Online Sextortion: ವಾಟ್ಸಪ್‌ ಸೆಕ್ಸ್‌ಟಾರ್ಶನ್ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಮಾರ್ಗದರ್ಶಿ
ಕನ್ನಡ ಸುದ್ದಿ  /  ಜೀವನಶೈಲಿ  /  Online Sextortion: ವಾಟ್ಸಪ್‌ ಸೆಕ್ಸ್‌ಟಾರ್ಶನ್ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಮಾರ್ಗದರ್ಶಿ

Online Sextortion: ವಾಟ್ಸಪ್‌ ಸೆಕ್ಸ್‌ಟಾರ್ಶನ್ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಮಾರ್ಗದರ್ಶಿ

Online sextortion: ಡಿಜಿಟಲ್‌ ಜಗತ್ತಿನಲ್ಲಿ ಆನ್‌ಲೈನ್‌ ವಂಚಕರು ನಾನಾ ಬಗೆಯಲ್ಲಿ ಅಮಾಯಕರನ್ನು ವಂಚಿಸುತ್ತಿದ್ದಾರೆ. ಇವುಗಳಲ್ಲಿ ವಾಟ್ಸಪ್‌ ಸೆಕ್ಸ್‌ಟಾರ್ಶನ್ ಕೂಡ ಒಂದಾಗಿದೆ. ಈ ವಂಚನೆಯಿಂದ ಸಾಕಷ್ಟು ಜನರು ಹಣ ಮಾತ್ರವಲ್ಲದೆ ಸಮಾಜದಲ್ಲಿ ಮಾನಕ್ಕೆ ಅಂಜಿ ಸ್ವಹತ್ಯೆ ಮಾಡಿಕೊಂಡಿರುವುದೂ ಇದೆ. ಈ ಡಿಜಿಟಲ್‌ ವಂಚನೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

Online Sextortion: ವಾಟ್ಸಪ್‌ ಸೆಕ್ಸ್‌ಟಾರ್ಶನ್ ಬಗ್ಗೆ ನಿಮಗೆಷ್ಟು ಗೊತ್ತು?
Online Sextortion: ವಾಟ್ಸಪ್‌ ಸೆಕ್ಸ್‌ಟಾರ್ಶನ್ ಬಗ್ಗೆ ನಿಮಗೆಷ್ಟು ಗೊತ್ತು?

Online sextortion: ಆನ್‌ಲೈನ್‌ ವಂಚಕರು ಪ್ರತಿನಿತ್ಯ ವಿನೂತನ ರೀತಿಯಲ್ಲಿ ಅಮಾಯಕರನ್ನು ವಂಚಿಸುತ್ತಿರುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಗೊತ್ತೇ ಇಲ್ಲದಂತೆ ಕ್ಷಣಾರ್ಧದಲ್ಲಿ ಆನ್‌ಲೈನ್‌ ವಂಚನೆಗೆ ತುತ್ತಾಗಿ ಬಿಡುತ್ತಾರೆ. ಮೊಬೈಲ್‌ನಲ್ಲಿ ಏನೋ ಒತ್ತುತ್ತಿದ್ದವರು "ಅಯ್ಯೋ ನನ್ನ ಬ್ಯಾಂಕ್‌ ಖಾತೆಯಿಂದ ಹತ್ತು ಸಾವಿರ ರೂಪಾಯಿ ಯಾರೋ ತೆಗೆದ್ರು" ಎಂದು ಬೊಬ್ಬೆ ಹೊಡೆಯುತ್ತಾರೆ. ಇನ್ನು ಕೆಲವು ವಂಚನೆಗಳಲ್ಲಿ ಸಿಬಿಐ, ಪೊಲೀಸ್‌ ಅಧಿಕಾರಿಗಳೆಂದು ಹೆದರಿಸಿ "ನಿಮ್ಮ ಹೆಸರಿಗೆ ಪಾರ್ಸೆಲ್‌ ಬಂದಿದೆ. ಅದರಲ್ಲಿ ಕಾನೂನು ಬಾಹಿರ ವಸ್ತುಗಳಿವೆ" ಎಂದೆಲ್ಲ ಹೆದರಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಆನ್‌ಲೈನ್‌ ಸೆಕ್ಸ್‌ಟಾರ್ಶನ್‌ ಎಂಬ ವಂಚನೆ ಬಹುಕಾಲದಿಂದ ನಡೆಯುತ್ತಿದೆ. ಈ ಆನ್‌ಲೈನ್‌ ಬೆದರಿಕೆ ಕುರಿತು ಹೆಚ್ಚಿನ ವಿವರ ತಿಳಿಯೋಣ.

ಫೇಸ್‌ಬುಕ್‌ನಲ್ಲಿ ಕೆಲವೊಮ್ಮೆ ಚಂದದ ಹುಡುಗಿಯ ಪ್ರೊಫೈಲ್‌ಗಳಿಂದ ಫ್ರೆಂಡ್‌ಶಿಪ್‌ ರಿಕ್ವೆಸ್ಟ್‌ ಬರುತ್ತದೆ. ಕೆಲವರು ಕುತೂಹಲದಿಂದ ಅಂತಹ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡುತ್ತಾರೆ. ಅದು ಅಸಲಿಯೋ ನಕಲಿಯೋ ಎಂದು ನೋಡುವುದಿಲ್ಲ. ಈ ರೀತಿ ಕನೆಕ್ಟ್‌ ಆದ ಚಂದದ ಹುಡುಗಿಯರ ಪ್ರೊಫೈಲ್‌ನಿಂದ "ಹಾಯ್‌" "ಐ ಲವ್‌ ಯು" ಎಂಬ ಸಂದೇಶ ಬಂದಾಗ ಕೆಲವು ಗಂಡಸರು ಉದ್ರೇಕಗೊಂಡು ಅವರ ಜತೆ ಸಂಭಾಷಣೆ ಮುಂದುವರೆಸಬಹುದು. ಈ ರೀತಿ ವಂಚನೆಗೆ ಒಳಗಾಗುವುದು ಗಂಡಸರು ಮಾತ್ರವಲ್ಲ. ಹೆಣ್ಣು ಮಕ್ಕಳಿಗೆ ಚಂದದ ಸಿನಿಮಾ ಹೀರೋನಂತೆ ಕಾಣುವ ಪ್ರೊಫೈಲ್‌ಗಳಿಂದ ಇದೇ ರೀತಿಯ ರಿಕ್ವೆಸ್ಟ್‌ ಬರಬಹುದು. ಸೋಷಿಯಲ್‌ ಮೀಡಿಯಾದಲ್ಲಿರುವ ಅಥವಾ ಆನ್‌ಲೈನ್‌ನಲ್ಲಿರುವ ಗೇ, ಲೆಸ್ಬಿಯನ್‌, ಎಸ್ಕರ್ಟ್‌ ಗ್ರೂಪ್‌ಗಳಿಂದಲೂ ಈ ರೀತಿ ಅಪರಿಚಿತರು ಸಂಪರ್ಕಕ್ಕೆ ಬರಬಹುದು. ಈ ರೀತಿ ಸಂಪರ್ಕ ಸಾಧಿಸುವ ವಂಚಕರು ಬಳಿಕ ವಾಟ್ಸಪ್‌ ಅಥವಾ ಇನ್ಯಾವುದೋ ವಿಡಿಯೋ ಕಾಲ್‌ ಅಪ್ಲಿಕೇಷನ್‌ನ ನಂಬರ್‌ ಕೇಳಬಹುದು. "ನಾವು ನಾನ್‌ವೆಜ್‌ ಚಾಟ್‌ ಮಾಡೋಣ" ಎಂದೆಲ್ಲ ಹೇಳಬಹುದು. "ನಿನ್ನ ಬಟ್ಟೆ ತೆಗೆದು ತೋರಿಸು" ಎಂದು ಹೇಳಬಹುದು. ಒಟ್ಟಾರೆ ಬಲಿಪಶುಗಳನ್ನು ಲೈಂಗಿಕವಾಗಿ ಉತ್ತೇಜಿಸಬಹುದು. ಈ ರೀತಿ ವಾಟ್ಸಪ್‌ ನಂಬರ್‌ ತೆಗೆದುಕೊಂಡು ವಿಡಿಯೋ ಕಾಲ್‌ ಮಾಡುತ್ತಾರೆ.

ವಾಟ್ಸಪ್‌ನಲ್ಲಿ ನೀವು ಆ ಅಪರಿಚಿತರ ಜತೆ ವಿಡಿಯೋ ಕಾಲ್‌ ಮಾಡುವಾಗ ಆ ಕಡೆಯಿಂದ ಬೆತ್ತಲೆ ಯುವತಿ (ಯಾವುದೋ ಬೆತ್ತಲೆ ವಿಡಿಯೋದಿಂದ ತೆಗೆದಿರುವುದು ಆಗಿರಬಹುದು) ಕಾಣಿಸಬಹುದು. ಆ ವಿಡಿಯೋ ಕಾಲ್‌ನ ಮೇಲ್ಬಾಗದಲ್ಲಿ ನಿಮ್ಮ ಫೋಟೋ ಇರುವ ಕಾರಣ ನೀವು ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿದಂತೆ ಅಥವಾ ಅಶ್ಲೀಲ ವಿಡಿಯೋ ನೋಡುತ್ತಿರುವಂತೆ ಕಾಣಿಸಬಹುದು. ಆ ಕಡೆಯಲ್ಲಿರುವ ವಂಚಕರು ಈ ರೀತಿ ಕಾಣಿಸುವ ಮೊಬೈಲ್‌ ಪರದೆಯ ಸ್ಕ್ರೀನ್‌ಶಾಟ್‌ ತೆಗೆಯುತ್ತಾರೆ. ಎಲ್ಲಾದರೂ ಆ ಕಡೆಯವರ ಮಾತು ಕೇಳಿ ನೀವು ನಿಮ್ಮ ಬೆತ್ತಲೆ ಫೋಟೋ ಕಳುಹಿಸಿಯೂ ಇರಬಹುದು. ಬಾತ್‌ರೂಂಗೆ ಹೋಗಿ ಚಡ್ಡಿ ತೆಗೆದು ತೋರಿಸು ಎಂದು ಆ ಕಡೆಯ ನಕಲಿ ಹುಡುಗಿ ಮೆಸೆಜ್‌ ಮಾಡಿದಾಗ ಹಾಗೇ ಮಾಡುವವರೂ ಇರುತ್ತಾರೆ. ಆ ಫೋಟೋ / ವಿಡಿಯೋ ಅವರಿಗೆ ಸಿಕ್ಕಮೇಲೆ ಅವರ ಅಸಲಿ ಆಟ ಶುರುವಾಗುತ್ತದೆ.

ಸ್ಕ್ರೀನ್‌ಶಾಟ್‌/ ಫೋಟೋ ದೊರಕಿದ ಬಳಿಕ ಆ ವಂಚಕರು ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸುತ್ತಾರೆ. " ಈ ಫೋಟೋವನ್ನು ನಿಮ್ಮ ಪರಿಚಿತರಿಗೆ ಕಳುಹಿಸಲಾಗುವುದು" ಎಂದು ಬೆದರಿಸಬಹುದು. ನಮಗೆ ಹಣ ನೀಡಿ ಎಂದು ಬೇಡಿಕೆ ಇಡಬಹುದು. ಸಾಕಷ್ಟು ಜನರು ಹಲವು ಸಾವಿರ ರೂಪಾಯಿಯಿಂದ ಲಕ್ಷಾಂತರ ರೂಪಾಯಿಯನ್ನು ಈ ರೀತಿಯ ವಂಚಕರಿಗೆ ನೀಡಿದ್ದಾರೆ.

ಅಷ್ಟು ಹೊತ್ತು ಯಾವುದೋ ಚಂದದ ಹುಡುಗ ಅಥವಾ ಹುಡುಗಿ ಎಂದುಕೊಂಡು ಚಾಟ್‌ ಮಾಡಿದವರ ಪರಿಸ್ಥಿತಿ ನಂತರ ಹೇಗಿರಬಹುದು?. ಈ ರೀತಿಯಾದ ಬಳಿಕ ಮಾನಕ್ಕೆ ಅಂಜಿ ಸ್ವಹತ್ಯೆ ಮಾಡಿಕೊಂಡವರು ಸಾಕಷ್ಟು ಜನರು ಇದ್ದಾರೆ. ಮೊದಲನೆಯದಾಗಿ ಇಂತಹ ವಂಚನೆ ಆಗದಂತೆ ನೋಡಿಕೊಳ್ಳಿ. ಎಲ್ಲಾದರೂ ಇಂತಹ ಖೆಡ್ಡಕ್ಕೆ ಬಿದ್ದರೂ ಭಯಪಡಬೇಡಿ. ಈ ಮುಂದೆ ನೀಡಿರುವ ಸಲಹೆಗಳನ್ನು ಗಮನಿಸಿ.

ವಾಟ್ಸಪ್‌ ಸೆಕ್ಸ್‌ಟಾರ್ಶನ್‌ನಿಂದ ಸುರಕ್ಷಿತವಾಗಿರುವುದು ಹೇಗೆ?

  1. ಯಾವುದೇ ಕಾರಣಕ್ಕೆ ವಂಚಕರಿಗೆ ಒಂದು ರೂಪಾಯಿಯನ್ನೂ ನೀಡಬೇಡಿ. ಅವರ ಯಾವುದೇ ಬೇಡಿಕೆಯನ್ನು ಒಪ್ಪಬೇಡಿ. ನೀವು ಒಮ್ಮೆ ಹಣ ನೀಡಿದರೆ ಮತ್ತೆ ಮತ್ತೆ ಹಣ ಕೇಳುತ್ತಾ ಇರುತ್ತಾರೆ. ಹತ್ತು ಸಾವಿರ ರೂಪಾಯಿ ಮೊದಲು ಕೇಳಬಹುದು. ಬಳಿಕ ಐವತ್ತು ಸಾವಿರ, ನಂತರ ಒಂದು ಲಕ್ಷ... ಇದು ಮುಗಿಯದ ಕಥೆಯಾಗುತ್ತದೆ.
  2. ಅವರ ಜತೆ ಚಾಟ್‌ ಮುಂದುವರೆಸಬೇಡಿ. ಮಾರುತ್ತರ ನೀಡಬೇಡಿ. ಅದು ಬ್ಲ್ಯಾಕ್‌ಮೇಲ್‌ ಸಂದೇಶ ಎಂದು ಗೊತ್ತಾದಾಗ ಮಾರುತ್ತರ ನೀಡುವುದನ್ನು ನಿಲ್ಲಿಸಿ. ಭಯಪಡಿಸುವಂತಹ ಹತ್ತಾರು ಸಂದೇಶಗಳು ಬರಬಹುದು. ನಿಮ್ಮ ಇತರೆ ವೈಯಕ್ತಿಕ ಫೋಟೋಗಳನ್ನು ನಿಮಗೇ ಕಳುಹಿಸಬಹುದು. ಯಾವುದೋ ಅಶ್ಲೀಲ ಫೋಟೋಗೆ ನಿಮ್ಮ ತಲೆ ಜೋಡಿಸಿದ ಫೋಟೋ ಬರಬಹುದು. ಯಾವುದೋ ಹುಡುಗಿ/ಹುಡುಗನ ಜತೆ ನೀವು ಇಂಟಿಮೆಟ್‌ ಮಾಡುತ್ತಿರುವ ಫೋಟೋಗಳು ಬರಬಹುದು. ಇವುಗಳನ್ನು ಎಲ್ಲರಿಗೂ ಕಳುಹಿಸುವೆ, ಯೂಟ್ಯೂಬ್‌ಗೆ ಹಾಕುವೆ, ಫೇಸ್‌ಬುಕ್‌ಗೆ ಹಾಕುವೆ ಎಂದೆಲ್ಲ ಆ ಕಡೆಯಿಂದ ಬೆದರಿಕೆ ಬರಬಹುದು. ಕೂಲ್‌ ಆಗಿರಿ, ಭಯಪಡಬೇಡಿ.
  3. ಅವರು ನಿಮಗೆ ವಂಚನೆ ಮಾಡುತ್ತಿರುವುದಕ್ಕೆ ಸಂಬಂಧಪಟ್ಟಂತೆ ಎಷ್ಟು ಸಾಧ್ಯವೋ ಅಷ್ಟು ಸಾಕ್ಷಿಗಳನ್ನು ಸಂಗ್ರಹಿಸಿ. ಅಂದರೆ, ಸ್ಕ್ರಿನ್‌ಶಾಟ್‌ ಇತ್ಯಾದಿಗಳನ್ನು ತೆಗೆಯಿರಿ. ಅಶ್ಲೀಲ ಸಂದೇಶವೆಂದು ಡಿಲೀಟ್‌ ಮಾಡಬೇಡಿ.
  4. ನಿಮ್ಮ ವಾಟ್ಸಪ್‌ಗೆ ಸ್ಟ್ರಾಂಗ್‌ ಪ್ರೈವೇಸಿ ಸೆಟ್ಟಿಂಗ್‌ ಆನ್‌ ಮಾಡಿ.
  5. ವಾಟ್ಸಪ್‌ ಅನ್ನು ಪ್ರೈವೇಟ್‌ ಮೋಡ್‌ನಲ್ಲಿ ಇಡಿ. ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವವರಿಗೆ ಮಾತ್ರ ಸಂದೇಶ ಕಳುಹಿಸುವಂತೆ ಇರಬೇಕು. ನೆನಪಿಡಿ, ಈ ವಂಚಕರು ನಿಮ್ಮಲ್ಲಿ ಅವರ ನಂಬರ್‌ ಅನ್ನು ಸೇವ್‌ ಮಾಡಿಡಲು ತಿಳಿಸಿರಬಹುದು. ಆ ಕಾಂಟ್ಯಾಕ್ಟ್‌ ಸಂಖ್ಯೆಯನ್ನು ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಿಂದ ತೆಗೆಯಿರಿ.
  6. ಮೊಬೈಲ್‌ಗೆ ಟು ಸ್ಟೆಪ್‌ ವೇರಿಫಿಕೇಷನ್‌ ಹಾಕಿ.
  7. ವಾಟ್ಸಪ್‌ನಲ್ಲಿ ಆ ಅಪರಿಚಿತ ಸಂಖ್ಯೆಯನ್ನು ಬ್ಲಾಕ್‌ ಮಾಡಿ ಮತ್ತು ವಾಟ್ಸಪ್‌ಗೆ ರಿಪೋರ್ಟ್‌ ಮಾಡಿ.

ಇದನ್ನೂ ಓದಿ: Digital Arrest Scam: ಡಿಜಿಟಲ್‌ ಅರೆಸ್ಟ್‌ ವಂಚನೆ ಬಗ್ಗೆ ನಿಮಗೆಷ್ಟು ಗೊತ್ತು? ಆನ್‌ಲೈನ್‌ ವಂಚಕರ ಈ ಖೆಡ್ಡಾಕ್ಕೆ ಬೀಳದಿರಿ

ಅಯ್ಯೋ ನನ್ನ ಮಾನ ಹೋಯ್ತು

ಕೆಲವೊಮ್ಮೆ ನಿಮ್ಮ ಪ್ರತಿಕ್ರಿಯೆ ದೊರಕದೆ ಇದ್ದಾಗ ಆ ವಂಚಕರು ನಂತರ ಮುಂದುವರೆಯುವುದಿಲ್ಲ. ಆ ಕಡೆಯ ವ್ಯಕ್ತಿ ಸ್ಟ್ರಾಂಗ್‌ ಇದ್ದಾನೆ ಎಂದು ತಿಳಿದುಕೊಳ್ಳುತ್ತಾರೆ. ನೀವು ಪುಕ್ಕಲ ಎಂದು ಗೊತ್ತಾದರೆ ಮಾತ್ರ ಭಯಪಡಿಸುವುದನ್ನು ಮುಂದುವರೆಸುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ವಂಚಕರ ಬಳಿ ನಿಮಗೆ ಮಾನಹಾನಿ ಮಾಡುವಂತಹ (ಇತರರ ಕಾಂಟ್ಯಾಕ್ಟ್‌ಗಳಿಗೆ ಕಳುಹಿಸುವಂತಹ ತಂತ್ರಜ್ಞಾನ, ಪರಿಣತಿ ಇರುವುದಿಲ್ಲ. ಸುಮ್ಮನೆ ಭಯಪಡಿಸುತ್ತಾರಷ್ಟೇ. ಅವರಿಗೆ ಫೇಸ್‌ಬುಕ್‌ ಮೂಲಕ ನೀವೇ ನಂಬರ್‌ ನೀಡಿರುತ್ತೀರಿ. ವಾಟ್ಸಪ್‌ನಲ್ಲಿ ಚಾಟ್‌ ಮಾಡಿ ಸ್ಕ್ರೀನ್‌ ಶಾಟ್‌ ಅಥವಾ ಫೋಟೋ ಪಡೆದಿರುತ್ತಾರೆ ಅಷ್ಟೇ.

ಕೆಲವು ವಂಚಕರಿಗೆ ಹ್ಯಾಕಿಂಗ್‌, ಮಾಲ್‌ವೇರ್‌ಗಳ ಜತೆ ನಂಟು ಇರುತ್ತದೆ. ಅವರು ನಿಮ್ಮ ಮೊಬೈಲ್‌ನಲ್ಲಿರುವ ಕಾಂಟ್ಯಾಕ್ಟ್‌ಗಳನ್ನು ಪಡೆದಿರಬಹುದು. ಈ ರೀತಿ ಆಗಬೇಕಾದರೆ ಅವರು ನಿಮಗೆ ಯಾವುದಾದರೂ ಲಿಂಕ್‌ ಅಥವಾ ಫೈಲ್‌ ಕಳುಹಿಸಿ ಮಾಲ್‌ವೇರ್‌ ಇನ್‌ಸ್ಟಾಲ್‌ ಮಾಡಬೇಕು. ಈ ರೀತಿ ಮಾಡಿದರೆ ಮಾತ್ರ ನಿಮ್ಮ ಫೋನ್‌ ಅನ್ನು ಹಿಡಿತಕ್ಕೆ ತೆಗದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿಯೂ ಭಯಪಟ್ಟು ಜೀವ ಕಳೆದುಕೊಳ್ಳಬೇಡಿ. ಜೀವ ಹೋದ್ರೆ ವಾಪಸ್‌ ಬರೋದಿಲ್ಲ. ಪರಿಚಿತರಿಗೆ ನಿಮ್ಮ ಸಂಖ್ಯೆಯಿಂದ ಅಶ್ಲೀಲ ವಿಡಿಯೋ ಫೋಟೋಗಳನ್ನು ಆ ಕಡೆಯವರು ತಿಳಿಸಿದರೆ ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವವರಿಗೆ ಮನವರಿಕೆ ಮಾಡಲು ಯತ್ನಿಸಿ. ನನ್ನ ಮೊಬೈಲ್‌ ಯಾರೋ ಹ್ಯಾಕ್‌ ಮಾಡಿದ್ದಾರೆ ಎಂದು ತಿಳಿಸಿ. ಸಾವಧಾನವಾಗಿದ್ದುಕೊಂಡು ತಕ್ಷಣ ಸಂಬಂಧಪಟ್ಟ ಪ್ರಾಧಿಕಾರ, ಸೈಬರ್‌ ಕ್ರೈಮ್‌ನರಿಗೆ ಮಾಹಿತಿ ನೀಡಿ. ಸೈಬರ್‌ಕ್ರೈಮ್‌ ಸಹಾಯವಾಣಿ ಸಂಖ್ಯೆ 1930 ಸಂಪರ್ಕಿಸಿ.

Whats_app_banner