ಎಸ್‌ಎಸ್‌ಎಲ್‌ಸಿ ಮುಗಿಸಿ ಬೇಗನೆ ಸಂಪಾದನೆ ಆರಂಭಿಸುವ ಯೋಚನೆಯೇ; ಈ 6 ಕೋರ್ಸ್‌ಗಳನ್ನು 6 ತಿಂಗಳಲ್ಲಿ ಮುಗಿಸಬಹುದು
ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾ ಕೆಲವೊಂದು ಅಲ್ಪಾವಧಿಯ ಕೋರ್ಸ್‌ಗಳಿವು. ಈಗೀಗ ಸೃಜನಶೀಲ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚು. ಇದನ್ನು ಮಾಡಿದರೆ ಬೇಗನೆ ವೃತ್ತಿಬದುಕು ಆರಂಭಿಸಿ ಹೆಚ್ಚು ಸಂಪಾದನೆಯೂ ಮಾಡಬಹುದು. ಇದರ ಸಮಗ್ರ ವಿವರ ಇಲ್ಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದು ಕೆಲವು ದಿನಗಳು ಕಳೆದಿವೆ. ವಿದ್ಯಾರ್ಥಿಗಳು ಮುಂದಿನ ಕಲಿಕೆ ಹಾಗೂ ಭವಿಷ್ಯದ ಕುರಿತು ಹೆಚ್ಚು ಚಿಂತಿತರಾಗುವ ಸಮಯವಿದು. ಹೆಚ್ಚಿನ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹಾಕಿಕೊಂಡು ಅದರಂತೆ ಮುಂದಿನ ಓದು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕಾರಣದಿಂದಾಗಿ ಬೇಗನೆ ವಿದ್ಯಾಭ್ಯಾಸ ಮುಗಿಸಿ ಸಂಪಾದನೆ ಆರಂಭಿಸುವ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಅದಕ್ಕೆ ಸೂಕ್ತವಾಗುವ ಕೋರ್ಸ್ ಹುಡುಕಾಡುತ್ತಾರೆ. ಅಂಥಾ ವಿದ್ಯಾರ್ಥಿಗಳಿಗಾಗಿ ಇಲ್ಲಿ ಕೆಲವೊಂದು ಅಲ್ಪಾವಧಿಯಲ್ಲಿ ಪೂರ್ಣಗೊಳ್ಳುವ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಈಗೀಗ ಸೃಜನಶೀಲ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚು. ಹೀಗಾಗಿ ಅಂಥಾ ಕೋರ್ಸ್‌ಗಳನ್ನು ಮಾಡಿದರೆ ಹೆಚ್ಚು ಸಂಪಾದನೆಯೂ ಮಾಡಬಹುದು. ಫ್ಯಾಷನ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್, ವಿಶುವಲ್ ಆರ್ಟ್, ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಡಿಪ್ಲೊಮಾ, ಡೇಟಾ ಅನಾಲಿಟಿಕ್ಸ್ ಮತ್ತು ಪ್ರೋಗ್ರಾಮಿಂಗ್, ಮೊಬೈಲ್ ಟೆಕ್ನೀಷಿಯನ್ ಇಂಥಾ ಕೋರ್ಸ್‌ಗಳನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮುಗಿಸಬಹುದು. ಆ ನಂತರ ವೃತ್ತಿಬದುಕಿಗೆ ಲಗ್ಗೆ ಹಾಕಿ ಸಂಪಾದನೆ ಶುರು ಮಾಡಬಹುದು.
ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾದ ಕೆಲವು ಜನಪ್ರಿಯ ಅಲ್ಪಾವಧಿಯ ಕೋರ್ಸ್‌ಗಳ ವಿವರ ಇಲ್ಲಿದೆ…
ಗ್ರಾಫಿಕ್ ಡಿಸೈನಿಂಗ್ ಅಥವಾ 3D ಅನಿಮೇಷನ್ ಕೋರ್ಸ್‌ಗಳು
10ನೇ ತರಗತಿ ಪಾಸಾದ ನಂತರ ಹೊಸತನದ ಕೋರ್ಸ್ ಬೇಕು ಎನ್ನುವ ವಿದ್ಯಾರ್ಥಿಗಳು 3ಡಿ ಅನಿಮೇಷನ್ ಅಥವಾ ಗ್ರಾಫಿಕ್ ಡಿಸೈನಿಂಗ್ ಕಲಿಯಬಹುದು. ತಮ್ಮ ಸೃಜನಶೀಲ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಅದನ್ನು ಮತ್ತಷ್ಟು ವೃತ್ತಿಪರವಾಗಿಸಿಕೊಳ್ಳಬಹುದು. ನಿಮಗೆ ಇದರಲ್ಲಿ ಆಸಕ್ತಿ ಇದ್ದರೆ, ಖಂಡಿತಾ ಈ ಕೋರ್ಸ್ ವೃತ್ತಿಬದುಕಿಗೆ ನೆರವಾಗುತ್ತದೆ. 6 ರಿಂದ 18 ತಿಂಗಳುಗಳವರೆಗೆ ಇರುವ ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್‌ನ ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಕೌಶಲ್ಯ ಮತ್ತು ಪರಿಣತಿಯನ್ನು ನೀಡುತ್ತವೆ.
ಫ್ಯಾಷನ್ ಡಿಸೈನಿಂಗ್
ಬಟ್ಟೆ ವಿನ್ಯಾಸ, ಸ್ಕೆಚಿಂಗ್ ಮತ್ತು ಹೊಲಿಗೆ ಸೇರಿದಂತೆ ಆಧುನಿಕ ಫ್ಯಾಷನ್‌ಗೆ ಸಂಬಂಧಿಸಿದ ಎಲ್ಲವೂ ಈ ಕೋರ್ಸ್‌ಗಳಲ್ಲಿ ಕಲಿಯಬಹುದು. ಸುದೀರ್ಘ ಅವಧಿಯ ಕೋರ್ಸ್‌ಗಳ ನಡುವೆ ಅಲ್ಪಾವಧಿಯ ಕೋರ್ಸ್‌ಗಳ ಆಯ್ಕೆಯೂ ಲಭ್ಯವಿರುತ್ತದೆ. ನಿಮ್ಮ ಸಾಮರ್ಥ್ಯ ಅಥವಾ ಆಸಕ್ತಿಯ ಅನುಸಾರ ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಳ್ಳಿ.
ಬ್ಯೂಟೀಷಿಯನ್
ಹೆಚ್ಚಿನ ವಿದ್ಯಾರ್ಥಿಗಳಿಗೆ ಥಿಯರಿ ಕ್ಲಾಸ್‌ಗಳು ಇಷ್ಟವಾಗುವುದಿಲ್ಲ. ಪ್ರಾಕ್ಟಿಕಲ್ ಶಿಕ್ಷಣ ಬೇಗನೆ ತಲೆಗೆ ಹತ್ತುತ್ತದೆ. ನಿಮಗೆ ಮೇಕಪ್ ಇಷ್ಟವಿದ್ದರೆ, ಬ್ಯೂಟೀಷಿಯನ್ ಕೋರ್ಸ್ ಮಾಡಬಹುದು. 6 ತಿಂಗಳಿಂದ ಹಿಡಿದು ವರ್ಷಗಳವರೆಗಿನ ಕೋರ್ಸ್ ಆಯ್ಕೆ ಲಭ್ಯವಿರುತ್ತದೆ. ಮೇಕಪ್ ಮಾಡುವುದರಿಂದ ಹಿಡಿದು ಕೂದಲ ವಿನ್ಯಾಸ ಸೇರಿದಂತೆ ಬ್ರೈಡಲ್ ಮೇಕಪ್ ಕೂಡಾ ಕಲಿಸಲಾಗುತ್ತದೆ. ಮೇಕಪ್ ಆರ್ಟಿಸ್ಟ್‌ಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ಉತ್ತಮ ಸಂಪಾದನೆ ಮಾಡಬಹುದು.
ಮೊಬೈಲ್ ಟೆಕ್ನೀಷಿಯನ್
ಮೊಬೈಲ್ ಟೆಕ್ನೀಷಿಯನ್‌ಗಳಿಗೆ ಉತ್ತಮ ಬೇಡಿಕೆ ಇದೆ. ಈಗೀಗ ಹೆಚ್ಚಿನ ಯುವಕರು ಮೊಬೈಲ್ ರಿಪೈರ್ ಟ್ರೈನಿಂಗ್ ಪಡೆದು ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಇದಕ್ಕೆ 6 ತಿಂಗಳ ಮೊಬೈಲ್ ಟೆಕ್ನಿಷಿಯನ್ ಕೋರ್ಸ್ ಸಾಕಾಗುತ್ತದೆ. ವಿಶೇಷವೆಂದರೆ ಎಸ್‌ಎಸ್‌ಎಲ್‌ಸಿ ಫೇಲ್ ಆದ ವಿದ್ಯಾರ್ಥಿಗಳು ಕೂಡಾ ಇದನ್ನು ಕಲಿಯಬಹುದು. ಆಂಡ್ರಾಯ್ಡ್ ಮತ್ತು ಐಫೋನ್ ರಿಪೇರಿ ತರಬೇತಿ ಇಲ್ಲಿ ನೀಡಲಾಗುತ್ತದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಈ ಕೋರ್ಸ್ ಮಾಡಿದವರಿಗೆ ಬೇಡಿಕೆ ಇದೆ.
ಪ್ಯಾರಾಮೆಡಿಕಲ್ ಕೋರ್ಸ್
ಈ ಕೋರ್ಸ್‌ಗಳು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ, ನರ್ಸಿಂಗ್ ಆರೈಕೆ ಮತ್ತು ರೇಡಿಯಾಲಜಿ ಸೇರಿದಂತೆ ಆರೋಗ್ಯ ರಕ್ಷಣೆಯ ವಿವಿಧ ಅಂಶಗಳನ್ನು ಒಳಗೊಂಡಿವೆ. ಇದೇ ವೇಳೆ ನರ್ಸಿಂಗ್ ಸಹಾಯಕರಾಗಿ ರೋಗಿಗಳ ಆರೈಕೆ ಮತ್ತು ಮೂಲಭೂತ ನರ್ಸಿಂಗ್ ಕೌಶಲ್ಯಗಳಲ್ಲಿ ತರಬೇತಿ ಪಡೆಯಬಹುದು.
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ಗಳು
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮಾಡುವ ಮೂಲಕ ಇಂಟರ್ನೆಟ್ ಮಾರ್ಕೆಟಿಂಗ್‌ನ ಕ್ರಿಯಾತ್ಮಕ ಕ್ಷೇತ್ರದಲ್ಲಿ ಅವಕಾಶಗಳನ್ನು ಪಡೆಯಬಹುದು. ಸಾಮಾನ್ಯವಾಗಿ 3 ತಿಂಗಳಿಂದ 2 ವರ್ಷಗಳವರೆಗೆ ಇಂಥಾ ಕೋರ್ಸ್‌ಗಳು ಇರುತ್ತವೆ.