ಧಾರವಾಡ ಪೇಡ ಮಾಡಲು ಹಾಲು ಬೇಕೇ ಬೇಕೆಂದೇನೂ ಇಲ್ಲ: ಹಾಲಿನ ಪುಡಿಯಿದ್ರೂ ಸಾಕು, ತಿನ್ನುತ್ತಾ ಒಂದು ಕ್ಷಣ ಲೋಕಾನೇ ಮರೆತು ಬಿಡ್ತೀರಾ
ಮನೆಯಲ್ಲೇ ಬಹಳ ಸುಲಭವಾಗಿ ತಯಾರಿಸಬಹುದಾದ ಧಾರವಾಡ ಪೇಡ ಸಿಹಿ ಖಾದ್ಯವನ್ನು ವೃದ್ಧರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಬಹಳ ಇಷ್ಟಪಟ್ಟು ತಿಂತಾರೆ. ಕರ್ನಾಟಕದ ಬಹಳ ಜನಪ್ರಿಯ ಸಿಹಿಖಾದ್ಯವನ್ನು ತಯಾರಿಸುವುದು ತುಂಬಾನೇ ಸಿಂಪಲ್. ಹಾಗಿದ್ರೆ, ಈ ಧಾರವಾಡ ಪೇಡವನ್ನು ತಯಾರಿಸುವುದು ಹೇಗೆ, ಎಂಬುದು ಇಲ್ಲಿದೆ.
ಕರ್ನಾಟಕದ ಧಾರವಾಡದಲ್ಲಿ ಹುಟ್ಟಿಕೊಂಡ ಹಾಲಿನಿಂದ ಮಾಡಲಾಗುವ ಸಿಹಿ ಖಾದ್ಯ ಧಾರವಾಡ ಪೇಡ. ಇಂದು ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಬಹಳ ಜನಪ್ರಿಯವಾಗಿದೆ. ಈ ಸಿಹಿಭಕ್ಷ್ಯವನ್ನು ಹಾಲು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಹಾಲನ್ನು ಕುದಿಸಿ, ವಿನೆಗರ್ ಅಥವಾ ನಿಂಬೆ ರಸವನ್ನು ಬೆರೆಸಿ ಪನೀರ್ ರೀತಿ ತಯಾರಿಸಲಾಗುತ್ತದೆ. ಈ ರುಚಿಕರವಾದ ಪೇಡವನ್ನು ತಯಾರಿಸುವುದು ತುಂಬಾನೇ ಸುಲಭ. ಮನೆಯಲ್ಲೇ ಬಹಳ ಸುಲಭವಾಗಿ ತಯಾರಿಸಬಹುದಾದ ಈ ಸಿಹಿ ಖಾದ್ಯವನ್ನು ವೃದ್ಧರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಬಹಳ ಇಷ್ಟಪಟ್ಟು ತಿಂತಾರೆ. ಹಾಗಿದ್ರೆ ಈ ಧಾರವಾಡ ಪೇಡವನ್ನು ತಯಾರಿಸುವುದು ಹೇಗೆ, ಎಂಬುದು ಇಲ್ಲಿದೆ.
ಧಾರವಾಡ ಪೇಡ ರೆಸಿಪಿ ತಯಾರಿಸುವ ವಿಧಾನ
ಬೇಕಾಗುವ ಸಾಮಗ್ರಿಗಳು: ಹಾಲಿನ ಪುಡಿ- 1 ಕಪ್, ಬೂರಾ ಸಕ್ಕರೆ- 1 ಕಪ್, ತುಪ್ಪ- ಅರ್ಧ ಕಪ್, ಹಾಲು- ಸ್ವಲ್ಪ (2 ಟೀ ಚಮಚ).
ಮಾಡುವ ವಿಧಾನ: ಮೊದಲಿಗೆ ಒಂದು ಕಪ್ ಸಕ್ಕರೆಗೆ ಅರ್ಧ ಕಪ್ ನೀರು ಸೇರಿಸಿ ಸ್ಟೋವ್ ಮೇಲಿಟ್ಟು ಚೆನ್ನಾಗಿ ತಿರುವುಕೊಳ್ಳಬೇಕು. ಒಂದೆಳೆ ಪಾಕಬರುತ್ತಿದ್ದಂತೆ ಸ್ಟೌವ್‌ನಿಂದ ಕೆಳಗಿಳಿಸಿ. ನಂತರ ಮತ್ತೆ ಚೆನ್ನಾಗಿ ತಿರುವುಕೊಳ್ಳಿ. ತಿರುವುತ್ತಿದ್ದಂತೆ ಸಕ್ಕರೆ ಪಾಕ ಪುಡಿಪುಡಿಯಾಗುತ್ತದೆ. ಗಂಟಾಗದಂತೆ ಚೆನ್ನಾಗಿ ತಿರುವುಕೊಳ್ಳಿ. ಚಿರೋಟಿ ರವೆಯಂತೆ ಸಣ್ಣ ಸಣ್ಣ ಪುಡಿಗಳಂತಾಗುತ್ತವೆ. ಇದನ್ನು ಜರಡಿ ಮಾಡಿಕೊಳ್ಳಿ. ಗಂಟು ಗಂಟು ಇದ್ದರೆ ಅದನ್ನು ಪುಡಿ ಮಾಡಿಕೊಂಡು ಜರಡಿ ಮಾಡಿಕೊಳ್ಳಿ. ಇದಕ್ಕೆ ಬೂರಾ ಸಕ್ಕರೆ ಎನ್ನುತ್ತಾರೆ.
ನಂತರ ಒಂದು ಪಾತ್ರೆಗೆ 2 ಟೀ ಚಮಚ ತುಪ್ಪ ಸೇರಿಸಿ. ತುಪ್ಪ ಬಿಸಿಯಾದ ಕೂಡಲೇ ಇದಕ್ಕೆ ಹಾಲಿನ ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ ಒಂದೆರಡು ನಿಮಿಷ ಹುರಿಯಿರಿ. ನಂತರ ಒಂದೆರಡು ಟೀ ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿ. ಹಾಲಿನ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡುತ್ತಿರಬೇಕು. ಇದು ತಳ ಹಿಡಿಯದಂತೆ ಆಗಾಗ ತುಪ್ಪ ಸೇರಿಸಬೇಕು. ಹಾಲಿನ ಪುಡಿ ಕಂದು ಬಣ್ಣಕ್ಕೆ ಬಂದಾಗ ಸ್ವಲ್ಪ ಹಾಲು (2 ಟೀ ಚಮಚ), ಒಂದು ಟೀ ಚಮಚ ತುಪ್ಪ ಸೇರಿಸಿ ಮಿಶ್ರಣ ಮಾಡಿ. ನಂತರ ಇದನ್ನು ಸ್ಟೌವ್‌ನಿಂದ ಕೆಳಗಿಳಿಸಿ, ಪ್ಲೇಟ್‌ಗೆ ವರ್ಗಾಯಿಸಿ.
ಈ ಮಿಶ್ರಣವು ಸ್ವಲ್ಪ ತಣ್ಣಗಾದಾಗ ಚೆನ್ನಾಗಿ ನಾದಿಕೊಳ್ಳಿ. ನಂತರ ಇದಕ್ಕೆ ಮುಕ್ಕಾಲು ಭಾಗದಷ್ಟು ಬೂರಾ ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಅರ್ಧ ಟೀ ಚಮಚದಷ್ಟು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸಿಹಿ ಕಡಿಮೆ ಎಂದೆನಿಸಿದರೆ ಬೂರಾ ಸಕ್ಕರೆಯನ್ನು ನಿಮಗೆ ಬೇಕಾದಷ್ಟು ಸೇರಿಸಬಹುದು. ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ, ಸಣ್ಣ-ಸಣ್ಣ ಉಂಡೆ ಮಾಡಿಕೊಳ್ಳಿ. ಇದನ್ನೂ ಬೂರಾ ಸಕ್ಕರೆಯೊಂದಿಗೆ ಅದ್ದಿ. ಹಬ್ಬ, ಹುಟ್ಟುಹಬ್ಬ ಹೀಗೆ ಯಾವುದೇ ಕಾರ್ಯಕ್ರಮಕ್ಕೂ ಈ ಸಿಹಿಖಾದ್ಯವನ್ನು ತಯಾರಿಸಬಹುದು. ಒಮ್ಮೆ ಮಾಡಿದರೆ, ನಿಮಗೆ ತುಂಬಾ ಸುಲಭ ಎನಿಸುತ್ತದೆ. ಹೀಗೆ ಮತ್ತೆ ಮತ್ತೆ ಮಾಡಲು ಇಷ್ಟಪಡುವಿರಿ. ಮನೆಯವರೆಲ್ಲಾ ಖಂಡಿತಾ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ.