ಆನ್‌ಲೈನ್ ವಂಚನೆ: ಷೇರು ಹೂಡಿಕೆ ಹೆಸರಲ್ಲಿ ವಾಟ್ಸ್‌ಆ್ಯಪ್, ಟೆಲಿಗ್ರಾಂ ಗ್ರೂಪ್‌ಗಳಲ್ಲಿ ನಡೆಯುತ್ತಿದೆ ಮಹಾಮೋಸ, ಈ ರೀತಿ ಎಚ್ಚರವಹಿಸಿ
Investing Scams: ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡಬಹುದೆಂದು ಆನ್‌ಲೈನ್ ವಂಚಕರು ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಜನರನ್ನು ಮೋಸ ಮಾಡುತ್ತಿದ್ದಾರೆ. ಈ ರೀತಿಯ ವಂಚನೆ ಹೇಗೆ ನಡೆಯುತ್ತದೆ? ಇಂತಹ ವಂಚನೆಯಿಂದ ಪಾರಾಗುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
Investing Scams: ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡಬಹುದೆಂದು ಆನ್‌ಲೈನ್ ವಂಚಕರು ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಸಾಕಷ್ಟು ಜನರು ಇಂತಹ ವಂಚನೆಯಿಂದ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ಷೇರು ಹೂಡಿಕೆ ವಂಚನೆ ಘಟನೆಗಳು
ಇತ್ತೀಚೆಗೆ ಮಂಗಳೂರಿನಲ್ಲಿ ದಾಖಲಾದ ಪ್ರಕರಣ. ದಕ್ಷಿಣ ಕನ್ನಡದ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ಲಿಂಕ್ ಕಳುಹಿಸಿ " ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು" ಎಂದು ಆಸೆ ಹುಟ್ಟಿಸಿದ್ದಾನೆ. ಆತ ನೀಡಿರುವ ಲಿಂಕ್ ಪ್ರವೇಶಿಸಿದಾಗ ಅದು ಯಾವುದೋ ಷೇರುಪೇಟೆಯ ವೆಬ್‌ಸೈಟ್‌ನಂತೆ ಇತ್ತು. ಅಲ್ಲಿ ನೀಡಲಾದ ಲಿಂಕ್ ಮೂಲಕ ಇವರು ಹಣ ಹಾಕಿದ್ದಾರೆ. ಹಂತಹಂತವಾಗಿ 40,64,609 ರೂಪಾಯಿ ಪಡೆದಿದ್ದಾನೆ. ದೂರು ದಾಖಲಾದ ಬಳಿಕ ಕೇರಳ ಕೋಝಿಕ್ಕೋಡ್ ಪುಳಕ್ಕಲ್ ನಿವಾಸಿ ಜಯಂತ್ ಪಿ. (35) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಈ ವರ್ಷ ನಡೆದ ಇನ್ನೊಂದು ಘಟನೆ. ಚಲ್ಲಘಟ್ಟ ನಿವಾಸಿ 53 ವರ್ಷ ವಯಸ್ಸಿನ ಅಕೌಂಟೆಂಟ್ ಒಬ್ಬರು ಇದೇ ರೀತಿ ಆನ್‌ಲೈನ್‌ನಲ್ಲೇ ಷೇರು ಮಾರುಕಟ್ಟೆ ವಹಿವಾಟು ಆಮೀಷಕ್ಕೆ ಒಳಗಾಗಿ 1.4 ಕೋಟಿ ರೂ. ಹಣ ಕಳೆದುಕೊಂಡಿದ್ದರು.
ಇದು ಎರಡು ಉದಾಹರಣೆಯಷ್ಟೇ. ಪ್ರತಿನಿತ್ಯ ಸುದ್ದಿಗಳಲ್ಲಿ ಇಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಷೇರುಪೇಟೆ ಹೂಡಿಕೆ ಹೆಸರಲ್ಲಿ ಜನರನ್ನು ವಂಚನೆ ಮಾಡುವುದು ಮುಂದುವರೆಯುತ್ತಲೇ ಇದೆ. ವಿಶೇಷವಾಗಿ ಷೇರುಪೇಟೆ ಕುರಿತು ಜ್ಞಾನ ಇಲ್ಲದವರಿಗೆ, ಹೆಚ್ಚು ಜ್ಞಾನ ಇಲ್ಲದೆ ಇರುವವರಿಗೆ ಇಂತಹ ಮೋಸ ಹೆಚ್ಚಾಗಿ ನಡೆಯುತ್ತದೆ.
ವಾಟ್ಸ್‌ಆ್ಯಪ್, ಟೆಲಿಗ್ರಾಂನಲ್ಲಿ ಹೂಡಿಕೆ ಗ್ರೂಪ್‌ಗಳು
ಒಂದು ದಿನ ನೀವು ವಾಟ್ಸ್‌ಆ್ಯಪ್ ತೆರೆದಾಗ ಯಾವುದೋ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಯಾರೋ ನಿಮ್ಮನ್ನು ಸೇರಿಸಿರಬಹುದು. ಆ ಗ್ರೂಪ್‌ನೊಳಗೆ ಷೇರುಪೇಟೆ ಹೂಡಿಕೆ ಕುರಿತು ನೂರಾರು ಫೋಟೋಗಳು, ಚರ್ಚೆಗಳು ನಡೆಯುತ್ತ ಇರಬಹುದು. ಈ ಷೇರು ಚೆನ್ನಾಗಿದೆ, ಆ ಷೇರು ಚೆನ್ನಾಗಿದೆ ಎಂದು ಷೇರುಪೇಟೆ ತಜ್ಞರಂತೆ ಯಾರೋ ಸಲಹೆ, ಟಿಪ್ಸ್ ನೀಡುತ್ತ ಇರಬಹುದು. ಅಪರಿಚಿತ ಗ್ರೂಪ್‌ನಲ್ಲಿ ನಡೆಯುವ ಸಂವಹನ ನೋಡುತ್ತ ನಿಮಗೂ ಷೇರುಪೇಟೆ ಕುರಿತು ಆಸಕ್ತಿ ಬರಬಹುದು. ಆ ಗ್ರೂಪ್‌ನಲ್ಲಿ ನೀಡಲಾಗುವ ಯಾವುದೋ ಲಿಂಕ್ ಕ್ಲಿಕ್ ಮಾಡಿದಾಗ ಅಧಿಕೃತ ಬ್ರೋಕರೇಜ್ ಅಪ್ಲಿಕೇಷನ್‌ಗಳ ರೀತಿಯೇ ಇರಬಹುದು. ಎನ್‌ಎಸ್‌ಇ, ಬಿಎಸ್‌ಇ ವೆಬ್‌ಸೈಟ್‌ಗಳಂತೆ ಕಾಣಿಸಬಹುದು.
ಟೆಲಿಗ್ರಾಂನಲ್ಲಿಯಂತೂ ಇಂತಹ ನೂರಾರು ಗ್ರೂಪ್‌ಗಳು ಇವೆ. ಹೊಸದಾಗಿ ಷೇರುಪೇಟೆಗೆ ಬರುವವರು ಇಂತಹ ಗ್ರೂಪ್‌ಗಳ ಕುರಿತು ಆಸಕ್ತಿ ವಹಿಸುತ್ತಾರೆ. ಈ ಮೂಲಕ ನಿಮ್ಮ ಹಣವನ್ನು ಆ ವೆಬ್‌ಸೈಟ್‌ನಲ್ಲಿ ನೀಡಲಾಗುವ ಅಕೌಂಟ್‌ಗಳಿಗೆ ಹಾಕಿದ್ರೆ ನಿಮ್ಮ ಹಣ ವಂಚಕರ ಪಾಲಾಗುತ್ತದೆ. ಅಲ್ಲಿ ಕೆಲವು ದಿನ ನಿಮ್ಮ ಹಣ ಏರಿಳಿತ ಆಗುವಂತೆಯೂ ಕಾಣಬಹುದು. ಆದರೆ, ಹಣ ತೆಗೆಯಲು ಸಾಧ್ಯವಾಗುವುದಿಲ್ಲ. ಇನ್ನಷ್ಟು ದೊಡ್ಡ ಮೊತ್ತ ಹಾಕುವಂತೆ ಪ್ರಲೋಭನೆಯನ್ನೂ ಆ ಕಡೆಯುವರು ಒಡ್ಡಬಹುದು. ಇದೇ ರೀತಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ತೆರೆದಾಗ ಸಾಕಷ್ಟು ಮೊಬೈಲ್ ಆಪ್‌ಗಳು ನಿಮ್ಮನ್ನು ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಬಹುದು. ಅಧಿಕೃತವಲ್ಲದ ಅಂತಹ ಅಪ್ಲಿಕೇಷನ್‌ಗಳು ಕೂಡ ಜನರ ಹಣವನ್ನು ಕದಿಯಲು ಇರುವಂತಹದ್ದು. ಇಂತಹ ಅಪ್ಲಿಕೇಷನ್‌ಗಳಿಗೆ ಈಗ ಕೇಂದ್ರ ಸರ್ಕಾರ ಒಂದಿಷ್ಟು ಕಡಿವಾಣ ಹಾಕಿದೆ. ಹೀಗಿದ್ದರೂ ವಿವಿಧ ರೂಪಗಳಲ್ಲಿ ವಂಚಕರು ಬಲಿಪಶುಗಳನ್ನು ಹುಡುಕುತ್ತಾ ಇರುತ್ತಾರೆ.
ಇಂತಹ ವಂಚನೆಯಿಂದ ಪಾರಾಗುವುದು ಹೇಗೆ?
- ಟೆಲಿಗ್ರಾಂ ಮತ್ತು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಅಪರಿಚಿತರು ನಡೆಸುವ ಇಂತಹ ಷೇರುಪೇಟೆ ಚರ್ಚೆಗಳಲ್ಲಿ ಭಾಗವಹಿಸಬೇಡಿ. ಅಂತಹ ಗ್ರೂಪ್‌ಗಳಿಗೆ ಯಾರಾದರೂ ನಿಮ್ಮನ್ನು ಸೇರಿಸಿದ್ದರೆ ಅಂತಹ ಗ್ರೂಪ್‌ಗಳಿಂದ ಹೊರಬನ್ನಿ.
- ಅತ್ಯಧಿಕ ಲಾಭದ ಆಮೀಷ ತೋರಿಸುವ ಯಾರನ್ನೂ ನಂಬಬೇಡಿ. ಇಂತಿಷ್ಟು ಸಮಯದಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ, ಮೂರು ಪಟ್ಟು ಹೆಚ್ಚುತ್ತದೆ ಎಂದು ಹೇಳುವವರನ್ನು ನಂಬಲೇಬೇಡಿ. ಅಂತಹ ಮ್ಯಾಜಿಕ್‌ಗಳೆಲ್ಲ ನಡೆಯುವುದಿಲ್ಲ. ಈ ರೀತಿ ಯಾರಾದರೂ ಲಾಭದ ಆಸೆ ತೋರಿಸುತ್ತ ಇದ್ದಾರೆ ಎಂದಾದರೆ ಅದು ಸ್ಕ್ಯಾಮ್ ಎಂದೇ ತಿಳಿಯಿರಿ.
- ಯಾವುದೇ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಸೆಬಿ/ಆರ್‌ಬಿಐ ಲೈಸನ್ಸ್ ಪರಿಶೀಲಿಸಿ. ಇಂತಹ ಗ್ರೂಪ್‌ಗಳಲ್ಲಿ ಕಾಣಿಸುವ ನಕಲಿ ಸರ್ಟಿಫಿಕೇಟ್‌ಗಳನ್ನು ನಂಬಬೇಡಿ. ಇಂತಹ ಗ್ರೂಪ್‌ಗಳಲ್ಲಿ ಯಾರಾದರೂ ನಿಮಗೆ ಹೂಡಿಕೆ ಮಾಡುವಂತೆ ತುಂಬಾ ಒತ್ತಡ ಹೇರಿದರೆ ಅವರಲ್ಲಿ ರಿಜಿಸ್ಟ್ರೇಷನ್ ಸಂಖ್ಯೆ ಪಡೆಯಿರಿ. ಅದನ್ನು ಸೆಬಿ ಅಥವಾ ಇತರೆ ಪ್ರಾಧಿಕಾರಗಳ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಿ. ಟ್ರೂಕಾಲರ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಆ ಸಂಖ್ಯೆಯನ್ನು ದೃಢೀಕರಿಸಿಯೂ ಪರಿಶೀಲಿಸಬಹುದು.
- ಈಗಾಗಲೇ ಹೇಳಿದಂತೆ ವಾಟ್ಸ್‌ಆ್ಯಪ್ ಅಥವಾ ಟೆಲಿಗ್ರಾಂಗಳಲ್ಲಿ ಇರುವ ಷೇರುಪೇಟೆ ಹೂಡಿಕೆ ಗ್ರೂಪ್‌ಗಳಿಂದ ದೂರವಿರಿ. ಈ ಗ್ರೂಪ್‌ಗಳಲ್ಲಿ ಹಂಚಿಕೊಂಡ ಲಿಂಕ್‌ಗಳನ್ನು ಒತ್ತಲೇ ಬೇಡಿ. ಅವು ಫಿಶಿಂಗ್ ಲಿಂಕ್‌ಗಳು ಆಗಿರಬಹುದು.
- ಯಾವುದೇ ಕಾರಣಕ್ಕೆ ಇತರರು ಕಳುಹಿಸುವ ಎಪಿಕೆ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಬಹುಮಾನ, ಲಾಟರಿ, ಸಾಲ ಅಥವಾ ಅತ್ಯಧಿಕ ರಿಟರ್ನ್ ದೊರಕುವ ಹೂಡಿಕೆಗಳ ಕುರಿತು ಬರುವ ಸಂದೇಶಗಳನ್ನು ನಂಬಬೇಡಿ.
- ನಿಮ್ಮ ಮೊಬೈಲ್‌ನ ಪಾಸ್‌ವರ್ಡ್ ಆಗಾಗ ಬದಲಾಯಿಸುತ್ತಿರಿ. ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐಗಳಿಗೆ ಎರಡು ಹಂತದ ದೃಢೀಕರಣಗಳನ್ನು ಹಾಕಿ ಭದ್ರತೆ ಹೆಚ್ಚಿಸಿಕೊಳ್ಳಿ. ಹಣದ ವಿಷಯದಲ್ಲಿ ಅಪರಿಚಿತರನ್ನು ನಂಬಲೇಬೇಡಿ.