ಫ್ಯಾಶನ್ ಡಿಸೈನಿಂಗ್ ಕೋರ್ಸ್‌ನಲ್ಲಿ ಏನೇನು ಕಲಿಯಬಹುದು; ವೃತ್ತಿ ಅವಕಾಶ ಹೇಗಿದೆ?
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ಯಾಶನ್ ಡಿಸೈನಿಂಗ್ ಕೋರ್ಸ್‌ನಲ್ಲಿ ಏನೇನು ಕಲಿಯಬಹುದು; ವೃತ್ತಿ ಅವಕಾಶ ಹೇಗಿದೆ?

ಫ್ಯಾಶನ್ ಡಿಸೈನಿಂಗ್ ಕೋರ್ಸ್‌ನಲ್ಲಿ ಏನೇನು ಕಲಿಯಬಹುದು; ವೃತ್ತಿ ಅವಕಾಶ ಹೇಗಿದೆ?

ಫ್ಯಾಷನ್‌ ಬಗ್ಗೆ ಆಸಕ್ತಿ ಇರುವವರು ಫ್ಯಾಷನ್‌ ಡಿಸೈನಿಂಗ್‌ ಕಲಿತು ಉತ್ತಮ ಸಂಪಾದನೆಯ ಮಾರ್ಗ ಕಂಡುಕೊಳ್ಳಬಹುದು. ಆಯ್ಕೆಗನುಸಾರ ಕೋರ್ಸ್‌ ಮಾಡಿ, ವೃತ್ತಿಜೀವನ ರೂಪಿಸಬಹುದು. ಇದು ಯಾವುದೇ ಕಾಲಕ್ಕೂ ಹೆಚ್ಚು ಬೇಡಿಕೆ ಇರುವ ಕೋರ್ಸ್‌ ಆಗಿದೆ.

ಫ್ಯಾಶನ್ ಡಿಸೈನಿಂಗ್ ಕೋರ್ಸ್‌ನಲ್ಲಿ ಏನೇನು ಕಲಿಯಬಹುದು; ವೃತ್ತಿ ಅವಕಾಶ ಹೇಗಿದೆ?
ಫ್ಯಾಶನ್ ಡಿಸೈನಿಂಗ್ ಕೋರ್ಸ್‌ನಲ್ಲಿ ಏನೇನು ಕಲಿಯಬಹುದು; ವೃತ್ತಿ ಅವಕಾಶ ಹೇಗಿದೆ?

ಫ್ಯಾಷನ್ ಡಿಸೈನಿಂಗ್‌ (Fashion designing) ಕೋರ್ಸ್‌ಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಕೋರ್ಸ್‌ ಆಗಿದೆ. ಫ್ಯಾಷನ್‌‌ ಬಗ್ಗೆ ಆಸಕ್ತಿ ಇರುವವರು ಹಾಗೂ ತಮ್ಮ ಸೃಜನಶೀಲತೆಗೆ ಇನ್ನಷ್ಟು ಕೌಶಲ್ಯಗಳನ್ನು ಸೇರಿಸಲು ಬಯಸುವವರು ಈ ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೆ. ಉತ್ತಮ ಸಂಪಾದನೆ ಸಾಧ್ಯವಾಗಿರುವ ಕ್ಷೇತ್ರಕ್ಕೆ ಕಾಲಿಡಲು ಬಯಸುವವರು ಫ್ಯಾಷನ್‌ ಡಿಸೈನಿಂಗ್‌ ಕಲಿಯಬಹುದು. ನಿಮ್ಮ ಆಸಕ್ತಿ, ವೃತ್ತಿ ಗುರಿಗಳು ಮತ್ತು ಪ್ರಸ್ತುತ ಪರಿಣತಿಯ ಆಧಾರದ ಮೇಲೆ ಸೂಕ್ತ ಕೋರ್ಸ್‌ ಆಯ್ಕೆ ಮಾಡಿಕೊಂಡು, ಈ ಕ್ಷೇತ್ರದಲ್ಲಿ ಮುಂದುವರೆಯಬಹುದು.

ಫ್ಯಾಷನ್ ಡಿಸೈನಿಂಗ್‌ ಎಂಬುದು ವಿನ್ಯಾಸ ತತ್ವಗಳು, ಸೌಂದರ್ಯಶಾಸ್ತ್ರ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಅನ್ವಯಿಸುವ ಮೂಲಕ ಮೂಲ ಉಡುಪು, ಪರಿಕರಗಳು ಮತ್ತು ಪಾದರಕ್ಷೆಗಳನ್ನು ರಚಿಸುವ ಪ್ರಕ್ರಿಯೆಯಾಗಿದೆ. ಇದಕ್ಕೆ ಸೃಜನಶೀಲತೆ, ಕಲಾತ್ಮಕತೆ, ಕೌಶಲ್ಯ ಮತ್ತು ತಾಂತ್ರಿಕ ಜ್ಞಾನದ ಅಗತ್ಯವಿದೆ. ಈ ಕೋರ್ಸ್‌ ಮೂಲಕ ಇಂಥಾ ಕೌಶಲ್ಯ ವೃದ್ಧಿಸಿಕೊಳ್ಳಬಹುದು. ಫ್ಯಾಷನ್‌ ಹಾಗೂ ಟ್ರೆಂಡ್‌ಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ.

ಫ್ಯಾಷನ್ ಡಿಸೈನರ್‌ಗಳು ಆಯಾ ಕಾಲಕ್ಕೆ ತಕ್ಕಂತೆ ಪ್ರಸ್ತುತವಾಗುವ ಮತ್ತು ಉದಯೋನ್ಮುಖ ಫ್ಯಾಷನ್ ಪ್ರವೃತ್ತಿಗಳನ್ನು ಪ್ರತಿಬಿಂಬಿಸುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಡಿಸೈನರ್‌ಗಳು ವಿವಿಧ ಮೂಲಗಳಿಂದ ಸ್ಫೂರ್ತಿ ಪಡೆದು, ಜನರಿಗೆ ಆರಾಮದಾಯಕ ಎನಿಸುವ, ಫಿಟ್ ಆಗುವ ಮತ್ತು ಕ್ರಿಯಾಶೀಲತೆ ಅಡಕವಾಗಿರುವ ವಿನ್ಯಾಸಗಳನ್ನು ಮಾಡುತ್ತಾರೆ.

ಕೋರ್ಸ್‌ಗಳ ವಿಧಗಳು

ಫ್ಯಾಷನ್ ಡಿಸೈನಿಂಗ್‌ನಲ್ಲಿ ಬಿ.ಡಿ.ಎಸ್ ಅಥವಾ ಬಿಎಸ್‌ಸಿ (B.Sc. in Fashion Design): ಜವಳಿ, ಉಡುಪು ಡಿಸೈನ್‌ ಸೇರಿದಂತೆ ಫ್ಯಾಷನ್ ವಿನ್ಯಾಸದ ಮೂಲಭೂತ ಅಂಶಗಳನ್ನು ಒಳಗೊಂಡಿರುವ ಪದವಿ ಕೋರ್ಸ್‌ ಇದಾಗಿದೆ. ಸಾಮಾನ್ಯವಾಗಿ ಮೂರು ವರ್ಷಗಳ ಡಿಗ್ರಿ ಕೋರ್ಸ್‌ ಕರ್ನಾಟಕದ ಹಲವು ಕಾಲೇಜುಗಳಲ್ಲಿ ಇವೆ.

ಫ್ಯಾಷನ್ ಡಿಸೈನಿಂಗ್‌ನಲ್ಲಿ ಎಂ.ಡಿ.ಎಸ್ ಅಥವಾ ಎಂಎಸ್‌ಸಿ: ಸುಸ್ಥಿರ ಫ್ಯಾಷನ್, ಐಷಾರಾಮಿ ಫ್ಯಾಷನ್ ಅಥವಾ ಫ್ಯಾಷನ್ ಉದ್ಯಮಶೀಲತೆಯಂತಹ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆಯಲು ಈ ಕೋರ್ಸ್‌ ನೆರವಾಗುತ್ತದೆ. ಅಗತ್ಯ ಜ್ಞಾನ ಮತ್ತು ಕೌಶಲ್ಯಗಳನ್ನು ಹೇಳಿಕೊಡುವ ಸ್ನಾತಕೋತ್ತರ ಪದವಿ ಕೋರ್ಸ್‌ ಇದು.

ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಪ್ಲೊಮಾ: ಫ್ಯಾಷನ್ ಡಿಸೈನಿಂಗ್‌ನಲ್ಲಿ ಮೂಲಭೂತ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವ ಅಲ್ಪಾವಧಿಯ ಕೋರ್ಸ್ ಇದಾಗಿದೆ. ಇದು ಸಾಮಾನ್ಯವಾಗಿ ಪ್ರಾಯೋಗಿಕ ಅಥವಾ ಮೂಲ ಪರಿಕಲ್ಪನೆಗಳನ್ನು ಕೇಂದ್ರೀಕರಿಸಿ ಇರುವ ಕೋರ್ಸ್.

ಶುಲ್ಕ ಎಷ್ಟಿರುತ್ತದೆ?

ಮೂರು ವರ್ಷಗಳ ಪದವಿ ಕೋರ್ಸ್‌ಗೆ ಅಂದಾಜು 1.5ರಿಂದ 2 ಲಕ್ಷ ರೂ.ವರೆಗೆ ಶುಲ್ಕವಿರುತ್ತದೆ. ಉದಾಹರಣೆಗೆ ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ಗೆ ಪ್ರತಿ ವರ್ಷಕ್ಕೆ ತಲಾ 50 ಸಾವಿರ ರೂ. ಶುಲ್ಕವಿದೆ. ಮೊದಲ ವರ್ಷಕ್ಕೆ ವಿಶ್ವವಿದ್ಯಾನಿಲಯ ಶುಲ್ಕವಾಗಿ ಹೆಚ್ಚುವರಿ 6 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ.

ವಿವಿಧ ರೀತಿಯ ಫ್ಯಾಷನ್ ವಿನ್ಯಾಸಕರು

ಬಟ್ಟೆ ವಿನ್ಯಾಸಕರು: ಉಡುಪುಗಳು, ಸೂಟ್‌ಗಳು, ಪ್ಯಾಂಟ್‌ಗಳು ಮತ್ತು ಸ್ಕರ್ಟ್‌ಗಳು ಸೇರಿದಂತೆ ಉಡುಪುಗಳನ್ನು ರಚಿಸುವತ್ತ ಗಮನಹರಿಸುತ್ತಾರೆ.

ಆಕ್ಸೆಸರಿ ವಿನ್ಯಾಸಕರು: ಶೂಗಳು, ಕೈಚೀಲಗಳು ಮತ್ತು ಆಭರಣಗಳಂತಹ ಪರಿಕರಗಳ ವಿನ್ಯಾಸದಲ್ಲಿ ಪರಿಣತಿ ಹೊಂದಿರುವವರು.

ಪಾದರಕ್ಷೆ ವಿನ್ಯಾಸಕರು: ವಿವಿಧ ಉದ್ದೇಶಗಳಿಗಾಗಿ ಶೂಗಳು ಮತ್ತು ಪಾದರಕ್ಷೆಗಳನ್ನು ಡಿಸೈನ್‌ ಮಾಡುವವರು

ವಸ್ತ್ರ ವಿನ್ಯಾಸಕರು: ಚಲನಚಿತ್ರ, ರಂಗಭೂಮಿ ಮತ್ತು ಇತರ ಪ್ರದರ್ಶನ ಕಲೆಗಳಿಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸುವುದು.

ಉದ್ಯೋಗಾವಕಾಶಗಳು

ಫ್ಯಾಷನ್ ಹೌಸ್‌ ಅಥವಾ ಉಡುಪು ಕಂಪನಿಗಳು: ಈಗಾಗಲೇ ಹೆಸರುವಾಸಿಯಾಗಿರುವ ಬ್ರ್ಯಾಂಡೆಡ್‌ ಕಂಪನಿಗಳಲ್ಲಿ ಉತ್ತಮ ಸಂಭಾವನೆಯೊಂದಿಗೆ ಉದ್ಯೋಗ ಅವಕಾಶಗಳಿರುತ್ತವೆ. ಆ ಬ್ರ್ಯಾಂಡ್‌ಗಳಿಗೆ ನಿಮ್ಮದೇ ಕೌಶಲ್ಯ ಬಳಸಿ ಡಿಸೈನ್‌ಗಳನ್ನು ಸಿದ್ಧಪಡಿಸಬಹುದು. ಇಲ್ಲಿ ನಿಮ್ಮ ಸೃಜನಶೀಲತೆ, ಕೌಶಲ್ಯ, ಅನುಭವದ ಆಧಾರದಲ್ಲಿ ಸಂಭಾವನೆಯ ಬೇಡಿಕೆ ಇಡಬಹುದು.

ಚಿಲ್ಲರೆ ವ್ಯಾಪಾರಿಗಳು ಮತ್ತು ಸ್ಟೋರ್‌ಗಳು: ಅಂಗಡಿಗಳಿಗೆ ಬೇಕಾದ ಬಟ್ಟೆಗಳನ್ನು ವಿನ್ಯಾಸಗೊಳಿಸುವುದು ಅಥವಾ ಅಭಿವೃದ್ಧಿಪಡಿಸಬಹುದು. ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಿ ಸಂಪಾದನೆ ಮಾಡಬಹುದು.

ಉತ್ಪಾದನಾ ಸಂಸ್ಥೆಗಳು: ಉಡುಪುಗಳು ಮತ್ತು ಪರಿಕರಗಳ ಉತ್ಪಾದನೆಯನ್ನು ಮೇಲ್ವಿಚಾರಣೆ ಮಾಡುವುದು. ಸಲಹೆ ಸೂಚನೆ ನೀಡುವುದು.

ವಿನ್ಯಾಸ ಸಂಸ್ಥೆಗಳು: ವಿಶಿಷ್ಟ ವಿನ್ಯಾಸಗಳನ್ನು ರಚಿಸಲು ಇತರ ವಿನ್ಯಾಸಕರು ಮತ್ತು ಗ್ರಾಹಕರೊಂದಿಗೆ ಸಹಯೋಗ ಮಾಡಬಹುದು.

ಚಲನಚಿತ್ರ ಮತ್ತು ದೂರದರ್ಶನ ಉದ್ಯಮ: ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಿಗೆ ವೇಷಭೂಷಣಗಳನ್ನು ರಚಿಸುವುದು, ಸಿದ್ಧಪಡಿಸುವುದು ಮತ್ತು ಸ್ಟೈಲಿಂಗ್ ಮಾಡುವುದು. ಕೆಲವು ಸೆಲೆಬ್ರಿಟಿಗಳು ವೈಯಕ್ತಿಕವಾಗಿ ಫ್ಯಾಷನ್‌ ಡಿಸೈನರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಅವರಿಗೆ ಬೇಕಾದ ವಸ್ತ್ರವಿನ್ಯಾಸ ಮಾಡಿಕೊಡಬಹುದು.

ಸ್ವಉದ್ಯೋಗ: ತಮ್ಮದೇ ಆದ ಡಿಸೈನಿಂಗ್‌ ಉದ್ಯಮ ಸ್ಥಾಪಿಸಿ ಸಂಪಾದನೆ ಮಾಡಬಹುದು. ಉದ್ಯಮ ಅಥವಾ ವ್ಯವಹಾರ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.