ಮೈಸೂರು ಪಾಕ್ ರೀತಿಯಲ್ಲಿ ಮಾಡಿ ರುಚಿಕರವಾದ ತೆಂಗಿನಕಾಯಿ ಪಾಕ್: ತುಂಬಾ ಟೇಸ್ಟಿ, ಸರಳವಾದ ಪಾಕವಿಧಾನವಿದು
ಮೈಸೂರು ಪಾಕ್ ಹೆಸರು ಕೇಳಿದರೆ ಹಲವರು ಬಾಯಲ್ಲಿ ನೀರೂರಬಹುದು. ಈ ಸಿಹಿತಿಂಡಿಯಂತೆಯೇ ತೆಂಗಿನಕಾಯಿ ಪಾಕ್ ಅನ್ನು ತಯಾರಿಸಬಹುದು. ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಹಬ್ಬಕ್ಕೆ ಮಾತ್ರವಲ್ಲ ಮನೆಗೆ ಅತಿಥಿಗಳು ಬಂದಾಗಲೂ ಮಾಡಿಕೊಡಬಹುದು. ಇಲ್ಲಿದೆ ತೆಂಗಿನಕಾಯಿ ಪಾಕ್ ರೆಸಿಪಿ ಮಾಡುವ ವಿಧಾನ.
ಮೈಸೂರು ಎಂದಾಕ್ಷಣ ನೆನಪಿಗೆ ಬರುವುದು ಅರಮನೆ. ಆದರೆ, ಮೈಸೂರಿನ ಜನಪ್ರಿಯ ಸಿಹಿತಿಂಡಿ ಎಂದಾಕ್ಷಣ ನೆನಪಿಗೆ ಬರೋದೆ ಮೈಸೂರ್ ಪಾಕ್. ಈ ಸಿಹಿತಿಂಡಿಯ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರೂರಬಹುದು. ಬಹುತೇಕ ಮಂದಿ ಆಗಾಗ ಮೈಸೂರ್ ಪಾಕ್ ತಿನ್ನಲು ಇಷ್ಟಪಡುತ್ತಾರೆ. ಮೈಸೂರ್ ಪಾಕ್‍ನಂತೆಯೇ ತೆಂಗಿನಕಾಯಿ ಪಾಕವನ್ನು ಮಾಡಲಾಗುತ್ತದೆ. ಇದು ಕೂಡ ಅಷ್ಟೇ ಸಿಹಿ, ರುಚಿಯಾಗಿರುತ್ತದೆ. ತೆಂಗಿನಕಾಯಿಯಿಂದ ಮಾಡಲಾಗುವ ಮೈಸೂರ್ ಪಾಕ್‍ನಲ್ಲಿ ಸಕ್ಕರೆ, ಹಾಲು, ಕೋವಾ, ತೆಂಗಿನಕಾಯಿ ಇತ್ಯಾದಿಗಳನ್ನು ಸೇರಿಸಲಾಗುತ್ತದೆ. ಒಣಹಣ್ಣುಗಳನ್ನು ಸಹ ಹಾಕಬಹುದು. ಸಿಹಿ ತಿನ್ನುವ ಬಯಕೆಯುಂಟಾದರೆ ತೆಂಗಿನಕಾಯಿ ಪಾಕ್ ಅನ್ನು ನಿಮಗೆ ಬೇಕೆಂದಾಗ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಇದನ್ನು ಮಾಡುವುದು ಕೂಡ ತುಂಬಾ ಸರಳ. ಇಲ್ಲಿದೆ ಪಾಕವಿಧಾನ.
ತೆಂಗಿನಕಾಯಿ ಪಾಕ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ತಾಜಾ ತೆಂಗಿನ ತುರಿ- ಎರಡು ಕಪ್, ಹಾಲು- 3/4 ಕಪ್, ಸಕ್ಕರೆ- ಒಂದು ಕಪ್, ಕೋವಾ- ಕಾಲು ಕಪ್, ಕೇಸರಿದಳ- ಅರ್ಧ ಚಮಚ, ಬಿಸಿ ನೀರು- ಒಂದು ಚಮಚ, ಏಲಕ್ಕಿ ಪುಡಿ- ಅರ್ಧ ಚಮಚ, ಒಣಹಣ್ಣುಗಳು- ಸ್ವಲ್ಪ.
ಪಾಕವಿಧಾನ: ಈ ಸಿಹಿ ತಯಾರಿಸಲು ತಾಜಾ ತೆಂಗಿನಕಾಯಿಯನ್ನು ಆರಿಸಬೇಕು.
- ಮೊದಲಿಗೆ ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಪಕ್ಕಕ್ಕೆ ಇಡಿ.
- ಈಗ ಸ್ಟೌವ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಹಾಲು ಹಾಕಿ ಕುದಿಸಿ.
- ಆ ಹಾಲಿಗೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿರಲಿ
- ಇದು ತಳಕ್ಕೆ ಅಂಟಿಕೊಳ್ಳದಂತೆ ಆಗಾಗ ಮಿಶ್ರಣ ಮಾಡಬೇಕು.
- ಈಗ ಹಾಲಿನ ಜತೆಗೆ ಈ ಮಿಶ್ರಣಕ್ಕೆ ಹಾಲಿನಲ್ಲಿ ನೆನೆಸಿದ ಕೇಸರಿ ದಳಗಳನ್ನು ಸೇರಿಸಿ. ಜತೆಗೆ ಕೋವಾ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಕಡಿಮೆ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿ.
- ಈ ಮಿಶ್ರಣಕ್ಕೆ ರುಬ್ಬಿದ ತೆಂಗಿನ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಿಶ್ರಣವನ್ನು ತುಂಬಾ ದಪ್ಪವಾಗುವವರೆಗೆ ಬೆರೆಸಿಕೊಳ್ಳಿ.
- ಈಗ ಒಂದು ಟ್ರೇಗೆ ತುಪ್ಪ ಸವರಿ ಅದರ ಮೇಲೆ ಈ ಬಿಸಿಯಾದ ಸಿಹಿ ಮಿಶ್ರಣವನ್ನು ಹಾಕಿ.
- ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
- ಇಷ್ಟು ಮಾಡಿದರೆ ರುಚಿಕರವಾದ ತೆಂಗಿನಕಾಯಿ ಪಾಕ್ ಸವಿಯಲು ಸಿದ್ಧ. ಅದರ ಮೇಲೆ ಬಾದಾಮಿ, ಪಿಸ್ತಾ ಅಥವಾ ಗೋಡಂಬಿ-ದ್ರಾಕ್ಷಿಯನ್ನು ಹಾಕಿದರೆ ತಿನ್ನಲು ಇನ್ನೂ ತುಂಬಾ ರುಚಿಕರವಾಗಿರುತ್ತದೆ.
ಸಿಹಿತಿಂಡಿ ತಿನ್ನಬೇಕು ಎಂದು ಆಸೆಯಾದಾಗ ಈ ರೀತಿ ತೆಂಗಿನಕಾಯಿ ಪಾಕ್ ಮಾಡಿ ಸವಿಯಬಹುದು. ಈ ತೆಂಗಿನಕಾಯಿ ಪಾಕ್‍ನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಏಕೆಂದರೆ ಇದರಲ್ಲಿ ತೆಂಗಿನಕಾಯಿ, ಹಾಲು ಮತ್ತು ಕೋವಾವನ್ನು ಹೆಚ್ಚು ಬಳಸಲಾಗಿದೆ. ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ಸೇರುವುದರಿಂದ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಆದಷ್ಟು ಈ ತೆಂಗಿನಕಾಯಿ ಪಾಕ್ ರೆಸಿಪಿಯನ್ನು ಮನೆಯಲ್ಲಿ ತಯಾರಿಸಿ ತಿನ್ನಲು ಪ್ರಯತ್ನಿಸಿ. ಮಕ್ಕಳಿಗೂ ತುಂಬಾ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.