ಕ್ಯಾನ್ಸರ್‌ಸ್ಪಾಟ್ - ಹನಿ ರಕ್ತ ಕೊಟ್ರೆ ಸಾಕು ಕ್ಯಾನ್ಸರ್ ಪತ್ತೆ ಮಾಡೋ ಅತ್ಯಾಧುನಿಕ ರಕ್ತ ಪರೀಕ್ಷೆ, ಬೆಂಗಳೂರಲ್ಲಿದೆ ಪರೀಕ್ಷಾ ಕೇಂದ್ರ
Cancer Detection: ಕ್ಯಾನ್ಸರ್‌ಸ್ಪಾಟ್- ಮುಂಚಿತವಾಗಿ ಕ್ಯಾನ್ಸರ್ ಪತ್ತೆ ಹಚ್ಚುವ ಪರೀಕ್ಷೆಯಾಗಿದ್ದು, ಇದರಲ್ಲಿ ಎಐ ತಂತ್ರಜ್ಞಾನವನ್ನೂ ಬಳಸಲಾಗುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರಲ್ಲೇ ಇದರ ಕೇಂದ್ರ ಶುರುವಾಗಿದೆ. ಹನಿ ರಕ್ತ ಕೊಟ್ರೆ ಸಾಕು ಕ್ಯಾನ್ಸರ್ ಇದೆಯೋ ಇಲ್ವೋ ಅಂತ ತಿಳಿಸುವ ಕ್ಯಾನ್ಸರ್‌ಸ್ಪಾಟ್, ಏನಿದು ರಕ್ತ ಪರೀಕ್ಷೆ- ಇಲ್ಲಿದೆ ವಿವರ
ಬಹುತೇಕರಲ್ಲಿ ಕ್ಯಾನ್ಸರ್ ಪತ್ತೆಯಾಗುವ ಹೊತ್ತಿಗೆ ಅದು ಮೂರು ಅಥವಾ ನಾಲ್ಕನೇ ಹಂತಕ್ಕೆ ತಲುಪಿರುತ್ತದೆ. ಇದನ್ನು ಮುಂಚಿತವಾಗಿ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಆದರೆ, ಈಗ ಆರ್ಟಿಫಿಶಿಯಲ್ ತಂತ್ರಜ್ಞಾನ ಆಧಾರಿತ ಟೆಸ್ಟ್ ಕ್ಯಾನ್ಸರ್‌ಸ್ಟಾಟ್ ಟೆಸ್ಟ್ (CancerSpot) ಪತ್ತೆ ಹಚ್ಚಬಹುದು. ವಿಶೇಷ ಎಂದರೆ ಈ ಕ್ಯಾನ್ಸರ್‌ಸ್ಪಾಟ್ ಟೆಸ್ಟ್ ಮೊದಲು ಶುರುವಾಗಿರುವುದೇ ನಮ್ಮ ಬೆಂಗಳೂರಲ್ಲಿ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗ ಸಂಸ್ಥೆ ಸ್ಟ್ರಾಂಡ್ ಲೈಫ್ ಸೈನ್ಸಸ್ ಈ ಹೊಸ ಮಾದರಿಯ ಪರೀಕ್ಷೆಯನ್ನು ಶುರುಮಾಡಿದ್ದು, ಒಂದು ಹನಿ ರಕ್ತ ಕೊಟ್ರೆ ಸಾಕು ಕ್ಯಾನ್ಸರ್ ಇದೆಯೋ ಇಲ್ವೋ ಅಂತ ಈ ಟೆಸ್ಟ್ ಖಚಿತ ಪಡಿಸುತ್ತೆ ಎಂದು ಹೇಳಿಕೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಮುಖ ಜೀನೋಮಿಕ್ಸ್ ಹಾಗೂ ಬಯೋಇನ್ಫರ್ಮ್ಯಾಟಿಕ್ಸ್ ಕಂಪನಿ ಸ್ಟ್ರಾಂಡ್ ಲೈಫ್ ಸೈನ್ಸಸ್, ಹಲವು ಬಗೆಯ ಕ್ಯಾನ್ಸರ್‌ಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವುದಕ್ಕಾಗಿ ಈ ಕಂಪನಿಯು ರಕ್ತದ ಆಧಾರಿತವಾದ ಪರೀಕ್ಷೆಯನ್ನು ಪರಿಚಯಿಸಿರುವುದಾಗಿ ವಿವರಿಸಿದೆ.
ಏನಿದು ಕ್ಯಾನ್ಸರ್‌ಸ್ಪಾಟ್ ಟೆಸ್ಟ್; ಹೇಗೆ ಕೆಲಸ ಮಾಡುತ್ತೆ
ಕ್ಯಾನ್ಸರ್‌ಸ್ಪಾಟ್ ಟೆಸ್ಟ್ ಎಂಬುದು ಹಲವು ಬಗೆಯ ಕ್ಯಾನ್ಸರ್‌ಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ ಅಂಗೀಕೃತವಾದ ಮೆಥಿಲೇಷನ್ ಪ್ರೊಫೈಲಿಂಗ್ ತಂತ್ರಜ್ಞಾನವನ್ನು ಒಳಗೊಂಡ ಕ್ಯಾನ್ಸರ್ ಪತ್ತೆ ಮಾಡುವ ರಕ್ತ ಪರೀಕ್ಷೆಯಾಗಿದೆ. ಇದರ ಮೂಲಕವಾಗಿ ಕ್ಯಾನ್ಸರ್ ಗಡ್ಡೆಯ ಡಿಎನ್‌ಎ ತುಣುಕುಗಳನ್ನು ಗುರುತಿಸಲಾಗುತ್ತದೆ. ಕ್ಯಾನ್ಸರ್ ಸ್ಪಾಟ್ ತುಂಬ ಸರಳವಾದ ರಕ್ತದ ಮಾದರಿಗಳನ್ನು ಬಳಸಿಕೊಂಡ ಕಾರ್ಯ ನಿರ್ವಹಿಸುತ್ತದೆ. ಮುಖ್ಯ ಜಿನೋಮ್ ಅನುಕ್ರಮವನ್ನು ಬಳಕೆ ಮಾಡುತ್ತದೆ ಹಾಗೂ ರಕ್ತದಲ್ಲಿ ಡಿಎನ್ಎ ಮೆತಿಲೀಕರಣದ ಕುರುಹುಗಳನ್ನು ಗುರುತಿಸುವ ವಿಶ್ಲೇಷಣೆ ಪ್ರಕ್ರಿಯೆಯನ್ನು ಮಾಡುತ್ತದೆ.
ಡಿಎನ್ಎ ಮೆತಿಲೀಕರಣ ಎಂದರೆ ಒಂದು ಅಣುವಿಗೆ ವಿಶೇಷವಾಗಿ ಡಿಎನ್‌ಎ ಅಥವಾ ಪ್ರೊಟೀನ್ ಅಣುವಿಗೆ ಮೀಥೈಲ್ ಗುಂಪನ್ನು (CH3) ಸೇರಿಸುವ ಜೀವರಾಸಾಯನಿಕ ಪ್ರಕ್ರಿಯೆ. ಇದು ಎಪಿಜೆನೆಟಿಕ್ ಮಾರ್ಪಾಡಾಗಿದ್ದು, ಡಿಎನ್‌ಎ ಅನುಕ್ರಮವನ್ನು ಬದಲಾಯಿಸದೇ ಜೀನ್ ಅಭಿವ್ಯಕ್ತಿಯನ್ನು ನಿಯಂತ್ರಿಸುವಂಥದ್ದು. ಅಸಹಜ ಡಿಎನ್‌ಎ ಮೆತಿಲೀಕರಣ ಮಾದರಿಗಳು ಕಂಡು ಬಂದರೆ ಅಂತಹ ರಕ್ತದ ಮಾದರಿ ಹೊಂದಿದವರಿಗೆ ಕ್ಯಾನ್ಸರ್ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆ ಇರುವುದನ್ನು ಖಚಿತಪಡಿಸುತ್ತದೆ. ಮೇಲಿನ ಚಿತ್ರದಲ್ಲಿ ವಿವರಿಸಿರುವುದು ಕ್ಯಾನ್ಸರ್‌ಗೆ ಸಂಬಂಧಿಸಿದ ಚಿತ್ರಣ.
ಕ್ಯಾನ್ಸರ್‌ಸ್ಪಾಟ್; ನಾಲ್ಕು ಹಂತಗಳ ಕಾರ್ಯನಿರ್ವಹಣೆ
ಸ್ಟ್ರಾಂಡ್ ಲೈಫ್ ಸೈನ್ಸಸ್ ಪ್ರಕಾರ, ಕ್ಯಾನ್ಸರ್‌ಸ್ಪಾಟ್ ನಾಲ್ಕು ಹಂತಗಳಲ್ಲಿ ಕೆಲಸ ಮಾಡುತ್ತದೆ.
1) ರಕ್ತ ಮಾದರಿ ಸಂಗ್ರಹದ ಬಳಿಕ ಪರೀಕ್ಷೆ - ಕ್ಯಾನ್ಸರ್ ಕೋಶಗಳು ರಕ್ತದಲ್ಲಿ ಬೆಳೆದು ಅಲ್ಲೇ ಸಾಯುತ್ತವೆ. ಆಗ ಅವು ತಮ್ಮ ಡಿಎನ್‌ಎಯನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತವೆ. ಅಂಥ ಡಿಎನ್‌ಎ ರಕ್ತದೊಂದಿಗೆ ಇರುತ್ತದೆ.
2) ಡಿಎನ್‌ಎ ಮೆತಿಲೀಕರಣ ಮಾದರಿಗಳು - ಮೆತಿಲೀಕರಣಕ್ಕೆ ಒಳಪಟ್ಟ ಬಳಿಕ ಸಾಮಾನ್ಯ ರಕ್ತ ಕಣಗಳ ಡಿಎನ್‌ಎಗೆ ಹೋಲಿಸಿದರೆ ಕ್ಯಾನ್ಸರ್ ಕೋಶಗಳಿಂದ ಬಿಡುಗಡೆಯಾದ ಡಿಎನ್‌ಎ ವಿಭಿನ್ನವಾಗಿರುತ್ತದೆ. (ಮೇಲಿನ ಚಿತ್ರದಲ್ಲಿ ಗಮನಿಸಬಹುದು)
3) ಅಡ್ವಾನ್ಸ್ಡ್ ಸೀಕ್ವೆನ್ಸಿಂಗ್ ಮತ್ತು ಅನಾಲಿಟಿಕ್ಸ್- ಕ್ಯಾನ್ಸರ್‌ಸ್ಪಾಟ್ ಲಕ್ಷಕೋಟಿಗಟ್ಟಲೆ ಸಾಮಾನ್ಯ ಡಿಎನ್‌ಎ ತುಣುಕುಗಳ ನಡುವೆ ಗೆಡ್ಡೆಯ ಮೂಲದ ಡಿಎನ್‌ಎ ತುಣುಕುಗಳಲ್ಲಿ ಕಂಡುಬರುವ ಮೆತಿಲೀಕರಣ ಮಾದರಿಗಳನ್ನು ಗುರುತಿಸಲು ಸುಧಾರಿತ ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಡೇಟಾ ವಿಶ್ಲೇಷಣೆಯನ್ನು ಬಳಸುತ್ತದೆ.
4) ಕ್ಯಾನ್ಸರ್‌ಸ್ಪಾಟ್‌ನಲ್ಲಿ ಎಐ ಬಳಕೆ - ಭಾರತದ ಎಲ್ಲ ಜನಾಂಗದ ರೋಗಿಗಳ ಸಮೂಹದಿಂದ ಪತ್ತೆಯಾದ ಮೆತಿಲೀಕರಣ ಮಾದರಿಗಳನ್ನು ಕ್ಯಾನ್ಸರ್ ಕಣಗಳು ಎಂಬುದನ್ನು ದೃಢಪಡಿಸುವುದಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಕ್ಯಾನ್ಸರ್‌ಸ್ಪಾಟ್ ಬಳಸುತ್ತದೆ.
ಕ್ಯಾನ್ಸರ್‌ಸ್ಪಾಟ್ ಟೆಸ್ಟ್ ಯಾರು ಮಾಡಿಸಬಹುದು
ಕ್ಯಾನ್ಸರ್‌ಸ್ಪಾಟ್ ಟೆಸ್ಟ್ ಅನ್ನು ಎಲ್ಲರೂ ಮಾಡಿಸಬೇಕು ಎಂದಿಲ್ಲ. ಸ್ಟ್ರಾಂಡ್ ಲೈಫ್ ಸೈನ್ಸಸ್ ಪ್ರಕಾರ, 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅಥವಾ ಕಿರಿಯರಾದರೆ, ಅವರಿಗೆ ಕೌಟುಂಬಿಕವಾಗಿ ಬಲವಾದ ಕ್ಯಾನ್ಸರ್ ಇತಿಹಾಸ ಇದ್ದರೆ, ಅವರು ಸಣ್ಣ ವಯಸ್ಸಿನಲ್ಲೇ ಹೆಚ್ಚು ತಂಬಾಕು ಬಳಸುತ್ತಿದ್ದರೆ, ಧೂಮಪಾನ ಮಾಡುತ್ತಿದ್ದರೆ ಅಂಥವರು ಕ್ಯಾನ್ಸರ್‌ಸ್ಪಾಟ್ ಟೆಸ್ಟ್ ಮಾಡಿಸಿಕೊಳ್ಳಬಹುದು. ಈ ಟೆಸ್ಟ್ ಮಾಡಿಸುವ ಮೊದಲು ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದನ್ನು ಮರೆಯಬೇಡಿ.
“ಆರಂಭದ ಎಚ್ಚರಿಕೆ ಎಂಬುದು ಕ್ಯಾನ್ಸರ್ ಜೊತೆಗಿನ ಹೋರಾಟದಲ್ಲಿ ಬಹಳ ಮುಖ್ಯವಾದದ್ದು. ಅದನ್ನು ಗೆಲ್ಲಬೇಕು. ಕ್ಯಾನ್ಸರ್ ಗಿಂತ ಒಂದು ಹೆಜ್ಜೆ ಮುಂದೆ ಇರುವುದಕ್ಕೆ ನಮಗೆ ಅನುವು ಮಾಡಿಕೊಡುವಂಥ ಕ್ಯಾನ್ಸರ್ ಆರಂಭಿಕ ಪತ್ತೆ ಪರೀಕ್ಷೆಯು ಸಹಾಯ ಮಾಡುತ್ತದೆ. ಇಪ್ಪತ್ನಾಲ್ಕು ವರ್ಷಕ್ಕೂ ಹೆಚ್ಚಿನ ಅವಧಿಯ ಇತಿಹಾಸದ ಕಾರಣ ಈ ವಿಚಾರದಲ್ಲಿ ಸ್ಟ್ರಾಂಡ್ ಜೀನೋಮಿಕ್ಸ್ ಮುಂಚೂಣಿಯಲ್ಲಿದೆ. ಹಲವು ವರ್ಷಗಳ ಕಠಿಣ ಅಧ್ಯಯನದ ಫಲವಾಗಿ ಭಾರತದಲ್ಲಿಯೇ ಇದು ಮೊದಲು ಎನಿಸಿಕೊಂಡಿದೆ,” ಎಂದು ಸ್ಟ್ರಾಂಡ್ಸ್ ಲೈಫ್ ಸೈನ್ಸಸ್ ಸಹ ಸಂಸ್ಥಾಪಕರು ಹಾಗೂ ಸಿಇಒ ಡಾ ರಮೇಶ್ ಹರಿಹರನ್ ಹೇಳಿದರು. ಅವರು ಬೆಂಗಳೂರಿನ ಜೀನೋಮಿಕ್ಸ್ ಡಯಾಗ್ನೋಸ್ಟಿಕ್ಸ್ ಅಂಡ್ ರೀಸರ್ಚ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಂಡಳಿಯ ಸದಸ್ಯೆ ಇಶಾ ಅಂಬಾನಿ ಪಿರಾಮಲ್ ಅವರು ಮಾತನಾಡಿ, “ಭಾರತದ ಮಟ್ಟಿಗೆ ಕ್ಯಾನ್ಸರ್ ಎಂಬುದು ಸಾವು ತರುವ ಹಾಗೂ ಬಹಳ ದೊಡ್ಡ ಕಾಯಿಲೆ. ರೋಗಿಗೆ, ಅವರ ಕುಟುಂಬಕ್ಕೆ ಹಾಗೂ ಸಮಾಜದ ಪಾಲಿಗೆ ಅತಿದೊಡ್ಡ ಆರ್ಥಿಕ, ಸಾಮಾಜಿಕ ಹಾಗೂ ಮಾನಸಿಕ ಹೊರೆಯಾಗಿದೆ. ಆರಂಭ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಹಚ್ಚುವ ಪರೀಕ್ಷೆಯನ್ನು ಸ್ಟ್ರಾಂಡ್ ಮಾಡುತ್ತಿದ್ದು, ಜನರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಪ್ರತಿ ಉಪಕ್ರಮದಲ್ಲೂ ರಿಲಯನ್ಸ್ ತನ್ನ “ವೀ ಕೇರ್” ಎಂಬ ಕಾರ್ಪೊರೇಟ್ ಸಿದ್ಧಾಂತವನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ರಿಲಯನ್ಸ್ ತನ್ನ ಪ್ರತಿ ಉಪಕ್ರಮದಲ್ಲೂ ವಿ ಕೇರ್ ಎಂಬ ಕಾರ್ಪೊರೇಟ್ ಸಿದ್ಧಾಂತವನ್ನು ಅನುಸರಿಸುತ್ತಿದೆ ಎಂದು ಹೇಳಿದರು.
(ಮಾಹಿತಿ - ಎಎನ್‌ಐ, ಪಿಟಿಐ ಮತ್ತು ಸ್ಟ್ರಾಂಡ್ಸ್ ಲೈಫ್ ಸೈನ್ಸಸ್, ರಿಲಯನ್ಸ್)