ಪಿಯುಸಿ ನಂತರ ಬಿವಿಎ, ಕಲೆಯಲ್ಲಿ ಆಸಕ್ತಿ ಇರುವವರಿಗೆ ದೃಶ್ಯಕಲಾ ಪದವಿ ಉತ್ತಮ ಆಯ್ಕೆ; ವ್ಯಾಪ್ತಿ-ಉದ್ಯೋಗಾವಕಾಶವೂ ಹೆಚ್ಚು
ಈಗೀಗ ವಿವಿಧ ಕೌಶಲ್ಯಗಳ ಅಗತ್ಯವಿರುವ ಸೃಜನಶೀಲ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚು. ಕೌಶಲ್ಯಗಳಿದ್ದರೆ ಅದಕ್ಕೆ ಉತ್ತಮ ವ್ಯಾಪ್ತಿಯೂ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಗೆ ತಕ್ಕನಾಗಿ ಕಲೆಗೆ ಸಂಬಂಧಿಸಿದ ಪ್ರಾಯೋಗಿಕ ಶಿಕ್ಷಣ ಪಡೆಯಬಹುದು. ಇದಕ್ಕೆ ಈ ಕೋರ್ಸ್ ನಿಮಗೆ ನೆರವಾಗಬಹುದು.

ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪಾಸಾದ ಹೆಚ್ಚಿನ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಚಿಂತೆ ಇರುತ್ತದೆ. ಕೆಲವು ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಕೋರ್ಸ್ ಆರಿಸಿಕೊಂಡರೆ, ಇನ್ನೂ ಕೆಲವು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕೋರ್ಸ್ಗೆ ಹುಡುಕುತ್ತಾರೆ. ಕಲಾ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಇಲ್ಲೊಂದು ಕೋರ್ಸ್ ಕುರಿತ ಮಾಹಿತಿ ಇದೆ. ಇದುವೇ ದೃಶ್ಯಕಲಾ ಪದವಿ. ಇಂಗ್ಲೀಷ್ನಲ್ಲಿ ಇದನ್ನು ಬಿವಿಎ (ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್) ಎಂದು ಹೇಳಲಾಗುತ್ತದೆ. ಪಿಯುಸಿ ಪಾಸಾದ ವಿದ್ಯಾರ್ಥಿಗಳು ಬಿವಿಎ ಅಧ್ಯಯನ ಮಾಡಬಹುದು. ಎಸ್ಎಸ್ಎಲ್ಸಿ ಆದ ನಂತರವೂ ದೃಶ್ಯಕಲಾ ವಿಷಯದಲ್ಲಿ ಆರಂಭಿಕ ಶಿಕ್ಷಣ ಪಡೆಯುವ ಅವಕಾಶವಿದೆ. ಈ ಕೋರ್ಸ್ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.
ಈಗೀಗ ತಾಂತ್ರಿಕ ಶಿಕ್ಷಣಕ್ಕಿಂತ ಸೃಜನಶೀಲ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚು. ಕೌಶಲ್ಯಗಳಿದ್ದರೆ ಅದಕ್ಕೆ ಉತ್ತಮ ವ್ಯಾಪ್ತಿಯೂ ಇರುತ್ತದೆ. ವಿದ್ಯಾರ್ಥಿಗಳು ಸೃಜನಶೀಲ ಪ್ರಾಯೋಗಿಕ ಶಿಕ್ಷಣದ ಆಯ್ಕೆ ಮಾಡಿಕೊಂಡು ತಮ್ಮದೇ ಆದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು.
ದೃಶ್ಯಕಲಾ ಪದವಿ (BVA-ಬ್ಯಾಚುಲರ್ ಆಫ್ ವಿಷುವಲ್ ಆರ್ಟ್ಸ್) ಎಂದರೇನು ?
ಬ್ಯಾಚುಲರ್ ಆಫ್ ವಿಷುಯಲ್ ಆರ್ಟ್ಸ್ ಅಥವಾ BVA ಎಂಬುದು ಫೈನ್ ಆರ್ಟ್ಸ್ ಕ್ಷೇತ್ರದಲ್ಲಿ 4 ವರ್ಷಗಳ (ಪದವಿ ಪೂರ್ವ) ಪದವಿ ಶಿಕ್ಷಣವಾಗಿದೆ. ಅನಿಮೇಷನ್, ಗ್ರಾಫಿಕ್ಸ್, ಪೇಂಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಡಿಗ್ರಿ ಆಗಿರುವುದರಿಂದ ಇದಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಪಿಯುಸಿ ಉತ್ತೀರ್ಣರಾಗಿರಬೇಕು.
ಈ ಕೋರ್ಸ್ನಲ್ಲಿ ಅನಿಮೇಷನ್, ಮಲ್ಟಿಮೀಡಿಯಾ, ಪೇಂಟಿಂಗ್, ಆರ್ಕಿಟೆಕ್ಚರ್, ಇತ್ಯಾದಿಗಳನ್ನು ಒಳಗೊಂಡಿರುವ ವಿವಿಧ ರೀತಿಯ ದೃಶ್ಯ ಕಲೆಗಳ ಅಧ್ಯಯನ ಮಾಡಬಹುದು. ಪ್ರಾಯೋಗಿಕ ಅಂಶಗಳು ಕೂಡಾ ಕೋರ್ಸ್ನಲ್ಲಿ ಇರುತ್ತವೆ. ಸಾಮಾನ್ಯ ಪದವಿ ಶಿಕ್ಷಣವಾದ ಬಿಎ/ಬಿಎಸ್ಸಿ/ ಬಿಕಾಂ ಪದವಿಯಂತೆಯೇ ದೃಶ್ಯಕಲಾ (ಚಿತ್ರಕಲಾ ಪದವಿ) ಕೂಡ. ಪಿಯುಸಿ ನಂತರದ ಈ ದೃಶ್ಯಕಲಾ ಪದವಿಯನ್ನು ಎಂಟು ವಿಭಾಗಗಳ (ಸೆಮಿಸ್ಟರ್) ಅಡಿಯಲ್ಲಿ ಓದಬಹುದು. ಈ ಪದವಿಯಲ್ಲಿಯೂ ಸ್ನಾತ್ತಕೋತ್ತರ ಪದವಿ ಹಾಗೂ ಪಿಎಚ್ಡಿ ಮಾಡಬಹುದು.
ಹಾಗಿದ್ದರೆ ಈ ಕೋರ್ಸ್ ಎಲ್ಲಿ ಮಾಡಬಹುದು ಎಂಬುದಕ್ಕೆ ಒಂದು ಆಯ್ಕೆ ಇದೆ. ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ದೃಶ್ಯಕಲಾ ಪದವಿ ಮಾಡಬಹುದು. ಇಲ್ಲಿ ಡಿಗ್ರಿ ಮಾತ್ರವಲ್ಲದೆ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳು ಎರಡು ವರ್ಷಗಳ ದೃಶ್ಯಕಲಾ ಕೋರ್ಸ್ ಕೂಡಾ ಮಾಡಬಹುದು. ಇದರ ವಿವರ ಇಲ್ಲಿದೆ.
ಫೌಂಡೇಶನ್ ಕೋರ್ಸ್: 2 ವರ್ಷಗಳ ಅವಧಿಯ ಪಿಯುಸಿಗೆ ಸಮನಾದ ಕೋರ್ಸ್ ಇದಾಗಿದ್ದು ಎಸ್ಎಸ್ಎಲ್ಸಿ ಪಾಸಾದ ನಂತರ 2 ವರ್ಷಗಳ ದೃಶ್ಯಕಲಾ ಮೂಲ ಶಿಕ್ಷಣ ನೀಡಲಾಗುತ್ತದೆ.
ಬಿವಿಎ (ದೃಶ್ಯಕಲಾ ಪದವಿ): ಇದರ ಅವಧಿ 4 ವರ್ಷಗಳಾಗಿದೆ. ಪಿಯುಸಿ, ಐಟಿಐ, ಡಿಪ್ಲೋಮ ಅಥವಾ 2 ವರ್ಷದ ದೃಶ್ಯಕಲಾ ಕಲಾ ಮೂಲ (ದೃಶ್ಯಕಲಾ ಫೌಂಡೇಶನ್) ಶಿಕ್ಷಣ ಪಡೆದಿರಬೇಕು. ಚಿತ್ರಕಲೆ, ಶಿಲ್ಪಕಲೆ, ಮುದ್ರಣ ತಯಾರಿಕೆ, ವಿನ್ಯಾಸ, ಕರಕುಶಲ, ಛಾಯಾಗ್ರಹಣ, ಸಿನಿಮಾ ಮೇಕಿಂಗ್, ವಿಡಿಯೋ ಮೇಕಿಂಗ್, ವಾಸ್ತುಶಿಲ್ಪ ಮೊದಲಾದ ಕ್ಷೇತ್ರಗಳ ಕುರಿತು ಪ್ರಾಯೋಗಿಕ ಶಿಕ್ಷಣವನ್ನೂ ಪಡೆಯಬಹುದು. ಇಲ್ಲಿ ನಾಲ್ಕು ವರ್ಷಗಳಲ್ಲಿ 8 ಸೆಮಿಸ್ಟರ್ ಅಧ್ಯಯನ ಮಾಡಬೇಕು.
ದೃಶ್ಯಕಲೆಯಲ್ಲಿ ಎಂವಿಎ ಅಥವಾ ಸ್ನಾತ್ತಕೋತ್ತರ ಪದವಿ, ಪಿಎಚ್ಡಿ/ಡಿ.ಲಿಟ್ತನಕ ಶಿಕ್ಷಣ ಪಡೆಯು ಅವಕಾಶವಿದೆ.
ಉದ್ಯೋಗವಕಾಶಗಳು
ಚಿತ್ರಕಲಾ ಕ್ಷೇತ್ರದ ಯಾವುದೇ ಪದವಿ ಪಡೆದವರು ವಿವಿಧ ಸೃಜನಶೀಲ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶ ಪಡೆಯಬಹುದು. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅವಕಾಶಗಳು ಇವೆ. ಕಾಸ್ಟ್ಯೂಮ್ ಡಿಸೈನರ್, ಗ್ರಾಫಿಕ್ ಡಿಸೈನರ್, ಆರ್ಟ್ ಡೈರೆಕ್ಟರ್, ಆನಿಮೇಷನ್, ಏರಿಯಲ್ ಫೋಟೊಗ್ರಾಫರ್, ಕಾರ್ಟೂನಿಸ್ಟ್, ಮ್ಯೂಸಿಯಂ ಆರ್ಟಿಸ್ಟ್, ಫಿಲ್ಮ್ ಮೇಕರ್ ಇತ್ಯಾದಿ ಸೃಜನಶೀಲ ಕೆಲಸಗಳನ್ನು ಮಾಡಬಹುದು. ಸ್ಟುಡಿಯೋ, ಚಲನಚಿತ್ರ ಕ್ಷೇತ್ರ, ಶೈಕ್ಷಣಿಕ ಸಂಸ್ಥೆಗಳು, ಗ್ರಂಥಾಲಯ, ಆಸ್ಪತ್ರೆ, ಮ್ಯೂಸಿಯಂ, ಜಾಹೀರಾತು ಕಂಪನಿಗಳು ಹೀಗೆ ವಿವಿಧ ರಂಗಗಳಲ್ಲಿ ಕೆಲಸ ನಿರ್ವಹಿಸಬಹುದು.
ದೃಶ್ಯಕಲಾ ಶಿಕ್ಷಣ ಪಡೆಯುವ ಆಸಕ್ತಿ ಇರುವವರು, ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ (ಜಿಲ್ಲಾ ಆಟದ ಮೈದಾನ) ಇಲ್ಲಿನ ಪ್ರಾಚಾರ್ಯರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9620993026/ 6360448844, scmart95@gmail.com ಇದಕ್ಕೆ ಇಮೇಲ್ ಮಾಡಬಹುದು.