KCET: ಪಿಯುಸಿ ನಂತರ ವೃತ್ತಿಪರ ಪದವಿ ಕೋರ್ಸುಗಳ ಪ್ರವೇಶಕ್ಕೆ ಮಹಾದ್ವಾರ ಸಿಇಟಿ; ಅರ್ಜಿ ಸಲ್ಲಿಸಲು ಫೆ 20 ಲಾಸ್ಟ್​ ಡೇಟ್​
ಕನ್ನಡ ಸುದ್ದಿ  /  ಜೀವನಶೈಲಿ  /  Kcet: ಪಿಯುಸಿ ನಂತರ ವೃತ್ತಿಪರ ಪದವಿ ಕೋರ್ಸುಗಳ ಪ್ರವೇಶಕ್ಕೆ ಮಹಾದ್ವಾರ ಸಿಇಟಿ; ಅರ್ಜಿ ಸಲ್ಲಿಸಲು ಫೆ 20 ಲಾಸ್ಟ್​ ಡೇಟ್​

KCET: ಪಿಯುಸಿ ನಂತರ ವೃತ್ತಿಪರ ಪದವಿ ಕೋರ್ಸುಗಳ ಪ್ರವೇಶಕ್ಕೆ ಮಹಾದ್ವಾರ ಸಿಇಟಿ; ಅರ್ಜಿ ಸಲ್ಲಿಸಲು ಫೆ 20 ಲಾಸ್ಟ್​ ಡೇಟ್​

ಬಹಳಷ್ಟು ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಕೇವಲ ಇಂಜಿಯರಿಂಗ್ ಪದವಿ ಪ್ರವೇಶಕ್ಕೆ ಮಾತ್ರ ಸೀಮಿತಗೊಳಿಸಿಬಿಡುತ್ತಾರೆ. ಆದರೆ ಇತರ ಪದವಿ ಬಗ್ಗೆಯೂ ತಿಳಿಯಿರಿ. ಈ ಬಗ್ಗೆ ಮಾಹಿತಿ ನೀಡಿದ್ದಾರೆ ಪ್ರಣವಸ್ಯ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ನಾಗೇಂದ್ರ ಟಿ.ಸಿ

ಸಿಇಟಿ ಪರೀಕ್ಷೆ (ಸಾಂದರ್ಭಿಕ ಚಿತ್ರ)
ಸಿಇಟಿ ಪರೀಕ್ಷೆ (ಸಾಂದರ್ಭಿಕ ಚಿತ್ರ)

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಇಟಿ) ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ವಿವಿಧ ಪದವಿಪೂರ್ವ ವೃತ್ತಿಪರ ಕೋರ್ಸುಗಳಿಗೆ ಮೆರಿಟ್ ಆಧಾರದ ಮೂಲಕ ಪ್ರವೇಶ ಕಲ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ. ನಗರ ಪ್ರದೇಶಗಳ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿಯಿದ್ದರೂ, ಅದು ಪರಿಪೂರ್ಣವಾಗಿರುವುದಿಲ್ಲ. ಬಹಳಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಕೇವಲ ಇಂಜಿಯರಿಂಗ್ ಪದವಿ ಪ್ರವೇಶಕ್ಕೆ ಮಾತ್ರ ಸೀಮಿತಗೊಳಿಸಿಬಿಡುತ್ತಾರೆ.

ಪ್ರಸ್ತುತ ವರ್ಷದಿಂದ ಈ ಪರೀಕ್ಷೆಯಲ್ಲಿ ಕೆಲವು ಬದಲಾವಣೆಗಳೂ ಸಹ ಕಾರ್ಯರೂಪಕ್ಕೆ ಬಂದಿವೆ. ಗ್ರಾಮಾಂತರ ವಿಭಾಗದ, ಅದರಲ್ಲೂ ಸರ್ಕಾರಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾಹಿತಿ ಕೊರತೆಯಿಂದಾಗಿ ಈ ಪರೀಕ್ಷೆಯನ್ನು ನಿರ್ಲಕ್ಷಿಸಿ ಉತ್ತಮ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.

ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಾತ್ರವಲ್ಲದೆ, ಯೋಗ ಮತ್ತು ನ್ಯಾಚುರೋಪತಿ (ನೀಟ್ ಪರೀಕ್ಷೆ ಇಲ್ಲದೇ ಐದೂವರೆ ವರ್ಷ ವೈದ್ಯಕೀಯ ಅಭ್ಯಾಸದ ಮೂಲಕ ಪದವಿ ಪಡೆದು ಡಾಕ್ಟರ್ ಆಗುವ ಏಕೈಕ ಅವಕಾಶ), ಬಿ-ಫಾರ್ಮ, ಕೃಷಿ ವಿಜ್ಞಾನ ಕೋರ್ಸುಗಳು (ಅಗ್ರಿಕಲ್ಚರ್, ಹಾರ್ಟಿಕಲ್ಚರ್, ಸೆರಿಕಲ್ಚರ್, ಫಾರೆಸ್ಟ್ರಿ, ಫಿಶರಿ, ಡೈರಿ ಟೆಕ್ನಾಲಜಿ, ಫುಡ್ ಟೆಕ್ನಾಲಜಿ, ಹೋಮ್ ಅಥವಾ ಕಮ್ಯುನಿಟಿ ಸೈನ್ಸ್, ಅಗ್ರಿಕಲ್ಚರ್ ಬಿ ಟೆಕ್, ಅಗ್ರಿಕಲ್ಚರ್ ಬಿಸಿನೆಸ್ ಮಾರ್ಕೆಟಿಂಗ್), ವೆಟರ್ನರಿ ಸೈನ್ಸ್ ಹಾಗೂ ಬಿಎಸ್‍ಸಿ ನರ್ಸಿಂಗ್ ಕೋರ್ಸುಗಳಿಗೆ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನ ರಹಿತ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಕೋರ್ಸುಗಳ 2024-25ನೇ ಸಾಲಿಗೆ ಅರ್ಜಿಗಳನ್ನು ಸಲ್ಲಿಸಲು ದಿನಾಂಕ 20, ಫೆಬ್ರವರಿ 2024 ಕೊನೆಯ ದಿನವಾಗಿರುತ್ತದೆ.

ಕೆಸಿಇಟಿ ಪರೀಕ್ಷೆಯು ಮೆರಿಟ್ ಆಧಾರದ ವ್ಯವಸ್ಥೆಯನ್ನು ಅನುಸರಿಸುತ್ತದೆ. ಪಿಯು ಬೋರ್ಡ್ ನಡೆಸುವ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಶೇ.50 ಹಾಗೂ ಸಿಇಟಿ ಪರೀಕ್ಷೆಯಲ್ಲಿನ ಗಳಿಕೆಯ ಶೇ.50 ಕಾರ್ಯಕ್ಷಮತೆಯನ್ನು ಆಧರಿಸಿ ಅಭ್ಯರ್ಥಿಗಳ ಶ್ರೆಯಾಂಕ ನಿಗದಿಯಾಗಿ ಅರ್ಹ ಅಭ್ಯರ್ಥಿಗಳಿಗೆ ಸೀಟುಗಳನ್ನು ಹಂಚಲಾಗುತ್ತದೆ. ಹಾಗಾಗಿ ಬೋರ್ಡ್ ಪರೀಕ್ಷೆಗಳಲ್ಲಿನ ವಿದ್ಯಾರ್ಥಿಗಳ ಸಾಧನೆಯೂ ಮಹತ್ವದ್ದಾಗಿರುತ್ತದೆ.

ಎಲ್ಲಾ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಗೆ ಅರ್ಜಿಯು ಸಾಮಾನ್ಯವಾಗಿದ್ದು, ಸಿಇಟಿ-2024 ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಆನ್‍ಲೈನ್‍ನಲ್ಲಿಯೇ ಶುಲ್ಕ ಪಾವತಿಸಿ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಫೆಬ್ರವರಿ 20, 2024ರ ನಂತರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಗೆ ತೆರೆಬೀಳಲಿದ್ದು ಅಪ್ಲಿಕೇಶನ್ ಪೋರ್ಟಲ್ ತೆರೆಯುವುದಿಲ್ಲ. ಆನ್‍ಲೈನ್ ಅರ್ಜಿ ಸಲ್ಲಿಸುವಿಕೆಯು ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡ್ಯೂಲ್ ಆಗಿರುವುದರಿಂದ ದಾಖಲೆಗಳ ಪರಿಶೀಲನೆ ಭೌತಿಕವಾಗಿರುವುದಿಲ್ಲ. ಆದ್ದರಿಂದ ಆಕಾಂಕ್ಷಿಗಳು ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು.

ಪ್ರತಿ ವರ್ಷವೂ ಕೃಷಿಕುಟುಂಬಗಳಿಗೆ ಸೇರಿರುವ ಸಾವಿರಾರು ವಿದ್ಯಾರ್ಥಿಗಳು 'ಕೃಷಿ ಕೋಟಾ ಅಡಿಯಲ್ಲಿ ಮೀಸಲಾತಿ ಪಡೆಯಲು ನೀವು ಅರ್ಹರಿದ್ದೀರ?' ಹಾಗೂ 'ಕೃಷಿ ಪರೀಕ್ಷೆಗೆ ಹಾಜರಾಗಲು ಸ್ಥಳ* ಎಂಬ ವಿಭಾಗಗಳನ್ನು ಭರ್ತಿ ಮಾಡದೇ ತಮಗಿರುವ ಕೋಟಾದಿಂದ ವಂಚಿತರಾಗುತ್ತಿದ್ದಾರೆ.

ಹತ್ತನೇ ತರಗತಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಭಾವಚಿತ್ರ, ಒಂದರಿಂದ ಹತ್ತನೇ ತರಗತಿಯವರೆಗೆ ವ್ಯಾಂಸಗ ಮಾಡಿದ ಶಾಲೆಗಳಿಂದ ಪ್ರಮಾಣ ಪತ್ರ(ಬಿಇಒ ಅವರಿಂದ ಧೃಡೀಕರಣಗೊಂಡಿರಬೇಕು), ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಸ್ಕ್ಯಾನ್ ಮಾಡಿಟ್ಟುಕೊಂಡ ಅಭ್ಯರ್ಥಿಯ ಸಹಿ ಅರ್ಜಿ ತುಂಬಲು ಅವಶ್ಯವಾಗಿರುತ್ತದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ, ಹೋಮಿಯೋಪತಿ ಸೀಟುಗಳ ಪ್ರವೇಶಕ್ಕಾಗಿ ಕರ್ನಾಟಕದ ಅಭ್ಯರ್ಥಿಗಳು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, ನವದೆಹಲಿ ಇವರು ನಡೆಸುವ ಯುಜಿ-ನೀಟ್2024 ಪರೀಕ್ಷೆಗೆ ನೋಂದಾಯಿಸಿ ಅರ್ಹತೆಯನ್ನು ಪಡೆಯಬೇಕು.

ಯುಜಿ-ನೀಟ್2024 ಫಲಿತಾಂಶ ಪ್ರಕಟಣೆಯ ನಂತರ ಕೆಇಎ ನಲ್ಲಿ ನೋಂದಾಯಿತರಾಗಿರುವ ವಿದ್ಯಾರ್ಥಿಗಳಿಗೆ ಅವರ ನೀಟ್ ಶ್ರೆಯಾಂಕ ಹಾಗೂ ರೋಲ್ ನಂಬರ್ ದಾಖಲಿಸಲು ಇಂಟರ್‍ಫೇಸ್ ನೀಡಲಾಗುವುದು. ಆರ್ಕಿಟೆಕ್ಚರ್ ಪದವಿಗೂ ಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದ್ದು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‍ನವರು ನಡೆಸುವ ನಾಟಾ-2024 ಪರೀಕ್ಷೆಯ ಕಾರ್ಯಕ್ಷಮತೆಯ ಆಧಾರದ ಮೇಲೆ ಸೀಟು ಪಡೆಯಬಹುದು. ಪ್ಯಾರಾ ಮೆಡಿಕಲ್ ಕೋರ್ಸುಗಳಾದ ಬಿಪಿಟಿ(ಫಿಸಿಯೋಥೆರಪಿ), ಬಿಪಿಒ(ಆಪ್ತಮಾಲಜಿ) ಹಾಗೂ ಇತರ ಅಲೈಡ್ ಹೆಲ್ತ್ ಕೋರ್ಸುಗಳ ಪ್ರವೇಶಕ್ಕಾಗಿಯೂ ಸಿಇಟಿ ನೋಂದಣಿ ಕಡ್ಡಾಯವಾಗಿರುತ್ತದೆ. ಆದರೆ ಈ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಮೇಲ್ಕಂಡ ಎಲ್ಲಾ ವಿಷಯಗಳನ್ನೂ ಪರಿಗಣಿಸಿ ಅಭ್ಯರ್ಥಿಗಳು ಜಾಗರೂಕತೆಯಿಂದ ಅರ್ಜಿ ತುಂಬಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲಿ.

ಹೆಚ್ಚಿನ ವಿವರಗಳು, ಸಿಇಟಿ ಪರೀಕ್ಷೆಗಳ ತಯಾರಿಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ ಲೇಖಕರರನ್ನು ಸಂಪರ್ಕಿಸಬಹುದು.

-ನಾಗೇಂದ್ರ ಟಿ.ಸಿ

ಕಾರ್ಯದರ್ಶಿ, ಪ್ರಣವಸ್ಯ ಎಜುಕೇಶನಲ್ ಟ್ರಸ್ಟ್

9483846333

Whats_app_banner