ಬೇಸಿಗೆ ಸಮೀಪಿಸುತ್ತಿದೆ, ಹವಾಮಾನ ಬದಲಾವಣೆ ನಿರ್ಲಕ್ಷ್ಯ ಬೇಡ; ಆರೋಗ್ಯ ಕಾಳಜಿಗೆ ಹೀಗಿರಲಿ ಆಹಾರ ಕ್ರಮ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆ ಸಮೀಪಿಸುತ್ತಿದೆ, ಹವಾಮಾನ ಬದಲಾವಣೆ ನಿರ್ಲಕ್ಷ್ಯ ಬೇಡ; ಆರೋಗ್ಯ ಕಾಳಜಿಗೆ ಹೀಗಿರಲಿ ಆಹಾರ ಕ್ರಮ

ಬೇಸಿಗೆ ಸಮೀಪಿಸುತ್ತಿದೆ, ಹವಾಮಾನ ಬದಲಾವಣೆ ನಿರ್ಲಕ್ಷ್ಯ ಬೇಡ; ಆರೋಗ್ಯ ಕಾಳಜಿಗೆ ಹೀಗಿರಲಿ ಆಹಾರ ಕ್ರಮ

ಇದೀಗ ಚಳಿಗಾಲ ಮುಗಿಯುವ ಹಂತದಲ್ಲಿದ್ದು, ಬೇಸಿಗೆಯ ಆಗಮನಕ್ಕೆ ಕೆಲವೇ ದಿನಗಳು ಬಾಕಿಯಿದೆ. ಈ ಸಮಯದಲ್ಲಿಋತುಮಾನದ ಆಹಾರಗಳನ್ನು ಸೇವಿಸುವುದರಿಂದ ದೇಹವು ಬದಲಾಗುತ್ತಿರುವ ತಾಪಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಿದ್ದರೆಯಾವ ಹಣ್ಣು-ತರಕಾರಿಗಳನ್ನು ತಿನ್ನುವುದು ಉತ್ತಮ ಎಂಬ ಬಗ್ಗೆ ಇಲ್ಲಿದೆ ವಿವರ.

ಬೇಸಿಗೆ ವಾತಾವರಣಕ್ಕೆ ಈ ಹಣ್ಣು-ತರಕಾರಿಗಳು ಡಯೆಟ್‌ನಲ್ಲಿರಲಿ
ಬೇಸಿಗೆ ವಾತಾವರಣಕ್ಕೆ ಈ ಹಣ್ಣು-ತರಕಾರಿಗಳು ಡಯೆಟ್‌ನಲ್ಲಿರಲಿ (Canva)

ಋತು ಬದಲಾದಂತೆ, ದೇಹ ಮತ್ತು ಮನಸ್ಸು ಎರಡನ್ನೂ ಪೋಷಿಸುವ ಹಣ್ಣು, ತರಕಾರಿಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಪ್ರಕೃತಿಯು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೆಯಾಗುವ ಆಹಾರಗಳನ್ನು ಒದಗಿಸುತ್ತದೆ. ಇದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸಿಗುತ್ತವೆ. ಚಳಿಗಾಲದಿಂದ ಬೇಸಿಗೆಗೆ ಪರಿವರ್ತನೆಯ ಸಮಯದಲ್ಲಿ, ಋತುಮಾನದ ಆಹಾರಗಳನ್ನು ಸೇವಿಸುವುದರಿಂದ ದೇಹವು ಬದಲಾಗುತ್ತಿರುವ ತಾಪಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು, ಅಲರ್ಜಿ ಸೋಂಕುಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದೀಗ ಚಳಿಗಾಲ ಮುಗಿಯುವ ಹಂತದಲ್ಲಿದ್ದು, ಬೇಸಿಗೆಯ ಆಗಮನಕ್ಕೆ ಕೆಲವೇ ದಿನಗಳು ಬಾಕಿಯಿದೆ. ಹೀಗಾಗಿ ಚಳಿಗಾಲದಿಂದ ಬೇಸಿಗೆಗೆ ಪರಿವರ್ತನೆಯಾಗುವಾಗ ಯಾವ ಹಣ್ಣು-ತರಕಾರಿಗಳನ್ನು ತಿನ್ನುವುದು ಉತ್ತಮ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಚಳಿಗಾಲದಿಂದ ಬೇಸಿಗೆಗೆ ಪರಿವರ್ತನೆಯಾಗುವಾಗ ತಿನ್ನಲು ಉತ್ತಮವಾದ ಹಣ್ಣು-ತರಕಾರಿಗಳು

ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣು ಶೇ. 90ಕ್ಕಿಂತ ಹೆಚ್ಚು ನೀರಿನ ಅಂಶದಿಂದ ಸಮೃದ್ಧವಾಗಿದೆ. ಮಾರ್ಚ್ ತಿಂಗಳಿನಿಂದ ಈ ಹಣ್ಣು ಹೇರಳವಾಗಿ ಲಭ್ಯವಿರುತ್ತದೆ. ತಾಪಮಾನ ಹೆಚ್ಚಾದಂತೆ ದೇಹವನ್ನು ಹೈಡ್ರೀಕರಿಸಲು ಈ ಹಣ್ಣು ಸಹಾಯ ಮಾಡುತ್ತದೆ. ಇದು ವಿಟಮಿನ್ ಎ, ಸಿ ಮತ್ತು ಲೈಕೋಪೀನ್‌ನಂತಹ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಸೂರ್ಯನ ಹಾನಿಯಿಂದ ರಕ್ಷಿಸುವಲ್ಲೂ ಸಹಕಾರಿ. ಈ ಹಣ್ಣನ್ನು ತಾಜಾವಾಗಿ ತಿನ್ನಬಹುದು, ಜ್ಯೂಸ್ ಮಾಡಿ ಕುಡಿಯಬಹುದು ಅಥವಾ ಸಲಾಡ್‌ ಮಾಡಿ ಸೇವಿಸಬಹುದು.

ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣುಗಳು ಚಳಿಗಾಲದ ತಿಂಗಳಿನ ಹಣ್ಣಾಗಿದ್ದು, ಬೇಸಿಗೆಯ ಆರಂಭದಲ್ಲಿ ಈ ಹಣ್ಣುಗಳ ಪ್ರಯೋಜನಗಳನ್ನು ಮತ್ತಷ್ಟು ವಿಸ್ತರಿಸುತ್ತದೆ. ವಿಟಮಿನ್ ಸಿಯಿಂದ ಸಮೃದ್ಧವಾಗಿರುವ ಕಿತ್ತಳೆ ಹಣ್ಣು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ನಿಂಬೆ ಹಣ್ಣಿನಲ್ಲೂ ವಿಟಮಿನ್ ಸಿ ಹೇರಳವಾಗಿರುವುದರಿಂದ ಇದರ ಪಾನೀಯ ಮಾಡಿ ಕುಡಿಯುವ ಮೂಲಕ ಪ್ರಯೋಜನ ಪಡೆಯಬಹುದು.

ಸ್ಟ್ರಾಬೆರಿ: ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದ್ದು, ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಸೂರ್ಯನ ಯುವಿ ಕಿರಣದ ಹಾನಿಯಿಂದ ತ್ವಚೆಯನ್ನು ರಕ್ಷಿಸುತ್ತದೆ. ದೇಹದಿಂದ ಟಾಕ್ಸಿನ್ ಹೊರಹಾಕಲು ಸಹಾಯಕವಾಗಿದೆ. ಸ್ಟ್ರಾಬೆರಿಯನ್ನು ಹಾಗೆಯೇ ತಿನ್ನಲು ಇಷ್ಟವಾಗದಿದ್ದರೆ ಇದರ ಸ್ಮೂಥಿ ತಯಾರಿಸಿ ಅಥವಾ ಜ್ಯೂಸ್ ಕುಡಿಯಬಹುದು ಅಥವಾ ಸಲಾಡ್‌ಗಳಲ್ಲಿ ಬೆರೆಸಿ ತಿನ್ನಬಹುದು.

ಸೌತೆಕಾಯಿ: ಈ ತರಕಾರಿಯಲ್ಲಿ ನೀರಿನಂಶ ಹೆಚ್ಚಿದ್ದು, ದೇಹವನ್ನು ನಿರ್ಜಲೀಕರಣ ಸಮಸ್ಯೆಯಿಂದ ಕಾಪಾಡಲು ಸೂಕ್ತವಾಗಿದೆ. ಇದರಲ್ಲಿ ಸಿಲಿಕಾ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆ ಅಧಿಕವಾಗಿದ್ದು, ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಸೌತೆಕಾಯಿ ತಿನ್ನುವುದರಿಂದ ದೇಹವು ಬೇಸಿಗೆಯ ಶಾಖಕ್ಕೆ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ತಂಪಾಗಿರಿಸಲು ಸಹಾಯಕವಾಗಿದೆ.

ಪಾಲಕ್ ಸೊಪ್ಪು: ಇದು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ದೇಹವು ಚಳಿಯಿಂದ ಬೆಚ್ಚಗಿನ ದಿನಗಳಿಗೆ ಹೊಂದಿಕೊಳ್ಳುತ್ತಿದ್ದಂತೆ, ಪಾಲಕ್‌ ಸೊಪ್ಪು ತಿನ್ನುವುದರಿಂದ ಅನೇಕ ಪ್ರಯೋಜನ ಪಡೆಯಬಹುದು. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಪಾಲಕ್ ಸೊಪ್ಪನ್ನು ಸ್ಮೂಥಿ, ಸಲಾಡ್‌ ಅಥವಾ ಪಲ್ಯ ಇತ್ಯಾದಿ ಮಾಡಿ ತಿನ್ನಬಹುದು.

ಕ್ಯಾರೆಟ್: ಇದು ಬೀಟಾ-ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದ್ದು, ದೃಷ್ಟಿ, ಚರ್ಮದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ. ಸೂರ್ಯನ ಬೆಳಕು ಹೆಚ್ಚು ತೀವ್ರವಾಗುತ್ತಿದ್ದಂತೆ, ಕ್ಯಾರೆಟ್ ಯುವಿ ಕಿರಣದ ಹಾನಿಯಿಂದ ರಕ್ಷಿಸುತ್ತದೆ ಮತ್ತು ಬದಲಾಗುತ್ತಿರುವ ಋತುವಿಗೆ ದೇಹವು ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾರೆಟ್ ಅನ್ನು ಹಸಿಯಾಗಿ ತಿನ್ನಬಹುದು, ಅದರ ರಸ ತಯಾರಿಸಿ ಕುಡಿಯಬಹುದು ಅಥವಾ ಸಲಾಡ್‌ಗಳಲ್ಲಿ ಬೆರೆಸಿ ತಿನ್ನಬಹುದು.

ಅನಾನಸು: ಮಾರ್ಚ್‌ನಿಂದ ಜೂನ್‌ವರೆಗೆ ಹೇರಳವಾಗಿ ಲಭ್ಯವಿರುವ ಅನಾನಸು ಹಣ್ಣಿನಲ್ಲಿ ಬ್ರೋಮೆಲೈನ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಕಿಣ್ವವಾಗಿದೆ. ಇದು ನೈಸರ್ಗಿಕ ಸಿಹಿ ಮತ್ತು ಹೆಚ್ಚಿನ ವಿಟಮಿನ್ ಸಿ ಅಂಶವನ್ನು ಹೊಂದಿದೆ. ಈ ಹಣ್ಣನ್ನು ಹಾಗೆಯೇ ತಿನ್ನಬಹುದು, ಸ್ಮೂಥಿ ಮಾಡಿ ಸೇವಿಸಬಹುದು ಅಥವಾ ಜ್ಯೂಸ್ ಮಾಡಿಯೂ ಕುಡಿಯಬಹುದು. ಅನಾನಸು ಹಣ್ಣು ನಿರ್ಜಲೀಕರಣದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ.

ಒಟ್ಟಿನಲ್ಲಿ ಚಳಿಗಾಲದಿಂದ ಬೇಸಿಗೆಗೆ ಪರಿವರ್ತನೆಯ ಸಮಯದಲ್ಲಿ ಈ ಋತುಮಾನದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಆರೋಗ್ಯವಾಗಿರಲು ಮತ್ತು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner