ಪ್ರಶ್ನೆ ಪತ್ರಿಕೆ ಮಾದರಿ ನೋಡಿಕೊಂಡು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ? ಚಿಕ್ಕದಾಗಿ-ದೀರ್ಘವಾಗಿ ಉತ್ತರಿಸಲು ಅಗತ್ಯ ಸಲಹೆ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರಶ್ನೆ ಪತ್ರಿಕೆ ಮಾದರಿ ನೋಡಿಕೊಂಡು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ? ಚಿಕ್ಕದಾಗಿ-ದೀರ್ಘವಾಗಿ ಉತ್ತರಿಸಲು ಅಗತ್ಯ ಸಲಹೆ ಇಲ್ಲಿದೆ

ಪ್ರಶ್ನೆ ಪತ್ರಿಕೆ ಮಾದರಿ ನೋಡಿಕೊಂಡು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ? ಚಿಕ್ಕದಾಗಿ-ದೀರ್ಘವಾಗಿ ಉತ್ತರಿಸಲು ಅಗತ್ಯ ಸಲಹೆ ಇಲ್ಲಿದೆ

ಪರೀಕ್ಷೆಗೆ ಸಿದ್ಧತೆ ನಡೆಸುವಾಗ, ಹಳೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಅಥವಾ ನೀಲನಕ್ಷೆ ಇಟ್ಟುಕೊಂಡರೆ ವಿದ್ಯಾರ್ಥಿಗಳ ಓದಿಗೆ ಸುಲಭ. ಪ್ರಶ್ನೆಗಳ ಅಂಕಗಳ ಆಧಾರದ ಮೇಲೆ ಉತ್ತರ ಬರೆಯುವ ಅಭ್ಯಾಸ ಮಾಡಬೇಕು. ಇದಕ್ಕೆ ಪ್ರಶ್ನೆ ಪತ್ರಿಕೆಯ ಬ್ಲ್ಯೂಪ್ರಿಂಟ್‌ ಮತ್ತು ಮಾದರಿ ಬಗ್ಗೆ ನಿಮಗೆ ಅರಿವಿದ್ದರೆ ಒಳ್ಳೆಯದು.

ಪ್ರಶ್ನೆ ಪತ್ರಿಕೆ ಮಾದರಿ ನೋಡಿಕೊಂಡು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ?
ಪ್ರಶ್ನೆ ಪತ್ರಿಕೆ ಮಾದರಿ ನೋಡಿಕೊಂಡು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ?

ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಬಹುಮುಖ್ಯ ಹಂತ. ಇದೇ ವೇಳೆ ಪಿಯುಸಿ ಕೂಡಾ ಹೀಗೆಯೇ. ಮುಂದಿನ ವಿದ್ಯಾಭ್ಯಾಸಕ್ಕೆ ಈ ಹಂತ ಪ್ರಮುಖ ಮಾನದಂಡ. ಸದ್ಯ SSLC ಹಾಗೂ PUC ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆ ಕುರಿತಾಗಿ ಹೆಚ್ಚು ಯೋಚಿಸುತ್ತಿರುವ ಸಮಯ. ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆಯುವುದರೊಂದಿಗೆ ನಿರಂತರ ಓದು, ಅಭ್ಯಾಸ, ರಿವಿಷನ್‌ ಸಾಮಾನ್ಯ. ಈ ನಡುವೆ ಪರೀಕ್ಷೆಯ ವಿಷಯವಾರು ಪ್ರಶ್ನೆ ಪತ್ರಿಕೆಗಳ ಮಾದರಿ ಗಮನಿಸಿ ಅದಕ್ಕೆ ತಕ್ಕನಾಗಿ ಉತ್ತರ ಬರೆಯಲು ಅಭ್ಯಾಸ ಮಾಡುವುದು ಉತ್ತಮ. ಇದು ಪರೀಕ್ಷಾ ಕೊಠಡಿಯಲ್ಲಿ ಸಮಯ ನಿರ್ವಹಣೆಗೆ ನೆರವಾಗುತ್ತದೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುವಾಗ, ಹಳೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಅಥವಾ ನೀಲನಕ್ಷೆ ಇಟ್ಟುಕೊಳ್ಳುವುದು ಜಾಣತನ. ಆಯಾ ಪ್ರಶ್ನೆಗಳ ಅಂಕಗಳ ಆಧಾರದ ಮೇಲೆ ಉತ್ತರ ಬರೆಯಿರಿ. ಮೊದಲು ಒಂದು ಅಂಕಗಳ ಪ್ರಶ್ನೆ ಎಷ್ಟಿರುತ್ತವೆ, ಎರಡು ಅಂಕಗಳ ಪ್ರಶ್ನೆ ಎಷ್ಟಿರುತ್ತವೆ, ದೀರ್ಘ ಉತ್ತರ ಬರೆಯಬೇಕಾದ ಪ್ರಶ್ನೆಗಳು ಎಷ್ಟು… ಹೀಗೆ ಎಲ್ಲವನ್ನು ನಿಖರವಾಗಿ ನೋಡಿಕೊಳ್ಳಿ. ಅದಕ್ಕೆ ತಕ್ಕನಾಗಿ ನಿಮ್ಮ ಬರವಣಿಗೆಗೆ ಸಮಯ ವಿಭಾಗ ಮಾಡಿಕೊಂಡು ಉತ್ತರಿಸುವ ಪ್ರಯತ್ನ ಮಾಡಿ.

ಪ್ರಶ್ನೆಯ ಅಂಕ ಅರ್ಥ ಮಾಡಿಕೊಂಡು ಉತ್ತರ ಬರೆಯಿರಿ

ಒಂದು ಅಂಕದ ಪ್ರಶ್ನೆಗೆ ಒಂದು ಪದ ಅಥವಾ ವಾಕ್ಯದ ಉತ್ತರ ಅಷ್ಟೇ ಸಾಕು. ಇಲ್ಲಿ ಉತ್ತರವನ್ನು ದೀರ್ಘ ಮಾಡಬೇಡಿ. ಹೆಚ್ಚು ಅಂಕಗಳಿರುವ ಪ್ರಶ್ನೆಗೆ ಸೂಚನೆಗನುಸಾರವಾಗಿ ಅಷ್ಟೇ ವಾಕ್ಯಗಳಲ್ಲಿ ದೀರ್ಘ ಉತ್ತರ ಬರೆಯಿರಿ. ಅಂತಹ ಪ್ರಶ್ನೆಗಳಿಗೆ ಸಮಯ ಕೊಡಿ. ಪ್ರಶ್ನೆ ಹಾಗೂ ಸೂಚನೆಗಳನ್ನು ಅರ್ಥ ಮಾಡಿಕೊಂಡು ಬರೆಯಿರಿ.

ಉತ್ತರ ಅನಗತ್ಯ ಲಂಬಿಸುವುದರಿಂದ ಸಮಯ ವ್ಯರ್ಥ

ಎರಡು ವಾಕ್ಯಗಳಲ್ಲಿ ಉತ್ತರಿಸಿ 2 ಅಂಕ ಪಡೆಬೇಕಾದ ಪ್ರಶ್ನೆಗೆ ಒಂದು ಪುಟದಷ್ಟು ಉತ್ತರಿಸಿದರೆ ಪ್ರಯೋಜನವಿಲ್ಲ. ಇದಕ್ಕೆ ಗರಿಷ್ಠ ಅಂಕವೇ 2. ಹೀಗಾಗಿ ಎಷ್ಟೇ ಬರೆದರೂ ಅದಕ್ಕಿಂತ ಹೆಚ್ಚು ಅಂಕ ಸಿಗಲ್ಲ. ಹೀಗೆ ಮಾಡಿದರೆ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಆ ನಂತರ ಸುದೀರ್ಘವಾಗಿ ಉತ್ತರಿಸಬೇಕಾದ ಪ್ರಶ್ನೆಗೆ ಸಮಯ ಸಾಲುವುದಿಲ್ಲ.

ಚಿಕ್ಕದಾಗಿ ಬರೆಯಲು ಸಿದ್ಧತೆ ಹೇಗಿರಬೇಕು?

1 ಹಾಗೂ 2 ಅಂಕದ ಪ್ರಶ್ನೆಗಳಿಗೆ ಪದ ಅಥವಾ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಬೇಕಾಗುತ್ತದೆ. ಹೆಚ್ಚು ಬರೆದರೆ ಪ್ರಯೋಜನವಿಲ್ಲ. ಹೀಗಾಗಿ ಉತ್ತರ ಬರೆಯುವಾಗ ಅನಗತ್ಯ ಪದಗಳನ್ನು ತುರುಕಬೇಡಿ. ಉತ್ತರ ಏನಿದೆಯೋ ಅದಕ್ಕೆ ತೂಕದ, ಮೌಲ್ಯಯುತ ಪದಗಳನ್ನು ಮಾತ್ರವೇ ಪೋಣಿಸಿ ಉತ್ತರಿಸಿ. ಉತ್ತರ ಸರಳವಾಗಿ, ಸ್ಪಷ್ಟವಾಗಿ, ಚಿಕ್ಕ ಮತ್ತು ಚೊಕ್ಕದಾಗಿ ಬರೆಯಿರಿ.

ಉದ್ದ ಉತ್ತರ ಬರೆಯಲು ಏನೆಲ್ಲ ಸಿದ್ಧತೆ ಬೇಕು?

4, 5 ಅಥವಾ ಅದಕ್ಕಿಂತ ಹೆಚ್ಚು ಅಂಕಗಳ ಪ್ರಶ್ನೆಗಳಿದ್ದರೆ ಅದಕ್ಕೆ ಸುದೀರ್ಘ ಉತ್ತರ ಬರೆಯಲು ಅಭ್ಯಾಸ ಮಾಡಿಕೊಳ್ಳಿ. ಪ್ರಶ್ನೆಯ ಜೊತೆಗೆ ಇಂತಿಷ್ಟು ವಾಕ್ಯ ಎಂಬ ಸೂಚನೆ ಇದ್ದರೆ, ಅಷ್ಟೇ ವಾಕ್ಯಗಳಲ್ಲಿ ಉತ್ತರಿಸಿದರೆ ಸಾಕು. ನಿಮ್ಮ ಉತ್ತರ ಗುಣಮಟ್ಟದ್ದಾಗಿರಲಿ. ಪದ್ಯಭಾಗದ ಸಾರಾಂಶ, ವಿವರವಾದ ಉತ್ತರವಿರುವ ಪ್ರಮುಖ ಪ್ರಶ್ನೆಗಳ ಉತ್ತರವನ್ನು ಬರೆದು ಅಭ್ಯಾಸ ಮಾಡಿ. ಅದಕ್ಕೆ ಸೀಮಿತ ಸಮಯವನ್ನು ನಿಗದಿಪಡಿಸುವ ಪ್ರಯತ್ನ ಮಾಡಿ. ಪರೀಕ್ಷೆಯಲ್ಲಿ ಬರಬಹುದಾದ ಸಂಭಾವ್ಯ ಪ್ರಶ್ನೆಗಳಿಗೆ ಮಾಹಿತಿ ಕಲೆ ಹಾಕಿ. ಉದಾಹರಣೆಗೆ, ಪ್ರಬಂಧವನ್ನು ಬರೆದು ಅಭ್ಯಾಸ ಮಾಡಿ.‌ ಬೇಕಾದ ಮಾಹಿತಿ ಕಲೆ ಹಾಕಿಕೊಳ್ಳಿ.

ಸಂಕ್ಷಿಪ್ತ ಉತ್ತರ ಬರೆಯುವಾಗ ಸಮೃದ್ಧ ವಿಷಯ ತುಂಬುವುದು ಹೇಗೆ?

ಇದು ನಿಮ್ಮ ಉತ್ತರಿಸುವ ಚಾಣಾಕ್ಷತನವನ್ನು ಬಿಂಬಿಸುತ್ತದೆ. ಸುದೀರ್ಘ ಉತ್ತರವನ್ನು ಸಂಕ್ಷಿಪ್ತವಾಗಿ, ಚೊಕ್ಕದಾಗಿ ಬರೆಯುವುದು ಒಂದು ಕಲೆ. ಇದಕ್ಕೆ ಬರೆದು ಅಭ್ಯಾಸ ಮಾಡಬೇಕು. ವಾಕ್ಯಗಳಲ್ಲಿ ಅನಗತ್ಯ ಪದಗಳನ್ನು ತುರುಕದಿರಿ. ಆದಷ್ಟು ಚಿಕ್ಕದಾಗಿ ವಾಕ್ಯ ರಚನೆ ಮಾಡಿ. ವಿಸ್ತೃತ ರೂಪಗಳನ್ನು ಕಡಿಮೆ ಮಾಡಿ. ಪದ್ಯವೊಂದರೆ ಸಾರಾಂಶವನ್ನು ಬರೆಯುವಂತೆ, ನಿಮಗೆ ಕೇಳಿದ ಪ್ರಶ್ನೆಯ ಪ್ರಮುಖ ಭಾಗ ಯಾವುದು ಎಂಬುದನ್ನು ಅರ್ಥೈಸಿಕೊಳ್ಳಿ. ಆ ಅಂಶವು ಉತ್ತರದಲ್ಲಿ ಅಡಕವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಅಭ್ಯಾಸದ ವೇಳೆ ಉತ್ತರವನ್ನು ಯೋಚಿಸಿ ಬರೆಯಿರಿ. ಇದನ್ನೇ ಅಭ್ಯಾಸ ಮಾಡಿದರೆ, ಪರೀಕ್ಷೆಯಲ್ಲಿ ಬರೆಯಲು ಸುಲಭವಾಗುತ್ತದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner