ಸಂಭ್ರಮ ಕಸಿಯದಿರಲಿ ಪಟಾಕಿ; ದೀಪಾವಳಿಯಲ್ಲಿ ಪಟಾಕಿ ಹಚ್ಚುವ ಮುನ್ನ ಮುದ್ದು ಮಕ್ಕಳ ಮೇಲಿರಲಿ ಒಂದು ಕಣ್ಣು
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಭ್ರಮ ಕಸಿಯದಿರಲಿ ಪಟಾಕಿ; ದೀಪಾವಳಿಯಲ್ಲಿ ಪಟಾಕಿ ಹಚ್ಚುವ ಮುನ್ನ ಮುದ್ದು ಮಕ್ಕಳ ಮೇಲಿರಲಿ ಒಂದು ಕಣ್ಣು

ಸಂಭ್ರಮ ಕಸಿಯದಿರಲಿ ಪಟಾಕಿ; ದೀಪಾವಳಿಯಲ್ಲಿ ಪಟಾಕಿ ಹಚ್ಚುವ ಮುನ್ನ ಮುದ್ದು ಮಕ್ಕಳ ಮೇಲಿರಲಿ ಒಂದು ಕಣ್ಣು

ದೀಪಾವಳಿಯಲ್ಲಿ ಪಟಾಕಿ ಹಚ್ಚುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆ ಸಮಯದಲ್ಲಿ ದೊಡ್ಡವರು ಮಕ್ಕಳ ಜೊತೆಗಿರುವುದು ಅಷ್ಟೇ ಮುಖ್ಯ. ನಿಮ್ಮ ಪುಟ್ಟ ಮಕ್ಕಳನ್ನು ಪಟಾಕಿ ಹಚ್ಚದಂತೆ ದೂರವಿಡುವುದು ಕಷ್ಟ. ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲು ಈ ಸಲಹೆ ಪಾಲಿಸುವುದೊಂದೇ ನಿಮಗಿರುವ ದಾರಿ. ಸುಂದರ ಬೆಳಕಿನ ಹಬ್ಬ ನಿಮ್ಮದಾಗಲಿ. (ಬರಹ: ಅರ್ಚನಾ ವಿ. ಭಟ್‌)

ದೀಪಾವಳಿಯಲ್ಲಿ ನಿಮ್ಮ ಮಕ್ಕಳು ಪಟಾಕಿ ಹೊಡೆಯುವಾಗ ಇರಲಿ ಎಚ್ಚರ.
ದೀಪಾವಳಿಯಲ್ಲಿ ನಿಮ್ಮ ಮಕ್ಕಳು ಪಟಾಕಿ ಹೊಡೆಯುವಾಗ ಇರಲಿ ಎಚ್ಚರ.

ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಿಮ್ಮ ಮನೆಯಲ್ಲಿ ಪಟಾಕಿಗಳನ್ನು ಹಚ್ಚುವುದು ನಿಮ್ಮ ಮನೆಯಲ್ಲಿ ರೂಢಿಸಿಕೊಂಡಿರುವ ಪದ್ಧತಿಯಾಗಿದ್ದರೆ, ನಿಮ್ಮ ಮನೆಯುಲ್ಲಿರುವ ಪುಟ್ಟ ಮಕ್ಕಳ ಮೇಲೆ ವಿಶೇಷ ಕಾಳಜಿವಹಿಸಿ. ಪುಟ್ಟ ಮಕ್ಕಳಿಗೆ ಪಟಾಕಿ ಹಚ್ಚುವುದು ಎಂದರೆ ಬಹಳ ಇಷ್ಟ. ಆದರೆ ಹೆಚ್ಚಿನವು ದೊಡ್ಡವರಿಗೆ ಮಾತ್ರ ಸೀಮಿತವಾಗಿರುತ್ತವೆ. ಮಕ್ಕಳೂ ಇದರಲ್ಲಿ ಬಹಳ ಎಚ್ಚರಿಕೆಯಿಂದ ಪಾಲ್ಗೊಂಡರೆ ಅಷ್ಟೇ ಒಳ್ಳೆಯದು.

ದೀಪಾವಳಿಯಂದು ಪಟಾಕಿ ಹಚ್ಚುವಾಗ ದೊಡ್ಡವರು ಮಕ್ಕಳ ಜೊತೆಗಿರುವುದು ಅಷ್ಟೇ ಮುಖ್ಯ. ಎಲ್ಲಾ ವಯಸ್ಸಿನ ಮಕ್ಕಳಿಗೆ ಪಟಾಕಿಯನ್ನು ಹೇಗೆ ಎಚ್ಚರಿಕೆಯಿಂದ ಹಚ್ಚುವುದು ಎಂದು ಅರ್ಥಮಾಡಿಸಿ ಹೇಳಿಕೊಡುವುದು ಅತಿ ಅವಶ್ಯಕ. ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಅವರೊಬ್ಬರನ್ನೇ ಬಿಟ್ಟು ಹೋಗುವುದು ಸರಿಯಲ್ಲ. ಕನಿಷ್ಠ ಒಬ್ಬರಾದರೂ ಮಕ್ಕಳು ಪಟಾಕಿ ಹಚ್ಚುವ ಜಾಗದಲ್ಲಿರಬೇಕು. ಜೊತೆಗೆ ಮಕ್ಕಳು ಮನೆಯ ಹೊರಗಡೆ ಮತ್ತು ವಿಶಾಲ ಜಾಗದಲ್ಲಿ ಪಟಾಕಿ ಹಚ್ಚುವಂತೆ ನೋಡಿಕೊಳ್ಳ ಬೇಕು. ಮನೆಯ ಒಳಗಡೆ ಅಥವಾ ಇಕ್ಕಟ್ಟಾದ ಜಾಗದಲ್ಲಿ ಅಪಾಯಗಳು ಸಂಭವಿಸಬಹುದು.

ಪಟಾಕಿ ಹಚ್ಚುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಅದರಲ್ಲಿ ಬಹಳ ಪ್ರಮುಖವಾದದ್ದು ಎಂದರೆ ನೀರು ಮತ್ತು ಮರಳನ್ನು ಹತ್ತಿರದಲ್ಲಿ ಇಟ್ಟುಕೊಂಡಿರುವುದು. ಬಕೆಟ್‌ನಲ್ಲಿ ನೀರು ಮತ್ತು ಪಟಾಕಿಗಳನ್ನು ತುಂಬಿಸಿಟ್ಟುಕೊಳ್ಳಿ. ಬೆಂಕಿ ಹೊತ್ತುಕೊಂಡರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ. ನಿಮ್ಮ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಪಟಾಕಿಗಳನ್ನು ಖರೀದಿಸುವುದು ಅವಶ್ಯಕವಾದದ್ದು ಮತ್ತು ಅದು ಎಚ್ಚರಿಕೆಯೂ ಹೌದು. ಬಿದುರಿನ ಕಡ್ಡಿಯಿಂದ ಮಾಡಿದ ಸ್ಪಾರ್ಕ್ಲರ್‌ಗಳು, ಪಿಸ್ತೂಲ್‌, ಗ್ಲೋ ವಾರ್ಮ್‌ ಮುಂತಾದವುಗಳು ಎಲ್ಲಾ ವಯಸ್ಸಿನ ಮಕ್ಕಳು ಬಳಸಬಹುದಾದ ಕೆಲವು ಜನಪ್ರಿಯ ಪಟಾಕಿಗಳ. ರಾಕೆಟ್‌, ಲಕ್ಷ್ಮೀ ಪಟಾಕಿ, ಪಟಾಕಿ ಸರ ಇವೆಲ್ಲ ಮಕ್ಕಳು ಹಚ್ಚುವಂತ ಪಟಾಕಿಗಳಲ್ಲ. ಅದು ಸುರಕ್ಷಿತವೂ ಅಲ್ಲ. ನೆಲದಿಂದ ಬಿಡುವ ಅಂದರೆ ರಾಕೆಟ್‌ ಮುಂತಾದವುಗಳನ್ನು ಮಕ್ಕಳಿಗೆ ನೀಡದಂತೆ ಪೋಷಕರು ಎಚ್ಚರವಹಿಸಬೇಕು. ಅವುಗಳನ್ನು ಹದಿಹರೆಯದ ಮಕ್ಕಳು ಹಚ್ಚದಂತೆ ನೋಡಿಕೊಳ್ಳಬೇಕು.

ಪಟಾಕಿ ಹಚ್ಚುವಾಗ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ಕೆಲವು ಸಲಹೆಗಳು

  • ಮನೆಯಲ್ಲಿಯೇ ಸ್ವಂತವಾಗಿ ಪಟಾಕಿ ತಯಾರಿಸಲು ಯತ್ನಿಸಬೇಡಿ. ಅದು ಬಹಳ ಅಪಾಯಕಾರಿ.
  • ಪಟಾಕಿ ಹಚ್ಚುವಾಗ ಅವುಗಳನ್ನು ಕೈಯಲ್ಲಿ ಹಿಡಯದಂತೆ ಹೇಳಿ. ಅದಕ್ಕೆಲ್ಲಾ ಪ್ರಚೋದಿಸಬೇಡಿ. ಆದಷ್ಟು ದೂರದಿಂದಲೇ ಪಟಾಕಿ ಹಚ್ಚುವಂತೆ ನೋಡಿಕೊಳ್ಳಿ.
  • ಪಟಾಕಿ ಹಚ್ಚುವಾಗ ಕಣ್ಣಿನ ಬಗ್ಗೆ ಎಚ್ಚರವಿರಲಿ. ಮಕ್ಕಳಿಗೆ ಕನ್ನಡಕವನ್ನು ಹಾಕಿಕೊಳ್ಳುವಂತೆ ಹೇಳಿ.
  • ಖರೀದಿಸಿ ತಂದ ಪಟಾಕಿಯನ್ನು ಬೆಂಕಿ ಸುಲಭವಾಗಿ ತಗುಲಬಹುದಾದ ಜಾಗದಿಂದ ದೂರದಲ್ಲಿಡಿ.
  • ಕೆಲವು ಮಕ್ಕಳು ಪಟಾಕಿ ಹಚ್ಚಿದ ನಂತರ ಅವುಗಳನ್ನು ಮುಟ್ಟಿ ಪರೀಕ್ಷಿಸಲು ಮುಂದಾಗುತ್ತಾರೆ. ಹಾಗೆ ಮಾಡುವುದನ್ನು ತಡೆಯಿರಿ. ಕೆಲವು ತಕ್ಷಣ ಸಿಡಿಯದೇ ಸ್ವಲ್ಪ ಸಮಯದ ನಂತರ ಸಿಡಿಯುತ್ತವೆ. ಆಗ ಅಪಾಯ ಆಗಬಹುದು.
  • ಒಂದು ವೇಳೆ ಪಟಾಕಿ ಉಳಿದರೆ ಅವುಗಳನ್ನು ಎಸೆಯುವ ಮೊದಲು ನೀರಿನಲ್ಲಿ ನೆನೆಸಿ ನಂತರ ಎಸೆಯಿರಿ.
  • ಪಟಾಕಿಯ ಶಬ್ದಕ್ಕೆ ಸಾಕು ಪ್ರಾಣಿಗಳು ಹೆದರುತ್ತವೆ. ಅವುಗಳನ್ನು ಮನೆಯ ಒಳಗಡೆ ಇರಿಸಿ.
  • ನಿಮ್ಮ ಮಕ್ಕಳು ಗಾಯಗೊಂಡರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ, ತಜ್ಞ ವೈದ್ಯರ ಸಂಪರ್ಕಿಸಿ.
  • ಕಣ್ಣಿಗೆ ಅಪಾಯವಾದರೆ, ಕಣ್ಣನ್ನು ಉಜ್ಜಲು ಬಿಡಬೇಡಿ. ಕೂಡಲೆ ಕಣ್ಣಿನ ತಜ್ಞರನ್ನು ಭೇಟಿಯಾಗಿ, ಸರಿಯಾಗಿ ಔಷಧೋಪಚಾರ ಮಾಡಿ.
  • ಪಟಾಕಿ ಹಚ್ಚುವಾಗ ನಿಮ್ಮ ಕುಟುಂಬ ಅಥವಾ ಅಕ್ಕಪಕ್ಕದ ಮನೆಯವರು ಗಾಯಗೊಂಡರೆ ಮನೆಮದ್ದುಗಳನ್ನು ಎಂದಿಗೂ ಪ್ರಯತ್ನಿಸಬೇಡಿ. ಅದು ಅಪಾಯ ಹೆಚ್ಚಿಸುತ್ತದೆ.

ಪಟಾಕಿ ಇರುವುದು ಆನಂದಿಸಲು, ನೀವು ಮತ್ತು ನಿಮ್ಮ ಮಕ್ಕಳು ಸುರಕ್ಷಿತವಾಗಿಬೇಕು. ಜವಾಬ್ದಾರಿಯುತವಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಈ ಬೆಳಕಿನ ಹಬ್ಬ ದೀಪಾವಳಿಯನ್ನು ಸಂತೋಷದಿಂದ ಆಚರಿಸಿ.

Whats_app_banner