Dhanurmasa Naivedya: ಧನುರ್ಮಾಸದಲ್ಲಿ ಹುಗ್ಗಿಯೇ ಯಾಕೆ ವಿಶೇಷ ನೈವೇದ್ಯ; ಹುಗ್ಗಿ ಹುಣಸೆ ಗೊಜ್ಜು ತಯಾರಿಸುವುದು ಹೇಗೆ?
ಕನ್ನಡ ಸುದ್ದಿ  /  ಜೀವನಶೈಲಿ  /  Dhanurmasa Naivedya: ಧನುರ್ಮಾಸದಲ್ಲಿ ಹುಗ್ಗಿಯೇ ಯಾಕೆ ವಿಶೇಷ ನೈವೇದ್ಯ; ಹುಗ್ಗಿ ಹುಣಸೆ ಗೊಜ್ಜು ತಯಾರಿಸುವುದು ಹೇಗೆ?

Dhanurmasa Naivedya: ಧನುರ್ಮಾಸದಲ್ಲಿ ಹುಗ್ಗಿಯೇ ಯಾಕೆ ವಿಶೇಷ ನೈವೇದ್ಯ; ಹುಗ್ಗಿ ಹುಣಸೆ ಗೊಜ್ಜು ತಯಾರಿಸುವುದು ಹೇಗೆ?

Dhanurmasa Naivedya: ಡಿ.16ರಿಂದ ಜ.14ರ ತನಕ ಧನುರ್ಮಾಸ. ಧನುಪೂಜೆ ಮತ್ತು ಹುಗ್ಗಿ ನೈವೇದ್ಯವೇ ವಿಶೇಷ. ಯಾಕೆ ವಿಶೇಷ ಇಲ್ಲಿದೆ ಮಾಹಿತಿ. ಹುಗ್ಗಿ ಮತ್ತು ಹುಣಸೆ ಗೊಜ್ಜು ತಯಾರಿಸುವುದು ಹೇಗೆ? ಇಲ್ಲಿದೆ ವಿವರ.

ಹುಗ್ಗಿ ನೈವೇದ್ಯ
ಹುಗ್ಗಿ ನೈವೇದ್ಯ

ಧನುರ್ಮಾಸ ಆರಂಭವಾಗುತ್ತಿದೆ. ಹಿಂದು ಪಂಚಾಂಗ ಪ್ರಕಾರ ಡಿ.16ರಿಂದ 2023ರ ಜನವರಿ 14ರ ತನಕ ಧನುರ್ಮಾಸ. ಇದು ದೇವತಾರಾಧನೆಗೆ ವಿಶೇಷವಾದ ಮಾಸ. ದಕ್ಷಿಣ ಭಾರತದಲ್ಲಿ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ನಾಡಿನ ದೇಗುಲಗಳಲ್ಲಿ ಧನುಪೂಜೆ ನಡೆಯುತ್ತದೆ. ಧನುರ್ಮಾಸದ ವಿಶೇಷ ಧನುಪೂಜೆ. ವಿಷ್ಣುವಿಗೆ ಹುಗ್ಗಿ ನೈವೇದ್ಯ ವಿಶೇಷ. ಇದರ ಹಿಂದೆ ಒಂದು ಕಥೆ ಇದೆ. ಇಂದ್ರ ರಾಜ್ಯ ಭ್ರಷ್ಟನಾದ ಸಂದರ್ಭ ಅದು. ಆಗ ಶಚೀದೇವಿಯು ಹುಗ್ಗಿ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು. ಈ ಪೂಜಾ ಫಲವಾಗಿ ಇಂದ್ರನಿಗೆ ಪುನಃ ರಾಜ್ಯ ದೊರೆಯಿತು ಎಂಬುದು ಪೌರಾಣಿಕ ಪಠ್ಯ.

ಧನುರ್ಮಾಸ ಎಂದರೆ ಋತುಮಾನದ ಪ್ರಕಾರ, ಚಳಿಗಾಲ. ಈ ಸಂದರ್ಭದಲ್ಲಿ ಮೈ ಬೆಚ್ಚಗಾಗಿಸುವ ಹಾಗು ಚಳಿಯನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುವ ಸಾತ್ವಿಕ ಆಹಾರ ಹುಗ್ಗಿ. ಅಕ್ಕಿ, ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಚಿನ್ನಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನೂ ಸೇರಿಸಿ ಬೇಯಿಸಿದ ಪದಾರ್ಥವೇ ಹುಗ್ಗಿ. ಇದನ್ನು ಮುದ್ಗಾನ್ನ (ಹೆಸರು ಬೇಳೆ ಹುಗ್ಗಿ) ಎಂದೂ ಹೇಳುತ್ತಾರೆ. ಚಳಿಗಾಲದಲ್ಲಿ ಶರೀರ ಒಣಗುವುದನ್ನು ತಪ್ಪಿಸಲು, ಶರೀರದ ಕೊಬ್ಬಿನಂಶ ಹೆಚ್ಚಿಸಲು ಕೂಡಾ ಈ ಆಹಾರ ಸಹಾಯಕ.

ಅಕ್ಕಿ ಮತ್ತು ಹೆಸರುಬೇಳೆಯನ್ನು ಸಮ ಪ್ರಮಾಣದಲ್ಲಿ ಸೇರಿಸಿ ಬೇಯಿಸಿ, ಇದರ ಜತೆ ಸ್ವಲ್ಪ ಬೆಲ್ಲ, ಶುಂಠಿ, ತುಪ್ಪ, ಕಾಳುಮೆಣಸು ಸೇರಿಸಿ ಹುಗ್ಗಿ ತಯಾರಿಸಬೇಕು. ಕೆಲವರು ಜೀರಿಗೆ, ತುಪ್ಪ ಅಥವಾ ಬೆಣ್ಣೆಯಲ್ಲಿ ಹುರಿದ ಗೇರುಬೀಜ (ಗೋಡಂಬಿ) ಸೇರಿಸಿ ಮಾಡುತ್ತಾರೆ. ತಮಿಳುನಾಡಿನಲ್ಲಿ ಬೆಣ್ಣೆ ಸೇರಿಸಿ ಮಾಡುವ ಪೊಂಗಲ್‌ಗೆ ವೆಣ್‌ ಪೊಂಗಲ್‌ ಎನ್ನುತ್ತಾರೆ. ಇದರ ಜತೆಗೆ ಹುಣಸೆ ಗೊಜ್ಜು ಸಿಕ್ಕರೆ ಅದ್ಭುತ.

ಧನುರ್ಮಾಸ ಮತ್ತು ಹುಗ್ಗಿ ವೈಜ್ಞಾನಿಕ ಕಾರಣ

ಧನುರ್ಮಾಸ ಎಂಬುದು ಹೇಮಂತ ಋತುವಿನ ಮಾಸ. ಈ ಅತಿ ಚಳಿಗಾಲದ ಇಬ್ಬನಿ ನಮ್ಮ ದೇಹದ ಸ್ವೇದರಂಧ್ರಗಳ ಮೂಲಕ ಒಳ ಸೇರುವಷ್ಟು ಪ್ರಭಾವಶಾಲಿ. ಚಳಿಯಲ್ಲಿ ಮುಂಜಾನೆ ಎದ್ದು ಧಾರ್ಮಿಕ ಕಾರ್ಯದಲ್ಲಿ ತೊಡಗುವವರ ಮತ್ತು ಇತರರ ಚರ್ಮದ ತೇವಾಂಶ ಒಣಗುವುದು ಸಹಜ. ಕೆಲ ಪದಾರ್ಥಗಳಲ್ಲಿ ಬೇಸಿಗೆಯಲ್ಲಿ ತಂಪು ನೀಡುವಂತೆ ಚಳಿಗಾಲದಲ್ಲಿ ಶರೀರಕ್ಕೆ ಉಷ್ಣತೆ ಒದಗಿಸುವ ಗುಣವಿದೆ. ಹೆಸರುಬೇಳೆ ಅಂತಹ ಒಂದು ಪದಾರ್ಥ. ಇದರ ಜತೆ ಉಳಿದ ಪದಾರ್ಥಗಳು ದೇಹ ಮತ್ತಷ್ಟು ಬಿಸಿ ಹಾಗೂ ಹುರುಪು ಬರಲು, ಮುಖದ ಕಾಂತಿ ಹೆಚ್ಚಿಸಲು, ಅಜೀರ್ಣ ತಡೆಯಲು ನೆರವಾಗುತ್ತವೆ. ಆದ್ದರಿಂದ ಹುಗ್ಗಿ ಚಳಿಗಾಲದ ಆಹಾರ.

ಹುಗ್ಗಿ ನೈವೇದ್ಯ ಮಾಡುವುದು ಹೇಗೆ?

ವಿಷ್ಣುವಿಗೆ ನೈವೇದ್ಯ ನೀಡುವುದಕ್ಕೆ ಹುಗ್ಗಿ ತಯಾರಿಸುವುದು ಹೇಗೆ? ಯೂಟ್ಯೂಬ್‌ನಲ್ಲಿ ಹಲವು ವಿಡಿಯೋಸ್‌ ಲಭ್ಯವಿದೆ. ಆದಾಗ್ಯೂ, ಮಾಹಿತಿಗೋಸ್ಕರ ಒಂದು ವಿಡಿಯೋ ಲಿಂಕ್‌ ಅನ್ನು ಇಲ್ಲಿ ಒದಗಿಸುತ್ತಿದ್ದೇವೆ.

Whats_app_banner