Doctors Day 2022: ಕ್ಯಾನ್ಸರ್‌ನಿಂದ ಕಣ್ಣಿನ ರಕ್ಷಣೆ ಹೇಗೆ? ಡಾ. ಫೈರೋಝ್ ಸಂದರ್ಶನ
ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಎಚ್‌ಟಿ ಕನ್ನಡವು ಕಣ್ಣಿನ ಕ್ಯಾನ್ಸರ್ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ, ಸಂಶೋಧನೆ, ಚಿಕಿತ್ಸೆ ನೀಡುತ್ತಿರುವ ಡಾ. ಫೈರೋಜ್ ಪಿ. ಮಂಜಂದಾವಿಡ ಅವರ ಸಂದರ್ಶನ ನಡೆಸಿದೆ. ವಿಶೇಷವಾಗಿ ಕಣ್ಣಿನ ಕ್ಯಾನ್ಸರ್ ಚಿಕಿತ್ಸೆ ನೀಡಲು ದೇಶದಲ್ಲಿ ಅತ್ಯಲ್ಪ ತಜ್ಞರಿದ್ದು, ಅಂತಹ ಕೆಲವೇ ಕೆಲವು ವೈದ್ಯರಲ್ಲಿ ಡಾ. ಫೈರೋಜ್ ಪಿ. ಮಂಜಂದಾವಿಡ ಒಬ್ಬರಾಗಿದ್ದಾರೆ.
ಸುಂದರವಾದ ಜಗತ್ತನ್ನು ನೋಡಲು ಕಣ್ಣು ಅತ್ಯವಶ್ಯಕ. ಕೆಲವೊಮ್ಮೆ ವಿಶೇಷವಾಗಿ ಮಕ್ಕಳಲ್ಲಿ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುವುದುಂಟು. ಮಕ್ಕಳಲ್ಲಿ ಕಣ್ಣು ಮಸುಕಾಗುವುದು, ಕಣ್ಣು ನೋವು ಉಂಟಾದಾಗ ಸರಿಯಾದ ಚಿಕಿತ್ಸೆ ಪಡೆಯದೆ ಅಥವಾ ಸ್ಥಳೀಯ ಆಸ್ಪತ್ರೆಯಲ್ಲಿ ನೀಡುವ ಡ್ರಾಪ್‌ಗಳ ಮೊರೆ ಹೋಗುತ್ತಾರೆ. ಪುಟ್ಟ ಮಗುವಿನ ಕಣ್ಣಿನ ತೊಂದರೆಯನ್ನು ಆರಂಭದಲ್ಲಿ ಕಡೆಗಣಿಸುವುದು ತಪ್ಪು. ಮಗುವಿನಲ್ಲಿರುವ ಕಣ್ಣಿನ ತೊಂದರೆ ಆರಂಭಿಕ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಮುಂದೊಂದು ದಿನ ಮಗುವಿನ ಒಂದು ಅಥವಾ ಎರಡೂ ಕಣ್ಣನ್ನು ತೆಗೆಯಬೇಕಾಗಬಹುದು. ಆ ಮಗು ಜೀವನಪೂರ್ತಿ ಅಂಧತ್ವ ಎದುರಿಸಬೇಕಾಗಬಹುದು. ಇಂತಹ ಅಪಾಯಕ್ಕೆ ಈಡಾಗುವ ಬದಲು ಮಕ್ಕಳ ಕಣ್ಣಿನ ಕುರಿತು ಆರಂಭದಲ್ಲಿಯೇ ಜಾಗೃತಿ ವಹಿಸಿ, ಚಿಕಿತ್ಸೆ ನೀಡಿದರೆ ಮಕ್ಕಳನ್ನು ಕಣ್ಣಿನ ಕ್ಯಾನ್ಸರ್‌ನಿಂದ ರಕ್ಷಿಸಬಹುದು ಎನ್ನುತ್ತಾರೆ ಬೆಂಗಳೂರಿನ ಕಣ್ಣಿನ ಕ್ಯಾನ್ಸರ್ ತಜ್ಞೆ ಡಾ. ಫೈರೋಜ್ ಪಿ. ಮಂಜಂದಾವಿಡ.
ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಎಚ್‌ಟಿ ಕನ್ನಡವು ಕಣ್ಣಿನ ಕ್ಯಾನ್ಸರ್ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ, ಸಂಶೋಧನೆ, ಚಿಕಿತ್ಸೆ ನೀಡುತ್ತಿರುವ ಡಾ. ಫೈರೋಜ್ ಪಿ. ಮಂಜಂದಾವಿಡ ಅವರ ಸಂದರ್ಶನ ನಡೆಸಿದೆ. ವಿಶೇಷವಾಗಿ ಕಣ್ಣಿನ ಕ್ಯಾನ್ಸರ್ ಚಿಕಿತ್ಸೆ ನೀಡಲು ದೇಶದಲ್ಲಿ ಅತ್ಯಲ್ಪ ತಜ್ಞರಿದ್ದು, ಅಂತಹ ಕೆಲವೇ ಕೆಲವು ವೈದ್ಯರಲ್ಲಿ ಡಾ. ಫೈರೋಜ್ ಪಿ. ಮಂಜಂದಾವಿಡ ಒಬ್ಬರಾಗಿದ್ದಾರೆ. ಬೆಂಗಳೂರಿನ ಹಲಸೂರ್‌ನಲ್ಲಿ ಹೋರಸ್ ಸ್ಪೆಷಲಿಟಿ ಐಕೇರ್ ನಡೆಸುತ್ತಿರುವ ಇವರ ಆಸ್ಪತ್ರೆಗೆ ರಾಜ್ಯದ ಮೂಲೆಮೂಲೆಗಳಿಂದ ಚಿಕಿತ್ಸೆಗೆ ಜನರು ಬರುತ್ತಿದ್ದಾರೆ. ಕಣ್ಣಿನ ಕ್ಯಾನ್ಸರ್ ಇದ್ದರೆ ರಾಜ್ಯ, ದೇಶದ ಹಲವು ವೈದ್ಯರುಗಳು ಇವರನ್ನು ಶಿಫಾರಸು ಮಾಡುತ್ತಿದ್ದಾರೆ. ಕಣ್ಣನ್ನು ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಅಮೂಲ್ಯ ಮಾಹಿತಿಯನ್ನು ಇಲ್ಲಿ ಡಾ. ಫೈರೋಜ್ ಪಿ. ಮಂಜಂದಾವಿಡ ನೀಡಿದ್ದಾರೆ.
ಮೊದಲಿಗೆ ನಿಮ್ಮ ಪರಿಚಯ ಹೇಳಿ
- ಆಕ್ಯುಲೊಪ್ಲಾಸ್ಟಿ, ಆರ್ಬಿಟ್, ಆಕ್ಯುಲರ್ ಆಂಕೊಲಜಿ ಮತ್ತು ಅಥೆಟಿಕ್ಸ್ ಸ್ಪೆಷಲಿಸ್ಟ್. ಕಣ್ಣಿನ ಪ್ಲಾಸ್ಟಿಕ್ ಸರ್ಜರಿ ಮತ್ತು ಕಣ್ಣನ ಕ್ಯಾನ್ಸರ್ ಚಿಕಿತ್ಸೆಗೆ ಭಾರತ ಮತ್ತು ಅಮೆರಿಕದಲ್ಲಿ ತರಬೇತಿ ಪಡೆದಿದ್ದೇನೆ. Ocular Oncology ಕುರಿತಾದ ಆಸಕ್ತಿಯು ನನಗೆ ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಬೇಡಿಕೆ ಹೆಚ್ಚಿಸಿದೆ. ಕೇರಳದ ಕಣ್ಣೂರಿನಲ್ಲಿ ಹುಟ್ಟಿದ್ದು, ಸೇಂಟ್ ತೇರೇಸಾ ಆಂಗ್ಲೋ ಇಂಡಿಯನ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ತ್ರಿಶೂರ್‌ನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಂಡರ್‌ಗ್ರಾಜುಯೇಟ್ ಮೆಡಿಕಲ್ ಪದವಿ, ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಪೋಸ್ಟ್ ಗ್ರಾಜುವೇಷನ್ ಮೆಡಿಕಲ್ ಡಿಗ್ರಿ ಪಡೆದಿದ್ದೇನೆ. ಸರಕಾರದ ಮೆಡಿಕಲ್ ಕಾಲೇಜಿನಲ್ಲಿ ಓದಿದರೂ ಟಾಪ್ ರಾಂಕ್ ಪಡೆದಿದ್ದೇನೆ. ಬಡತನವಿದ್ದರೂ ಸತತ ಪರಿಶ್ರಮ ಪಟ್ಟರೆ ಯಾರೂ ಬೇಕಾದರೂ ಏನೂ ಬೇಕಾದರೂ ಸಾಧನೆ ಮಾಡಬಹುದು. ನಂತರ ಕಣ್ಣಿನ ಸ್ಪೆಷಲಿಟಿ ತರಬೇತಿಯನ್ನು ಅಮೆರಿಕದ ಪಿಲಿಡೆಲ್ಫಿಯಾದಲ್ಲಿರುವ ವಿಲ್ಸ್ ಐ ಹಾಸ್ಪಿಟಲ್ ಮತ್ತು ಭಾರತದ ಎಲ್‌ವಿ ಪ್ರಸಾದ್ ಐ ಇನ್‌ಸ್ಟಿಟ್ಯೂಟ್‌ನಲ್ಲಿ ಪಡೆದಿದ್ದೇನೆ. ಇವೆರೂ ಪ್ರತಿಷ್ಠಿತ ತರಬೇತಿ ಸಂಸ್ಥೆಗಳು.
ನೀವು ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ್ದೀರಿ, ಡ್ಯಾನ್ಸರ್ ಅಂತೆ, ನಿಮ್ಮ ಇತರೆ ಆಸಕ್ತಿಗಳು ಯಾವುವು?
ಬಾಲ್ಯದಿಂದ ನಾನು ಕೇವಲ ಪುಸ್ತಕದ ಹುಳು ಆಗಿರಲಿಲ್ಲ. ಎಲ್ಲಾ ರೀತಿಯ ಚಟುವಟಿಕೆಗಳ ಕುರಿತು ಆಸಕ್ತಿಯಿತ್ತು. ಶಾಲಾ ದಿನಗಳಲ್ಲಿ ಎನ್‌ಸಿಸಿ ಜೂನಿಯರ್ ವಿಂಗ್ ನ್ಯಾಷನಲ್ ಬೆಸ್ಟ್ ಕೆಡೆಟ್ ಆಗಿದ್ದೆ. ಎನ್‌ಸಿಸಿ-ಕೆನಡಾ ವಲ್ಡ್ ಯೂತ್ ಎಕ್ಸ್‌ಚೇಂಜ್ ಕಾರ್ಯಕ್ರಮದಲ್ಲಿ ಭಾರತದ ಮಿನಿ ರಾಯಭಾರಿಯಾಗಿ ಭಾರತವನ್ನು ಪ್ರತಿನಿಧಿಸಿದ್ದೆ. ನಾನು ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದೇನೆ. ೨೦೦೧ರಲ್ಲಿ ಮಿಸ್ ಕೇರಳ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದೆ. ಡ್ಯಾನ್ಸ್ ಕೂಡ ನನ್ನ ಇನ್ನೊಂದು ಆಸಕ್ತಿಯ ಕ್ಷೇತ್ರ, ಜಿಮ್, ಏರೋಬಿಕ್ಸ್ ಇತ್ಯಾದಿಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಪ್ರತಿದಿನ ಲವಲವಿಕೆಯಿಂದ ಖುಷಿಖುಷಿಯಿಂದ ಎಲ್ಲರೂ ಇರಬೇಕು. ಇದಕ್ಕಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
ಸಂಶೋಧನಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದೀರಿ, ರಿಸರ್ಚ್‌ನಲ್ಲಿ ನಿಮ್ಮ ಪ್ರಮುಖ ಸಾಧನೆಗಳೇನು?
ವಿವಿಧ ಅಕಾಡೆಮಿಕ್, ರಿಸರ್ಚ್ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅಮೆರಿಕನ್ ಅಕಾಡೆಮಿ ಆಫ್ ಆಪ್ತಾಲ್ಮಾಲಜಿ ಮತ್ತು ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ಆಪ್ತಾಲ್ಮಾಜಿಗಳಿಂದ ಸಂಶೋಧನೆಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ದೊರಕಿವೆ. ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ಆಪ್ತಾಲ್ಮಿಕ್ ಆಂಕಾಲಜಿ ಪೆಥಾಲಜಿಗೆ ಈಗ ವೈಸ್ ಪ್ರಸಿಡೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಆಲ್ ಇಂಡಿಯಾ ಆಪ್ತಾಲ್ಮಾಜಿ ಸೊಸೈಟಿಯ ಸೈಂಟಿಫಿಕ್ ಕಮಿಟಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ಹೀಗೆ ಕಣ್ಣಿನ ಚಿಕಿತ್ಸೆ, ಕಣ್ಣಿನ ಕುರಿತು ಜಾಗೃತಿ, ಸಂಶೋಧನೆ ಇತ್ಯಾದಿ ತುಂಬಾ ವಿಷಯಗಳನ್ನು ಹೇಳಬಹುದು. ಹೆಚ್ಚು ಹೇಳಿದರೆ ನಿಮಗೆ ಬೋರ್ ಆಗಬಹುದು. ನಾನೇನು ಸಾಧಕಿ ಎಂದು ಹೇಳುತ್ತಿಲ್ಲ. ಜನರು ತಮ್ಮ ಕಣ್ಣಿನ ಕುರಿತು ಎಚ್ಚರಿಕೆ ಹೊಂದಿರಬೇಕು. ಜನರಿಗೆ ಉಪಯೋಗವಾಗುವಂತಹ ಕಣ್ಣಿನ ಕಾಳಜಿ ವಿಷಯಗಳ ಕುರಿತು ಮಾತನೋಡೋಣ.
ಮಕ್ಕಳಲ್ಲಿ ಏನಿದು ಕಣ್ಣಿನ ಕ್ಯಾನ್ಸರ್? ಇದನ್ನು ಗುರುತಿಸುವುದು ಹೇಗೆ? ಈ ಕುರಿತು ಮಾಹಿತಿ ನೀಡಿ
ಕಣ್ಣಿನ ಕ್ಯಾನ್ಸರ್‌ನಿಂದ ಅಂಧತ್ವ ಕಡಿಮೆ ಮಾಡುವುದು ಮತ್ತು ಮರಣ ಪ್ರಮಾಣ ಕಡಿಮೆ ಮಾಡುವುದು ನನ್ನ ಪ್ರಮುಖ ಉದ್ದೇಶ. ಈ ಕುರಿತು ಭಾರತಿಯರಲ್ಲಿ ಮಾಹಿತಿಯ ಕೊರತೆಯಿದೆ. ಪುಟ್ಟ ಮಗುವಿದ್ದಾಗಲೇ ಕಣ್ಣಿನ ತೊಂದರೆಗಳು ಕಾಣಿಸುತ್ತವೆ. ಹೆತ್ತವರು ಕಣ್ಣಿನ ತೊಂದರೆಗಳನ್ನು ನೆಗ್ಲೆಕ್ಟ್ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಕಣ್ಣಿನ ತೊಂದರೆಗಳು ಕ್ಯಾನ್ಸರ್ ಆಗಿ ಮಕ್ಕಳ ಕಣ್ಣು ತೆಗೆಯಬೇಕಾಗುತ್ತದೆ. ಅವರ ಆಯಸ್ಸೂ ಕಡಿಮೆಯಾಗುತ್ತದೆ. ಎಲ್ಲಾದರೂ ಮೊದಲೇ ಎಚ್ಚರವಹಿಸಿದ್ದರೆ ಕಣ್ಣಿನ ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ನೀಡಿ ಆ ಮಕ್ಕಳ ಜೀವನ ಉಳಿಸಬಹುದಾಗಿದೆ.
ಕಣ್ಣಿನ ಕ್ಯಾನ್ಸರ್ ಗುಣಪಡಿಸಬಹುದೇ?
ಆರಂಭದಲ್ಲಿಯೇ ಗುರುತಿಸಿದರೆ ಮತ್ತು ಸೂಕ್ತ ಚಿಕಿತ್ಸೆ ನೀಡಿದರೆ Retinoblastoma ಎಂದು ಹೇಳುವ ಈ ತೊಂದರೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ, ನಮ್ಮಲ್ಲಿ ಬಹುತೇಕರು ಚಿಕಿತ್ಸೆಗೆ ಬರುವಾಗಲೇ ತಡವಾಗಿರುತ್ತದೆ. ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಬಡವರ ಮಕ್ಕಳು ವಿವಿಧ ದೇಣಿಗೆ, ದತ್ತಿ ಸಂಸ್ಥೆಗಳ ನೆರವಿನಿಂದಲೂ ಇದಕ್ಕೆ ಚಿಕಿತ್ಸೆ ಪಡೆಯುತ್ತಾರೆ. ಮಕ್ಕಳಲ್ಲಿ ಆರಂಭದಲ್ಲಿ ಕಾಣಿಸುವ ಸಣ್ಣಪುಟ್ಟ ಕಣ್ಣಿನ ತೊಂದರೆಗಳನ್ನು ಕಡೆಗಣಿಸಬೇಡಿ. ಒಳ್ಳೆಯ ಕಣ್ಣಿನ ವೈದ್ಯರಿಗೆ ತೋರಿಸಿ. ಕಣ್ಣಿನ ಕ್ಯಾನ್ಸರ್ ಕುರಿತು ಸ್ಥಳೀಯ ವೈದ್ಯರಿಗೆ ಮಾಹಿತಿಯ ಕೊರತೆ ಇರಬಹುದು. ಹೀಗಾಗಿ, ಸರಿಯಾದ ತಜ್ಞರಿಗೆ ತೋರಿಸಿ. ಕಣ್ಣನ್ನು ಕಾಪಾಡಿಕೊಳ್ಳಿ. ಪ್ರತಿನಿತ್ಯ ಕಣ್ಣು ಕಳೆದುಕೊಳ್ಳುವ ಮಕ್ಕಳನ್ನು ನೋಡಿದಾಗ ಈ ಕುರಿತು ಜನರಿಗೆ ಮಾಹಿತಿಯ ಕೊರತೆ ಇರುವುದು ಗೊತ್ತಾಗುತ್ತದೆ.
ಕಣ್ಣಿನ ತೊಂದರೆ ಗುರುತಿಸುವುದು ಹೇಗೆ?
ಮಗುವಿನ ಕಣ್ಣಿನಲ್ಲಿ ಬಿಳಿ ಗುರುತು ಇದ್ದರೆ ಅದು ಕಣ್ಣಿನೊಳಗಿನ ಕ್ಯಾನ್ಸರ್‌ನ ಮುನ್ಸೂಚನೆ ಆಗಿರಬಹುದು. ಇಂತಹ ಬಿಳಿ ಗುರುತು ಕಂಡುಬಂದರೆ ತಕ್ಷಣ ಕಣ್ಣಿನ ತಜ್ಞರನ್ನು ಭೇಟಿಯಾಗಿ. ಇಂತಹ ಗುರುತುಗಳು ಕಣ್ಣಿನ ಐಬಾಲ್‌ನ ಒಳಗೆ ಅಥವಾ ಹೊರಭಾಗದಲ್ಲಿಯೂ ಇರಬಹುದು. ಮಕ್ಕಳಲ್ಲಿ ಮತ್ತು ದೊಡ್ಡವರ ಕಣ್ಣಿನ ಯಾವುದೇ ಭಾಗದಲ್ಲಿಯೂ ಕಣ್ಣಿನ ಕ್ಯಾನ್ಸರ್ ಇರಬಹುದು. ಕಣ್ಣಿನಲ್ಲಿ ಅಸಹಜವಾಗಿ ಯಾವುದೇ ಬಾವು, ಉಬ್ಬು, ಬೆಳವಣಿಗೆಗಳು ಇದ್ದರೆ ತಕ್ಷಣ ನೇತ್ರವೈದ್ಯರನ್ನು ಭೇಟಿಯಾಗಿ. ಭಾರತ ಸೇರಿದಂತೆ ಕಡಿಮೆ ಆದಾಯದವರು ಇರುವ ದೇಶಗಳಲ್ಲಿ ಕಣ್ಣಿನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ವೈದ್ಯಕೀಯ ವೃತ್ತಿಪರರು, ಸಂಘಸಂಸ್ಥೆಗಳು ಇಂತಹ ರೋಗಿಗಳಿಗೆ ನೆರವಾಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಜಾಗೃತಿ ಅತ್ಯವಶ್ಯ.
ಕಣ್ಣಿನ ಕ್ಯಾನ್ಸರ್‌ಗೆ ಎಲ್ಲರಿಗೂ ಚಿಕಿತ್ಸೆ ಪಡೆಯುವ ಶಕ್ತಿ ಇರುವುದಿಲ್ಲ. ಇದಕ್ಕಾಗಿ ನಾನು ಭಾರತ ಮತ್ತು ವಿದೇಶದ ವಿವಿಧ ಚಾರಿಟೇಬಲ್ ಟ್ರಸ್ಟ್‌ಗಳ ಭಾಗವಾಗಿದ್ದೇನೆ. ಕಣ್ಣಿನ ಚಿಕಿತ್ಸೆ ಮತ್ತು ಸಂಶೋಧನೆಯಲ್ಲಿ ಜಾಗತಿಕ ನಾಯಕತ್ವ ಪಡೆಯುವ ಶಕ್ತಿ ಭಾರತಕ್ಕಿದೆ. ಇದಕ್ಕೆ ಸರಕಾರದ ಬೆಂಬಲ ಬೇಕು ಎಂದು ಡಾ. ಫೈರೋಜ್ ಪಿ. ಮಂಜಂದಾವಿಡ ಅಭಿಪ್ರಾಯಪಟ್ಟಿದ್ದಾರೆ. ಕಣ್ಣಿನ ಕ್ಯಾನ್ಸರ್ ರೋಗಚಿಕಿತ್ಸೆ ಮತ್ತು ಜಾಗೃತಿ ಮೂಡಿಸುವಲ್ಲಿ ಸಕ್ರೀಯರಾಗಿರುವ ಡಾ. ಫೈರೋಜ್ ಪಿ. ಮಂಜಂದಾವಿಡ ಅವರಿಗೆ ಕನ್ನಡ ಹಿಂದೂಸ್ತಾನ್ ಟೈಮ್ಸ್ ವತಿಯಿಂದ ವೈದ್ಯರ ದಿನದ ಶುಭಾಶಯಗಳು.
ವಿಭಾಗ