ಸಂಧಿವಾತದಿಂದ ನಡೆಯೋಕೂ ಕಷ್ಟ ಆಗ್ತಿದ್ಯಾ? ಏನು ಬೇಕಾದರೂ ಮಾಡ್ತೀನಿ ಇದೊಂದು ಕಡಿಮೆ ಆಗ್ಲಿ ಅನ್ನೋರು ಹೀಗೆ ಮಾಡಿ
ಸಂಧಿವಾತ: ನಲವತ್ತು ದಾಟಿದರೆ ಸಾಕು ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದೇ ನಮಗೊಂದು ಸವಾಲು. ಸಾಮಾನ್ಯವಾಗಿ ಒಂದಿಲ್ಲೊಂದು ಸಮಸ್ಯೆ ಮೈಗಂಟಿಕೊಳ್ಳಲು ಆರಂಭಿಸುತ್ತದೆ. ಅದೇ ರೀತಿ ಈ ಸಂಧಿವಾತ ಎಂಬುದು ಹಲವರನ್ನು ಬಾಧಿಸುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಹಾರ ಏನಿದೆ ನೋಡಿ.
ಕೀಲು ನೋವಿನಿಂದ ತಾಳಲಾರದ ಯಾತನೆ ಅನುಭವಿಸುತ್ತಿರುವವರು ಹಲವರಿದ್ದಾರೆ. ದಿನನಿತ್ಯದ ಬದುಕು ಇದರಿಂದ ಕಠಿಣ ಎನಿಸುತ್ತಾ ಹೋಗುತ್ತದೆ. ಯಾಕೆಂದರೆ ಯಾವ ವಸ್ತು ಬೇಕಾದರೂ ಎದ್ದು ಹೋಗಿ ತೆಗೆದುಕೊಳ್ಳೋಣ ಎಂಬ ಮನಸ್ಥಿತಿ ಈ ನೋವಿನಿಂದ ಕಡಿಮೆ ಆಗುತ್ತದೆ. ಮೆಟ್ಟಿಲು ಹತ್ತಿ ಇಳಿಯುವಷ್ಟರಲ್ಲಿ ಜೀವ ಹೋಗಿ ಬಂದಂತಾಗುತ್ತದೆ. ಈ ಎಲ್ಲ ಕಾರಣಗಳಿಂದ ದಿನವೂ ಇದೊಂದು ದೊಡ್ಡ ಸಮಸ್ಯೆ ಎನಿಸಲು ಆರಂಭಿಸುತ್ತದೆ.
ನೀವು ಕೂಡ ಇದೇ ರೀತಿ ನೋವನ್ನು ಪ್ರತಿದಿನ ಅನುಭವಿಸುತ್ತಿರಬಹುದು. ಕೈಗಳು, ಮೊಣಕಾಲುಗಳು, ಸೊಂಟ ಮತ್ತು ಬೆನ್ನುಮೂಳೆ ಎಲ್ಲಾ ಕಡೆ ಈ ನೋವು ಕಾಣಿಸಿಕೊಳ್ಳುತ್ತದೆ. ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಾಗ ಈ ರೀತಿ ಆಗುತ್ತದೆ ಎಂದು ಹೇಳಲಾಗುತ್ತದೆ. ಕೃಷಿಕರಿಂದ ಹಿಡಿದು ಕಚೇರಿಯಲ್ಲಿ ಕೆಲಸ ಮಾಡುವವರಿಗೂ ಈ ಸಮಸ್ಯೆ ಕಾಡುತ್ತದೆ. ಅಲ್ಲದೆ ವಯಸ್ಸು ಕೂಡ ಇದಕ್ಕೆ ಅಷ್ಟಾಗಿ ಸಂಬಂಧಪಡುವುದಿಲ್ಲ. ಹೀಗಿರುವಾಗ ಮೊದಲು ನೀವು ನಿಮ್ಮ ದೇಹದ ತೂಕದ ಬಗ್ಗೆ ಹೆಚ್ಚಿನ ಕಾಳಜಿ ಕೊಡಬೇಕು. ತೂಕ ಹೆಚ್ಚಾದಾಗ ಕೀಲುಗಳ ಮೇಲೆ ಬಲ ಬೀಳುತ್ತದೆ. ಇದರಿಂದಾಗಿ ಸಮಸ್ಯೆ ಉಂಟಾಗುತ್ತದೆ.
ಐವತ್ತು ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಂಧಿವಾತವನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ಮುಂಚಿತವಾಗಿ ತೆಗೆದುಕೊಳ್ಳಬೇಕು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು.
ವ್ಯಾಯಾಮ ಮಾಡುವುದರಿಂದ ಮಂಡಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಕೂತಲ್ಲೇ ಕೂತಿರುವುದರಿಂದ ಸಹ ಈ ಸಮಸ್ಯೆ ಆಗುತ್ತದೆ. ದೇಹಕ್ಕೆ ವ್ಯಾಯಾಮದ ಅಗತ್ಯತೆ ಇರುತ್ತದೆ. ಮೊಣಕಾಲು ನೋವು ಇದ್ದರೆ ವ್ಯಾಯಾಮ ಮಾಡಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಮೊಣಕಾಲು ನೋವಿದ್ದರೂ ಕೂಡ ನೀವು ಕುಳಿತಲ್ಲೇ ಕೆಲವು ವ್ಯಾಯಾಮಗಳನ್ನು ಮಾಡಬಹುದು.
ಉದಾಹರಣೆಗೆ: ನೀವು ಮಂಚದ ಮೇಲೆ ಕುಳಿತುಕೊಂಡಿದ್ದೀರಿ ಎಂದಾದರೆ ಕಾಲನ್ನು ಕೆಳಕ್ಕೆ ಬಿಟ್ಟು ಹಿಂದೆ ಮುಂದೆ ಆಡಿಸಬೇಕು.
ಈಜು, ಸೈಕ್ಲಿಂಗ್ ಮತ್ತು ವಾಕಿಂಗ್ ಇವುಗಳನ್ನು ಮಾಡುವುದರಿಂದಲೂ ಕೀಲು ನೋವಿನ ಸಮಸ್ಯೆ ಕಾಡುವುದು ಕಡಿಮೆ.
ಹಸಿರು ತರಕಾರಿಗಳು, ಕಾಳುಗಳು, ಸೊಪ್ಪು ಇವುಗಳನ್ನು ಹೆಚ್ಚಾಗಿ ತಿನ್ನಬೇಕು ಇಲ್ಲವಾದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಕೊರತೆ ಆಗುತ್ತದೆ. ಇದೆಲ್ಲದರ ಬಗ್ಗೆಯೂ ನೀವು ಗಮನವಿಟ್ಟು ಮುಂಜಾಗ್ರತೆಯಿಂದಿದ್ದರೆ ಕೀಲು ನೋವು ಅಥವಾ ಸಂಧಿವಾತ ನಿಮಗೆ ಭಾದಿಸುವ ಸಾಧ್ಯತೆ ಕಡಿಮೆ ಇರುತ್ತದೆ.
ವಿಭಾಗ