ದೀಪಾವಳಿ 2024: ಹಬ್ಬದ ದಿನ ನೀವು ಹಚ್ಚಿದ ಮೇಣದಬತ್ತಿ ಬಹಳ ಹೊತ್ತು ಕರಗದೇ ಉರಿಯಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
ದೀಪಾವಳಿ ಬೆಳಕಿನ ಹಬ್ಬ, ಈ ಹಬ್ಬದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಕತ್ತಲೆಯನ್ನು ಹೊಡೆದೋಡಿಸುತ್ತೇವೆ. ದೀಪಾವಳಿಯಲ್ಲಿ ಹಣತೆ, ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಹಬ್ಬ ಆಚರಿಸುವುದು ವಾಡಿಕೆ. ಆದರೆ ಮೇಣದಬತ್ತಿ ಹಚ್ಚಿದ್ರೆ ಬೇಗ ಕರಗುತ್ತೆ ಅನ್ನೋರು ಈ ಟಿಪ್ಸ್ ಫಾಲೋ ಮಾಡಿ. ಬಹಳ ಹೊತ್ತು ಕ್ಯಾಂಡಲ್ ಕರಗದೇ ಉರಿಯುತ್ತಿರುತ್ತೆ.

ದೀಪಾವಳಿ ದಿನ ಮನೆಯ ಒಳಗೂ ಹೊರಗೂ ದೀಪ ಬೆಳಗಬೇಕು ಎನ್ನುವ ಸಂಪ್ರದಾಯವಿದೆ. ಇದು ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ಪಸರಿಸುವ ಹಬ್ಬ. ಈ ಹಬ್ಬದಂದು ಮನೆಯ ಸುತ್ತಲೂ ಹಣತೆ ಅಥವಾ ಮೇಣದ ಬತ್ತಿಯನ್ನು ಬೆಳಗಿಸಲಾಗುತ್ತದೆ. ದೀಪಾವಳಿ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಕ್ಯಾಂಡಲ್‌ಗಳು ಬಂದಿರುತ್ತವೆ.
ಸಾಮಾನ್ಯ ಮೇಣದಬತ್ತಿಗಳ ಹೊರತಾಗಿ ಪರಿಮಳದ ಮೇಣದಬತ್ತಿಗಳು, ಜೆಲ್ ಕ್ಯಾಂಡಲ್‌ಗಳು ಮತ್ತು ಸೋಯಾ ಕ್ಯಾಂಡಲ್‌ಗಳು ಸಹ ಲಭ್ಯವಿದೆ. ಆದರೆ ಎಷ್ಟೇ ದುಡ್ಡು ಕೊಟ್ಟು ತಂದರೂ ಮೇಣದಬತ್ತಿಯನ್ನು ಬೆಳಗಿದ ನಂತರ ಶೀಘ್ರದಲ್ಲೇ ಕರಗುತ್ತದೆ. ಇದರಿಂದ ಬೆಳಕು ಬಹಳ ಬೇಗ ಕಡಿಮೆಯಾಗುತ್ತದೆ. ಆದರೆ ಮೇಣದಬತ್ತಿ ಬಹಳ ಹೊತ್ತಿನವರೆಗೆ ಕರಗದೇ ಉರಿಯಬೇಕು ಅಂದ್ರೆ ಏನಪ್ಪಾ ಮಾಡೋದು ಅಂತ ಚಿಂತೆ ಮಾಡ್ಬೇಡಿ, ಈ ಕೆಲವು ಟಿಪ್ಸ್ ಫಾಲೋ ಮಾಡಿದ್ರೆ ಬಹಳ ಹೊತ್ತಿನವರೆಗೆ ಕರಗದೇ ಉರಿಯುತ್ತಿರುತ್ತೆ.
ಮೇಣದಬತ್ತಿಗಳನ್ನು ಫ್ರಿಜ್‌ನಲ್ಲಿ ಇಡಿ
ಮೇಣದಬತ್ತಿಗಳನ್ನು ಬೆಳಗಿಸುವ ಎರಡದರಿಂದ ನಾಲ್ಕು ಗಂಟೆಗಳ ಮೊದಲು ಫ್ರೀಜರ್‌ನಲ್ಲಿ ಇರಿಸಿ, ಅವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಫ್ರಿಜ್‌ನಲ್ಲಿ ಇಡುವುದನ್ನು ಮರೆಯಬೇಡಿ. ಈ ರೀತಿ ಮಾಡುವುದರಿಂದ ಮೇಣದಬತ್ತಿಗಳು ಹೆಚ್ಚು ಫ್ರೀಜ್ ಆಗುತ್ತವೆ ಮತ್ತು ಹೆಚ್ಚು ಕಾಲ ಉರಿಯುತ್ತವೆ. ಮೇಣದಬತ್ತಿಯು ತುಂಬಾ ದೊಡ್ಡದಾಗಿದ್ದರೆ ಅಥವಾ ದಪ್ಪವಾಗಿದ್ದರೆ, ಅದನ್ನು ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮೇಣದಬತ್ತಿಗಳು ಹೆಚ್ಚು ಹೊತ್ತು ಉರಿಯುತ್ತವೆ.
ಬತ್ತಿ ಚಿಕ್ಕ ಮಾಡಿ
ಮೇಣದಬತ್ತಿಯನ್ನು ಬೆಳಗಿಸುವಾಗ ಅದರ ಮೇಲೆ ಬತ್ತಿಯನ್ನು ಚಿಕ್ಕದಾಗಿ ಇರಿಸಿ. ಮೊದಮೊದಲು ದೊಡ್ಡ ಬತ್ತಿ ಇದ್ದರೆ ಜೋರಾಗಿ ಉರಿಯುತ್ತದೆ ಎಂದು ನಿಮಗೆ ಅನ್ನಿಸಬಹುದು. ಆದರೆ ದೊಡ್ಡ ಬತ್ತಿ ಇದ್ದರೆ ಶೀಘ್ರದಲ್ಲೇ ಇದು ಕರಗುತ್ತದೆ. ಹಾಗಾಗಿ ಬತ್ತಿಯನ್ನು ಚಿಕ್ಕ ಮಾಡಿ, ನಂತರ ಬೆಂಕಿ ಅಂಟಿಸಿ. ಇದರಿಂದ ಮೇಣದಬತ್ತಿ ನಿಧಾನಕ್ಕೆ ಕರಗುತ್ತದೆ.
ಗಾಳಿ ತಾಕದಂತೆ ನೋಡಿಕೊಳ್ಳಿ
ಮೇಣದ ಬತ್ತಿಗೆ ನೇರವಾಗಿ ಗಾಳಿ ತಾಕದಂತೆ ನೋಡಿಕೊಳ್ಳಿ. ಗಾಳಿ ರಭಸವು ಮೇಣದ ಬತ್ತಿಯನ್ನು ವೇಗವಾಗಿ ಕರಗುವಂತೆ ಮಾಡುತ್ತದೆ. ಕೆಲವೊಮ್ಮೆ ಗಾಳಿಯು ಮೇಣದ ಬತ್ತಿಯನ್ನು ನಂದಿಸಬಹುದು. ಆದರೆ ಗಾಳಿಯು ಕ್ಯಾಂಡಲ್ ನಂದಿಸದಿದ್ದರೆ, ಇದು ಬಹಳ ಬೇಗ ಕರಗುವಂತೆ ಮಾಡುತ್ತದೆ.
ಉಪ್ಪು ಹಾಕಿ
ಮೇಣದ ಬತ್ತಿ ಬೆಳಗಿಸಿದ ನಂತರ ಚಿಟಿಕೆ ಉಪ್ಪು ಉದುರಿಸಿ. ಹೀಗೆ ಮಾಡುವುದರಿಂದ ಮೇಣದ ಬತ್ತಿಗಳು ವೇಗವಾಗಿ ಕರಗುವುದಿಲ್ಲ, ಮಾತ್ರವಲ್ಲ ಬಹಳ ಹೊತ್ತು ಉರಿಯುತ್ತದೆ.
ಹೊರ ಪದರದ ಕವರ್ ತೆಗೆಯಿರಿ
ಕೆಲವೊಂದು ಮೇಣದ ಬತ್ತಿಯಲ್ಲಿ ಹೊರಗಿನಿಂದ ಪ್ಲಾಸ್ಟಿಕ್ ಕವರ್ ಅನ್ನು ಸುತ್ತಿ ಇರಿಸಲಾಗುತ್ತದೆ. ಇದನ್ನು ತೆಗೆಯದೇ ಮೇಣದ ಬತ್ತಿ ಬೆಳಗಿಸುವುದರಿಂದ ಬಹಳ ಹೊತ್ತು ಉರಿಯದೇ ಬೇಗನೆ ಕರಗಿ ಹೋಗುತ್ತದೆ. ಕ್ಯಾಂಡಲ್ ಬಹಳ ಹೊತ್ತು ಉರಿಯಬೇಕು ಎಂದರೆ ಹೊರಗಿನಿಂದ ಸುತ್ತಿದ ಪ್ಲಾಸ್ಟಿಕ್ ಕವರ್ ತೆಗೆಯಿರಿ.
ಈ ದೀಪಾವಳಿಗೆ ನಿಮ್ಮ ಮನೆಯಲ್ಲಿ ಹಚ್ಚುವ ಕ್ಯಾಂಡಲ್ ಬಹಳ ಹೊತ್ತಿನವರೆಗೆ ಕರಗದೇ ಉರಿಯುತ್ತಿರಬೇಕು ಎಂದರೆ ಈ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ. ಇದರಿಂದ ಬಹಳ ಹೊತ್ತು ಮನೆಯಲ್ಲಿ ಬೆಳಕಿನ ರಂಗು ತುಂಬಿರುತ್ತದೆ.
