ಪರೀಕ್ಷೆಯೆಂಬ ಗುಮ್ಮಗೆ ಹೆದರದಿರಿ, ಸರಿಯಾದ ಸಿದ್ಧತೆಯೊಂದಿಗೆ ಧೈರ್ಯದಿಂದ ಎದುರಿಸಿ; ನಂದಿನಿ ಟೀಚರ್ ಅಂಕಣ
ಶಿಕ್ಷಣದಲ್ಲಿ ಎಲ್ಲ ಮಕ್ಕಳೂ ಸಮರಲ್ಲ. ನಮ್ಮ ಪರೀಕ್ಷಾ ಪದ್ದತಿ ಒ೦ದು ಆನೆ, ಮೊಲ, ಹಾವು, ಚಿರತೆ ಎಲ್ಲರಿಗೂ ಕಾಡಿನಲ್ಲಿರಲು ಒಂದೇ ರೀತಿಯ ಓಟದ ಸ್ಪರ್ಧೆ ನಡೆಸಿದಂತಾಗದೇ, ಪರೀಕ್ಷೆಯಿಂದ ವಿದ್ಯಾರ್ಥಿಯ ಕಾರ್ಯಶಕ್ತಿ, ಜ್ಞಾಪಕ ಶಕ್ತಿ, ವಾಕ್ ಚಾತುರ್ಯ, ಕಲಿತಿದ್ದನ್ನು ಜೀವನದಲ್ಲಿ ಅಳವಡಿಸುವ ಕಲೆ ಲಭಿಸುವಂತಾಗಲಿ

ಪರೀಕ್ಷೆಗಳು ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗ. ವರ್ಷವಿಡಿ ಕಲಿತಿದ್ದನ್ನು ಶಿಷ್ಯರಾದವರು ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆನ್ನುವುದನ್ನು ಅರಿಯಲು ಪರೀಕ್ಷೆಯೊಂದು ಮಾಪನ. ಮಹಾಭಾರತ ಕಾಲದಲ್ಲಿ ಗುರು ದ್ರೋಣಾಚಾರ್ಯರು ತಮ್ಮ ವಿದ್ಯಾರ್ಥಿಗಳಿಗೆ ಕಾಲದಿಂದ ಕಾಲಕ್ಕೆ ಪರೀಕ್ಷೆ ನಡೆಸುತ್ತಿದ್ದ ಬಗ್ಗೆ ನಾವು ಓದುಕೊಂಡಿದ್ದೇವೆ ಅಲ್ಲವೇ! ಪರೀಕ್ಷೆಗಳು ವಿದ್ಯಾರ್ಥಿಯು ವಿಷಯವನ್ನು ತಿಳಿದುಕೊಂಡಿರುವ ಬಗ್ಗೆ, ಮತ್ತವರ ಕಾರ್ಯಶಕ್ತಿ, ಸಾಮಾನ್ಯ ಯೋಗ್ಯತೆ, ಮೇಧಾಶಕ್ತಿ, ಜ್ಞಾಪಕಶಕ್ತಿ, ಬುದ್ಧಿಯ ಪರಿಚಯವನ್ನು ಶಿಕ್ಷಕರಿಗೆ ಮಾಡುವಂತೆ, ವಿದ್ಯಾರ್ಥಿ ಮತ್ತವರ ಪಾಲಕರಿಗೆ ಪರಿಸ್ಥಿತಿಯ ಅರಿವು ಮೂಡಿಸಿ ಅದಕ್ಕೆ ತಕ್ಕಂತೆ ಅಧ್ಯಯನ ಮತ್ತು ತಯಾರಿಯ ಕುರಿತು ಮಾಹಿತಿ ನೀಡುತ್ತದೆ. ಹಾಗೆಯೇ ಶಿಕ್ಷಕರಿಗೆ ತಮ್ಮ ಬೋಧನಾ ಕ್ರಮದ ಬಗ್ಗೆ ಅವರ ಪರಿಸ್ಥಿತಿಯ ಬಗ್ಗೆ ತಿಳಿಸಿಕೊಡುತ್ತದೆ.
ಆದರೆ ಇಂದಿನ ವ್ಯವಸ್ಥೆಯಲ್ಲಿ ಪರೀಕ್ಷೆಗಳು ಶಿಕ್ಷಣದ ಉದ್ದೇಶವಾಗಿ, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಉನ್ನತ ಶಿಕ್ಷಣಕ್ಕಾಗಿ, ಪ್ರತಿಷ್ಠಿತ ಸಂಸ್ಥೆಯಲ್ಲಿನ ಕೋರ್ಸ್‌ಗಾಗಿ ಪ್ರವೇಶ ಪಡೆಯುವ ದಾರಿಯಾಗಿ ಬಿಟ್ಟಿದೆ. ಈ ಭಾವಕ್ಕೆ ಪೂರಕವಾಗುವ ಹಾಗೆ ಬಹಳಷ್ಟು ಶಿಕ್ಷಕರೂ ಕೂಡ ಪರೀಕ್ಷೆಯನ್ನು ಮನದಲ್ಲಿಟ್ಟುಕೊಂಡೇ ಪಾಠ ಮಾಡುತ್ತಾರೆ. ಉತ್ತಮ ಅಂಕಗಳಿಗಾಗಿ ತರಬೇತಿ ಪಡೆವ ವಿದ್ಯಾರ್ಥಿ, ಉತ್ತಮ ಅಂಕಗಳನ್ನು ಪಡೆಯುವ೦ತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಶಿಕ್ಷಣ ಸಂಸ್ಥೆಗಳು. ಹೆಚ್ಚು ಅಂಕಗಳ ಪಡೆದ/ ಪ್ರತಿಷ್ಠಿತ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಫೋಟೊವನ್ನು ಸಂಸ್ಥೆಯು ಸಾರ್ವಜನಿಕವಾಗಿ ಪ್ರದರ್ಶಿಸಿ ಪಾಲಕರನ್ನು ತಮ್ಮತ್ತ ಸೆಳೆವ ಪ್ರಯತ್ನ ನಡೆಸುವುದ ಕಂಡರೆ ಶಿಕ್ಷಕರ ಮನೋಭಾವದ ಪರಿಚಯ ನಮಗಾಗುತ್ತದೆ. ತಮ್ಮ ಮಕ್ಕಳು ‘ಈ ಸಂಸ್ಥೆ‘ ಗೆ ಸೇರಿದರಷ್ಟೇ ಉದ್ಧಾರವಾಗುವುದು ಎಂಬ ಮನೋಭಾವ ಪಾಲಕರಲ್ಲಿ ಮೂಡಿದಾಗ ಸಹಜವಾಗಿ ಪ್ರಸ್ತುತದ ಶಿಕ್ಷಣ ಸಂಪೂರ್ಣವಾಗಿ ಪರೀಕ್ಷೆಗಳ ಪರಿಣಾಮದ ಮೇಲೆ ನಿಂತಿದೆ ಎನ್ನುವುದನ್ನು ಮತ್ತದರ ಘೋರ ಪರಿಣಾಮದ ಮೇಲೂ ಬೆಳಕು ಚೆಲ್ಲುತ್ತದೆ.
ನಿಜ ಪರೀಕ್ಷೆಗಳು ಕಠಿಣ ಹಾಗೂ ಅವು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನೂ ಹೇರುತ್ತವೆ. ಹಾಗೆಂದು ಪರೀಕ್ಷೆಗಳಿಂದ ಓಡಿಹೋಗಲಂತೂ ಸಾಧ್ಯವಿಲ್ಲವಲ್ಲ. ಆದರೆ ನಾವು ನಡೆಸುವ ಪರೀಕ್ಷೆಗಳು ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ಅಸಮತೋಲನವನ್ನುಂಟು ಮಾಡುತ್ತಿದೆಯೆಂದಾಗ ಪರೀಕ್ಷಾ ಪದ್ಧತಿಯ ಬಗ್ಗೆ ಮತ್ತೆ ಚಿಂತಿಸಬೇಕಾದ ಸಮಯ ಬಂದಿದೆ. ಪರೀಕ್ಷೆಯ ತಯಾರಿಯ ಜೊತೆಗೆ ಹೆತ್ತವರ, ಸಮಾಜದ ಒತ್ತಡಕ್ಕೆ ಬಲಿಯಾಗಿ ಹತಾಶ ಭಾವದಿ ಬಳಲುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಬೆoಬಲಕ್ಕಾಗಿ ದೇಶದ ಪ್ರಧಾನಿಯೇ ‘ಪರೀಕ್ಷಾ ಪೇ ಚರ್ಚಾ‘ ನಡೆಸುತ್ತಿರುವಾಗ ಪರೀಕ್ಷಾ ಸಿದ್ಧತೆ ಹೇಗೆ ಮಾಡಿಕೊಳ್ಳಬಹುದೆಂದು ಯೋಚಿಸೋಣ.
ಶ್ರವಣ ಮನನ ನಿಧಿಧ್ಯಾಸನ
ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗಾಗಿ ಭಾರತೀಯ ಶಿಕ್ಷಣ ಪದ್ಧತಿ ಶ್ರವಣ, ಮನನ ಮತ್ತು ನಿಧಿಧ್ಯಾಸನಕ್ಕೆ ಒತ್ತುಕೊಡುತ್ತದೆ. ವಿದ್ಯಾರ್ಥಿಯು ತರಗತಿಯಲ್ಲಿ ಗುರುಗಳು ಪಾಠಮಾಡಿದ್ದನ್ನು ಗಮನವಿಟ್ಟು ಕೇಳಬೇಕು, ಕೇಳಿದ್ದನ್ನು ಮತ್ತೆ ಮತ್ತೆ ಮನನ ಅಂದರೆ ನೆನಪು ಮಾಡಿಕೊಳ್ಳಬೇಕು. ಶ್ರವಣ ಮತ್ತು ಮನನ ಪ್ರಕ್ರಿಯೆ ಕೇವಲ ವಿದ್ಯಾರ್ಥಿಯ ದೃಷ್ಟಿಯಿಂದಷ್ಟೇ ಅಲ್ಲದೇ ಗುರುವಿನ ದೃಷ್ಟಿಯಿಂದಲೂ ಮುಖ್ಯ. ಮಾನಸಿಕ ಚಂಚಲತೆ ಸ್ವಾಭಾವಿಕ, ಆದರೆ ಆ ಚಂಚಲತೆಯನ್ನು ಹೊಡೆದೋಡಿಸುವ ಮಾರ್ಗದ ಅರಿವು ಗುರುವಿಗಿರಬೇಕು. ಈ ದಿನದ ಪಾಠ ಮಾಡುವ ವಿಷಯವಿದು ಅದಕ್ಕಾಗಿ ನಾನು 34 ಪಿಪಿಟಿ ಸ್ಲೈಡ್‌ಗಳನ್ನು ಸಿದ್ಧಪಡಿಕೊಂಡಿದ್ದೇನೆ ಅದಷ್ಟನ್ನೂ ಒ೦ದು ಗಂಟೆಯ ಅವಧಿಯಲ್ಲಿ ಮುಗಿಸಬೇಕು ಎಂದು ತರಗತಿಗೆ ಹೋದರೆ ನಾವು ಪಾಠಮಾಡುವುದಿಲ್ಲ ಕೇವಲ ಪಾಠ ಮುಗಿಸುವ ಜವಾಬ್ದಾರಿಯನ್ನು ಪೂರ್ಣಗೊಳಿಸುವ ಒಂದು ಪ್ರಯತ್ನ ಮಾಡುತ್ತೇವೆ ಅಷ್ಟೇ? ನಾವು ಪಾಠ ಮಾಡುವ ವಿಷಯದಲ್ಲಿ ವಿದ್ಯಾರ್ಥಿಯ ಆಸಕ್ತಿಯನ್ನು ಕೆರಳಿಸುವ ಹಾಗೆ ಪಾಠ ಮಾಡುವ ತನ್ಮಯತೆ ನಮಗೆ ಬರಬೇಕು. ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳು ಬಹು ಪ್ರಿಯವಾಗುವುದು ಮತ್ತು ಆಸಕ್ತಿ ಮೂಡುವುದು ಗುರುಗಳ ವಿವರಣೆಯ ಮೇಲೆಯೇ ಅವಲಂಬಿತವಾಗಿರುತ್ತದೆ ಎನ್ನುವುದು ನಮಗೆ ತಿಳಿದೇ ಇದೆ.
ತರಗತಿಯಲ್ಲಿನ ಶ್ರವಣ ಮನನಕ್ಕೆ ದಾರಿ ಮಾಡಿಕೊಡುತ್ತದೆ. ವಿಷಯದ ಪುನರಾವರ್ತನೆ ಕಲಿತಿದ್ದನ್ನು ಗಟ್ಟಿ ಮಾಡಿಸುತ್ತದೆ. ಪುನಾರವರ್ತನೆಯ ವಿಧಾನ ಮಕ್ಕಳಿಗೆ ಪರಿಚಯಿಸಬೇಕು. ಒಂದೇ ಸ್ಥಳದಲ್ಲಿ ಮನನ ಮಾಡುವುದಕ್ಕಿಂತ ಬೇರೆ ಬೇರೆ ಸ್ಥಳಗಳಲ್ಲಿ ಪುಸ್ತಕ ನೋಡದೇ ನೆನಪು ಮಾಡಿಕೊಂಡರೆ ಪರೀಕ್ಷೆಯಲ್ಲಿ ಉಪಯೋಗವಾಗುತ್ತದೆ. ಪುಸ್ತಕ ನೋಡುತ್ತ ಪುನಾರಾವರ್ತನೆ ಮಾಡಿಕೊಂಡರೆ ಪರಿಚಿತ ವಿಷಯವೆಂದು ಕಣ್ಣು, ಬುದ್ಧಿ-ಮನಸ್ಸಿಗೆ ಮೋಸ ಮಾಡಬಹುದು. ಫಾರ್ಮುಲಾಗಳನ್ನು ಅಥವಾ ಸೂತ್ರಗಳನ್ನು ಮನೆಯ ವಿವಿಧ ಸ್ಥಳಗಳಲ್ಲಿ ಚೀಟಿಯಲ್ಲಿ ಬರೆದು ಅಂಟಿಸಿ ಅವುಗಳನ್ನು ಆಗಿದ್ದಾಂಗ್ಗೆ ನೋಡುತ್ತಿದ್ದರೂ ಮನನ ಮಾಡಲು ಸುಲಭ, ಉದಾಹರಣೆಗೆ ಸಿನಿಮಾ ಹಾಡುಗಳನ್ನೂ ಅದಕ್ಕೆ ಪೂರಕ ನರ್ತನವನ್ನು ಹೇಗೆ ಮೇಲಿಂದ ಮೇಲೆ ನೋಡಿ ಕಲಿಯುತ್ತೇವಲ್ಲ ಹಾಗೆ. ಮತ್ತೆ ಮತ್ತೆ ಇದ್ರಿಂಯಗಳಿಗೆ ತಲುಪುವ ವಿವರ, ಅಗತ್ಯವಿರುವ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಅರ್ಥವಾಗದ ವಿಷಯವನ್ನು ಪ್ರಶ್ನೆ ಮಾಡಿ ಮತ್ತೊಮ್ಮೆ ವಿವರಣೆ ಪಡೆಯುವ ಸ್ವಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಕೂಡ ಒಳ್ಳೆಯದೇ.
‘ಬ್ರೇನ್ ಜಿಮ್‘
ಕಲಿಕೆಯ ಮೂರನೇ ಹಂತದ ‘ಬ್ರೇನ್ ಜಿಮ್‘ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ನಾವಿದನ್ನು ನಿಧಿಧ್ಯಾಸನವೆನ್ನುತ್ತೇವೆ. ಆಚಾರ್ಯ ಪದ್ಮಪಾದರು ಬರೆದ ವೇದಾಂತ ಭಾಷ್ಯ ಆಕಸ್ಮಾತ್ತಾಗಿ ಬೆಂಕಿಗೆ ಆಹುತಿಯಾದಾಗ ಅದನ್ನು ಶ್ರವಣ - ಮನನ ಮಾಡಿದ್ದ ಶಂಕರರು ಒಂದಕ್ಷರವೂ ತಪ್ಪದಂತೆ ಪುನರುಚ್ಚರಿದ ಕಥೆ ನೆನಪಿಸಿಕೊಳ್ಳಿ. ಯೋಗದ ಅಭ್ಯಾಸವನ್ನು ಭಾರತೀಯರಿಗೆ ಸುಲಭವಾಗಿ ಮತ್ತು ಸ್ವಾಭಾವಿಕವಾಗಿ ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಪ್ರಾಣಾಯಾಮ ವಿದ್ಯಾರ್ಥಿಯ ಗ್ರಹಣ, ಮನನ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದಲ್ಲದೇ, ದೇಹದ ದೃಢತೆಯ ಜೂತೆಗೆ ಮಾನಸಿಕ ಸಾಮರ್ಥ್ಯಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಸಂಶೋಧನೆಗಳೇ ತಿಳಿಸಿವೆ.
ಪಠ್ಯಕ್ರಮದಲ್ಲಿರುವ ಎಲ್ಲ ವಿಷಯಗಳೂ ವಿದ್ಯಾರ್ಥಿಗೆ ಸುಲಭವೇನಲ್ಲ. ಹಾಗೆ೦ದು ಆ ವಿಷಯಗಳಿ೦ದ ಓಡಿಹೋಗಲಾದೀತೇ. ಹೀಗಾಗಿ ಪರೀಕ್ಷೆಯ ತಯಾರಿ ಆರಂಭಿಸುವ ಮುನ್ನ ವಿದ್ಯಾರ್ಥಿ ತನ್ನದೇ ಆದ ವೇಳಾ ಪಟ್ಟಿಯನ್ನು ಹಾಕಿ ಕೊಳ್ಳುವುದು ಉಚಿತ. ಈ ವೇಳಾಪಟ್ಟಿ ಪ್ರತಿ ವಿಷಯಕ್ಕೆ 30 ನಿಮಿಷ ಮೀಸಲಿಟ್ಟು ಆಸಕ್ತಿ/ಸರಳವೆನ್ನಿಸುವ ವಿಷಯ ಮೊದಲು ನಂತರದ 30 ನಿಮಿಷ ಕಠಿಣವೆನಿಸುವ ವಿಷಯ ಹೀಗೆ ಬದಲಾಗುತ್ತ ಹೋದರೆ ಉತ್ತಮ. ಪ್ರತಿ 25 ನಿಮಿಷದ ಅಭ್ಯಾಸದ ನಂತರ 5 ನಿಮಿಷದ ಕಡ್ಡಾಯದ ವಿರಾಮ, ಆ ವಿರಾಮದ ಸಮಯವನ್ನು ಪ್ರಾಣಾಯಾಮದ ಮೂಲಕ ಮನಸ್ಸನ್ನು ಕೇoದ್ರೀಕರಿಸುವತ್ತ ಮೀಸಲಿಡುವ. ಹೀಗೆ ನಡೆವ ಸಿದ್ಧತೆಯಲ್ಲಿ ನಾಲ್ಕು ವಿಷಯಗಳ ಅಭ್ಯಾಸದ ನ೦ತರ 20 ನಿಮಿಷಗಳ ಒoದು ದೊಡ್ಡ ಬ್ರೇಕ್. ಹಾಂ, ಪ್ರತಿ ಬ್ರೇಕ್ ತೆಗೆದುಕೊಳ್ಳಲೂ ತಾನು ಈ ವಿರಾಮಕ್ಕೆ ಅರ್ಹನೇ ಎಂದು ವಿದ್ಯಾರ್ಥಿಯೇ ನಿರ್ಣಯಿಸಬೇಕು. ಅಭ್ಯಾಸದ ಬಿಡುವಿನ ಸಮಯದ ‘ಬ್ರೇನ್ ಜಿಮ್‘ ಪ್ರಾಣಾಯಾಮದಿಂದ ಹೆಚ್ಚು ಪರಿಣಾಮಕಾರಿ.
ನೆನಪಿಡುವ ಶಿಕ್ಷಣದಲ್ಲಿ ಎಲ್ಲ ಮಕ್ಕಳೂ ಸಮರಲ್ಲ. ನಮ್ಮ ಪರೀಕ್ಷಾ ಪದ್ದತಿ ಒ೦ದು ಆನೆ, ಮೊಲ, ಹಾವು, ಚಿರತೆ ಎಲ್ಲರಿಗೂ ಕಾಡಿನಲ್ಲಿರಲು ಒoದೇ ರೀತಿಯ ಓಟದ ಸ್ಪರ್ಧೆ ನಡೆಸಿದಂತಾಗದೇ, ಪರೀಕ್ಷೆಯಿಶದ ವಿದ್ಯಾರ್ಥಿಯ ಕಾರ್ಯಶಕ್ತಿ, ಜ್ಞಾಪಕ ಶಕ್ತಿ, ವಾಕ್ ಚಾತುರ್ಯ, ಕಲಿತಿದ್ದನ್ನು ಜೀವನದಲ್ಲಿ ಅಳವಡಿಸುವ ಕಲೆ ಲಭಿಸುವಂತಾಗಲಿ. ಪರೀಕ್ಷೆಯ ತಯಾರಿ ಆರೋಗ್ಯಕರವಾಗಿರಲಿ.
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜರ್ಮನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕರ್ತೆಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು ‘ನಂದಿನಿ ಟೀಚರ್‘ ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.
