ರಾಮೇಶ್ವರದತ್ತ ಹೋದರೆ ಕಲಾಂ ಸ್ಮಾರಕ ನೋಡಲು ಮರೆಯದಿರಿ, ಅಲ್ಲೊಂದು ಧನ್ಯತಾ ಭಾವ ಮೂಡುವುದು ಖಂಡಿತ; ರಾಜೀವ ಹೆಗಡೆ ಬರಹ
ರಾಜೀವ ಹೆಗಡೆ ಬರಹ: ಕಲಾಂ ಅವರ ಸ್ಮಾರಕದಿಂದ ಹೊರ ಬಂದಾಗ ಧನ್ಯತೆಯ ಭಾವ ಮೂಡುತ್ತದೆ. ಕಲಾಂ ಅಜ್ಜನ ಮೇಲಿರುವ ಗೌರವ ಇನ್ನಷ್ಟು ಹೆಚ್ಚುತ್ತದೆ. ಹಾಗೆಯೇ ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದು ಸಾಬೀತಾಗುತ್ತದೆ. ಇದರ ಜವಾಬ್ದಾರಿ ಹೊಂದಿರುವ ಪ್ರಾಧಿಕಾರಕ್ಕೆ ಆ ಜಾಗ ಹಾಗೂ ನೆಲದ ಬಗ್ಗೆ ಗೌರವವಿದ್ದರೆ ಯಾವುದೂ ಅಸಾಧ್ಯವಲ್ಲ.

ನಾನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಧರ್ಮಸ್ಥಳಕ್ಕೆ ಬಂದಿದ್ದರು. ಮುಂದಿನ ಸಾಲಿನಲ್ಲಿ ಎಂದಿನಂತೆ ಒಂದಿಷ್ಟು ಗಣ್ಯರು, ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು ಆಸೀನರಾಗಿದ್ದರು. ವೇದಿಕೆಯತ್ತ ಬರುತ್ತಿದ್ದಂತೆ ಅವರನ್ನೆಲ್ಲ ಹಿಂದಕ್ಕೆ ಕೂರಿಸಿದ ಕಲಾಂ ಅಜ್ಜ, ಸಣ್ಣ ಮಕ್ಕಳನ್ನು ಮುಂದೆ ಕೂರಿಸಿದರು. ಅವರು ಮುಂದೆ ಬರುವವರೆಗೂ ವೇದಿಕೆಯನ್ನು ಹತ್ತಲೇ ಇಲ್ಲ. ವರದಿಗಾರಿಕೆಗೆ ತೆರಳಿದ್ದ ನಮಗೆ ಮಾತ್ರ ಹಿಂದೆ ಹೋಗುವುದರಿಂದ ವಿನಾಯಿತಿಯನ್ನು ಖುದ್ದು ಕಲಾಂ ನೀಡಿದ್ದರು. ಹೀಗಾಗಿ ನೆಹರೂ ಅವರ ಮಕ್ಕಳ ಪ್ರೀತಿಯನ್ನು ನಾವಂತು ನೋಡಿಲ್ಲ, ಆದರೆ ಕಲಾಂ ಅವರ ಕಾಳಜಿಯನ್ನು ಅಂದು ನೇರವಾಗಿ ನೋಡಿ ಅವರ ಮೇಲಿದ್ದ ಗೌರವ ಇನ್ನಷ್ಟು ಹೆಚ್ಚಾಗಿತ್ತು.
ಇಂತಿಪ್ಪ ಕಲಾಂ ಅಜ್ಜನ ಸ್ಮಾರಕವು ರಾಮೇಶ್ವರದ ಬಳಿಯಿದೆ ಎನ್ನುವುದನ್ನು ನಾನು ಮರೆತಿದ್ದೆ. ಆದರೆ ತಂಜಾವೂರಿನಿಂದ ರಾಮೇಶ್ವರಕ್ಕೆ ಹೋಗುವಾಗ ಮಾರ್ಗ ಮಧ್ಯೆ ಕಾಣಿಸಿದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸ್ಮಾರಕಕ್ಕೆ ಭೇಟಿ ನೀಡದೇ ಮುಂದೆ ಹೋಗಲು ಮನಸ್ಸಾಗಲಿಲ್ಲ. ನಾವು ಭೇಟಿ ನೀಡಿದ ಇತರ ಪುಣ್ಯ ಕ್ಷೇತ್ರಗಳಂತೆ, ಇಲ್ಲಿಯೂ ನಮಗೆ ಕಲಾಂ ರಕ್ಷೆ ಸಿಗಬಹುದು ಎನ್ನುವ ನಂಬಿಕೆಯಿತ್ತು.
ಸ್ಮಾರಕದೆದುರು ಕಾರನ್ನು ಪಾರ್ಕ್ ಮಾಡುವಾಗ ಕಲಾಂ ಅವರ ಸಮಾಧಿಗೆ ನಮಸ್ಕರಿಸಿ ಹೊರಕ್ಕೆ ಬರುವುದು ಎನ್ನುವುದಷ್ಟೇ ನನ್ನ ತಲೆಯಲ್ಲಿತ್ತು. ಏಕೆಂದರೆ ನಾನು ಇಲ್ಲಿಯವರೆಗೆ ಇಂತಹ ಸ್ಮಾರಕಗಳನ್ನು ನೋಡಿದ ನೆನಪಿಲ್ಲ. ಕ್ಯಾಮೆರಾ, ಮೊಬೈಲ್ ನಿಷೇಧವಿರುವ ಈ ತಾಣದಲ್ಲಿ, ಚಪ್ಪಲಿಯನ್ನು ಕೂಡ ಹೊರಕ್ಕೆ ಇರಿಸಿ ದೇವಾಲಯದಂತಿರುವ ಸ್ಮಾರಕದೊಳಗೆ ಕಾಲಿರಿಸಿದೆ. ಒಳಕ್ಕೆ ಹೋಗುತ್ತಿದ್ದಂತೆ ಕಲಾಂ ಅವರು ಕುರ್ಚಿಯ ಮೇಲೆ ಕುಳಿತಿರುವ ಮೂರ್ತಿಯೊಂದನ್ನು ರಚಿಸಲಾಗಿದೆ. ಕಲಾಂ ಅಜ್ಜನೇ ಸಮಾಧಿಯಿಂದ ಎದ್ದುಬಂದು ಕುಳಿತಂತೆ ಅದು ಕಾಣಿಸುತ್ತದೆ. ಒಂದು ಕ್ಷಣಕ್ಕೆ ರೋಮಾಂಚನಗೊಳಿಸುವ ದೃಶ್ಯವದು. ಅದಾದ ಬಳಿಕ ಸ್ಮಾರಕವಿರುವ ಕಟ್ಟಡದ ಪೂರ್ತಿ ಇಂತಹ ಹತ್ತಾರು ಮೂರ್ತಿಗಳು ನಿಮಗೆ ಕಾಣಸಿಗುತ್ತವೆ. ಇದರ ಜತೆಗೆ ಕಲಾಂ ಜೀವನದಲ್ಲಿನ ಎಲ್ಲ ಪ್ರಮುಖ ಘಟ್ಟಗಳ ಚಿತ್ರಗಳನ್ನು ಅಲ್ಲಿ ಸೆರೆ ಹಿಡಿದಿಡಲಾಗಿದೆ. ರಾಮೇಶ್ವರದ ವಿದ್ಯಾರ್ಥಿ, ವಿಜ್ಞಾನಿ ಆದಾಗಿನಿಂದ ಅವರ ಕೊನೆಯ ಉಪನ್ಯಾಸದವರೆಗಿನ ಪ್ರತಿ ಕ್ಷಣವನ್ನು ಅಚ್ಚುಕಟ್ಟಾಗಿ ದಾಖಲಿಸಲಾಗಿದೆ. ಅವರ ಕೊನೆಯ ಪ್ರವಾಸಕ್ಕೆ ಬಳಸಿದ್ದ ಬ್ಯಾಗ್, ಬಟ್ಟೆ ಹಾಗೂ ಇತರ ಪರಿಕರಗಳನ್ನು ಕೂಡ ಕಾಳಜಿಪೂರ್ವಕಾಗಿ ಚೆಂದದಿಂದ ಇಡಲಾಗಿದೆ. ಹೀಗಾಗಿ ಈ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರ ತೋರಿದ ವಿಶೇಷ ಕಾಳಜಿ ನಮಗಲ್ಲಿ ಎದ್ದು ಕಾಣಿಸುತ್ತದೆ.
ಇದರ ಜತೆಗೆ ಈ ಸ್ಮಾರಕದ ಇನ್ನೊಂದು ವಿಶೇಷವೇನೆಂದರೆ, ಕಲಾಂ ಜೀವನದ ಪ್ರಮುಖ ಘಟ್ಟಗಳನ್ನು ಪೇಟಿಂಗ್ ಮೂಲಕ ನಿರೂಪಿಸಲಾಗಿದೆ. ಆ ಪೇಂಟಿಂಗ್‌ಗಳು ಅತ್ಯಾಕರ್ಷಕವಾಗಿದ್ದು, ಕಲಾಂ ಅವರ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಹಾಗೆಯೇ ಕೆಲವು ಆಯ್ದ ಸಂದರ್ಶನಗಳು ಕೂಡ ಟಿವಿಯಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿರುತ್ತವೆ. ಇವೆಲ್ಲವನ್ನೂ ತೀರಾ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದ್ದು, ಯಾವುದೇ ಪ್ರವೇಶ ಶುಲ್ಕವನ್ನು ಪಡೆದುಕೊಳ್ಳುತ್ತಿಲ್ಲ.
ಒಟ್ಟಾರೆಯಾಗಿ ಕಲಾಂರ ಸ್ಮಾರಕದಿಂದ ಹೊರಗೆ ಬಂದಾಗ ಧನ್ಯತೆಯ ಭಾವ ಮೂಡುತ್ತದೆ. ಕಲಾಂ ಅಜ್ಜನ ಮೇಲಿರುವ ಗೌರವ ಇನ್ನಷ್ಟು ಹೆಚ್ಚುತ್ತದೆ. ಹಾಗೆಯೇ ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದು ಸಾಬೀತಾಗುತ್ತದೆ. ಸ್ವಚ್ಛತೆ, ಕಾಳಜಿ, ಮಾಹಿತಿ ಹಂಚಿಕೆ ಎನ್ನುವುದೆಲ್ಲ ಅಸಾಧ್ಯವಲ್ಲ. ಆದರೆ ಇದರ ಜವಾಬ್ದಾರಿ ಹೊಂದಿರುವ ಪ್ರಾಧಿಕಾರಕ್ಕೆ ಆ ಜಾಗ ಹಾಗೂ ನೆಲದ ಬಗ್ಗೆ ಗೌರವವಿದ್ದರೆ ಯಾವುದೂ ಅಸಾಧ್ಯವಲ್ಲ.
ರಾಮೇಶ್ವರಕ್ಕೆ ಭೇಟಿ ನೀಡುತ್ತಿದ್ದರೆ, ತಪ್ಪದೇ ಕಲಾಂ ಅಜ್ಜನನ್ನು ಕಣ್ಣು ತುಂಬಿಕೊಂಡು ಬನ್ನಿ. ನಿಮಗೆ ದೇವಾಲಯಕ್ಕೆ ಭೇಟಿ ನೀಡಿದಾಗ ಆಗುವ ಅನುಭವವೇ ಇಲ್ಲಾಗುತ್ತದೆ.
