ಮೇಕಪ್, ಹೇರ್‌ಸ್ಟೈಲ್‌ನಲ್ಲಿ ಆಸಕ್ತಿ ಇದ್ದರೆ ಬ್ಯೂಟೀಷಿಯನ್ ಕಲಿಯಿರಿ; ಹಳ್ಳಿಯಲ್ಲೂ ಲಕ್ಷ ಸಂಪಾದನೆ ಕಷ್ಟವೇನಲ್ಲ
ಮೇಕಪ್, ಹೇರ್ ಸ್ಟೈಲಿಂಗ್‌ನಲ್ಲಿ ನಿಮಗೆ ಭಾರಿ ಆಸಕ್ತಿ ಇದ್ದರೆ, ಇದೇ ಕ್ಷೇತ್ರದಲ್ಲಿ ವೃತ್ತಿಬದುಕು ಕಟ್ಟಿಕೊಳ್ಳಬಹುದು. ಕೆಲವೇ ತಿಂಗಳುಗಳ ಬ್ಯೂಟೀಷಿಯನ್ ಕೋರ್ಸ್ ಕಲಿತು, ನಿಮ್ಮಲ್ಲೇ ಇರುವ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಂಪಾದನೆ ಮಾಡಬಹುದು.

ಹಣ ಮತ್ತು ಹೆಸರು ಸಂಪಾದನೆ ಮಾಡಲು ನಿಮ್ಮಲ್ಲಿ ಉತ್ತಮ ಶಿಕ್ಷಣವಿರಬೇಕು ಅಥವಾ ಕೌಶಲ್ಯಗಳಿರಬೇಕು. ಸುದೀರ್ಘ ವರ್ಷಗಳ ಕಾಲ ಶಿಕ್ಷಣ ಪಡೆದು ಹಲವರು ಉದ್ಯೋಗ ಅಥವಾ ವ್ಯವಹಾರದ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ತಮ್ಮ ಆಸಕ್ತಿ ಹಾಗೂ ಕೌಶಲ್ಯಗಳನ್ನೇ, ಸಂಪಾದನೆಗೆ ಅವಕಾಶವಾಗಿ ಪರಿವರ್ತಿಸುತ್ತಾರೆ. ವ್ಯಕ್ತಿಯ ಕೌಶಲ್ಯ ಅಥವಾ ಸೃಜನಶೀಲತೆಯನ್ನು ಬಯಸುವ ಕೆಲಸಕ್ಕೆ ಬೇಡಿಕೆಯೂ ಹೆಚ್ಚು. ಇದಕ್ಕೊಂದು ಉತ್ತಮ ಉದಾಹರಣೆ ಬ್ಯೂಟೀಷಿಯನ್ ಅಥವಾ ಮೇಕಪ್ ಆರ್ಟಿಸ್ಟ್. ದೊಡ್ಡ ದೊಡ್ಡ ನಗರಗಳು ಮಾತ್ರವಲ್ಲದೆ ಸಣ್ಣ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಬ್ಯೂಟೀಷಿಯನ್‌ಗಳಿಗೆ ಬೇಡಿಕೆ ಇದೆ.
ನಿಮಗೇನಾದರೂ ಸೌಂದರ್ಯ, ಮೇಕಪ್, ಹೇರ್ ಸ್ಟೈಲಿಂಗ್‌ನಲ್ಲಿ ಅಪಾರ ಆಸಕ್ತಿ ಇದ್ದರೆ ನಿಮಗೆ ಬ್ಯೂಟೀಷಿಯನ್ ಕೋರ್ಸ್ ಕಲಿಯಬಹುದು. ಇದಕ್ಕೆ ಅಕಾಡೆಮಿಕ್ ಶಿಕ್ಷಣದಲ್ಲಿ ಉತ್ತಮ ಅಂಕಗಳ ಅಗತ್ಯವೇನೂ ಇಲ್ಲ. ಅಲ್ಲದೆ ಥಿಯರಿ ತರಗತಿಗಳು ಇಲ್ಲದೆ ನೇರವಾಗಿ ಪ್ರಾಕಟಿಕಲ್ ಶಿಕ್ಷಣ ಪಡೆಯುವ ಮೂಲಕ ಈ ಕೋರ್ಸ್ ಪೂರ್ಣಗೊಳಿಸಬಹುದು.
ಬ್ಯೂಟಿಷಿಯನ್ ಕೋರ್ಸ್‌ಗಳು ಹೆಸರೇ ಹೇಳುವಂತೆ ಒಬ್ಬರ ಸೌಂದರ್ಯವನ್ನು ತಾತ್ಕಾಲಿಕವಾಗಿ ವೃದ್ಧಿಸುವ ಸೇವೆಗಳನ್ನು ಒದಗಿಸಲು ಅಗತ್ಯ ಶಿಕ್ಷಣ ಅಥವಾ ಜ್ಞಾನ ನೀಡುವ ಮೂಲಕ ನಿಮ್ಮ ಕೌಶಲ್ಯಗಳನ್ನು ವೃದ್ಧಿಸುತ್ತದೆ. ಇವು ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್‌ಗಳಿಂದ ಹಿಡಿದು ಪೂರ್ಣ ಪ್ರಮಾಣದ ಪದವಿಗಳವರೆಗೂ ಇರಬಹುದು. ಇದು ಚರ್ಮದ ಆರೈಕೆ, ಕೂದಲ ರಕ್ಷಣೆ ಹಾಗೂ ಕೂದಲ ಫ್ಯಾಶನ್, ಮೇಕಪ್, ಉಗುರು ಆರೈಕೆಯಂತಹ ಸೇರಿದಂತೆ ಇನ್ನೂ ಹಲವು ವಿಷಯಗಳನ್ನು ಒಳಗೊಂಡಿದೆ. ಇದು ಕಲಿತ ನಂತರ ಬ್ಯೂಟೀಶಿಯನ್ ಆಗಿ ಕೆಲಸ ಮಾಡಬಹುದು. ಅಲ್ಲದೆ ತಮ್ಮದೇ ವ್ಯವಹಾರ ಆರಂಭಿಸಿ, ಪಾರ್ಲರ್ ಅಥವಾ ಸಲೂನ್ ನಿರ್ವಹಣೆ ಮಾಡಬಹುದು.
ಬ್ಯೂಟಿಷಿಯನ್ ಕೋರ್ಸ್‌ಗಳ ವಿಧಗಳು
ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್: ಇದು ಮೇಕಪ್, ಹೇರ್ ಸ್ಟೈಲ್ ಅಥವಾ ಉಗುರು ಕಲೆಯಂತಹ ನಿರ್ದಿಷ್ಟ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಇವುಗಳನ್ನು ಕೆಲವೇ ವಾರ ಅಥವಾ ತಿಂಗಳುಗಳಲ್ಲಿ ಪೂರ್ಣಗೊಳಿಸಬಹುದು. ನಿಮಗೆ ಬೇಕಾದ ಕ್ಷೇತ್ರದ ಮೇಲೆ ಕೋರ್ಸ್ ಮಾಡಬಹುದು.
ಡಿಪ್ಲೊಮಾ ಕೋರ್ಸ್‌ಗಳು: ಡಿಪ್ಲೊಮಾ ಕೋರ್ಸ್‌ಗಳು ವಿವಿಧ ಸೌಂದರ್ಯ ತಂತ್ರಗಳಲ್ಲಿ ಹೆಚ್ಚು ಸಮಗ್ರ ತರಬೇತಿಯನ್ನು ಒದಗಿಸುತ್ತವೆ. ಇವು ಸಾಮಾನ್ಯವಾಗಿ ಹಲವಾರು ತಿಂಗಳುಗಳವರೆಗೆ ಇರುತ್ತದೆ. ನಿತ್ಯ ತರಗತಿಗಳಿಗೆ ಹಾಜರಾದರೂ ಕನಿಷ್ಠ 3, 6 ತಿಂಗಳು ಬೇಕಾಗುತ್ತವೆ.
ಪದವಿಗಳು: ಕೆಲವು ಸಂಸ್ಥೆಗಳು ಸೌಂದರ್ಯ ಮತ್ತು ಚರ್ಮದ ಆರೈಕೆಯ ವೈಜ್ಞಾನಿಕ ಅಂಶಗಳ ಮೇಲೆ ಕೇಂದ್ರೀಕರಿಸುವ ಕಾಸ್ಮೆಟಾಲಜಿಯಲ್ಲಿ ಸ್ನಾತಕೋತ್ತರ ಪದವಿಗಳನ್ನು ನೀಡುತ್ತವೆ. ಇಲ್ಲಿ ಸುದೀರ್ಘವಾಗಿ ವರ್ಷಗಳ ಕಾಲ ವ್ಯಾಸಂಗ ಮಾಡಿ ವೃತ್ತಿಪರ ಬ್ಯೂಟೀಷಿಯನ್‌ಗಳಾಗಬಹುದು.
ಕೋರ್ಸ್‌ನಲ್ಲಿ ಏನೇನು ಇರುತ್ತವೆ?
ಸೌಂದರ್ಯ ಕುರಿತ ಮೂಲಭೂತ ಅಂಶಗಳನ್ನು ಕಲಿಯಬಹುದು. ಚರ್ಮ (ತ್ವಚೆ), ಕೂದಲು ಮತ್ತು ಉಗುರುಗಳ ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರವನ್ನು ಅರ್ಥಮಾಡಿಕೊಳ್ಳಬಹುದು.
ಪ್ರಾಯೋಗಿಕ ಶಿಕ್ಷಣದ ಮೂಲಕ ಕೌಶಲ್ಯ ವೃದ್ಧಿಸಬಹುದು. ಮೇಕಪ್, ಆಯಾ ತ್ವಚೆಗೆ ಅನುಗುಣವಾಗಿ ಮೇಕಪ್ ಕಲೆ, ಹೇರ್ ಸ್ಟೈಲಿಂಗ್, ತ್ವಚೆಯ ಆರೈಕೆ ಚಿಕಿತ್ಸೆ, ಉಗುರು ಆರೈಕೆಯಲ್ಲಿ ಪ್ರಾಯೋಗಿಕ ತರಬೇತಿ, ಸ್ಟೈಲಿಶ್ ಹೇರ್ ಕಟಿಂಗ್ ಹೀಗೆ ವಿವಿಧ ಆಯಾಮಗಳ ತರಬೇತಿ ಪಡೆಯಬಹುದು.
ಸಲೂನ್ ಮತ್ತು ವ್ಯವಹಾರ ನಿರ್ವಹಣೆಗೆ ಅಗತ್ಯ ಶಿಕ್ಷಣ ಪಡೆಯಬಹುದು. ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಸಲೂನ್ ಕಾರ್ಯಾಚರಣೆಗಳು, ಗ್ರಾಹಕ ಸೇವೆ ಮತ್ತು ಮಾರ್ಕೆಟಿಂಗ್‌ನಂತಹ ವಿಷಯಗಳನ್ನು ಕಲಿಸಲಾಗುತ್ತದೆ.
ವೃತ್ತಿ ಅವಕಾಶಗಳು ಹೇಗಿವೆ?
ಬ್ಯೂಟಿಷಿಯನ್: ಸಲೂನ್, ಸ್ಪಾಗಳು ಅಥವಾ ಸ್ವತಂತ್ರ ವೃತ್ತಿಪರರಾಗಿ ಸೌಂದರ್ಯ ಸೇವೆಗಳನ್ನು ಒದಗಿಸುವುದು.
ಮೇಕಪ್ ಕಲಾವಿದ: ಮದುವೆ ಸೇರಿದಂತೆ ವಿವಿಧ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಬಹುದು. ಇವರಿಗೆ ಹೆಚ್ಚು ಬೇಡಿಕೆ ಇದೆ. ಇದೇ ವೇಳೆ ಫೋಟೋಗ್ರಫಿ ಮತ್ತು ವಿಶೇಷ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಮೇಕಪ್ ಆರ್ಟಿಸ್ಟ್‌ಗಳಾಗಿ ಸಂಪಾದನೆ ಮಾಡಬಹುದು.
ಕೇಶ ವಿನ್ಯಾಸ ಅಥವಾ ಹೇರ್ ಸ್ಟೈಲಿಸ್ಟ್: ಸಲೂನ್‌ಗಳಲ್ಲಿ ಅಥವಾ ಸ್ವತಂತ್ರ ವೃತ್ತಿಪರರಾಗಿ ಕೇಶವಿನ್ಯಾಸ ಮಾಡಬಹುದು.
ಚರ್ಮದ ಆರೈಕೆ ತಜ್ಞ: ಮುಖದ ಚಿಕಿತ್ಸೆಗಳು, ಮಸಾಜ್‌ಗಳು ಮತ್ತು ಇತರ ಚರ್ಮದ ಆರೈಕೆ ಸೇವೆಗಳನ್ನು ಒದಗಿಸುವುದು.
ಉಗುರು ತಂತ್ರಜ್ಞ (ನೈಲ್ ಟೆಕ್ನೀಷಿಯನ್): ಹಸ್ತಾಲಂಕಾರ ಮತ್ತು ಪಾದೋಪಚಾರಗಳಂತಹ ಉಗುರು ಆರೈಕೆ ಸೇವೆಗಳನ್ನು ಒದಗಿಸುವುದು (ಪೆಡಿಕ್ಯೂರ್, ಮೆನಿಕ್ಯೂರ್).
ಉತ್ತಮ ಸಂಪಾದನೆ
ಬ್ಯೂಟೀಷಿಯನ್ ಕಲಿತವರಿಗೆ ಭಾರಿ ಬೇಡಿಕೆ ಇದೆ. ಸಣ್ಣ ಪಟ್ಟಣಗಳಲ್ಲೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. ಮದುವೆ ಸಮಯದಲ್ಲಿ ಬ್ರೈಡಲ್ ಮೇಕಪ್‌ಗಳಿಗೆ ಈಗೀಗ ಹಳ್ಳಿ ಭಾಗದಲ್ಲೂ 10 ಸಾವಿರ ರೂಪಾಯಿಗೂ ಹೆಚ್ಚು ಚಾರ್ಜ್ ಮಾಡುತ್ತಾರೆ. ನಗರಗಳಲ್ಲಿ 20 ಸಾವಿರಕ್ಕೂ ಹೆಚ್ಚು ಚಾರ್ಜ್ ಮಾಡುತ್ತಾರೆ. ಇದು ಉದಾಹರಣೆ ಅಷ್ಟೇ. ಬೇರೆ ಬೇರೆ ರೀತಿಯಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು. ಅಥವಾ ಅರೆಕಾಲಿಕ ಉದ್ಯೋಗವಾಗಿ ಆಸಕ್ತಿಯ ಮೇಲೆ ಕೆಲಸ ಮಾಡಿಕೊಂಡು ಸಂಪಾದನೆ ಮಾಡಬಹುದು.
ಬ್ಯೂಟಿಷಿಯನ್ ಕೋರ್ಸ್ ಎಲ್ಲಿ ಮಾಡಬಹುದು?
- ಬ್ಯೂಟಿಷಿಯನ್ ಅಕಾಡೆಮಿಗಳು ಮತ್ತು ತರಬೇತಿ ಕೇಂದ್ರಗಳಿರುತ್ತವೆ. ಇವು ಬ್ಯೂಟಿಷಿಯನ್ ಕೋರ್ಸ್, ಮೇಕಪ್, ಮತ್ತು ಹೇರ್ ಸ್ಟೈಲಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ನೀಡುತ್ತವೆ.
- ಸಲೂನ್‌ಗಳು ಮತ್ತು ಸ್ಪಾಗಳಲ್ಲಿ ನೇರವಾಗಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಬ್ಯೂಟಿಷಿಯನ್‌ಗಳಿಗೆ ತರಬೇತಿ ಅಥವಾ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮ ನೀಡಲಾಗುತ್ತದೆ.
- ವೇಗವಾಗಿ ಕಲಿಯಲು ಬಯಸುವವರಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ಯೂಟಿಷಿಯನ್ ಕೋರ್ಸ್‌ಗಳು ಮತ್ತು ಟ್ಯುಟೋರಿಯಲ್‌ಗಳು ಇರುತ್ತವೆ.
- ನೀವು ವಾಸವಿರುವ ಸ್ಥಳದ ಸಮೀಪವಿರುವ ಬ್ಯೂಟಿ ಪಾರ್ಲರ್‌ಗಳಲ್ಲಿಯೂ ಇಂಥಾ ಪ್ರಾಯೋಗಿಕ ಶಿಕ್ಷಣ ನೀಡುತ್ತಾರೆ. ಜೊತೆಗೆ ನೇರವಾಗಿ ಕ್ಲೈಂಟ್‌ಗಳ ಬಳಿ ಹೋಗಿ ಪ್ರಾಯೋಗಿಕ ತರಬೇತಿಯೂ ಪಡೆಯಬಹುದು. ನಿಮ್ಮ ಹತ್ತಿರದಲ್ಲಿ ಬ್ಯೂಟೀಷಿಯನ್ ಕೋರ್ಸ್‌ಗಳನ್ನು ಹುಡುಕಲು ನೀವು ಆನ್‌ಲೈನ್‌ನಲ್ಲಿ ಸರ್ಚ್ ಮಾಡಬಹುದು.
- ಸ್ಥಳೀಯ ಬ್ಯೂಟಿ ಸಲೂನ್‌ಗಳು ಮತ್ತು ಸ್ಪಾಗಳನ್ನು ಸಂಪರ್ಕಿಸುವ ಮೂಲಕ ಅಲ್ಲಿರುವ ತರಬೇತಿ ಅಥವಾ ಕೋರ್ಸ್‌ಗಳ ಕುರಿತು ವಿಚಾರಿಸಿ.
ಇದನ್ನೂ ಓದಿ | ಜಪಾನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆಯೇ; MEXT ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕ ಹಾಗೂ ಆಯ್ಕೆ ಪ್ರಕ್ರಿಯೆ ಹೀಗಿದೆ