ಭಾರತದ ಮಕ್ಕಳಿಗೆ ಸಿಗುತ್ತಿದೆಯೇ ಗುಣಮಟ್ಟದ ಬುನಾದಿ ಶಿಕ್ಷಣ? ಇದರ ಮಹತ್ವ ತಿಳಿಯಿರಿ – ನಂದಿನಿ ಟೀಚರ್ ಅಂಕಣ
ನಂದಿನಿ ಟೀಚರ್ ಬರಹ: ಬುನಾದಿ ಶಿಕ್ಷಣದ ಈ ಹಂತದಲ್ಲಿ ನಾವು ಮಕ್ಕಳಿಗೆ ಬೋಧಿಸುವ ವಿಷಯಗಳು ಮತ್ತು ಶಿಕ್ಷಣದ ಮಾದರಿ ಅವರ ಅನ್ನಮಯ ಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯ ಕೋಶ, ಮತ್ತು ಆನಂದಮಯ ಕೋಶಗಳನ್ನು ತಟ್ಟುವಂತಿರಬೇಕು.

ಭಾರತವಿನ್ನೂ ದಾಸ್ಯದಲ್ಲಿದ್ದಾಗಲೇ ‘ಭಾರತಾಂಬೆ ತನ್ನ ಸುಖ ನಿದ್ರೆಯಿಂದ ಎಚ್ಚರಗೊಳ್ಳುತ್ತಿದ್ದಾಳೆ, ಇನ್ನು ಆಕೆಯನ್ನು ತಡೆಯಲಾಗದು, ಆಕೆ ಮತ್ತೆ ನಿದ್ರಿಸುವ ಮಾತೇ ಇಲ್ಲ, ಯಾವ ಹೊರಗಿನ ಶಕ್ತಿಗಳು ಆಕೆಯನ್ನು ಇನ್ನು ತಡೆಯಲಾರವು. ಏಕೆಂದರೆ ಈ ಮಹಾ ಶಕ್ತಿ ಎಚ್ಚೆತ್ತು ತನ್ನ ಕಾಲ ಮೇಲೆ ತಾನು ನಿಲ್ಲುತ್ತಿದ್ದಾಳೆ‘ ಎಂದು ಸ್ವಾಮಿ ವಿವೇಕಾನಂದರು ಘೋಷಿಸಿದ್ದರು. ಅವರು ಅ೦ದು ನುಡಿದ ಭವಿಷ್ಯ ನಿಜವಾಗುತ್ತಿದೆ. ಭಾರತ ತನ್ನ ಕಾಲ ಮೇಲೆ ತಾನು ನಿ೦ತಿದೆ. ಜಾಗೃತವಾದ ಭಾರತ ವಿಶ್ವಗುರುವಾಗಬೇಕಿದೆ. ಇದಕ್ಕಾಗಿ ಪಾವಿತ್ರ್ಯೆಯ ಕೆಚ್ಚು, ನಂಬಿರುವ ಭಗವಂತನಲ್ಲಿ ಅಪರಿಮಿತ ವಿಶ್ವಾಸ ಇದಲ್ಲಕ್ಕಿಂತ ಮುಖ್ಯವಾಗಿ ದೇಶಪ್ರೇಮ ತುಂಬಿರುವ ಪುರುಷ ಸಿಂಹರ ನಿರ್ಮಾಣ ಬಹು ದೊಡ್ಡ ಸಂಖ್ಯೆಯಲ್ಲಿ ಬೇಕಿದೆ. ಆದರೆ ಶತಶತಮಾನಗಳ ನಿಷ್ಕ್ರಿಯತೆಯೋ ಅಥವಾ ಸ್ವಾತಂತ್ರ್ಯಾನಂತರವೂ ನಾವು ಪಾಲಿಸಿಕೊಂಡು ಬಂದ ಕಾರಕೂನ ಸ್ವಭಾವವನ್ನೇ ಪ್ರಚೋದಿಸುವ ಶಿಕ್ಷಣ ಪದ್ಧತಿಯೋ ಅಂತೂ ನಾವಿನ್ನೂ ಗೊoದಲ ಸ್ಥಿತಿಯಲ್ಲಿಯೇ ಮುಂದುವರೆದಿದ್ದೇವೆ. ಆದರೆ ನಾವೀಗ ಬದಲಾಗಬೇಕಿದೆ, ನಮ್ಮ ಮು೦ದಿನ ಜನಾ೦ಗದಲ್ಲಿ ದೇಶಪ್ರೇಮ, ಸ್ವಾಭಿಮಾನ ತುಂಬಿರುವ ಪುರುಷಸಿಂಹರ ಸಿದ್ಧತೆಯನ್ನು ಬಾಲ್ಯದಿಂದಲೇ ಆರಂಭಿಸಬೇಕಿದೆ. ಮಗುವಿನ ಶಿಕ್ಷಣ ತಾಯಿಯ ಗರ್ಭಾವಸ್ಥೆಯಿಂದಲೇ ಆರಂಭವಾಗುವ ಹಿನ್ನಲೆಯಲ್ಲಿ, ಆರಂಭಿಕ ಶಿಕ್ಷಣ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಬೇಸಿಗೆ ರಜದಲ್ಲಿರುವ ಮಕ್ಕಳು ಮರಳಿ ಶಾಲೆಗೆ ಬರುವ ಮುನ್ನವೇ ಬುನಾದಿ ಶಿಕ್ಷಣ ಹೇಗಿರಬೇಕು ಮತ್ತು ಆ ವಯಸ್ಸಿನ ಮಕ್ಕಳಿಗೆ ನಾವು ಯಾವು ರೀತಿಯಲ್ಲಿ ಶಿಕ್ಷಣ ನೀಡಬಹುದು ಎಂದು ತಿಳಿದುಕೊಳ್ಳೋಣ.
‘ಬೆಳೆಯುವ ಪೈರು ಮೊಳಕೆಯಲ್ಲೇ‘ ಎನ್ನುವ೦ತೆ 3-8 ವಷ೯ದವರೆಗಿನ ಬುನಾದಿ ಶಿಕ್ಷಣದ ಸಮಯ ಅವರ ಮುಂದಿನ ಜೀವನಕ್ಕೆ ನಾಂದಿ ಹಾಡುತ್ತದೆ ಎನ್ನುವುದನ್ನು ಈಗಾಗಲೇ ಸಂಶೋಧನೆಗಳು ದೃಢಪಡಿಸಿವೆ. ಈ ಸಮಯದಲ್ಲಿ ಅವರ ಮೆದುಳಿನ ಬೆಳವಣಿಗೆ ವೇಗವಾಗಿರುವುದರಿಂದ ಅವರ ದೈಹಿಕ, ಬುದ್ಧಿ ವಿಕಾಸದ ಜೊತೆಗೆ ಭಾವನಾತ್ಮಕ ವಿಕಾಸವೂ ಸ್ವಾಭಾವಿಕವಾಗಿಯೇ ವೇಗವನ್ನು ಪಡೆದಿರುತ್ತದೆ. ಹಾಗದರೆ 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಶಿಕ್ಷಣ ಯಾವ ರೀತಿಯಾಗಿರಬೇಕು ಎನ್ನುವ ಕುರಿತು ವಿಸ್ತೃತವಾಗಿ NEP 2020ರ ಯೋಜನೆಯಡಿಯಲ್ಲಿ ರಚಿಸಲಾದ ಎನ್‌ಸಿಎಫ್ 2022 ವಿವರಣೆ ನೀಡುತ್ತದೆ.
ಶಾಲಾ ಶಿಕ್ಷಣಕ್ಕಾಗಿ ರೂಪಿಸಿರುವ 5+3+3+4 ಮಾದರಿಯಲ್ಲಿ 3-8 ವರ್ಷ ವಯಸ್ಸಿನ ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಸಮಗ್ರ ವಿಧಾನವನ್ನು ಎನ್‌ಸಿಎಫ್ 2022ವಿಶೇಷವಾಗಿ ಕಲ್ಪಿಸುತ್ತದೆ. 3-8 ವರ್ಷ ವಯಸ್ಸಿನ ಮಕ್ಕಳಿಗಾಗಿ ‘ಪಠ್ಯಕ್ರಮ ಮತ್ತು ಶಿಕ್ಷಣ‘ವನ್ನು ಸ್ವಾತಂತ್ರ್ಯಾನಂತರ ಭಾರತದಲ್ಲಿ ಮೊದಲ ಬಾರಿಗೆ ರೂಪಿಸಲಾಗಿರುವ ಈ ಯೋಜನೆಯಲ್ಲಿ ಬದಲಾಗುತ್ತಿರುವ ಇಂದಿನ ಯುಗದಲ್ಲಿ ಮಕ್ಕಳ ಆರಂಭಿಕ ಶಿಕ್ಷಣ ಮಹತ್ವವನ್ನು ಪಡೆದಿರುವುದು, ಭಾರತದ ಮುಂದಿನ ಸದೃಢ ಜನಾಂಗದ ತಯಾರಿಗೆ ನಾಂದಿ ಹಾಡಿದೆ.
ಬುನಾದಿ ಶಿಕ್ಷಣದ ಈ ಹಂತದಲ್ಲಿ ನಾವು ಮಕ್ಕಳಿಗೆ ಬೋಧಿಸುವ ವಿಷಯಗಳು ಮತ್ತು ಶಿಕ್ಷಣದ ಮಾದರಿ ಅವರ ಅನ್ನಮಯ ಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯ ಕೋಶ, ಮತ್ತು ಆನಂದಮಯ ಕೋಶಗಳನ್ನು ತಟ್ಟುವಂತಿರಬೇಕು. ಶಾಲೆಯ ಕೊನೆಯ ಗಂಟೆಗಾಗಿ ಮಕ್ಕಳು ಉತ್ಸಾಹದಿಂದ ಕಾಯುವಂತೆ, ಮೊದಲ ಗಂಟೆಯತ್ತಲೂ ಉತ್ಸಾಹಿತರಾಗಬೇಕು. ಅಂದಹಾಗೆ ಶಿಕ್ಷಣದ ಮೂಲ ಕಲ್ಪನೆಯೇ ಎಲ್ಲ ಹಂತಗಳಲ್ಲೂ ನಾವು ನೀಡುವ ಶಿಕ್ಷಣ ವಿದ್ಯಾರ್ಥಿಗಳ ಪಂಚಕೋಶಗಳನ್ನು ತಟ್ಟಬೇಕೆಂದಿರುವಾಗ, ಆರಂಭಿಕ ಹಂತದಿ೦ದಲೇ ಕಲಿಕೆಯನ್ನು ಮಕ್ಕಳು ಆನಂದಿಸುವಂತಾಗಬೇಕು ಎನ್ನುವುದನ್ನು ನೂತನ ಎನ್‌ಸಿಎಫ್ ಸಮರ್ಥಿಸುತ್ತದೆ.
ತಮ್ಮ ಸುತ್ತಲ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಳ್ಳುವ ಮಕ್ಕಳ ಸ್ವಭಾವದಲ್ಲಿ ಆರಂಭಿಕ ಹಂತದಲ್ಲಿಯೇ ಬದಲಾವಣೆ ತಂದರೆ, ಅದು ಅವರ ಭವಿಷ್ಯದ ಮೇಲೂ ಪರಿಣಾಮ ಬೀರುವಲ್ಲಿ ನೆರವಾಗುತ್ತದೆ ಎನ್ನುವ ಆಶಯವನ್ನು ವ್ಯಕ್ತಪಡಿಸುವ ಎನ್‌ಸಿಎಫ್, ಶಿಕ್ಷಕರ ಸಿದ್ಧತೆಯತ್ತ ಹೆಚ್ಚು ಗಮನ ನೀಡುತ್ತದೆ. ಶಿಕ್ಷಕರು ತಮ್ಮ ನಡವಳಿಕೆಯಿಂದ ಹಾಗೂ ಪಾಠ ಮಾಡುವ ಕ್ರಮದಿಂದ ಮಕ್ಕಳನ್ನು ತಮ್ಮತ್ತ ಆಕರ್ಷಿಸುವ ಗುಣವನ್ನು ಹೊಂದಿರುವುದು ಇದಕ್ಕೆ ಕಾರಣ. ಮಕ್ಕಳಲ್ಲಿ ಆರೋಗ್ಯಕರವಾದ ದೈಹಿಕ ಬೆಳವಣಿಗೆಗೆ ವಯಸ್ಸಿಗನುಗುಣವಾದ ಕ್ರೀಡೆಗಳಲ್ಲಿ ಅವರನ್ನು ತೊಡಗಿಸುವುದು ಉದಾಹರಣೆಗೆ ಹಾರುವುದು, ಕುಪ್ಪಳಿಸುವುದು, ಕತ್ತರಿಸುವುದು, ಅಂಟಿಸುವುದು ಹೀಗೆ ಅನೇಕ ರೀತಿಯ ಮೋಟರ್ ಸ್ಕಿಲ್ಸ್ ; ಸಾಮಾಜಿಕ-ಮಾನಸಿಕ ಮತ್ತು ನೀತಿಯ ತಿಳುವಳಿಕೆ ಉದಾಹರಣೆಗೆ, ಸ್ವಸಹಾಯ ಮಾಡಿಕೊಳ್ಳುವ ಹಾಗೇ ಇತರರ ಅಗತ್ಯವನ್ನು ಗುರುತಿಸಿ ಸಹಾಯ ಮಾಡುವ ಮನೋಭಾವ; ದೇಶ ಪ್ರೇಮ ಕುರಿತ ಮತ್ತು ಸುತ್ತಮುತ್ತಲ ಅಗತ್ಯಗಳ ಕುರಿತು ಅರಿವು ಮೂಡಿಸಬಲ್ಲ ಚಿಂತನೆ ಉದಾಹರಣೆಗೆ ಪರಿಸರ ರಕ್ಷಣೆ ಕುರಿತ ಕಾಳಜಿ; ಭಾಷೆಯ ಬಳಕೆ ಮತ್ತು ಸoವಹನ ವಿಧಾನಗಳು ಸುಲಭವಾಗಿ ಓದುವ ಮತ್ತು ಅರ್ಥ ಮಾಡಿಕೊಳ್ಳುವ ಶೈಲಿಯಲ್ಲಿ ಪಠ್ಯಗಳ ರಚನೆಯತ್ತ ಶಿಕ್ಷಕರು ತಮ್ಮ ಗಮನ ಹರಿಸಬೇಕು ಎನ್ನುವ ಉದ್ದೇಶ ನೂತನ ಎನ್‌ಸಿಎಫ್‌ನಲ್ಲಿ ಕೇಂದ್ರೀಕೃತಗೊಳ್ಳುತ್ತದೆ. ಹಾಗೆಯೇ ದೇಶ ಪ್ರೇಮ ಕುರಿತ ಕಥೆಗಳು, ಕುಟುಂಬದ ಸದಸ್ಯರ ಹೆಸರು ಮತ್ತು ಸಂಬಂಧಗಳು ‘ಅಜ್ಜಿ‘, ‘ಅಜ್ಜ‘ ಹೀಗೆ ; ಹಬ್ಬಗಳ ಆಚರಣೆಯ ಮೂಲಕ ಸಂಸ್ಕೃತಿಯ ಪರಿಚಯ ಹೀಗೆ ಪಠ್ಯ ಮತ್ತು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಕಾರಾತ್ಮಕ ಬೆಳವಣಿಗೆಗೆ ಗಮನ ಕೇಂದ್ರೀಕರಿಸಬಹುದಾಗಿದೆ.
ಇತ್ತೀಚೆಗೆ ಚೀನಾದ ಬೀಜಿಂಗ್‌ನ ಅಂತರರಾಷ್ಟ್ರೀಯ ಶಾಲೆಯಲ್ಲಿ ಅಭ್ಯಾಸಿಸುತ್ತಿರುವ 7 ವರ್ಷದ ಬಾಲಕನಿಗೆ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಗುರುತ್ವಾಕರ್ಷಣ ಕುರಿತ ಪ್ರದರ್ಶನ ಅರ್ಥವಾಗುವುದು ಕಠಿಣವಾಗಬಹುದೆಂದು ನಾನು ಸೂರ್ಯ ಮಂಡಲದ ಕುರಿತಾದ ಪ್ರದರ್ಶನ ಸಾಕೆಂದು ಹೇಳಿದ ಅಭಿಪ್ರಾಯವನ್ನು ಅವನು 10 ನಿಮಿಷ ಗುರುತ್ವಾಕಷ೯ಣ ಕುರಿತು ನೀಡಿದ ವಿವರಣೆಯ ನoತರ ಬದಲಾಯಿಸಿಕೊಳ್ಳಬೇಕಾಯ್ತು. ವಿಷಯದ ಪರಿಚಯ ಮತ್ತು ಪರಿಕಲ್ಪನೆ ಆರಂಭಿಕ ಹಂತದಿಂದಲೇ ಆರಂಭವಾಗುತ್ತದೆ ಮತ್ತು ತರಗತಿಯಲ್ಲಿ ಮುಂದುವರೆದಂತೆ ಜ್ಞಾನದ ವಿಸ್ತಾರವಾಗುತ್ತದೆ ಎನ್ನುವ ಮಾಹಿತಿ ಅವನ ಹೆತ್ತವರು ನನಗೆ ನೀಡಿದ್ದರು. ಅಲ್ಲಿಗೆ ಅವರು ಈಗಾಗಲೇ ಶಿಕ್ಷಣದ ಅದಿತಿ - ಪರಿಚಯ, ಬೋಧ - ಪರಿಕಲ್ಪನೆಯ ಮಾಹಿತಿ, ಅಭ್ಯಾಸ, ಪ್ರಯೋಗ, ಮತ್ತು ಪ್ರಸಾರ ‘ಪಂಚಪದಿ' ಸೂತ್ರವನ್ನು ಅಳವಡಿಸಿಕೊಂಡಿದ್ದಾರೆಂದು ಅಥ೯ವಾಗುತ್ತದೆ.
ಶಿಕ್ಷಕರು ಅಳವಡಿಸಲ್ಪಟ್ಟ ಪಠ್ಯಗಳನ್ನು ಮಕ್ಕಳೊ೦ದಿಗೆ ಸ೦ವಹನಿಸಲು, ಸ೦ದರ್ಭಗಳಲ್ಲಿ ನೈಜ-ಜೀವನದ ಉದಾಹರಣೆಗಳೊ೦ದಿಗೆ ಸ್ಪಷ್ಟಗೊಳಿಸಲು ಅನುಕೂಲವಾಗುವ೦ತೆ ಶಾಲೆಯ ಪರಿಸ್ಥಿತಿಯೂ ನಿರ್ಮಾಣವಾಗುವ ಅಪೇಕ್ಷೆಯೊಂದಿಗೆ ಗುರುತ್ವಾಕರ್ಷಣೆಯ ಕುರಿತು ಬುನಾದಿ ಹಂತದಲ್ಲಿನ ಮಕ್ಕಳಿಗೆ ವಿವರಣೆ ನೀಡುವುದಾದರೆ ಶಿಕ್ಷಕರಾಗಿ ನಾವು ಭಾರತದಲ್ಲಿ ಹೇಳುತ್ತಿದ್ದೇವೆಯೇ? ಹೇಳುತ್ತಿದ್ದರೆ ಹೇಗೆ ಹೇಳುತ್ತಿದ್ದೇವೆ ಅಥವಾ ಪಂಚಪದಿ ಮಾರ್ಗದಲ್ಲಿ ಹೇಗೆ ಹೇಳಬಹುದು ಎಂದು ಯೋಚಿಸುತ್ತಿರಿ ಮತ್ತೆ ಮಾತಾಡೋಣ.