ಮನೆಯಲ್ಲೇ ಮಾಡಿ ಗೋಧಿ ಹಿಟ್ಟಿನ ರುಚಿಕರ ಬಿಸ್ಕೆಟ್; ಮಕ್ಕಳಿಗೆ ಇದು ಆರೋಗ್ಯಕರ ತಿಂಡಿ, ಇಷ್ಟಪಟ್ಟು ತಿನ್ನೋದ್ರಲ್ಲಿ ಡೌಟಿಲ್ಲ
Wheat flour biscuits: ಮನೆಯಲ್ಲೇ ಏನಾದರೂ ಒಂದು ಹೊಸ ರೆಸಿಪಿ ಟ್ರೈ ಮಾಡಬೇಕು ಎಂದು ಅಂದುಕೊಂಡು ರೆಸಿಪಿ ಹುಡುಕುತ್ತಿದ್ದರೆ ಖಂಡಿತ ಇದನ್ನೊಮ್ಮೆ ಟ್ರೈ ಮಾಡಿ. ಈ ಗೋಧಿ ಹಿಟ್ಟಿನ ಬಿಸ್ಕೆಟ್ ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಜಾಸ್ತಿ.
ಎಷ್ಟೇ ಪ್ರಯತ್ನ ಪಟ್ಟರೂ ಮಕ್ಕಳು ಹೊರಗೆ ಸಿಗುವ ಬಿಸ್ಕೆಟ್ ತಿನ್ನುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಮನೆಯಲ್ಲಿ ರುಚಿಕರವಾದ ಬಿಸ್ಕೆಟ್ ಮಾಡಲು ಸಾಧ್ಯವಿದೆ. ನೀವೇ ನಿಮ್ಮ ಮನೆಯಲ್ಲಿ ರುಚಿಯಾದ ಬಿಸ್ಕೆಟ್ ತಯಾರಿಸಬಹುದು. ಇದನ್ನು ಹೇಗೆ ಮಾಡುವುದು ಎಂಬ ಅನುಮಾನ ನಿಮಗಿದ್ದರೆ ನಾವಿಲ್ಲಿ ರೆಸಿಪಿ ನೀಡಿದ್ದೇವೆ. ಇಲ್ಲಿ ನಾವು ತಿಳಿಸಿದ ವಿಧಾನವನ್ನೇ ಬಳಸಿ ಮನೆಯಲ್ಲಿ ನೀವೂ ಬಿಸ್ಕೆಟ್ ಮಾಡಿ. ಹೇಗಿದೆ ನೋಡಿ.
ಗೋಧಿ ಹಿಟ್ಟಿನ ಬಿಸ್ಕೆಟ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
1 ಕಪ್ ಗೋಧಿ ಹಿಟ್ಟು
ಕಾಲು ಚಮಚ ಏಲಕ್ಕಿ ಪುಡಿ
1/8 ಟೀಚಮಚ ಜಾಯಿಕಾಯಿ ಪುಡಿ
ಚಿಟಿಕೆ ಉಪ್ಪು
4 ಸ್ಪೂನ್ ತುಪ್ಪ
ಕಾಲು ಕಪ್ ಪುಡಿ ಸಕ್ಕರೆ
ಕಾಲು ಕಪ್ ಹಾಲು
ಗೋಧಿ ಹಿಟ್ಟಿನ ಬಿಸ್ಕೆಟ್ ಮಾಡುವ ವಿಧಾನ:
ಮೊದಲು, ಗೋಧಿ ಹಿಟ್ಟಿನ ಬಿಸ್ಕೆಟ್ ತಯಾರಿಸಲು ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟನ್ನು ಸ್ವಚ್ಛಮಾಡಿ ಹಾಕಿಕೊಳ್ಳಿ. ಇದನ್ನು ಈ ರೀತಿ ಮಾಡಿಕೊಂಡಾಗ ಇದರಲ್ಲಿ ಯಾವುದೇ ಉಂಡೆಗಳು ಇರುವುದಿಲ್ಲ.
ಹಿಟ್ಟಿಗೆ ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ ಮತ್ತು ಉಪ್ಪು ಸೇರಿಸಿ ಮಿಶ್ರಣ ಮಾಡಿ.
ಈಗ ತುಪ್ಪವನ್ನು ಕರಗಿಸಿ ಒಂದು ಪಾತ್ರೆಯಲ್ಲಿ ಹಾಕಿ. ಅದರಲ್ಲಿ ಸಕ್ಕರೆ ಪುಡಿಯನ್ನು ಹಾಕಿ ಮತ್ತು ಅದನ್ನು ಮಿಕ್ಸ್ ಮಾಡಿ. ಎರಡೂ ಚೆನ್ನಾಗಿ ಮಿಶ್ರಣವಾಗುವವರೆಗೆ ಬೆರೆಸಿ. ದಪ್ಪ ಮಿಶ್ರಣವನ್ನು ತಯಾರಿಸಿ.
ಇದನ್ನು ಮಿಶ್ರಣ ಮಾಡಿದ ಒಣಗಿಕೊಂಡಿರುವ ಪದಾರ್ಥಗಳಿಗೆ ಸೇರಿಸಿ ಅಂದರೆ ಆ ಗೋಧೀ ಹಿಟ್ಟಿಗೆ ಸೇರಿಸಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ.
ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. ಗಟ್ಟಿಯಾದ ಹಿಟ್ಟನ್ನು ನೀವು ರೆಡಿ ಮಾಡಬೇಕಾಗಿರುವುದರಿಂದ ಸ್ವಲ್ಪ ಸ್ವಲ್ಪ ನೀರು ಸೇರಿಸಿ.
ಈಗ ಈ ಹಿಟ್ಟನ್ನು ಕಿಚನ್ ಸ್ಲ್ಯಾಬ್ ಅಥವಾ ಚಪಾತಿ ಮರದ ಮೇಲೆ ಹರಡಿ ಮತ್ತು ಅದನ್ನು ದಪ್ಪಕ್ಕೆ ಒತ್ತಿರಿ. ಗೋಲಾಕಾರವಾಗಿ ಅಥವಾ ನಿಮಗೆ ಯಾವ ಆಕಾರ ಬೇಕೋ ಆ ಆಕಾರದಲ್ಲಿ ಅದನ್ನು ರೆಡಿ ಮಾಡಿಕೊಳ್ಳಿ
ಚಾಕುವಿನ ಸಹಾಯದಿಂದ ಅದನ್ನು ತುಂಡುಗಳಾಗಿ ಕತ್ತರಿಸಿ. ಬಿಸ್ಕತ್ತುಗಳನ್ನು ಚೆನ್ನಾಗಿ ಬೇಯಿಸಲು ಫೋರ್ಕ್‌ನಿಂದ ಮಧ್ಯಕ್ಕೆ ಚುಚ್ಚಿ. ಆಗ ಅಲ್ಲಲ್ಲಿ ಸಣ್ಣ ಸಣ್ಣ ತೂತುಗಳಾಗುತ್ತದೆ. ಇದು ದಪ್ಪವಿರುವ ಕಾರಣ ನೀವು ಈ ರೀತಿ ಮಾಡಿದರೆ ಮಾತ್ರ ಸರಿಯಾಗಿ ಬೇಯುತ್ತದೆ.
ಈಗ ಆಳವಾದ ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ಉಪ್ಪು ಸೇರಿಸಿ. ಅದು ಬಿಸಿಯಾದ ನಂತರ ಸ್ಟ್ಯಾಂಡ್ ಹಾಕಿ. ಇದನ್ನು ಉಪ್ಪಿನ ಹಬೆಯಲ್ಲಿ ಬೆಯಿಸಬೇಕಾಗುತ್ತದೆ. ಆ ಕಾರಣಕ್ಕೆ ಈ ವಿಧಾನ ತುಂಬಾ ಮುಖ್ಯ.
ಕತ್ತರಿಸಿದ ಬಿಸ್ಕತ್ತುಗಳನ್ನು ಪ್ಲೇಟ್ನಲ್ಲಿ ಜೋಡಿಸಿ. ಈ ಪ್ಲೇಟ್ ಅನ್ನು ಸ್ಟ್ಯಾಂಡ್ನಲ್ಲಿ ಇರಿಸಬೇಕು.
ಕನಿಷ್ಠ ಕಾಲು ಘಂಟೆಯವರೆಗೆ ಮುಚ್ಚಳವನ್ನು ಮುಚ್ಚಿ ಬೇಯಿಸಿದರೆ ಇದು ರೆಡಿಯಾಗುತ್ತದೆ. ನಿಮ್ಮ ಮನೆಯಲ್ಲಿ ಅವನ್ ಇದ್ದರೆ, ಅದನ್ನು 180 ಡಿಗ್ರಿಗಳಿಗೆ ಮೊದಲೇ ಕಾಯಿಸಿ ಮತ್ತು ಕನಿಷ್ಠ ಕಾಲು ಗಂಟೆ ಬೇಯಿಸಿದರೆ ಇದು ರೆಡಿಯಾಗುತ್ತದೆ.
ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿಟ್ಟರೆ ಒಂದು ತಿಂಗಳು ಕೆಡುವುದಿಲ್ಲ. ಪ್ರತಿನಿತ್ಯ ನಿಮ್ಮ ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಇದನ್ನು ಕೊಡಬಹುದು.