Doomscrolling: ನೆಗೆಟಿವ್ ಸುದ್ದಿ, ಮಾಹಿತಿಯೇ ಇನ್ನಷ್ಟು ಮತ್ತಷ್ಟು ಬೇಕೆನ್ನುವ ಹಪಾಹಪಿ ನಿಮಗೂ ಇದೆಯೇ? ಇರಲಿ ಎಚ್ಚರ -ಕಾಳಜಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  Doomscrolling: ನೆಗೆಟಿವ್ ಸುದ್ದಿ, ಮಾಹಿತಿಯೇ ಇನ್ನಷ್ಟು ಮತ್ತಷ್ಟು ಬೇಕೆನ್ನುವ ಹಪಾಹಪಿ ನಿಮಗೂ ಇದೆಯೇ? ಇರಲಿ ಎಚ್ಚರ -ಕಾಳಜಿ ಅಂಕಣ

Doomscrolling: ನೆಗೆಟಿವ್ ಸುದ್ದಿ, ಮಾಹಿತಿಯೇ ಇನ್ನಷ್ಟು ಮತ್ತಷ್ಟು ಬೇಕೆನ್ನುವ ಹಪಾಹಪಿ ನಿಮಗೂ ಇದೆಯೇ? ಇರಲಿ ಎಚ್ಚರ -ಕಾಳಜಿ ಅಂಕಣ

ಡಾ ರೂಪಾ ರಾವ್ ಬರಹ: ಮೊಬೈಲ್ ಬಳಕೆ ಅತಿಯಾದರೆ ಕಾಡಬಹುದು ಡೂಮ್‌ಸ್ಕ್ರಾಲಿಂಗ್. ಕೈಗಂಟುವ ಮೊಬೈಲ್ ವ್ಯಸನ ಮನಸ್ಸನ್ನು ಆವರಿಸಿಕೊಂಡರೆ ಸಮಸ್ಯೆಗಳು ಒಂದೆರೆಡಲ್ಲ. ಕುಗ್ಗುವ ಮನಸ್ಸು, ಕಾಡುವ ತಲೆನೋವು ಬಿಡಬೇಕೆಂದರೂ ಬಿಡಲಾಗದ ಮೊಬೈಲ್ ಮಾಯೆ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿಯಿದು.

ರೂಪಾ ರಾವ್ ಬರಹ
ರೂಪಾ ರಾವ್ ಬರಹ

ನಿಮ್ಮ‌ಮೊಬೈಲ್‌ನಲ್ಲಿ ಯಾವುದೋ ದ್ವೇಷ ಅಥವಾ ಯಾರದ್ದೋ ಕೊಲೆ, ಅಪಘಾತ ಅಥವಾ ಇನ್ಯಾರದ್ದೋ ಹೃದಯ ವಿದ್ರಾವಕ ಘಟನೆಗಳಂತಹ ನೆಗೆಟಿವ್ ಸುದ್ದಿಗಳ ನೋಟಿಫಿಕೇಶನ್ ಬರುತ್ತಲೇ ಇರುತ್ತದೆ. ನೀವು ಅವುಗಳನ್ನು ನೋಡುತ್ತಲೇ‌ ಇರುತ್ತೀರಿ, ಕೆಲವೊಮ್ಮೆ ಮೊಬೈಲಿನಲ್ಲಿ ನಿಮಗೆ ಸಂಬಂಧವೇ ಇರದ, ಉಪಯೋಗವೂ ಆಗದ ಸೋಷಿಯಲ್ ಮೀಡಿಯಾ ಮೆಸೇಜುಗಳನ್ನೋ ಅಥವಾ ರೀಲ್‌ಗಳನ್ನೋ ಸತತವಾಗಿ ಸ್ಕ್ರಾಲ್ ಮಾಡುತ್ತಲೇ ‌ಇರುತ್ತೀರಿ. ಈ ಸಮಯದಲ್ಲಿ ಯಾರೋ ನಿಮಗೆ ಮಧ್ಯೆ ಅಡಚಣೆ ಮಾಡಿ ಏನೋ ಕೇಳಿದಾಗ ಒಳಗೊಳಗೇ ‌ಅಸಮಧಾನಗೊಳ್ಳುತೀರಿ. ಅಥವಾ ಇದ್ದಕ್ಕಿದ್ದಂತೆ ಸಿಡುಕುತ್ತೀರಿ. ಸತತವಾಗಿ ಈ ನೆಗೆಟಿವ್ ಅಥವಾ ನಿರುಪಯೋಗಿ ವಿಡಿಯೊ ಅಥವಾ ಸುದ್ದಿ ನೋಡಿದ ಮೇಲೆ ಇದ್ದಕ್ಕಿದ್ದ ಹಾಗೆಯೇ ನಿಮ್ಮನ್ನು ಒಂದು ನಿರಾಸಕ್ತಿಯೋ ಅಥವಾ ಅವ್ಯಕ್ತ ಆತಂಕವೋ ಅಥವಾ ಖಿನ್ನತೆಯೋ ಆವರಿಸುತ್ತದೆ. ಈ ಎಲ್ಲ ಅನುಭವಗಳೂ ನಿಮಗಾಗಿದ್ದಲ್ಲಿ ನೀವು ಡೂಮ್‌ಸರ್ಫಿಂಗ್‌ ಅಥವಾ ಡೂಮ್‌ಸ್ಕ್ರಾಲಿಂಗ್‌‌ ಎಂಬ ಮಾನಸಿಕ ಪರಿಣಾಮಕ್ಕೆ ಒಳಗಾಗಿದ್ದೀರಿ ಎಂದು ಅರ್ಥ. ಕೋವಿಡ್ ಸಮಯದಲ್ಲಿ‌ ಉದಯಿಸಿದ ಹೊಸ‌ ಪರಿಣಾಮಗಳಿಂದ ಉಂಟಾದ ಸಮಸ್ಯೆಗಳಲ್ಲಿ ಡೂಮ್‌ಸ್ಕ್ರಾಲಿಂಗ್ ಸಹ ಒಂದು.

ಏನಿದು ಡೂಮ್‌ಸ್ಕ್ರಾಲಿಂಗ್?

ಡೂಮ್‌ಸ್ಕ್ರಾಲಿಂಗ್ ಕೇವಲ ಸಾಮಾಜಿಕ ಮಾಧ್ಯಮದ ಮೂಲಕ ಸಾಮಾನ್ಯ ಬ್ರೌಸಿಂಗ್ ಅಲ್ಲ ಎಂದು ಸಂಶೋಧನೆಗಳು ಹೇಳಿವೆ. ಬದಲಿಗೆ, ಇದು ನಕಾರಾತ್ಮಕ ಮಾಹಿತಿಗಾಗಿ ಸಾಕು ಎಂದನಿಸದ ಇನ್ನೂ ಬೇಕು ಎನಿಸುವಂತಹ 'ಕಂಪಲ್ಸಿವ್‌' ನಡವಳಿಕೆ. ಇದರ ಮುಖ್ಯ ಲಕ್ಷಣವೆಂದರೆ ಆತಂಕಕಾರಿ ಹಾಗೂ ನೆಗೆಟಿವ್ ವಿಷಯಗಳನ್ನು ನೊಡುತ್ತಾ ಮತ್ತೆ ಮುಂದಿನ ಕೆಟ್ಟ ಸುದ್ದಿಯನ್ನು ಹುಡುಕುತ್ತಾ ಎಂದಿಗೂ ಮುಗಿಯದ 'ಅನಂತ' ಸ್ಕ್ರಾಲಿಂಗ್ ಬಲೆಗೆ ಬೀಳುವುದು.

ಡೂಮ್‌ಸ್ಕ್ರಾಲಿಂಗ್‌ ವರ್ತನೆಯ ಮಾನಸಿಕ ಕಾರಣವನ್ನು ಹುಡುಕಲು ಹೋದರೆ ಸಿಗುವುದು ಅನಿಶ್ಚಿತತೆಯ ಭಯ ಮತ್ತು ಆತಂಕ. ಕೊವಿಡ್ ಸಮಯದಲ್ಲಿ ಈ ಏಕತಾನತೆ ಹೇಗೆ ಕೊನೆಯಾಗುತ್ತದೆಯೋ ಎಂಬ ಯೋಚನೆಯಿಂದ ಜನರು ಹೆಚ್ಚು ಕೊರೊನಾವೈರಸ್ ಕುರಿತಾದ ನ್ಯೂಸ್‌ಗಳತ್ತ ನೋಡತೊಡಗಿದರು. ಇದರಿಂದ ಅವರ ಅನಿಶ್ಚಿತತೆಯ ಭಯ ಮತ್ತು ಆತಂಕ ಮತ್ತಷ್ಟು ಜಾಸ್ತಿ ಆಗತೊಡಗಿತು. ಆಗ ಶುರುವಾದ ಇದೇ ನಡವಳಿಕೆ ಈಗಲೂ ಬಹಳಷ್ಟು ಜನರಲ್ಲಿ ಕಂಡು‌ಬರುತ್ತಿದೆ.

ಡೂಮ್‌ಸ್ಕ್ರಾಲಿಂಗ್‌ಗೆ ಇರುವ ಕಾರಣಗಳಿವು

1) ಕಳೆದುಕೊಳ್ಳುವ ಭೀತಿ: ಪ್ರತಿಸಲ ಸುದ್ದಿ ಅಥವಾ ಮೊಬೈಲ್ ನೋಡದೇ ಇದ್ದಲ್ಲಿ ಏನೋ ಮಹತ್ತರ ವಿಷಯವನ್ನು ಕಳೆದುಕೊಳ್ಳಬಹುದು ಎಂಬ ಭಯವು ಮತ್ತೆಮತ್ತೆ ಮೊಬೈಲ್ ಅನ್ನು ಚೆಕ್ ಮಾಡುವಂತೆ ಮಾಡುತ್ತದೆ. ಇದೇ ಫಿಯರ್ ಆಫ್ ಮಿಸ್ಸಿಂಗ್‌ಔಟ್.

2) ನೆಗೆಟಿವಿಟಿ ಬಯಾಸ್: ನಮ್ಮ ಮೆದುಳು ನೆಗೆಟಿವಿಟಿಯನ್ನು ಹುಡುಕುತ್ತದೆ. ಆದ್ದರಿಂದಲೇ ನೆಗೆಟೀವ್ ಸುದ್ದಿ, ನೋಟ, ಶ್ರವಣ ಇವುಗಳಿಗೆ ಬಲುಬೇಗ ಅಂಟಿಕೊಳ್ಳುತ್ತದೆ.

3) ವೇರಿಯೇಬಲ್ ರಿವಾರ್ಡ್ ಸಿಸ್ಟಮ್: ಇದ್ದಕ್ಕಿದ್ದಂತೆ ಯಾವುದೋ ಹೊಸ ವಿಷಯ ಕಾಣ‌ಸಿಗಬಹುದು ಅದರಿಂದ ಮನಸಿನ ಬಹುಮಾನ ಬಯಸುವ ವ್ಯವಸ್ಥೆ (ಡೋಪಾಮೈನ್) ಆಕ್ಟೀವ್ ಆಗುವುದರಿಂದ ಮನಸು ಮತ್ತೆಮತ್ತೆ ಅದೇ ನೆಗೆಟೀವ್ ವಿಷಯಗಳನ್ನು ಹುಡುಕುತ್ತಾ ಹೋಗುವುದು.

ಡೂಮ್‌ಸ್ಕ್ರಾಲಿಂಗ್‌ನಿಂದ ಉಂಟಾಗುವ ಸಮಸ್ಯೆಗಳು

ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಡೂಮ್‌ಸ್ಕ್ರಾಲಿಂಗ್ ಹಲವು ಪರಿಣಾಮ‌ಗಳನ್ನು ಉಂಟು ಮಾಡುತ್ತವೆ. ಮಾನಸಿಕವಾಗಿ ಖಿನ್ನತೆ, ಅತಂಕದ ಕಾಯಿಲೆ, ಮಾನಸಿಕ ಒತ್ತಡ,

ಕಿರಿಕಿರಿ ಕಾಣಿಸಿಕೊಳ್ಳಬಹುದು. ದೈಹಿಕ ಸಮಸ್ಯೆಗಳಲ್ಲಿ ತಲೆನೋವು, ಮಾಂಸಖಂಡಗಳಲ್ಲಿ ನೋವು, ಬೆನ್ನುನೋವು, ಅಸಿಡಿಟಿ, ಜೀರ್ಣಶಕ್ತಿ ಕುಂಠಿತವಾಗುವುದು, ನಿದ್ರಾಶಕ್ತಿಯಲ್ಲಿ ತೊಂದರೆ. ಇತ್ಯಾದಿ ಕಾಣಿಸಿಕೊಳ್ಳಬಹುದು.

ಡೂಮ್‌ಸ್ಕ್ರಾಲಿಂಗ್‌ನಿಂದ ಹೊರಬರುವುದು ಹೇಗೆ

ಮೊದಲಿಗೆ ಮೊಬೈಲ್ ಆಪ್ ಬ್ಲಾಕರ್‌ಗಳನ್ನು ಅಳವಡಿಸಿಕೊಳ್ಳಬೇಕು. ಗೂಗಲ್ ಪ್ಲೇ‌ಸ್ಟೋರಿನಲ್ಲಿ ಬಹಳ ಮೊಬೈಲ್ ಆಪ್ ಬ್ಲಾಕರ್‌ಗಳು‌ ಮತ್ತು ಮೊಬೈಲ್ ‌ಸಮಯದ ಮೇಲೆ ನಿಗಾ ಇಡುವ ಆಪ್‌ ಇತ್ಯಾದಿ ಲಭ್ಯವಿವೆ. ಅಂಥವನ್ನು ಗುರುತಿಸಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಉಸಿರಾಟದ ವೇಗದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಮಾನಸಿಕ ಸ್ಥಿತಿಯನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಪ್ರಯತ್ನಿಸಬೇಕು. ಏನೇ ಆಗಲಿ ವರ್ತಮಾನದಲ್ಲಿ (ಆ ಕ್ಷಣದಲ್ಲಿ ಏನು ನಡೆಯುತ್ತಿದೆ) ಗಮನ ಇರುವಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟೂ‌ ಒಳ್ಳೆಯ ಸುದ್ದಿಗಳ ಬಗ್ಗೆ‌ ಗಮನ ಹರಿಸುವುದು ಒಳ್ಳೆಯದು.

ಇನ್ನಷ್ಟು ಮತ್ತಷ್ಟು ನೆಗೆಟಿವ್ ಮಾಹಿತಿ ಬೇಕು ಎನ್ನುವ ಹಪಾಹಪಿಯಿಂದಲೇ ಡೂಮ್‌ಸ್ಕ್ರಾಲಿಂಗ್ ಆರಂಭವಾಗುತ್ತದೆ. ಎಂದೂ ತಣಿಯದ ಇನ್ನಷ್ಟುಮತ್ತಷ್ಟು ನೆಗೆಟಿವ್ ಮಾಹಿತಿ ಹುಡುಕಾಟದ ಹಸಿವಿಗೆ ಕಡಿವಾಣ ಕಷ್ಟ. ಆದರೆ ಅಸಾಧ್ಯವಂತು ಅಲ್ಲ. ಮೊಬೈಲ್ ಸಖ್ಯವನ್ನು ಎಲ್ಲಿ ನಿಲ್ಲಿಸಬೇಕು? ಎಷ್ಟು ಸಾಕು ಎಂಬ ನಿರ್ಧಾರ ಮೊದಲೇ ಮಾಡಿಕೊಂಡಾಗ ಡೂ್ಮ್‌ಸ್ಕ್ರಾಲಿಂಗ್ ಅನ್ನು ಮಟ್ಟ ಹಾಕಬಹುದು.

Whats_app_banner