Digital Detox: ಸ್ಕ್ರೀನ್‌ಟೈಮ್‌ಗಿರಲಿ ಬ್ರೇಕ್‌; ಜೀವನದ ಖುಷಿಗೂ ಆರೋಗ್ಯಕ್ಕೂ ಡಿಜಿಟಲ್‌ ಡಿಟಾಕ್ಸ್‌ ಅವಶ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Digital Detox: ಸ್ಕ್ರೀನ್‌ಟೈಮ್‌ಗಿರಲಿ ಬ್ರೇಕ್‌; ಜೀವನದ ಖುಷಿಗೂ ಆರೋಗ್ಯಕ್ಕೂ ಡಿಜಿಟಲ್‌ ಡಿಟಾಕ್ಸ್‌ ಅವಶ್ಯ

Digital Detox: ಸ್ಕ್ರೀನ್‌ಟೈಮ್‌ಗಿರಲಿ ಬ್ರೇಕ್‌; ಜೀವನದ ಖುಷಿಗೂ ಆರೋಗ್ಯಕ್ಕೂ ಡಿಜಿಟಲ್‌ ಡಿಟಾಕ್ಸ್‌ ಅವಶ್ಯ

Physical and Mental Well Being: ಡಿಜಿಟಲ್‌ ಡಿಟಾಕ್ಸ್‌ ಬಹುಶಃ ಈ ಪದ ಹಲವರಿಗೆ ತಿಳಿದಿರಕ್ಕಿಲ್ಲ. ಇಂದಿನ ಒತ್ತಡದ ಡಿಜಿಟಲ್‌ ಜಗತ್ತಿನಿಂದ ಹೊರ ಬಂದು ಬದುಕಿನ ನೈಜ ಖುಷಿಯನ್ನು ಹುಡುಕುವುದೇ ಡಿಜಿಟಲ್‌ ಡಿಟಾಕ್ಸ್‌. ಇದು ಪ್ರತಿಯೊಬ್ಬರಿಗೂ ಅವಶ್ಯ, ಅಲ್ಲದೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯೂ ಇದರಿಂದ ಸಾಧ್ಯ.

ಆರೋಗ್ಯಕ್ಕೂ ಆನಂದಕ್ಕೂ ಬೇಕು ಡಿಜಿಟಲ್‌ ಡಿಟಾಕ್ಸ್
ಆರೋಗ್ಯಕ್ಕೂ ಆನಂದಕ್ಕೂ ಬೇಕು ಡಿಜಿಟಲ್‌ ಡಿಟಾಕ್ಸ್

ಇದು ತಂತ್ರಜ್ಞಾನದ ಹಿಂದೆ ವೇಗವಾಗಿ ಓಡುತ್ತಿರುವ ಯುಗ. ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ಹಂತದಲ್ಲಿ ನಾವಿದ್ದೇವೆ. ಸ್ಕ್ರೀನ್‌ಟೈಮ್‌ ಮೇಲೆ ನಾವು ಗಮನ ನೀಡುವುದು ಅತಿಯಾಗಿದೆ, ಅಲ್ಲದೆ ಸ್ಕ್ರೀನ್‌ಟೈಮ್‌ ನಮ್ಮ ಗಮನವನ್ನು ಹಿಡಿದಿಟ್ಟುಕೊಂಡಿದೆ. ಇದರಿಂದ ಹೊರ ಬಂದು ಭೌತಿಕ ಜಗತ್ತಿನ ಸೌಂದರ್ಯವನ್ನು ಆಸ್ವಾದಿಸುವ ಮನೋಭಾವ ಯಾರಲ್ಲೂ ಇಲ್ಲ. ಆದರೆ ಡಿಜಿಟಲ್‌ ಡಿಟಾಕ್ಸ್‌ ಎನ್ನುವುದು ಪರದೆಯ ಜಗತ್ತಿನಿಂದ ನಮ್ಮನ್ನು ಹೊರ ಕರೆದುಕೊಂಡು ಬಂದು ಸುತ್ತಲಿನ ಪ್ರಪಂಚದೊಂದಿಗೆ ಮರು ಸಂಪರ್ಕಿಸಲು ಅನುಮತಿಸುವ ಒಂದು ಮಾರ್ಗ.

ಲೈಕ್‌, ಕಾಮೆಂಟ್‌ನ ಪ್ರಪಂಚದಿಂದ ಅನ್‌ಪ್ಲಗ್‌ ಮಾಡಿ ಹೊರಬರುವುದು ನಿಜಕ್ಕೂ ಬಹಳ ಅವಶ್ಯ. ಇದು ಸಾಧ್ಯವೇ ಅನ್ನಿಸಿದರೂ ಕೂಡ ಜಡಜೀವನ ನಡೆಸುವ ಈ ಜಗತ್ತಿನಲ್ಲಿ ನಿಜವಾಗಿಯೂ ಬಹಳ ಮುಖ್ಯವಾಗಿದೆ.

ಇಂದು ದಿನದಲ್ಲಿ ಹೆಚ್ಚಿನ ಸಮಯವನ್ನು ಸ್ಕ್ರೀನ್‌ಟೈಮ್‌ ಕೊಲ್ಲುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬಿದ್ದು ಓಲಾಡುವುದು ಸಾಮಾನ್ಯವಾಗಿದೆ. ಆ ಕಾರಣದಿಂದ ನಾವು ಕೆಲಸದಿಂದ ವಿರಾಮ ಪಡೆಯುವಂತೆ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್‌ ಜೀವನದಿಂದ ವಿರಾಮ ತೆಗೆದುಕೊಳ್ಳುವುದು ಬಹಳ ಅವಶ್ಯವಾಗಿದೆ.

ಅನ್‌ಪ್ಲಗ್‌ ಮಾಡಿ ರಿಕನೆಕ್ಟ್‌ ಆಗಿ

ಎಲೆಕ್ಟ್ರಾನಿಕ್‌ ಡಿವೈಸ್‌ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಆಗಾಗ ಅನ್‌ಪ್ಲಗ್‌ ಮಾಡಿಕೊಂಡು ನಂತರ ರಿಕನೆಕ್ಟ್‌ ಆಗುವುದನ್ನು ಕಲಿಯಬೇಕು. ಇದರಿಂದ ಆರೋಗ್ಯಕ್ಕೂ ಉತ್ತಮ ಹಾಗೂ ಕೆಲಸವು ಸರಾಗವಾಗಿ ಆಗುತ್ತದೆ. ಅನ್‌ಪ್ಲಗ್‌ ಮಾಡಿದ ಮೇಲೆ ಒಂದಿಷ್ಟು ಹೊತ್ತು ಪ್ರಕೃತಿಯೊಂದಿಗೆ ಕಾಲ ಕಳೆಯಿರಿ. ವರ್ಚುವಲ್‌ ಜಗತ್ತಿನಿಂದ ದೂರವಾಗಿ ಪ್ರಸ್ತುತ ಕ್ಷಣದಲ್ಲಿ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಡಿಜಿಟಲ್‌ ಡಿಟಾಕ್ಸ್‌ನಿಂದ ಪ್ರಪಂಚದ ಹಲವು ಅದ್ಭುತಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಪ್ರಕೃತಿಯ ಅದ್ಭುತಗಳನ್ನು ಆಸ್ವಾದಿಸಲು ಇದು ನಮಗೆ ವೇದಿಕೆಯಾಗುತ್ತದೆ. ಡಿಜಿಟಲ್‌ ಜಗತ್ತಿನಲ್ಲಿ ಮುಳುಗಿರುವ ನಮಗೆ ದೀರ್ಘಕಾಲದಿಂದ ಮುಚ್ಚಿಹೋಗಿರುವ ದೃಶ್ಯಗಳು, ಶಬ್ದಗಳು ಮತ್ತು ಅನುಭವಗಳು ನಮ್ಮ ಇಂದ್ರಿಯಗಳನ್ನು ಅರಳಿಸುತ್ತವೆ.

* ಇಮೋಜಿಗಳಿಂದ ನಿರ್ಬಂಧಿಸಲ್ಪಟ್ಟ ಸಂಭಾಷಣಾ ಜಗತ್ತಿನಿಂದ ಹೊರ ಬಂದು ಮಾತು, ಹರಟೆಯ ಸ್ವ ಅನುಭವ ಪಡೆಯಲು ಇದು ಬಹಳ ಮುಖ್ಯ.

* ನೇರ ನೇರ ಸಂಪರ್ಕ, ಸಂವಹನವು ಮನುಷ್ಯನಲ್ಲಿ ಸಂಬಂಧದ ಮೌಲ್ಯವನ್ನು ತಿಳಿಸುತ್ತದೆ, ಇದಕ್ಕೂ ಡಿಜಿಟಲ್‌ ಡಿಟಾಕ್ಸ್‌ ನೆರವಾಗುತ್ತದೆ.

* ಒಟ್ಟಾರೆ ಮನುಷ್ಯ ಮಾನಸಿಕ ಹಾಗೂ ದೈಹಿಕ ವೃದ್ಧಿಗೆ ಡಿಜಿಟಲ್‌ ಡಿಟಾಕ್ಸ್‌ ಬಹಳ ಅವಶ್ಯ.

ಡಿಜಿಟಲ್‌ ಡಿಟಾಕ್ಸ್‌ನಿಂದ ಆರೋಗ್ಯಕ್ಕೆ ಏನು ಉಪಯೋಗ

ಒತ್ತಡವನ್ನು ಕಡಿಮೆ ಮಾಡುತ್ತದೆ: ಸ್ಕ್ರೀನ್‌ ಟೈಮ್‌ನಿಂದ ಹೊರ ಬರುವುದರಿಂದ ಡಿಜಿಟಲ್‌ ಪ್ರಪಂಚದಿಂದ ಸಂಪೂರ್ಣವಾಗಿ ಹೊರ ಬರಲು ನೆರವಾಗುತ್ತದೆ. ಇದು ಮೆದುಳಿಗೆ ಪುನಃ ಶಕ್ತಿ ತುಂಬಲು ನೆರವಾಗುತ್ತದೆ, ಅಲ್ಲದೆ ಒತ್ತಡ ನಿರ್ವಹಣೆಗೂ ಅವಶ್ಯ.

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ: ಸಾಮಾಜಿಕ ಮಾಧ್ಯಮ ಹಾಗೂ ಸ್ಕ್ರೀನ್‌ಟೈಮ್‌ನಿಂದ ಬೇರಾಗುವುದು ಮಾನಸಿಕ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೂ ಉತ್ತಮ: ಸ್ಕ್ರೀನ್‌ನ ಬೆಳಕು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆ ಕಾರಣಕ್ಕೆ ಸ್ಕ್ರೀನ್‌ ಟೈಮ್‌ನಿಂದ ವಿರಾಮ ಹೊಂದುವುದರಿಂದ ಚರ್ಮ ಮೇಲಾಗುವ ಹಾನಿಕಾರಕ ಪರಿಣಾಮವನ್ನು ನಿಯಂತ್ರಿಸುತ್ತದೆ.

ಉತ್ತಮ ನಿದ್ದೆ: ಡಿಜಿಟಲ್‌ ಡಿಟಾಕ್ಸ್‌ನಿಂದ ಮೆದುಳು ನಿದ್ದೆಯ ಹಾರ್ಮೋನ್ ಮೆಲಟೋನಿನ್‌ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ.

ಸಾಮಾಜಿಕ ಸಂವಹನವನ್ನು ಸುಧಾರಿಸುತ್ತದೆ: ಇಂದು ಮೊಬೈಲ್‌, ವಾಟ್ಸ್‌ಆಪ್‌, ಜೀಮೇಲ್‌ನಂತಹ ಡಿಜಿಟಲ್‌ ಜಗತ್ತಿನಲ್ಲಿ ಚಾಟ್‌ ಹಾಗೂ ಫೋನ್‌ ಸಂವಹನಗಳಿಗೆ ಸೀಮಿತವಾಗಿದೆ. ಮನುಷ್ಯರು ಪರಸ್ಪರ ಭೇಟಿಯಾಗಿ ಸಂವಹನ ನಡೆಸುವುದು ಕಡಿಮೆಯಾಗಿದೆ. ಸಾಮಾಜಿಕವಾಗಿ ಬೆರೆಯಲು ಡಿಜಿಟಲ್‌ ಡಿಟಾಕ್ಸ್‌ ನೆರವಾಗುತ್ತದೆ.

ಉತ್ಪಾದಕತೆಯನ್ನು ಹೆಚ್ಚಿಸುತ್ತದೆ: ಡಿಜಿಟಲ್‌ ಡಿಟಾಕ್ಸ್‌ ಎನ್ನುವುದು ತನ್ನ ಡಿಜಿಟಲ್‌ ಪ್ರಪಂಚದಿಂದ ವಿರಾಮ ಪಡೆಯಲು ನೆರವಾಗುತ್ತದೆ. ಅಲ್ಲದೆ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿ, ಉತ್ಪಾದಕತೆಯ ಮಟ್ಟ ಹೆಚ್ಚಲು ಇದು ನೆರವಾಗುತ್ತದೆ.

ಡಿಜಿಟಲ್‌ ವಸ್ತುಗಳಿಂದ ದೂರಾದ ಸಮಯದಲ್ಲಿ ಹೀಗೆ ಮಾಡಿ

ನಿರಂತರ ಬೀಪ್‌ ಸೌಂಡ್‌, ಪಿಂಗ್‌ ಮಾಡುವುದು ನಮ್ಮ ಗಮನವನ್ನು ಬೇರೆಡೆ ಸೆಳೆಯದಂತೆ ಮಾಡಿರುತ್ತವೆ. ಆದರೆ ಡಿಜಿಟಲ್‌ ಡಿಟಾಕ್ಸ್‌ ಹೊತ್ತಿನಲ್ಲಿ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಮ್ಮ ಹವ್ಯಾಸಗಳತ್ತ ಮನಸ್ಸನ್ನು ತೆರೆದುಕೊಳ್ಳಬೇಕು. ನಮ್ಮದಲ್ಲದ ಪ್ರಪಂಚದಲ್ಲಿ ಬದುಕುತ್ತಿದ್ದ ನಾವು ನಮ್ಮ ಸ್ವಂತ ಪ್ರಪಂಚವನ್ನು ಕಂಡುಕೊಳ್ಳಬೇಕು. ಈ ನಿಶ್ಚಲತೆಯ ಕ್ಷಣಗಳಲ್ಲಿ ನಾವು ಮರೆತುಹೋದ ಕನಸುಗಳನ್ನು ಪುನಃ ಕಂಡುಕೊಳ್ಳಬೇಕು.

* ಮೆರತು ಹೋದ ಹವ್ಯಾಸಗಳನ್ನು ಪುನಃ ನೆನಪಿಸಿಕೊಂಡು ಅದನ್ನು ಅನುಸರಿಸಿ.

* ಯೋಗ, ಏರೋಬಿಕ್‌, ವ್ಯಾಯಾಮದಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.

* ದೀರ್ಘಕಾಲದ ಸ್ನೇಹಿತರ ಜೊತೆ ಸಂಪರ್ಕ ಸಾಧಿಸಿ.

* ಪುಸ್ತಕ ಓದುವುದು, ಹೊಸ ಕಲೆಗಳನ್ನು ರೂಢಿಸಿಕೊಳ್ಳುವುದು ಇಂತಹವನ್ನು ಅಭ್ಯಾಸ ಮಾಡಿ.

* ಅಡುಗೆ ಮಾಡುವುದರಿಂದ ಒತ್ತಡ ನಿರ್ವಹಣೆ ಸಾಧ್ಯ. ಹೊಸ ಹೊಸ ಪಾಕವಿಧಾನವನ್ನು ಕಲಿಸಬಹುದು.

* ಒಂದು ಲಾಂಗ್ ವಾಕ್‌, ಸಣ್ಣ ಟ್ರಿಪ್‌ ಕೂಡ ಆಯೋಜಿಸಬಹುದು.

ಡಿಜಿಟಲ್ ಡಿಟಾಕ್ಸ್ ಅನುಭವವು ವರ್ಚುವಲ್ ಮತ್ತು ಭೌತಿಕ ಕ್ಷೇತ್ರಗಳ ನಡುವಿನ ಸೂಕ್ಷ್ಮ ಸಮತೋಲನದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ಸಮಯ ಮತ್ತು ಗಮನದ ಮೇಲೆ ಹಿಡಿತ ಸಾಧಿಸಲು ನಮಗೆ ಅನುಮತಿಸುತ್ತದೆ, ಬುದ್ದಿಹೀನ ಸ್ಕ್ರೋಲಿಂಗ್‌ನಲ್ಲಿ ಅರ್ಥಪೂರ್ಣ ಅನುಭವಗಳನ್ನು ಆಯ್ಕೆ ಮಾಡಲು ನಮಗೆ ಅಧಿಕಾರ ನೀಡುತ್ತದೆ. ನಿಯತಕಾಲಿಕವಾಗಿ ಸ್ಕ್ರೀನ್‌ ಟೈಮ್‌ ಅನ್ನು ಅನ್‌ಪ್ಲಗ್‌ ಮಾಡುವ ಮೂಲಕ ಬದುಕಿನ ಸ್ಪಷ್ಟತೆ, ನಮ್ಮ ಕೆಲಸದ ಗುರಿಯು ಅರ್ಥವಾಗುತ್ತದೆ.

Whats_app_banner