ತ್ವರಿತವಾಗಿ ಸಿಹಿತಿಂಡಿ ತಯಾರಿಸಬೇಕಾ: ಸುಲಭವಾಗಿ ಕಡ್ಲೆ ಹಿಟ್ಟು–ತೆಂಗಿನಕಾಯಿ ಹಲ್ವಾ ಹೀಗೆ ತಯಾರಿಸಿ
Deepavali 2024: ದೀಪಾವಳಿ ಹಬ್ಬದ ಆಚರಣೆ ಯಾವಾಗಲೂ ಜೋರಾಗಿಯೇ ಇರುತ್ತದೆ. ಈ ಹಬ್ಬಕ್ಕೆ ವಿವಿಧ ದೀಪ, ಹಣತೆಗಳಿಂದ ಮನೆಯನ್ನು ಅಲಂಕರಿಸುವಂತೆ ವಿವಿಧ ಬಗೆಯ ಸಿಹಿತಿಂಡಿಗಳನ್ನು ಮಾಡಲಾಗುತ್ತದೆ. ಸಿಹಿ ತಿಂಡಿಯಲ್ಲಿ ನೀವು ಹಲ್ವ ಮಾಡಲು ಮರೆತಿದ್ದರೆ ಇಲ್ಲಿದೆ ಸುಲಭವಾಗಿ ತಯಾರಿಸಬಹುದಾದ ಕಡ್ಲೆ ಹಿಟ್ಟು–ತೆಂಗಿನಕಾಯಿ ಹಲ್ವಾ.
ಬೆಳಕಿನ ಹಬ್ಬ ದೀಪಾವಳಿ (Happy Deepavali 2024) ಇಂದಿನಿಂದ ಪ್ರಾರಂಭವಾಗಿದೆ. ಎಲ್ಲಡೆ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಬಗೆಬಗೆಯ ದೀಪಗಳಿಂದ ಮನೆಗಳು ಅಲಂಕೃತವಾಗಿರುವುದು ಕಂಡುಬರುತ್ತಿದೆ. ವಿವಿಧ ಬಗೆಯ ರಂಗೋಲಿಗಳು ಬೆಳಕಿನ ಹಬ್ಬವನ್ನು ಸ್ವಾಗತಿಸುವಂತೆ ಮನೆಯ ಮುಂದೆ ಕಂಗೊಳಿಸುತ್ತಿವೆ. ಹಬ್ಬದ ತಯಾರಿಯಾಗಿ ವೆರೈಟಿ ಲಾಡುಗಳು, ಚಕ್ಕುಲಿ, ಕೋಡುಬಳೆ ಮುಂತಾದ ಖಾದ್ಯಗಳನ್ನು ಎಲ್ಲರ ಮನೆಯಲ್ಲೂ ತಯಾರಿಸಲಾಗಿದೆ. ಆದರೆ, ಈ ದೀಪಾವಳಿಯಲ್ಲಿ ಹಲ್ವಾ ಇಲ್ಲದಿದ್ದರೆ ಹೇಗೆ? ಸಿಹಿ ತಿಂಡಿಗಳ ಪ್ಲೇಟ್ ಪೂರ್ಣವಾಗಿದೆ ಎಂದು ಅನಿಸುವುದೇ ಇಲ್ಲ. ಹಾಗಾಗಿ ಲಾಸ್ಟ್ ಮಿನಿಟ್‌ನಲ್ಲಿ ಹಲ್ವಾ ಇದ್ದಿದ್ದರೆ ಚೆನ್ನಾಗಿತ್ತು ಎಂದು ನೀವಂದುಕೊಂಡಿದ್ದರೆ ಅದಕ್ಕೆ ಇಲ್ಲಿದೆ ಸುಲಭದ ಒಂದು ರೆಸಿಪಿ. ಕಡ್ಲೆ ಹಿಟ್ಟು, ತೆಂಗಿನ ತುರಿ ಮತ್ತು ಸಕ್ಕರೆ ಬಳಸಿ ತಯಾರಿಸಬಹುದಾದ ಸಿಂಪಲ್ ಮತ್ತು ಅಷ್ಟೇ ರುಚಿಯಾದ ಹಲ್ವಾ. ಈ ಹಲ್ವಾ ತಯಾರಿಸಲು ಬಹಳ ಸಮಯವೂ ತಗಲುವುದಿಲ್ಲ. ಹಾಗಾಗಿ ನೀವಿದನ್ನು ಸುಲಭವಾಗಿ ತಯಾರಿಸಬಹುದು. ಲಾಸ್ಟ್ ಮಿನಟ್‌ನಲ್ಲಿ ಕಡ್ಲೆ ಹಿಟ್ಟು–ತೆಂಗಿನಕಾಯಿ ಹಲ್ವಾ ತಯಾರಿಸಲು ಹೀಗೆ ಮಾಡಿ.
ಕಡ್ಲೆ ಹಿಟ್ಟು–ತೆಂಗಿನಕಾಯಿ ಹಲ್ವಾ
ಬೇಕಾಗುವ ಸಾಮಗ್ರಿಗಳು: ಕಡ್ಲೆ ಹಿಟ್ಟು ಒಂದು ಕಪ್, ಸಕ್ಕರೆ ಒಂದೂವರೆ ಕಪ್, ತಾಜಾ ತೆಂಗಿನ ತುರಿ ಒಂದು ಕಪ್, ತುಪ್ಪ ಎರಡು ಚಮಚ, ಏಲಕ್ಕಿ ಪುಡಿ ಅರ್ಧ ಚಮಚ, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾ ಎರಡು ಚಮಚ.
ತಯಾರಿಸುವ ವಿಧಾನ: ಮೊದಲಿಗೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ಕಡ್ಲೆ ಹಿಟ್ಟು ಹಾಕಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ದಪ್ಪ ತಳದ ಇನ್ನೊಂದು ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ ಸಕ್ಕರೆ ಹಾಕಿ. ಅರ್ಧ ಕಪ್ ನೀರು ಸೇರಿಸಿ ಸಕ್ಕರೆ ಕರಗುವವರೆಗೆ ಮಿಕ್ಸ್ ಮಾಡಿ. ನಂತರ ಗ್ಯಾಸ್ ಸ್ಟೌವ್ ಹಚ್ಚಿ ಆ ಪಾತ್ರೆಯನ್ನು ಇಡಿ. ನಂತರ ಅದಕ್ಕೆ ತೆಂಗಿನ ತುರಿ ಸೇರಿಸಿ. ಉದ್ದದ ಚಮಚದ ಸಹಾಯದಿಂದ ತಿರುವುತ್ತಾ ಇರಿ. ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು ತೆಗೆದುಕೊಂಡು, ಒಂದು ಚಮಚ ಸಕ್ಕರೆ ಪಾಕವನ್ನು ಅದರಲ್ಲಿ ಬಿಡಿ. ಸಕ್ಕರೆ ಪಾಕ ಗಟ್ಟಿಯಾಗಿ ನಿಲ್ಲುತ್ತದೆಯೇ ಎಂದು ಪರೀಕ್ಷಿಸಿ. ಅಥವಾ ಪಾಕವನ್ನು ಬೆರಳುಗಳ ಸಹಾಯದಿಂದಲೂ ಪರೀಕ್ಷಿಸಬಹುದು. ಪಾಕ ಬಂದ ನಂತರ ಅದಕ್ಕೆ ತುಪ್ಪ ಹಾಕಿ ಇನ್ನೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಪಾಕವನ್ನು ಚಮಚದ ಸಹಾಯದಿಂದ ತಿರುವುತ್ತಾ ಹುರಿದಿಟ್ಟುಕೊಂಡ ಕಡ್ಲೆ ಹಿಟ್ಟನ್ನು ಸೇರಿಸುತ್ತಾ ಬನ್ನಿ. ಮಿಶ್ರಣವು ತಳ ಬಿಡುತ್ತಿದ್ದಂತೆ ಡ್ರೈಫ್ರೂಟ್ ಸೇರಿಸಿ. ಹಲ್ವಾ ಅಚ್ಚಿಗೆ ಅಥವಾ ಅಗಲವಾದ ಪ್ಲೇಟ್‌ಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ. ಎಲ್ಲ ಕಡೆ ಒಂದೇ ದಪ್ಪದಲ್ಲಿ ಹರಡಿ. ಸ್ವಲ್ಪ ತಣ್ಣಗಾದ ಬಳಿಕ ಹಲ್ವಾದ ಆಕಾರದಲ್ಲಿ ಮಾರ್ಕ್ ಮಾಡಿಕೊಳ್ಳಿ. ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಾರ್ಕ್ ಮಾಡಿದ ಜಾಗದಲ್ಲೇ ಇನ್ನೊಮ್ಮೆ ಕತ್ತರಿಸುತ್ತಾ ಬನ್ನಿ. ಈಗ ರುಚಿಯಾದ ಕಡ್ಲೆ ಹಿಟ್ಟು–ತೆಂಗಿನ ಕಾಯಿ ಹಲ್ವಾ ರೆಡಿ. ಈ ದೀಪಾವಳಿಗೆ ಸುಲಭವಾಗಿ ಲಾಸ್ಟ್ ಮಿನಿಟ್‌ನಲ್ಲಿ ಹಲ್ವಾ ತಯಾರಿಸಬೇಕೆಂದಿದ್ದರೆ ಇದನ್ನು ಖಂಡಿತ ಪ್ರಯತ್ನಿಸಿ.