಾಸ್ಯೆ ಮಾಘ ಮಾಸದಂದು ಬಂದಿದೆ. ಈ ಬಾರಿ ಮೌನಿ ಅಮವಾಸ್ಯೆ ಯಾವ ದಿನ ಇದೆ? ಶುಭ ಮುಹೂರ್ತ ಯಾವುದು? ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ.
ಮೌನಿ ಅಮವಾಸ್ಯೆ ದಿನಾಂಕ ಹಾಗೂ ಶುಭ ಮುಹೂರ್ತ
ಹಿಂದೂ ಪಂಚಾಂಗದ ಪ್ರಕಾರ, 2023 ರಲ್ಲಿ ಜನವರಿ 21ರಂದು ಮೌನಿ ಅಮವಾಸ್ಯೆ ಆಚರಿಸಲಾಗುತ್ತದೆ. ಅಮವಾಸ್ಯೆ ತಿಥಿಯು ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನದಂದು ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಬರುವ 12 ಅಮಾವಾಸ್ಯೆಗಳಲ್ಲಿ ಮೌನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. 21 ಜನವರಿ 2023 ಶನಿವಾರ ಬೆಳಗ್ಗೆ 6:17 ಕ್ಕೆ ಅಮವಾಸ್ಯೆಯ ತಿಥಿ ಆರಂಭವಾದರೆ, 22 ಜನವರಿ 2023 ರಂದು ಭಾನುವಾರ ಮಧ್ಯಾಹ್ನ 2:22 ಗಂಟೆಗೆ ಅಮಾವಾಸ್ಯೆ ತಿಥಿ ಮುಕ್ತಾಯವಾಗುತ್ತದೆ.
ಮೌನಿ ಅಮವಾಸ್ಯೆಯ ಮಹತ್ವ
ಮೌನಿ ಅಮವಾಸ್ಯೆಯನ್ನು ಮೂಕ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ವಿಶೇಷ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ಈ ಶುಭ ದಿನದಂದು ಪೂರ್ವಜರ ಶಾಂತಿಗಾಗಿ ಶ್ರಾದ್ಧ ವಿಧಿಗಳನ್ನು ಮತ್ತು ತರ್ಪಣವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ಸರ್ವಾರ್ಧ ಸಿದ್ಧಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಜನವರಿ 22 ರಂದು ಬೆಳಗ್ಗೆ 6:30 ರಿಂದ 7:14 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಹರ್ಷ ಯೋಗ, ವಜ್ರ ಯೋಗ ಕೂಡಾ ರೂಪುಗೊಳ್ಳಲಿದೆ.
ಚಂದ್ರ ದರ್ಶನವಿಲ್ಲ
ಮೌನಿ ಅಮವಾಸ್ಯೆಯ ದಿನ ಚಂದ್ರ ನಮಗೆ ದರ್ಶನ ನೀಡುವುದಿಲ್ಲ. ಆದ್ದರಿಂದಲೇ ಇಂದು ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರೆ ಅವುಗಳಿಂದ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ ಎನ್ನಲಾಗಿದೆ. ಮೌನಿ ಅಮಾವಾಸ್ಯೆಯಂದು ಚಂದ್ರನಿಗೆ ಸಂಬಂಧಿಸಿದ ರುದ್ರಾಕ್ಷಿಗಳನ್ನು ಧರಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗೆಯೇ ಶನೈಶ್ಚರನನ್ನು ಎಳ್ಳೆಣ್ಣೆಯಿಂದ ಪೂಜಿಸಿದರೆ ಶುಭ ಪ್ರಾಪ್ತಿಯಾಗುತ್ತದೆ.
ಪರಿಹಾರ
ಯಾರ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದಾನೋ ಅವರೆಲ್ಲರೂ ಮೌನಿ ಅಮವಾಸ್ಯೆಯಂದು ಹಸುವಿಗೆ ಮೊಸರನ್ನ ತಿನ್ನಿಸಬೇಕು. ಹೀಗೆ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ ಮತ್ತು ಚಂದ್ರನಿಗೆ ಸಂಬಂಧಿಸಿದ ದೋಷಗಳು ದೂರವಾಗುತ್ತವೆ. ಮೌನಿ ಅಮವಾಸ್ಯೆಯ ದಿನ ಬೆಳ್ಳಿ ನಾಗರ ಹಾವಿಗೆ ಪೂಜೆ ಸಲ್ಲಿಸಿ, ಹರಿಯುವ ನೀರಿನಲ್ಲಿ ಬಿಳಿ ಹೂಗಳನ್ನು ಹಾಕಿದರೆ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ. ಮೌನಿ ಅಮವಾಸ್ಯೆಯಂದು ಕುಂಕುಮ ಮಿಶ್ರಿತ ಅನ್ನವನ್ನು ದಕ್ಷಿಣಾಭಿಮುಖವಾಗಿ ಶಂಖದಲ್ಲಿ ಇಡಬೇಕು. ನಂತರ, ತುಪ್ಪದ ದೀಪವನ್ನು ಬೆಳಗಿಸಿ '' ಓಂ ಶ್ರೀ '' ಎಂಬ ಮಹಾಲಕ್ಷ್ಮಿ ಮಂತ್ರವನ್ನು11 ಬಾರಿ ಜಪಿಸಿದರೆ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯುತ್ತದೆ. ಈ ದಿನ ದಾನ ಮಾಡಿದರೆ ಕೂಡಾ ಅದು ಬಹಳ ಶ್ರೇಷ್ಠವಾದುದು.
ನಮ್ಮ ಪಿತೃಗಳಿಗೆ ವಿಧಿಗಳನ್ನು ಮಾಡುವ ಕಾರಣದಿಂದ ಈ ಮೌನಿ ಅಮವಾಸ್ಯೆಯಂದು ದೇವರಿಗೆ ಪೂಜೆ ಮಾಡುವಾಗ ಘಂಟಾನಾದ ಮಾಡಬಾರದು. ಹಾಗೇ ಈ ದಿನ ತಾಮ್ರದ ಚೊಂಬಿನಲ್ಲಿ ಸೂರ್ಯ ದೇವನಿಗೆ ಅರ್ಘ್ಯ ನೀಡುವುದು ಕೂಡಾ ಉತ್ತಮ ಎನ್ನಲಾಗಿದೆ. ಒಂದು ವೇಳೆ ನೀವು ಕೂಡಾ ಮೌನಿ ಅಮವಾಸ್ಯೆ ಆಚರಿಸಬೇಕು ಎಂದಾದಲ್ಲಿ ಎಲ್ಲಾ ಮಾಹಿತಿ ಇರುವ ಪುರೋಹಿತರನ್ನು ಸಂಪರ್ಕಿಸಿ.