Deepavali special trains: ಕರ್ನಾಟಕದಲ್ಲಿ ದೀಪಾವಳಿಗೆ ಎಷ್ಟು ವಿಶೇಷ ರೈಲುಗಳು ಸಂಚರಿಸಲಿವೆ; ಸಂಪೂರ್ಣ ವಿವರ ಇಲ್ಲಿದೆ
ದೀಪಾವಳಿಗೆ ಭಾರತೀಯ ರೈಲ್ವೆಯಿಂದ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಲ್ಲಿ ಯಾವೆಲ್ಲಾ ಭಾಗಗಳಿವೆ ದೀಪಾವಳಿ ವಿಶೇಷ ರೈಲುಗಳು ಸಂಚರಿಸಲಿವೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.

ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಇದ್ದು, ಸಾವಿರಾರು ಮಂದಿ ತಮ್ಮ ಊರುಗಳಿಗೆ ಹೋಗಲು ರೈಲುಗಳನ್ನು ಅವಲಂಬಿಸುತ್ತಾರೆ. ಈ ವೇಳೆ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ಭಾರತೀಯ ರೈಲ್ವೆ ದೇಶಾದ್ಯಂತ ಬರೋಬ್ಬರಿ 7 ಸಾವಿರ ವಿಶೇಷ ರೈಲುಗಳನ್ನು ಓಡಿಸುವುದಾಗಿ ಹೇಳಿದೆ. ದೀಪಾವಳಿ ಮತ್ತು ಛತ್ ಪೂಜೆಯ ಸಲುವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ 4,500 ರೈಲುಗಳು ಸಂಚರಿಸಿದ್ದವು. ಪ್ರಮಾಣಿಕರ ಸಂಖ್ಯೆಯ ಹೆಚ್ಚಳವನ್ನು ಗಮನಿಸಿ ಈ ವರ್ಷ 7 ಸಾವಿರ ರೈಲುಗಳು ಸಂಚರಿಸಲಿವೆ.
ಇನ್ನೂ ಕರ್ನಾಟಕ ವಿಚಾರದಲ್ಲಿ ಬೆಂಗಳೂರಿನಿಂದ ವಿವಿಧ ನಗರಗಳಿಗೆ ದೀಪಾವಳಿ ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಹೆಚ್ಚು ಪ್ರಮಾಣಿಕರ ದಟ್ಟಣೆ ಇರುವಂತ ನಗರಗಳಿಗೆ ಆದ್ಯತೆಯ ಮೇಲೆ ಈ ರೈಲುಗಳು ಸಂಚರಿಸಲಿವೆ.
ರಾಜ್ಯದ ಪ್ರಮುಖ ನಿಲ್ದಾಣಗಳಿಂದ ಒಂದು ಟ್ರಿಪ್ ರೈಲು ಸೇವೆ
ಹುಬ್ಬಳ್ಳಿ ಕೊಲ್ಲಂ, ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಸಂತ್ರಗಾಚಿ, ಯಶವಂತಪುರ-ಕೊಟ್ಟಾಯಂ, ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ಹಾಗೂ ಹುಬ್ಬಳ್ಳಿ-ಮುಜಾಫರ್‌ಪುರ ನಿಲ್ದಾಣಗಳ ನಡುವೆ ದೀಪಾವಳಿಗಾಗಿ ಒಂದು ಟ್ರಿಪ್ ರೈಲು ಸೇವೆಯನ್ನು ಒದಗಿಸಲಾಗಿದೆ.
ಕರ್ನಾಟಕದಲ್ಲೇ ಸಂಚರಿಸುವ ಒಂದು ಟ್ರಿಪ್‌ನ ವಿಶೇಷ ರೈಲುಗಳನ್ನು ನೋಡುವುದಾದರೆ ಬೆಂಗಳೂರು-ಮಂಗಳೂರು-ಬೆಂಗಳೂರು, ಬೆಂಗಳೂರು-ಕಾರವಾರ-ಬೆಂಗಳೂರು ನಡುವೆ ರೈಲುಗಳು ಸಂಚರಿಸಲಿವೆ. ನೈರುತ್ಯ ರೈಲ್ವೆ ಅಧಿಸೂಚನೆಯ ಪ್ರಕಾರ, ರೈಲು ಸಂಖ್ಯೆ 06565 ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಅಕ್ಟೋಬರ್ 30 ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಯಶವಂತಪುರದಿಂದ ಹೊರಡಲಿರುವ ರೈಲು ಬೆಳಗ್ಗೆ 1.05 ಗಂಟೆಗೆ ಕುಣಿಗಲ್, 2.20ಕ್ಕೆ ಚನ್ನರಾಯಣಪಟ್ಟಣ, 4 ಗಂಟೆಗೆ ಹಾಸನ, 5 ಗಂಟೆಗೆ ಸಕಲೇಶಪುರ, 8.35ಕ್ಕೆ ಸುಬ್ರಹ್ಮಣ್ಯ ರಸ್ತೆ, 9.25ಕ್ಕೆ ಕಬಕ ಪುತ್ತೂರು ಹಾಗೂ 9.55ಕ್ಕೆ ಬಂಟ್ವಾಳಕ್ಕೆ ಆಗಮಿಸಲಿದೆ.
ಹುಬ್ಬಳ್ಳಿಯಿಂದ ಕೊಲ್ಲಂಗೆ ವಿಶೇಷ ರೈಲು
ರೈಲು ಸಂಖ್ಯೆ 07313 ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 26ರ ಶನಿವಾರ ಹುಬ್ಬಳ್ಳಿ ನಿಲ್ದಾಣದಿಂದ ಮಧ್ಯಾಹ್ನ 3.15ಕ್ಕೆ ಹೊರಟು ಮರು ದಿನ ಸಂಜೆ 5.10ಕ್ಕೆ ಕೊಲ್ಲಂ ನಿಲ್ದಾಣವನ್ನು ತಲುಪಲಿದೆ. ರೈಲು ಸಂಖ್ಯೆ 07314 ಅಕ್ಟೋಬರ್ 27 ರಂದು ಕೊಲ್ಲಂನಿಂದ ರಾತ್ರಿ 8.30ಕ್ಕೆ ಹೊರಟು, ಮರುದಿನ ರಾತ್ರಿ 8.45ಕ್ಕೆ ಹುಬ್ಬಳ್ಳಿ ತಲುಪಲಿದೆ.
ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಸಂತ್ರಗಾಚಿ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 26 ರಂದು ಬೆಳಗ್ಗೆ 10.15 ಗಂಟೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು ಮರು ದಿನ ಸಂಜೆ 7.45 ಗಂಟೆಗೆ ಸಂತ್ರಗಾಚಿ ತಲುಪಲಿದೆ. ಅಕ್ಟೋಬರ್ 27 ರಂದು ಸಂತ್ರಗಾಚಿಯಿಂದ ರಾತ್ರಿ 11.30ಕ್ಕೆ ಹೊರಟು ಮರುದಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಮಧ್ಯಾಹ್ನ 12.30ಕ್ಕೆ ಆಗಮಿಸಲಿದೆ.