ನವರಾತ್ರಿಗೆ ದೇವಿ ಸ್ತುತಿ: ಭಜನೆ ಮಾಡಿ, ಭಕ್ತಿಯಿಂದ ಕರಮುಗಿದು ಬೇಡಿ; ಶಕ್ತಿ ದೇವತೆಗಳ ವಿಶೇಷ ಭಕ್ತಿ ಗೀತೆ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ನವರಾತ್ರಿಗೆ ದೇವಿ ಸ್ತುತಿ: ಭಜನೆ ಮಾಡಿ, ಭಕ್ತಿಯಿಂದ ಕರಮುಗಿದು ಬೇಡಿ; ಶಕ್ತಿ ದೇವತೆಗಳ ವಿಶೇಷ ಭಕ್ತಿ ಗೀತೆ ಇಲ್ಲಿದೆ

ನವರಾತ್ರಿಗೆ ದೇವಿ ಸ್ತುತಿ: ಭಜನೆ ಮಾಡಿ, ಭಕ್ತಿಯಿಂದ ಕರಮುಗಿದು ಬೇಡಿ; ಶಕ್ತಿ ದೇವತೆಗಳ ವಿಶೇಷ ಭಕ್ತಿ ಗೀತೆ ಇಲ್ಲಿದೆ

ಶರನ್ನವರಾತ್ರಿಯ ಒಂಭತ್ತೂ ದಿನಗಳು ಒಂಭತ್ತು ದೇವಿಯ ಪೂಜೆಯ ಮಾಡಲಾಗುತ್ತದೆ. ಪ್ರತಿದಿನ ಭಕ್ತರ ಮನೆಯಲ್ಲಿ ಭಜನೆ, ಪೂಜೆ ಹಾಗೂ ಪ್ರಾರ್ಥನೆಗಳು ನಡೆಯುತ್ತವೆ. ನೀವೂ ಭಜನೆ ಮಾಡಿ, ಭಕ್ತಿಯಿಂದ ಕರಮುಗಿದು ಬೇಡಿ. ಶಕ್ತಿ ದೇವತೆಗಳ ವಿಶೇಷ ಭಕ್ತಿ ಗೀತೆಗಳು ಇಲ್ಲಿದೆ ನೋಡಿ.

ಶಕ್ತಿ ದೇವತೆಗಳ ವಿಶೇಷ ಭಕ್ತಿ ಗೀತೆಗಳು
ಶಕ್ತಿ ದೇವತೆಗಳ ವಿಶೇಷ ಭಕ್ತಿ ಗೀತೆಗಳು

ಶರನ್ನವರಾತ್ರಿಯ ಒಂಭತ್ತೂ ದಿನಗಳು ಒಂಭತ್ತು ದೇವಿಯ ಪೂಜೆಯ ಮಾಡಲಾಗುತ್ತದೆ. ಪ್ರತಿದಿನ ಭಕ್ತರ ಮನೆಯಲ್ಲಿ ದೇವಿಯನ್ನು ಸ್ತುತಿಸಲಾಗುತ್ತದೆ. ದೇವಿಯ ಹಾಡು, ಭಜನೆಗಳನ್ನು ಹಾಡಲಾಗುತ್ತದೆ. ನವರಾತ್ರಿಯಂದು ದೇವಿ ಭಜನೆ ಮಾಡಿ, ಭಕ್ತಿಯಿಂದ ಕರಮುಗಿದು ಬೇಡಿ. ನಿಮ್ಮ ಇಷ್ಟಾರ್ಥಗಳನ್ನು ಇಡೇರಿಸುವಂತೆ ಕೇಳಿಕೊಳ್ಳಿ. ಇಲ್ಲಿ ಮೂರು ಭಜನೆಗಳನ್ನು ನೀಡಿದ್ದೇವೆ. ನೀವು ರಾಗಬದ್ಧವಾಗಿ ಹಾಡಿ.

ಶೈಲಪುತ್ರಿ

ದಸರೆಯ ಸಮಯದಿ ಹಸಿರಿನ ಮಡಿಲಲಿ

ಹೊಸತನ ಪಸರಿಸಿದಳು ದಾತೆ

ವೃಷಭಾರೂಢಳೇ ತ್ರಿಶೂಲ ಧಾರಿಣಿ

ಅಸುರರ ಮಣಿಸಿದ ಶೈಲಸುತೇ

ಅರಿಶಿನ ವಸನದಿ ಶೋಭಿಸುತಿರುವಳೇ

ಪರಿಪೂರ್ಣಳೇ ಜಯ ಜಗನ್ಮಾತೆ

ಅರಿವನು ಮೂಡಿಸಿ ತರಳರ ಪಾಲಿಸು

ವರದಾಯಿನಿ ಶ್ರೀ ಶೈಲಸುತೇ

ಶಂಕರಿ ಶಾರ್ವರಿ ಶಿವನ ಮನೋಹರಿ

ಸಂಕಟ ನಾಶಿನಿ ಶ್ರೀ ಲಲಿತೆ

ಪಂಕಜ ನಯನಳೇ ತ್ರಿಭುವನ ವಂದ್ಯಳೇ

ಬಿಂಕದಿ ಶೋಭಿಪ ಶೈಲಸುತೇ

ಪರಮೇಶ್ವರಪ್ರಿಯೆ ಕರುಣಾಮಯಿಯೆ

ಸುರನರ ವಂದಿತೆ ಅಗಜಾತೆ

ವರದಾಯಿನಿಯೇ ಗಣಪನ ಜನನಿಯೇ

ಪುರವನು ಪಾಲಿಸು ಶೈಲಸುತೇ

ಮಂಡಿಯನೂರುತ ವಂದನೆ ಗೈಯುವೆ

ಭಂಡರ ದಮನಿಸು ಶ್ರೀ ಮಾತೆ

ಚಂಡಿಕೆ ರೂಪದಿ ದಂಡಿಸು ಪುಂಡರ

ಖಂಡಿಸಿ ದರ್ಪವ ಶೈಲಸುತೇ

ಚಾಮುಂಡೇಶ್ವರಿ

ನವರೂಪದಲಿ ಅವತಾರದಿ ಮೆರೆದ

ದುಷ್ಟರ ಸಂಹಾರಿಣಿ ಚಾಮುಂಡಿಯೆ

ನವರಾತ್ರಿಯಲಿ ಮನೆಮನೆಗೆ ಬರುವ

ದುರ್ಗೆಯ ಪ್ರತಿರೂಪವೇ ಶಂಕರಿಯೆ

ಲೋಕ ಕಂಟಕ ಅಸುರರ ಕೊಂದು

ಶಿಷ್ಟರನ ಸಲಹಿದೆಯ ಜಗದಲ್ಲಿ

ಲಕ್ಷ್ಮಿ ಪಾರ್ವತಿ ಸರಸ್ವತಿ ರೂಪವೆ

ಕಾಯುತಲಿಹರು ಈ ಲೋಕದಲ್ಲಿ

ನವ ದಿನಗಳ ಪೂಜೆಯ ಮಾಡುತ

ಘಮದ ಹೂವಿನ ಹಾರ ಮುಡಿಸುವೆ

ಅಕ್ಕಿಯ ಪಾಯಸ ನೈವೇದ್ಯ ಇಟ್ಟು

ಕರ್ಪೂರದಾರತಿಯನು ಬೆಳಗುವೆ

ಭಕ್ತಿಯಿಂದ ಕರಮುಗಿದು ಬೇಡುವೆ

ಲೋಕದ ಜನರನು ರಕ್ಷಿಸು ದೇವಿ

ಮಂಗಳವಾಗಲಿ ಬುವಿಯ ಜನತೆಗೆ

ಸಂಕಷ್ಟದಿಂದ ಕಾಪಾಡು ಮಹಾತಾಯಿ

ಚಾಮುಂಡಿ ಒಲಿಯಲು ಪಾಪ ಇರದು

ದುರ್ಗೆ ಹರಸಲು ದುರ್ಗತಿ ಸುಳಿಯದು

ಚೌಡೇಶ್ವರಿಗೆ ನಮಿಸಲು ಸಂಕಷ್ಟ ಬರದು

ಶರನ್ನವರಾತ್ರಿಯ ಈ ಸಂಭ್ರಮ ನಿಲ್ಲದು

ಮಧುಕೇಶವ ಭಾಗ್ವತ
ಯಲ್ಲಾಪುರ

ನವದುರ್ಗೆಗೆ ನಾ ನಮಿಸುವೆ

ನವರಾತ್ರಿಯಲಿ ಪೂಜೆಯಗೊಳ್ಳುವ ನವದುರ್ಗೆಗೆ ನಾ ನಮಿಸುವೆನು ಶ್ರೀದೇವಿಗೆ ಇಂದು ಮಣಿಯುವೆನು ||ಪ||

ಆದಿಮಾಯೆ ನೀ ಆದಿಶಕ್ತಿ ನಿನ್ನ ಆದರದಿಂದಲಿ ಪೂಜಿಸುವೆ ಸಾಧು ಸಜ್ಜನುತೆ ಅನುದಿನ ನಮ್ಮಯ ಬಾಧೆಯ ಹರಿಸೆಂದು ನಾ ಬೇಡುವೆ ||೧||

ಮಹಿಷ ಮರ್ದಿನಿ ಸಿಂಹ ವಾಹಿನಿ ಸುವರ್ಣ ಭೂಷಿತೆ ಶ್ರೀಮಾತೆ ಆಲಿಸಿ ಮೊರೆಯನು ಪಾಲಿಸು ನಮ್ಮನು ಅಘ ಸಂಹಾರಣಿ ಶ್ರೀ ಲಲಿತೆ ||೨||

ಶುಂಬ ನಿಶುಂಬರ ಅಂಬಿನೊಳಿರಿದ ಶಾಂಭವಿ ನಿನ್ನನು ಭಜಿಸುವೆನು ಶಂಭು ಪ್ರಿಯೆ ನೀ ಶಾಕಂಬರಿಯೆ ನಿನ್ನನೇ ನಂಬಿ ಬಂದಿಹೆನು ||೩||

ಚಂಡಿ ರೂಪವ ಧರಿಸುತ ಧರೆಯೊಳು ಚಂಡ ಮುಂಡರ ತುಂಡರಿಸಿ ಚಂಡಿಕೆ ನೀನೆ ಚಾಮುಂಡಾಂಬೆಯೇ ಭಂಡರನೆಲ್ಲ ಖಂಡಿಸಿದೆ ||೪||

ದುಷ್ಟರ ತರಿದೆ ನೀ ಕಷ್ಟ ಸಂಹಾರಣಿ ಇಷ್ಟವ ಸಲ್ಲಿಸಿ ಭಕುತರಿಗೆ ಅಷ್ಟಮಿ ತಿಥಿಯಲಿ ಪೂಜೆಯಗೊಳ್ಳುವೆ ದುರ್ಗಾಷ್ಟಮಿ ಶುಭ ವೇಳೆಯಲಿ.

ಜಯಲಕ್ಷ್ಮೀ ಕಲ್ಲೇಶ್ವರ

ಗಮನಿಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಯಲ್ಲಾಪುರ ಸಮಿತಿಯ ವಾಟ್ಸಾಪ್ ಗುಂಪಿನಲ್ಲಿ ಕವಿಗಳು ಹಂಚಿಕೊಂಡ ಸ್ವರಚಿತ ಕವಿತೆಗಳನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ

Whats_app_banner