ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ: ಪರ ಮತ್ತು ವಿರೋಧದ ಚರ್ಚೆ ಜೋರು, ನೀವು ತಿಳಿಯಬೇಕಾದ 10 ಅಂಶಗಳಿವು
Paid Menstrual Leave: ಭಾರತದಲ್ಲಿ ಮುಟ್ಟಿನ ರಜೆ ನೀತಿ ಮತ್ತು ಪರ-ವಿರೋಧ ಚರ್ಚೆ ಕುರಿತು ನೀವು ತಿಳಿಯಬೇಕಾದ 10 ಅಂಶಗಳು ಇಲ್ಲಿವೆ..
ಋತುಚಕ್ರದ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯೊಂದಿಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಹಿಳೆಯರು ಮಾತ್ರವಲ್ಲದೇ ಅನೇಕ ಪುರುಷರು ಕೂಡ ಸಚಿವೆಯ ಹೇಳಿಕೆಯನ್ನು ಖಂಡಿಸಿದ್ದಾರೆ. ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಸಮಸ್ಯೆ ಅರ್ಥ ಮಾಡಿಕೊಂಡಿಲ್ಲವಲ್ಲ ಎಂದು ಟೀಕಿಸುತ್ತಿದ್ದಾರೆ. ಮುಟ್ಟಿನ ರಜೆ ವಿರೋಧಿಸುವವರೂ ಇದ್ದಾರೆ.
ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು?
ಕಳೆದ ಬುಧವಾರ (ಡಿಸೆಂಬರ್ 13) ರಾಜ್ಯಸಭೆಯ ಕಲಾಪದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ಸಂಸದ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಉತ್ತರಿಸಿದ್ದ ಸಚಿವೆ ಇರಾನಿ, ಮುಟ್ಟು ಜೀವನದ ನೈಸರ್ಗಿಕ ಭಾಗವಾಗಿದೆ. ಅದನ್ನು ವಿಶೇಷ ರಜೆ ನಿಬಂಧನೆಗಳ ಅಗತ್ಯವಿರುವ ಅಂಗವಿಕಲತೆ ಎಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ. ಮುಟ್ಟಿನ ರಜೆಯು ಉದ್ಯೋಗಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಬಹುದು. ಮುಟ್ಟು 'ಅಂಗವೈಕಲ್ಯ' ಅಲ್ಲ ಮತ್ತು ಆದ್ದರಿಂದ, 'ವೇತನ ಸಹಿತ ರಜೆ ನೀತಿ' ಯನ್ನು (paid leave policy) ಸಮರ್ಥಿಸುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು.
ಭಾರತದಲ್ಲಿ ಮುಟ್ಟಿನ ರಜೆ ನೀತಿ ಮತ್ತು ಪರ-ವಿರೋಧ ಚರ್ಚೆ ಕುರಿತು ನೀವು ತಿಳಿಯಬೇಕಾದ 10 ಅಂಶಗಳಿವು
1) ಈ ವರ್ಷದ ಆರಂಭದಲ್ಲಿ, ಭಾರತದಾದ್ಯಂತ ಮಹಿಳಾ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ 'ಮುಟ್ಟಿನ ರಜೆ' ಯನ್ನು ಪ್ರತಿಪಾದಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಹೆರಿಗೆ ಪ್ರಯೋಜನ ಕಾಯ್ದೆ 1961 (Maternity Benefit Act)ರಲ್ಲಿ ಮುಟ್ಟಿನ ಬಗ್ಗೆ ಯಾವುದೇ ನಿಬಂಧನೆ ಇಲ್ಲದಿರುವುದು ಸೇರಿದಂತೆ ಕೆಲವು ಪ್ರಮುಖ ಅಂಶಗಳನ್ನು ಅರ್ಜಿಯು ಎತ್ತಿ ಹಿಡಿದಿದೆ ಎಂದು ಗುರುತಿಸಿತ್ತು. ಅರ್ಜಿದಾರರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟಿತ್ತು.
2) ಭಾರತದಲ್ಲಿ ಮುಟ್ಟಿನ ರಜೆಯು ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಮತ್ತು ಆರ್ಟಿಕಲ್ 14 (ಸಮಾನತೆಯ ಹಕ್ಕು) ಗೆ ಅನುಗುಣವಾಗಿದೆ. ಹೆಚ್ಚುವರಿಯಾಗಿ, ಸಂವಿಧಾನವು ಆರ್ಟಿಕಲ್ 15(3) ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ನಿಬಂಧನೆಗಳನ್ನು ಮಾಡಲು ಆಯಾ ರಾಜ್ಯಕ್ಕೆ ಅಧಿಕಾರ ನೀಡುತ್ತದೆ.
3) ಭಾರತದಲ್ಲಿ ಮುಟ್ಟಿನ ರಜೆಗಾಗಿ ಯಾವುದೇ ಕಾನೂನು ಇಲ್ಲದಿದ್ದರೂ, ಇತ್ತೀಚೆಗೆ ಬಿಡುಗಡೆಯಾದ ಮುಟ್ಟಿನ ನೈರ್ಮಲ್ಯ ನೀತಿ 2023 ರ (Menstrual Hygiene Policy) ಕರಡು, ಲಿಂಗ ತಾರತಮ್ಯದ ಸಮಸ್ಯೆಯನ್ನು ಪರಿಹರಿಸುವ ಅಗತ್ಯವನ್ನು ಉಲ್ಲೇಖಿಸಿದೆ. ರಜೆಗಳು ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆಗಳನ್ನು ಬೆಂಬಲಿಸುವ ಕೆಲಸದ ವಾತಾವರಣವನ್ನು ಸೃಷ್ಟಿಸುವುದನ್ನು ಎತ್ತಿ ಹಿಡಿದಿದೆ.
4) ಭಾರತದಲ್ಲಿ ‘ವೇತನ ಸಹಿತ ಮುಟ್ಟಿನ ರಜೆ’ಗೆ (paid menstruation leave) ಯಾವುದೇ ಕೇಂದ್ರೀಕೃತ ನಿರ್ದೇಶನವಿಲ್ಲದಿದ್ದರೂ, ಎರಡು ಭಾರತೀಯ ರಾಜ್ಯಗಳಾದ ಬಿಹಾರ ಮತ್ತು ಕೇರಳ, ಮಹಿಳೆಯರಿಗೆ ಮುಟ್ಟಿನ ರಜೆ ನೀತಿಗಳನ್ನು ಪರಿಚಯಿಸುವಲ್ಲಿ ಮುಂದಾಳತ್ವ ವಹಿಸಿದ್ದವು. 1992ರಲ್ಲೇ ಬಿಹಾರದಲ್ಲಿ ಮುಟ್ಟಿನ ರಜೆ ನೀತಿ ಪರಿಚಯಿಸಿತು. ಕೇರಳವು 2023 ರಲ್ಲಿ ಜಾರಿಗೆ ತಂದಿತು.
5) ಭಾರತದಲ್ಲಿ ಮುಟ್ಟಿನ ರಜೆ ಕಡ್ಡಾಯವಿಲ್ಲವಾದರೂ ಝೊಮ್ಯಾಟೊ, ಸ್ವಿಗ್ಗಿ, ಬೈಜುಸ್ ನಂತಹ ಹಲವಾರು ಕಂಪನಿಗಳು ತಮ್ಮ ಮಹಿಳಾ ಸಿಬ್ಬಂದಿಗೆ ಸಂಬಳ ಸಹಿತ ಮುಟ್ಟಿನ ರಜೆ ಒದಗಿಸಿವೆ.
6) ಪ್ರಪಂಚದಾದ್ಯಂತ, ಪ್ರಸ್ತುತ ಜಪಾನ್, ತೈವಾನ್, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಝಾಂಬಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸಲಾಗಿದೆ.
7) ಮುಟ್ಟಿನ ರಜೆ ನೀತಿಯ ವಿರೋಧಿಗಳು ಮುಟ್ಟಿನ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕೆಲವು ಮಹಿಳೆಯರಿಗೆ ಮಾತ್ರ ತೀವ್ರವಾಗಿರುತ್ತವೆ. ಅವರು ಬೇಕಾದ್ರೆ ಸಿಕ್ ಲೀವ್ (sick leaves) ಬಳಸಿಕೊಳ್ಳಬಹುದು. ಇದು ಮುಂದಿನ ದಿನಗಳಲ್ಲಿ ವೇತನ ಸಹಿತ ರಜೆಗಳನ್ನು ಪಡೆಯಲು ಸಮಸ್ಯೆಯಾಗಬಹುದು. ಕೆಲಸದ ಸ್ಥಳದಲ್ಲಿ ಮುಜುಗರದ ಪರಿಸ್ಥಿತಿಯನ್ನು ಸಹ ಸೃಷ್ಟಿಸಬಹುದು, ತಾರತಮ್ಯ ಮಾಡಿದಂತಾಗುತ್ತದೆ ಎಂದು ವಾದಿಸುತ್ತಿದ್ದಾರೆ.
8) ಮುಟ್ಟಿನ ನೋವು ಎಲ್ಲರಿಗೂ ಕಾಡುವುದಿಲ್ಲವಾದರೂ ಕೂಡ ನೋವು ಅನುಭವಿಸುವವರು ಋತುಚಕ್ರದ ಮೊದಲ ದಿನ ಪ್ರಾಣ ಹೋಗುವಷ್ಟು ಸಂಕಟ ಪಡುತ್ತಾರೆ. ಹೊಟ್ಟೆನೋವು, ಬೆನ್ನು ನೋವು, ಸೊಂಟ ನೋವು, ಕಾಲು ನೋವು, ವಾಂತಿ, ಭೇದಿ, ಮೂಡ್ ಸ್ವಿಂಗ್, ತಲೆ ನೋವು ಸೇರಿದಂತೆ ಅನೇಕ ಸಮಸ್ಯೆಗಳ ನೋವನ್ನ ಏಕಕಾಲಕ್ಕೆ ಅನುಭವಿಸುತ್ತಾರೆ. ಕೆಲಸ ಮಾಡಬೇಕೆಂಬ ಕಾರಣಕ್ಕೆ ಅಡ್ಡಪರಿಣಾಮಗಳಿದ್ದರೂ ನೋವು ನಿವಾರಕ ಮಾತ್ರೆ ಸೇವಿಸಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಮುಟ್ಟಿನ ನೋವು ಅನುಭವಿಸದವರು ಕೆಲಸದ ಒತ್ತಡದಲ್ಲಿ ಮಾನಸಿಕ ಕಿರಿಕಿರಿಯಂತೂ ಅನುಭವಿಸುತ್ತಾರೆ. ಅವರೆಲ್ಲರಿಗೂ ವಿಶ್ರಾಂತಿ ಅಗತ್ಯ. ಹೀಗಾಗಿ ಮುಟ್ಟಿನ ರಜೆ ಬೇಕು ಎಂಬುದು ಮುಟ್ಟಿನ ರಜೆಯ ನೀತಿ ಪ್ರತಿಪಾದಿಸುವವರ ವಾದವಾಗಿದೆ.
9) ಮುಟ್ಟಿನ ನೀತಿ ಪ್ರತಿಪಾದಿಸುವವರು ಮುಟ್ಟು ಒಂದು ಜೈವಿಕ ಪ್ರಕ್ರಿಯೆ, ಸಿಕ್ ಲೀವ್ ಹಾಕಿಕೊಳ್ಳಲು ಇದು ಅನಾರೋಗ್ಯವಲ್ಲ. ಮುಟ್ಟಿನ ರಜೆ ನೀತಿಯನ್ನು ಕಾರ್ಯಗತಗೊಳಿಸುವುದು ಉದ್ಯೋಗಿಗಳಲ್ಲಿ ಲಿಂಗ ವ್ಯತ್ಯಾಸಗಳನ್ನು ಗುರುತಿಸುತ್ತದೆ, ಮಹಿಳೆಯರ ಸಾಮರ್ಥ್ಯ ವೃದ್ಧಿಸುತ್ತದೆ. ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಅನೇಕ ದೇಶಗಳ ಕಾನೂನುಗಳೊಂದಿಗೆ ಹೊಂದಿಕೊಳ್ಳುತ್ತದೆ ಎನ್ನುತ್ತಿದ್ದಾರೆ. ಅಲ್ಲದೇ ಉದ್ಯೋಗಸ್ಥ ಮಹಿಳೆಯರು ಮೊದಲಿನಂತೆ ಮುಟ್ಟಿನ ಸಮಸ್ಯೆಗಳನ್ನು ಮುಚ್ಚಿಟ್ಟುಕೊಳ್ಳಲು ಹಿಂಜರಿಯುತ್ತಿಲ್ಲ, ಮುಜುಗರ ಉಂಟಾಗುತ್ತದೆ ಎಂಬ ಮನಸ್ಥಿತಿ ಅವರಲ್ಲಿಯೇ ಇಲ್ಲ ಎಂಬುದು ಇವರ ವಾದ.
10) ಜಾಗತಿಕವಾಗಿ, ಮಹಿಳೆಯರು ಲಿಂಗ ಪಕ್ಷಪಾತವನ್ನು ಜಯಿಸಲು ಶ್ರಮಿಸುತ್ತಿದ್ದಾರೆ. 'ಲಿಂಗ ನಾಯಕತ್ವದ ಅಂತರ'ವನ್ನು ಕಡಿಮೆ ಮಾಡಲು, ಪುರುಷರು ಮತ್ತು ಮಹಿಳೆಯರ ನಡುವಿನ ವ್ಯತ್ಯಾಸಗಳನ್ನು ಗುರುತಿಸಬೇಕು ಮತ್ತು ಸೂಕ್ತವಾಗಿ ಪರಿಹರಿಸಬೇಕು ಎಂಬುದು ಅನೇಕರ ವಾದವಾಗಿದೆ.
ವಿಭಾಗ