10ನೇ ತರಗತಿಯಿಂದಲೇ ಶುರುವಾಗಲಿ ಐಐಟಿ, ಜೆಇಇ ಪರೀಕ್ಷೆಗಳಿಗೆ ಸಿದ್ಧತೆ; ಹೀಗಿರಲಿ ತಯಾರಿ
ಕನ್ನಡ ಸುದ್ದಿ  /  ಜೀವನಶೈಲಿ  /  10ನೇ ತರಗತಿಯಿಂದಲೇ ಶುರುವಾಗಲಿ ಐಐಟಿ, ಜೆಇಇ ಪರೀಕ್ಷೆಗಳಿಗೆ ಸಿದ್ಧತೆ; ಹೀಗಿರಲಿ ತಯಾರಿ

10ನೇ ತರಗತಿಯಿಂದಲೇ ಶುರುವಾಗಲಿ ಐಐಟಿ, ಜೆಇಇ ಪರೀಕ್ಷೆಗಳಿಗೆ ಸಿದ್ಧತೆ; ಹೀಗಿರಲಿ ತಯಾರಿ

ಭಾರತದಲ್ಲಿ ಇಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಐಐಟಿ-ಜೆಇಇ (IIT JEE) ಪರೀಕ್ಷೆಗಳು ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ತಯಾರಿಯನ್ನು ಸಹ ನಡೆಸಬೇಕಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿದ್ದರೆ ಒಳ್ಳೆಯದು. ಸುಲಭವಾಗಿ ಪರೀಕ್ಷೆ ಪಾಸು ಮಾಡುವುದು ಹೇಗೆ? ಪರೀಕ್ಷಾರ್ಥಿಗಳಿಗೆ ಇಲ್ಲಿದೆ ಟಿಪ್ಸ್‌.

10ನೇ ತರಗತಿಯಿಂದಲೇ ಶುರುವಾಗಲಿ ಐಐಟಿ, ಜೆಇಇ ಪರೀಕ್ಷೆಗಳಿಗೆ ಸಿದ್ಧತೆ; ಹೀಗಿರಲಿ ತಯಾರಿ
10ನೇ ತರಗತಿಯಿಂದಲೇ ಶುರುವಾಗಲಿ ಐಐಟಿ, ಜೆಇಇ ಪರೀಕ್ಷೆಗಳಿಗೆ ಸಿದ್ಧತೆ; ಹೀಗಿರಲಿ ತಯಾರಿ

ಐಐಟಿ-ಜೆಇಇ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಂಟಿ ಪ್ರವೇಶ ಪರೀಕ್ಷೆ (ಜೈಂಟ್‌ ಎನ್‌ಟ್ರೆನ್ಸ್ ಎಕ್ಸಾಮಿನೇಷನ್‌) ಇದು ಈಗ ಭಾರತದಲ್ಲಿ ಇಂಜಿನಿಯರಿಂಗ್‌ ಪ್ರವೇಶಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹಳ ಸವಾಲಿನ ಪರೀಕ್ಷೆಯಾಗಿದೆ. ಪ್ರತಿಷ್ಠಿತ ಎಂಜಿನಿಯರಿಂಗ್‌ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಾರೆ. ಆದರೆ ಈ ಪರೀಕ್ಷೆಗಳು ವಿದ್ಯಾರ್ಥಿಗಳ ಸುಂದರ ಭವಿಷ್ಯವನ್ನು ಖಾತ್ರಿಪಡಿಸುತ್ತದೆ.

ಪ್ರತಿ ವರ್ಷ ಸುಮಾರು 20 ಲಕ್ಷ ವಿದ್ಯಾರ್ಥಿಗಳು ಐಐಟಿ ಜೆಇಇ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲಭ್ಯವಿರುವ ಸೀಮಿತ ಸಂಖ್ಯೆಯ ಸೀಟುಗಳ ಪ್ರವೇಶಕ್ಕಾಗಿ ಪೈಪೋಟಿ ನಡೆಸುತ್ತಾರೆ. ಆದರೆ ಬಹಳಷ್ಟು ಜನರಿಗೆ ಈ ಪರೀಕ್ಷೆಯ ತಯಾರಿ ಪ್ರಾರಂಭಿಸಲು ಸರಿಯಾದ ಸಮಯ ಯಾವುದು ಎಂಬ ಗೊಂದಲವಿರುತ್ತದೆ. ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಆಗಾಗ್ಗೆ ಇದರ ಬಗ್ಗೆ ಪ್ರಶ್ನಿಸುತ್ತಿರುತ್ತಾರೆ. ಈ ಪ್ರಶ್ನೆಗೆ ಯಾವುದೇ ನೇರವಾದ ಉತ್ತರವಿಲ್ಲ. ಆದರೆ ತಜ್ಞರ ಪ್ರಕಾರ, ವಿದ್ಯಾರ್ಥಿಗಳು ತಮ್ಮ 10 ನೇ ತರಗತಿಯನ್ನು ಪೂರ್ಣಗೊಳಿಸಿದ ತಕ್ಷಣ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ಮೇಲೆ ಗಮನ ಕೇಂದ್ರೀಕರಿಸಲು ಪ್ರಾರಂಭಿಸುವುದು ಸೂಕ್ತ ಎಂಬುದು ಅವರ ಅಭಿಪ್ರಾಯ.

10ನೇ ತರಗತಿಯ ನಂತರ ಜೆಇಇ ಆಕಾಂಕ್ಷಿಗಳು ಅನುಸರಿಸಬಹುದಾದ ಕೆಲವು ಪ್ರಮುಖ ತಯಾರಿ ಸಲಹೆಗಳು ಹೀಗಿವೆ

ನಿಮ್ಮ ವಿಭಾಗ ಮತ್ತು ವಿಷಯ ಆಯ್ಕೆ ಮಾಡಿಕೊಳ್ಳಿ

ನೀವು ಇಂಜಿನಿಯರಿಂಗ್‌ನಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಕೊಳ್ಳಲು ಬಯಸಿದರೆ, ಅದಕ್ಕೆ ನೀವು 11 ನೇ ತರಗತಿ ಅಥವಾ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ದುಕೊಳ್ಳಬೇಕಾಗುತ್ತದೆ. ಅದರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ನಿಮ್ಮ ಮೊದಲ ಆದ್ಯತೆಯಾಗಿರಬೇಕು. ನೀವು ವಿಷಯಗಳನ್ನು ಬಹಳ ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ. ಜೊತೆಗೆ ನಿಮ್ಮ ಕಾಲೇಜು ಒದಗಿಸುತ್ತಿರುವ ಹೆಚ್ಚುವರಿ ವಿಷಯಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ನಿಮಗೆ ಕಂಪ್ಯೂಟರ್‌ ವಿಷಯದಲ್ಲಿ ಆಸಕ್ತಿ ಇದ್ದು, ನಿಮ್ಮ ಶಾಲೆ ಅಥವಾ ಕಾಲೇಜು ಕಂಪ್ಯೂಟರ್ ಸೈನ್ಸ್ ಅನ್ನು ಹೆಚ್ಚುವರಿ ವಿಷಯವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದರೆ ಅದನ್ನು ಪರಿಗಣಿಸಿ. ತಜ್ಞರು ಹೇಳುವುದು ಇದನ್ನೇ.

ಪರೀಕ್ಷೆಯನ್ನು ಅರ್ಥಮಾಡಿಕೊಳ್ಳಿ

ಪರೀಕ್ಷೆಯ ಮಾದರಿ ಮತ್ತು ಪರೀಕ್ಷೆಯ ಪಠ್ಯಕ್ರಮವನ್ನು ಮೊದಲು ಅರ್ಥ ಮಾಡಿಕೊಳ್ಳಿ. ಜೆಇಇ ಪ್ರವೇಶ ಪರೀಕ್ಷೆಯು ಎರಡು ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಅದು ಜೆಇಇ ಮೇನ್‌ ಮತ್ತು ಜೆಇಇ ಅಡ್ವಾನ್ಸ್ಡ್‌ ಎಂಬುದಾಗಿದೆ. ಜೆಇಇಯ ಮೇನ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೆ ಮಾತ್ರ ನೀವು ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಪಡೆದುಕೊಳ್ಳುತ್ತೀರಿ.

11 ಮತ್ತು 12 ನೇ ತರಗತಿಯ ಪಠ್ಯಕ್ರಮದ ಮೇಲೆ ಕೇಂದ್ರೀಕರಿಸಿ

ಐಐಟಿ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮವು ಪ್ರಾಥಮಿಕವಾಗಿ 11 ಮತ್ತು 12 ನೇ ತರಗತಿಯ ವಿಷಯಗಳನ್ನೇ ಒಳಗೊಂಡಿರುತ್ತದೆ. ಬೇರೆ ಪೂರಕ ಪುಸ್ತಕಗಳನ್ನು ಓದುವ ಮೊದಲು ಎನ್‌ಸಿಇಆರ್‌ಟಿ (NCERT) ಪುಸ್ತಕಗಳಿಗೆ ಮೊದಲು ಆದ್ಯತೆ ನೀಡುವುದು ಸೂಕ್ತ.

ಸಮಯ ಹೊಂದಿಸಿಕೊಳ್ಳಿ

ನಿಮ್ಮ ಶಾಲಾ ಅಥವಾ ಕಾಲೇಜು ಅಧ್ಯಯನಗಳಿಗೆ ಧಕ್ಕೆಯಾಗದಂತೆ ಜೆಇಇಗೆ ತಯಾರಿ ಮಾಡಲು ಆಗುವಂತೆ ಅಧ್ಯಯನದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಿ. ಹೆಚ್ಚಿನ ಗಮನ ಅಗತ್ಯವಿರುವ ವಿಷಯಗಳ ಮೇಲಿರಲಿ. ಆದರೆ ಇತರ ಪೂರಕ ವಿಷಯಗಳನ್ನು ಕಡೆಗಣಿಸಬೇಡಿ.

ಕೋಚಿಂಗ್‌ ಸೆಂಟರ್‌ ಆಯ್ಕೆ

ಸಾಮಾನ್ಯವಾಗಿ, ವಿದ್ಯಾರ್ಥಿಗಳಿಗೆ ನಿಯಮಿತ ಕಾಲೇಜು ಅಧ್ಯಯನಗಳೊಂದಿಗೆ ಐಐಟಿ ಜೆಇಇ ಪ್ರವೇಶ ಪರೀಕ್ಷೆ ಭೇದಿಸುವುದು ಸವಾಲಿನ ಸಂಗತಿ. ಅದರ ಪರಿಣಾಮ ಅನೇಕರು ಈ ಪ್ರವೇಶ ಪರೀಕ್ಷಾ ತಯಾರಿಯಲ್ಲಿ ತಮಗೆ ಸಹಾಯ ಮಾಡುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳನ್ನು ಹುಡುಕುತ್ತಾರೆ. ಒಂದು ವೇಳೆ ನೀವು ಕೋಚಿಂಗ್ ತೆಗೆದುಕೊಳ್ಳಲು ನಿರ್ಧರಿಸಿದ್ದರೆ, ಪ್ರತಿಷ್ಠಿತ ಕೋಚಿಂಗ್ ಇನ್ಸ್ಟಿಟ್ಯೂಟ್ ಗಳನ್ನು ಹುಡುಕಿ ಅದನ್ನೇ ಆಯ್ಕೆ ಮಾಡಿಕೊಳ್ಳಿ. ಕೋಚಿಂಗ್ ಕಡ್ಡಾಯವಲ್ಲ ಎಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಡಬೇಕು. ಸ್ವಯಂ ಅಧ್ಯಯನದಿಂದಲೂ ಜೆಇಇ ಪರೀಕ್ಷೆ ಪಾಸಾಗಬಹುದು.

(ಬರಹ: ಅರ್ಚನಾ ವಿ. ಭಟ್‌)

Whats_app_banner