ಮಹಿಳೆಯರಿಗೆ ಕಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ? ಲಸಿಕೆ ಸೇರಿದಂತೆ ಪ್ರಮುಖ ಮಾಹಿತಿ ನೀಡಿದ ಡಾಕ್ಟರ್ ಶಫಾಲಿಕಾ
ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಿಗೆ ಕಾಡುವಸಾಮಾನ್ಯವಾದ ಕ್ಯಾನ್ಸರ್‌ಗಳಲ್ಲಿ ಒಂದು. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿನ ಮಹತ್ತರ ಸುಧಾರಣೆಗಳಾಗಿರುವುದರಿಂದ ಇದಕ್ಕೆ ಭಯಪಡುವ ಅಗತ್ಯವಿಲ್ಲ. ಈ ಬಗ್ಗೆಮಣಿಪಾಲ್ ಆಸ್ಪತ್ರೆ, ಯಶವಂತಪುರ ಬೆಂಗಳೂರಿನಮಿನಿಮಲಿ ಇನ್ವೇಸಿವ್ ಸ್ತ್ರೀರೋಗ ಶಾಸ್ತ್ರ ತಜ್ಞೆಡಾ. ಶಫಾಲಿಕಾ ಎಸ್.ಬಿಅವರ ಬರಹ ಇಲ್ಲಿದೆ.

ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಿಗೆ ಕಾಡುವ ಸಾಮಾನ್ಯವಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ಮಹಿಳೆಯರ ಮೇಲೆ ಪರಿಣಾಮ ಬೀರುವ ನಾಲ್ಕನೇ ಸಾಮಾನ್ಯ ಕ್ಯಾನ್ಸರ್. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿನ ಸುಧಾರಣೆಗಳೊಂದಿಗೆ, ಈ ಆರೋಗ್ಯ ಸಮಸ್ಯೆಯನ್ನು ಇಂದು ಬಹಳ ಮಟ್ಟಿಗೆ ತಡೆಗಟ್ಟಬಹುದು. ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಲಸಿಕೆಯಾಗಿರುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆಯು ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ಬಗ್ಗೆ ಮಣಿಪಾಲ್ ಆಸ್ಪತ್ರೆ, ಯಶವಂತಪುರ ಬೆಂಗಳೂರಿನ ಮಿನಿಮಲಿ ಇನ್ವೇಸಿವ್ ಸ್ತ್ರೀರೋಗ ಶಾಸ್ತ್ರ ತಜ್ಞೆ ಡಾ. ಶಫಾಲಿಕಾ ಎಸ್.ಬಿ ಅವರ ಬರಹ ಇಲ್ಲಿದೆ.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ತಡೆಗಟ್ಟುವಿಕೆಯ ಮೊದಲ ಹೆಜ್ಜೆ: ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಲು ಎಲ್ಲರಿಗೂ ಲಸಿಕೆ ನೀಡುವುದು ಉತ್ತಮ ಮಾರ್ಗ. ಎಚ್‌ಪಿವಿ ಲಸಿಕೆಯು 9 ರಿಂದ 45 ವರ್ಷ ವಯಸ್ಸಿನ ಹೆಣ್ಮಕ್ಕಳು ಮತ್ತು ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ ವೈರಸ್‌ನಿಂದ ರಕ್ಷಿಸುತ್ತದೆ. ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಆರಂಭದಲ್ಲಿ ಮೊದಲ ಡೋಸ್ ಮತ್ತು ಆರು ತಿಂಗಳ ನಂತರ ಎರಡನೇ ಡೋಸ್ ಕೊಡಬೇಕು. ಲೈಂಗಿಕವಾಗಿ ಸಕ್ರಿಯವಾಗಿಲ್ಲದ ಯುವತಿಯರಿಗೆ ಒಂದು ಡೋಸ್ ಕೊಟ್ಟರೂ ಸಾಕಾಗುತ್ತದೆ.
ಪ್ರಸ್ತುತ ಎರಡು ರೀತಿಯ ಲಸಿಕೆಗಳಿವೆ. ಒಂದು ಭಾರತದಲ್ಲಿ ನಿರ್ಮಿಸಿರುವ ಲಸಿಕೆ ಮತ್ತು ಇನ್ನೊಂದು ಇತರ ದೇಶಗಳ ಲಸಿಕೆಗಳು. ಎರಡೂ ಲಸಿಕೆಗಳು ಕೂಡ ಸಮಾನವಾಗಿ ಕಾರ್ಯನಿರ್ವಹಿಸುತ್ತವೆ. ಇವು ವಿವಿಧ ರೀತಿಯ ಎಚ್‍ಪಿವಿ ವೈರಸ್‌ಗಳಿಂದ ರಕ್ಷಿಸುತ್ತವೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಮಹಿಳೆಯರು ಇವುಗಳಲ್ಲಿ ಕನಿಷ್ಠ ಒಂದರಿಂದಲಾದರೂ ಲಸಿಕೆ ಪಡೆಯುವುದು ಬಹಳ ಮುಖ್ಯ.
ಆರಂಭಿಕ ಹಂತದಲ್ಲಿ ಪತ್ತೆ: ಕ್ಯಾನ್ಸರ್ ಅನ್ನು ತಡೆಗಟ್ಟಲು ಲಸಿಕೆ ಬಹಳ ಮುಖ್ಯ. ಆದರೆ ಚಿಕಿತ್ಸೆಗೆ ಆರಂಭಿಕ ಹಂತದ ಪತ್ತೆ ಮತ್ತು ನಿಯಮಿತ ತಪಾಸಣೆಗಳು ಕೂಡ ಅಷ್ಟೇ ಮುಖ್ಯ. ಮಹಿಳೆಯರು ವರ್ಷಕ್ಕೊಮ್ಮೆಯಾದರೂ ಸ್ತ್ರೀರೋಗ ತಜ್ಞರಲ್ಲಿ ಪರೀಕ್ಷೆ ನಡೆಸುವುದು, ವಿಶುಯಲ್ ತಪಾಸಣೆಗಳು ಮತ್ತು ಕ್ಯಾನ್ಸರ್ ಪೂರ್ವದ ಬದಲಾವಣೆಗಳನ್ನು ತಿಳಿಯಲು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ಗರ್ಭಕಂಠದಲ್ಲಿ ಅಸಹಜ ಅಥವಾ ಕ್ಯಾನ್ಸರ್ ಪೂರ್ವ ಸೆಲ್‌ಗಳನ್ನು ಕಂಡುಹಿಡಿಯಲು ಪ್ಯಾಪ್ ಸ್ಮೀಯರ್ ಪರೀಕ್ಷೆ ಅಥವಾ ದ್ರವ ಆಧಾರಿತ ಸೈಟಾಲಜಿ ಉತ್ತಮ ಮಾರ್ಗವಾಗಿದೆ. ಎಚ್‍ಪಿವಿ ಡಿಎನ್ಎ ಪರೀಕ್ಷೆಯು ವೈರಸ್ ದೇಹದಲ್ಲಿದೆಯೇ ಎಂದು ತೋರಿಸಬಹುದು, ಆ ಮೂಲಕ ಇದು ಹೆಚ್ಚುವರಿ ರಕ್ಷಣೆ ನೀಡುತ್ತದೆ.
ಅಪಾಯವನ್ನು ಕಡಿಮೆ ಮಾಡಲು ಜೀವನಶೈಲಿಯ ಬದಲಾವಣೆಗಳು
ಲಸಿಕೆ ಮತ್ತು ತಪಾಸಣೆಯ ಜೊತೆಗೆ, ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಮತ್ತಷ್ಟು ಕಡಿಮೆ ಮಾಡಬಹುದು. ಅವುಗಳೆಂದರೆ:
- ತಂಬಾಕು ಸೇವನೆಯು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಧೂಮಪಾನ ತ್ಯಜಿಸುವುದು ಮುಖ್ಯ.
- ಒಬ್ಬ ಸಂಗಾತಿಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿರುವುದು ಎಚ್‌ಪಿವಿ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳಂತಹ ತಡೆಯುವ ವಿಧಾನಗಳನ್ನು ಬಳಸುವುದರಿಂದ ಎಚ್‌ಪಿವಿ ಯಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ದಿನನಿತ್ಯ ವ್ಯಾಯಾಮ ಮಾಡುವುದು ಕೂಡ ಮುಖ್ಯವಾಗಿವೆ.
ಮುಂದಿನ ಹಾದಿ
ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು ಮತ್ತು ಆರಂಭಿಕ ಹಂತದ ಪತ್ತೆಗಾಗಿ ನಿಯತ ತಪಾಸಣೆಗಳ ಜೊತೆಗೆ ಲಸಿಕೆಯನ್ನು ಪಡೆಯುವುದು ಕ್ಯಾನ್ಸರ್ ವಿರುದ್ಧ ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಯುವತಿಯರು, ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಎಚ್‌ಪಿವಿ ಲಸಿಕೆ ಮತ್ತು ನಿಯತ ಆರೋಗ್ಯ ತಪಾಸಣೆಯ ಮಹತ್ವವನ್ನು ಒತ್ತಿ ಹೇಳುವುದು ಮುಖ್ಯ. ಈ ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ ಮಾಡಬಹುದು. ಇದು ಭಾರತದಲ್ಲಿ ಮಹಿಳೆಯರ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
