ಸ್ಟೇಟ್‌ vs ಸಿಬಿಎಸ್ಇ vs ಐಸಿಎಸ್‌ಇ; ಪಿಯುಸಿಯಲ್ಲಿ ಯಾವ ಪಠ್ಯಕ್ರಮದ ಆಯ್ಕೆ ಉತ್ತಮ; ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ಟೇಟ್‌ Vs ಸಿಬಿಎಸ್ಇ Vs ಐಸಿಎಸ್‌ಇ; ಪಿಯುಸಿಯಲ್ಲಿ ಯಾವ ಪಠ್ಯಕ್ರಮದ ಆಯ್ಕೆ ಉತ್ತಮ; ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಉತ್ತರ

ಸ್ಟೇಟ್‌ vs ಸಿಬಿಎಸ್ಇ vs ಐಸಿಎಸ್‌ಇ; ಪಿಯುಸಿಯಲ್ಲಿ ಯಾವ ಪಠ್ಯಕ್ರಮದ ಆಯ್ಕೆ ಉತ್ತಮ; ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಉತ್ತರ

ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ನಿರ್ಣಾಯಕ ಘಟ್ಟ. ಪಿಯುಸಿ ಓದಿಗೆ ಸ್ಟೇಟ್‌ vs ಸಿಬಿಎಸ್ಇ vs ಐಸಿಎಸ್‌ಇ ಈ ಮೂರರಲ್ಲಿ ಯಾವ ಪಠ್ಯಕ್ರಮದ ಆಯ್ಕೆ ಉತ್ತಮ ಎನ್ನುವ ಗೊಂದಲ ಇರುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇಲ್ಲಿದೆ ಉತ್ತರ.

ಸ್ಟೇಟ್‌ vs ಸಿಬಿಎಸ್ಇ vs ಐಸಿಎಸ್‌ಇ ಪಠ್ಯಕ್ರಮ, ಪಿಯುಸಿ ಓದಿಗೆ ಯಾವುದು ಉತ್ತಮ (ಸಾಂಕೇತಿಕ ಚಿತ್ರ)
ಸ್ಟೇಟ್‌ vs ಸಿಬಿಎಸ್ಇ vs ಐಸಿಎಸ್‌ಇ ಪಠ್ಯಕ್ರಮ, ಪಿಯುಸಿ ಓದಿಗೆ ಯಾವುದು ಉತ್ತಮ (ಸಾಂಕೇತಿಕ ಚಿತ್ರ)

ಪಿಯುಸಿ ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟ. ಈ ಹಂತದಲ್ಲಿ ನೀವು ಆಯ್ಕೆ ಮಾಡುವ ಪಠ್ಯಕ್ರಮವು ನಿಮ್ಮ ಮುಂದಿನ ಓದು ಮಾತ್ರವಲ್ಲ, ವೃತ್ತಿಪರ ದೃಷ್ಟಿಯಿಂದಲೂ ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ರಾಜ್ಯ ಮಂಡಳಿ (ಸ್ಟೇಟ್‌), ಸಿಬಿಎಸ್‌ಇ ಮತ್ತು ಐಸಿಎಸ್‌ಇ ಈ ಮೂರು ಪಠ್ಯಕ್ರಮದಲ್ಲಿ ಯಾವುದನ್ನು ಆಯ್ಕೆ ಮಾಡುವುದು ಎಂಬ ಗೊಂದಲವಿರುತ್ತದೆ. ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಪ್ರತಿಯೊಂದು ಪಠ್ಯಕ್ರಮದಲ್ಲೂ ಸಾಮರ್ಥ್ಯ ಹಾಗೂ ದೌರ್ಬಲ್ಯ ಎರಡೂ ಇರುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ. ಪಠ್ಯಕ್ರಮದ ಆಳ, ಕಷ್ಟದ ಮಟ್ಟ, ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಮತ್ತು ವೃತ್ತಿ ಮಾರ್ಗಗಳಂತಹ ಅಂಶಗಳ ಆಧಾರದ ಮೇಲೆ ಅವುಗಳನ್ನು ಹೋಲಿಸುವುದು ಮುಖ್ಯವಾಗುತ್ತದೆ.

ಸ್ಟೇಟ್‌ vs ಸಿಬಿಎಸ್ಇ vs ಐಸಿಎಸ್‌ಇ

ರಾಜ್ಯ ಮಂಡಳಿ (ಸ್ಟೇಟ್‌) ಸಿಲೇಬಸ್‌

ಪಠ್ಯಕ್ರಮ ರಚನೆ: ರಾಜ್ಯ ಮಂಡಳಿಯು ಪಠ್ಯಕ್ರಮ ಅಥವಾ ಸಿಲೇಬಸ್‌ ತಯಾರು ಮಾಡುತ್ತದೆ. ಆದ್ದರಿಂದ ಇದು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಇದರಲ್ಲಿ ಪ್ರಮುಖ ವಿಷಯಗಳ ಜೊತೆಗೆ ಪ್ರಾದೇಶಿಕ ವಿಷಯಗಳ ಮೇಲೂ ಗಮನ ಹರಿಸಲಾಗುತ್ತದೆ.

ಕಷ್ಟದ ಮಟ್ಟ: ಸಾಮಾನ್ಯವಾಗಿ, ಸ್ಟೇಟ್‌ ಸಿಲೇಬಸ್‌ ಸಿಬಿಎಸ್‌ಸಿ ಮತ್ತು ಐಸಿಎಸ್‌ಇಗೆ ಹೋಲಿಸಿದರೆ ಸುಲಭವೆಂದು ಪರಿಗಣಿಸಲಾಗುತ್ತದೆ. ಇದು ಸೈದ್ಧಾಂತಿಕ ಜ್ಞಾನ ಮತ್ತು ರಾಜ್ಯ ಮಟ್ಟದ ಪರೀಕ್ಷೆಗಳ ಮೇಲೆ ಕೇಂದ್ರೀಕರಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ: ಇದು ಪಿಯುಸಿಗೆ ಅಗತ್ಯವಿರುವ ಮೂಲಭೂತ ಅಂಶಗಳನ್ನು ಒಳಗೊಂಡಿದ್ದರು ಕೂಡ ಜೆಇಇ, ನೀಟ್‌ನಂತಹ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಾಗ ಸಿಬಿಎಸ್‌ಇ ಮತ್ತು ಐಸಿಎಸ್‌ಇಯಂತೆ ಸಮಗ್ರವಾಗಿರುವುದಿಲ್ಲ.

ಇದಕ್ಕೆ ಉತ್ತಮ: ರಾಜ್ಯ ಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ಅಥವಾ ಕಡಿಮೆ ಶೈಕ್ಷಣಿಕ ಒತ್ತಡದೊಂದಿಗೆ ಸರಳ ಪಠ್ಯಕ್ರಮವನ್ನು ಹುಡುಕುತ್ತಿರುವ ವಿದ್ಯಾರ್ಥಿಗಳು ಸ್ಟೇಟ್‌ ಸಿಲೇಬಸ್‌ ಆಯ್ಕೆ ಮಾಡುವುದು ಉತ್ತಮ.

ಸಿಬಿಎಸ್‌ಇ

ಪಠ್ಯಕ್ರಮ ರಚನೆ: ಸಿಬಿಎಸ್‌ಇ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾದ ರಚನಾತ್ಮಕ ಮತ್ತು ಪ್ರಮಾಣೀಕೃತ ಪಠ್ಯಕ್ರಮವನ್ನು ಹೊಂದಿರುತ್ತದೆ.

ಕಷ್ಟದ ಮಟ್ಟ: ಸಿಬಿಎಸ್‌ಇ ಹೆಚ್ಚು ಅನ್ವಯಿಕ ಆಧಾರಿತವಾಗಿದೆ ಮತ್ತು ಪರಿಕಲ್ಪನೆಗಳ ಬಗ್ಗೆ ಹೆಚ್ಚು ತಿಳುವಳಿಕೆ ಮೂಡುವಂತೆ ಮಾಡುತ್ತದೆ. ಇದು ರಾಜ್ಯ ಮಂಡಳಿಗಿಂತ ಹೆಚ್ಚು ಸವಾಲಿನದ್ದಾಗಿರುತ್ತದೆ ಆದರೆ ಐಸಿಎಸ್‌ಇಗೆ ಹೋಲಿಸಿದರೆ ಇದು ಕೊಂಚ ಸರಳವಾಗಿರುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ: ಪಠ್ಯಕ್ರಮವು ಜೆಇಇ, ನೀಟ್‌ ಮತ್ತು ಇತರ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳೊಂದಿಗೆ ನೇರವಾಗಿ ಹೊಂದಿಕೆಯಾಗುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದು ಸುಲಭವಾಗುತ್ತದೆ.

ಇದಕ್ಕೆ ಉತ್ತಮ: ರಾಷ್ಟ್ರೀಯ ಮಟ್ಟದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಮ್ಯಾನೇಜ್‌ಮೆಂಟ್ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಗೆ ಇದು ಉತ್ತಮ.

ಐಸಿಎಸ್‌ಇ

ಪಠ್ಯಕ್ರಮ ರಚನೆ: ಐಸಿಎಸ್‌ಇ ಪಠ್ಯಕ್ರಮವು ಹೆಚ್ಚು ವಿಸ್ಕೃತವಾಗಿದ್ದು, ಭಾಷೆ, ಕಲೆ ಮತ್ತು ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳಿಗೆ ಆಳವಾದ ಗಮನ ನೀಡುತ್ತವೆ.

ಕಷ್ಟದ ಮಟ್ಟ: ಅತ್ಯಂತ ಸವಾಲಿನದ್ದಾಗಿ ಪರಿಗಣಿಸಲಾದ ಐಸಿಎಸ್‌ಇ ಪಠ್ಯಕ್ರಮವು ಇಂಗ್ಲಿಷ್ ಭಾಷಾ ಕೌಶಲಗಳು, ವಿವರವಾದ ಕಲಿಕೆ ಮತ್ತು ಸಮಗ್ರ ವಿಷಯ ವ್ಯಾಪ್ತಿಯ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ: ಈ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಬಲವಾದ ಮೂಲಭೂತ ಕಲಿಕೆಗೆ ನೆರವಾದರೂ ಸಿಬಿಎಸ್‌ಇಗೆ ಹೋಲಿಸಿದರೆ ಐಸಿಎಸ್‌ಇ ಜೆಇಇ ಮತ್ತು ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳೊಂದಿಗೆ ಇದರ ಹೊಂದಿಕೆ ಕಡಿಮೆ ಎಂದು ಹೇಳಬಹುದು.

ಈ ಕಾರಣಕ್ಕೆ ಐಸಿಎಸ್‌ಇ ಉತ್ತಮ: ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಓದಲು ಬಯಸುವ ವಿದ್ಯಾರ್ಥಗಳಿಗೆ, ಬೋರ್ಡ್‌ ಬೇಸ್ಡ್‌ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ, ಮಾನವಿಕ-ಕೇಂದ್ರಿತ ವೃತ್ತಿಜೀವನವನ್ನು ಪರಿಗಣಿಸುತ್ತಿರುವ ವಿದ್ಯಾರ್ಥಿಗಳು ಇದನ್ನು ಆಯ್ಕೆ ಮಾಡಬಹುದು.

ಐಸಿಎಸ್‌ಇ vs ಸಿಬಿಎಸ್‌ಇ ಪಿಯುಸಿಗೆ ಯಾವುದು ಉತ್ತಮ?

ಐಸಿಎಸ್‌ಇ ಮತ್ತು ಸಿಬಿಎಸ್‌ಇ ಎರಡೂ ಉನ್ನತ ಅಧ್ಯಯನಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತವೆ. ಆದರೆ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯದಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಅನುಸರಿಸುವ ಗುರಿಯನ್ನು ಹೊಂದಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಸಿಬಿಎಸ್‌ಸಿ ಹೆಚ್ಚು ಸೂಕ್ತವಾಗಿದೆ. ಐಸಿಎಸ್‌ಇ ಪಠ್ಯಕ್ರಮವು ಹೆಚ್ಚು ವಿಸ್ತಾರ ಮತ್ತು ವೈವಿಧ್ಯಮಯವಾಗಿದ್ದರೂ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳೊಂದಿಗೆ ನೇರವಾಗಿ ಹೊಂದಿಕೆಯಾಗದ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚುವರಿ ತಯಾರಿ ಅಗತ್ಯವಾಗಬಹುದು.

ಪಿಯು ಶಿಕ್ಷಣದಲ್ಲಿ ಸಿಬಿಎಸ್‌ಇಗೆ ಆದ್ಯತೆ ಏಕೆ?

ಪ್ರಮಾಣೀಕೃತ ಪಠ್ಯಕ್ರಮ - ಶಾಲೆಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸುತ್ತದೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ.

ಪರಿಕಲ್ಪನೆ ಆಧಾರಿತ ಕಲಿಕೆ - ಮೌಖಿಕ ಕಂಠಪಾಠಕ್ಕಿಂತ ತಿಳುವಳಿಕೆಯ ಮೇಲೆ ಕೇಂದ್ರೀಕರಿಸುತ್ತದೆ, ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸುಲಭವಾಗುತ್ತದೆ.

ಉತ್ತಮ ವೃತ್ತಿ ಅವಕಾಶಗಳು - ಸಿಬಿಎಸ್‌ಇ ಹಿನ್ನೆಲೆಯ ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಅಧ್ಯಯನಕ್ಕೆ ಪರಿವರ್ತನೆಗೊಳ್ಳಲು ಸುಲಭ ಮಾರ್ಗ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಪಿಯುಸಿಯಲ್ಲಿ ಹೆಚ್ಚು ಸಿಬಿಎಸ್‌ಇ ಪಠ್ಯಕ್ರಮ ಉಪಯೋಗಕ್ಕೆ ಬರುತ್ತದೆ ಎಂದಾದರೂ ನೀವು ಭವಿಷ್ಯದಲ್ಲಿ ಯಾವ ಕೋರ್ಸ್‌ ಆಯ್ಕೆ ಮಾಡಲು ಬಯುಸುತ್ತೀರಿ, ಯಾವ ಕ್ಷೇತ್ರದಲ್ಲಿ ಮುಂದುವರಿಯಲು ಯೋಚಿಸುತ್ತಿದ್ದೀರಿ ಎಂಬುದನ್ನು ಪರಿಗಣಿಸಿ ಪಿಯುಸಿ ಬೋರ್ಡ್‌ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.