ಕನ್ನಡ ಸುದ್ದಿ  /  Lifestyle  /  Education News Career Guide Column Forensic Science Scope Eligibility Criteria After Puc Education In Kannada Pcp

ಶಿಕ್ಷಣ ಜಗತ್ತು: ಫೋರೆನ್ಸಿಕ್‌ ಸೈನ್ಸ್‌ ಕಲಿತರೆ ಅತ್ಯುತ್ತಮ ಉದ್ಯೋಗಾವಕಾಶ, ವಿಧಿವಿಜ್ಞಾನ ಕ್ಷೇತ್ರಕ್ಕೆ ಪ್ರವೇಶಿಸುವವರಿಗೆ ಇಲ್ಲಿದೆ ಗೈಡ್‌

Forensic Science Career: ವಿಧಿವಿಜ್ಞಾನ ಅಥವಾ ಫೋರೆನ್ಸಿಕ್‌ ವಿಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೇಗಿದೆ? ಈ ಕ್ಷೇತ್ರದಲ್ಲಿ ಕರಿಯರ್‌ ರೂಪಿಸಿಕೊಳ್ಳುವುದು ಹೇಗೆ? ಏನು ಓದಿರಬೇಕು? ಇತ್ಯಾದಿ ವಿವರ ಇಲ್ಲಿದೆ.

ಶಿಕ್ಷಣ ಜಗತ್ತು: ಫೋರೆನ್ಸಿಕ್‌ ವಿಜ್ಞಾನ ಕಲಿತರೆ ಅತ್ಯುತ್ತಮ ಉದ್ಯೋಗಾವಕಾಶ
ಶಿಕ್ಷಣ ಜಗತ್ತು: ಫೋರೆನ್ಸಿಕ್‌ ವಿಜ್ಞಾನ ಕಲಿತರೆ ಅತ್ಯುತ್ತಮ ಉದ್ಯೋಗಾವಕಾಶ

ಟ್ರೆಂಡಿಂಗ್​ ಸುದ್ದಿ

ಈ ಭೂಮಿ ವಿಫುಲ ಅವಕಾಶಗಳ ಆಗರ. ನಮಗೆ ಯಾವ ಕ್ಷೇತ್ರ ಇಷ್ಟವೋ ಆ ಕ್ಷೇತ್ರದಲ್ಲಿ ಅವಕಾಶ ಪಡೆಯಲು ಪೂರಕವಾಗುವಂತೆ ಶಿಕ್ಷಣ ವ್ಯವಸ್ಥೆ ಇರುತ್ತದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಒಂದು ಸ್ಪಷ್ಟತೆ ದೊರಕಿದರೆ, ತಾವು ಹೋಗಬೇಕಿರುವ ಹಾದಿಯ ಕುರಿತು ತಿಳಿದರೆ ಖಂಡಿತವಾಗಿಯೂ ತಾವು ಬಯಸಿದ ಕ್ಷೇತ್ರಕ್ಕೆ ಹೋಗಬಹುದು. ಮೊದಲೆಲ್ಲ ವಿದ್ಯಾರ್ಥಿಗಳಿಗೆ ಏನು ಓದಬೇಕು, ಏನು ಓದಿದರೆ ಏನಾಗಬಹುದು, ಉದ್ಯೋಗಾವಕಾಶ ಹೇಗಿದೆ ಇತ್ಯಾದಿಗಳ ಅರಿವು ಇರಲಿಲ್ಲ. ಈಗಿನ ತಂತ್ರಜ್ಞಾನ ಯುಗದಲ್ಲಿ ಆನ್‌ಲೈನ್‌ನಲ್ಲಿ ಒಂದಿಷ್ಟು ರಿಸರ್ಚ್‌ ಮಾಡಿದರೆ ಈ ಜಗತ್ತಿನಲ್ಲಿರುವ ವಿಫುಲ ಉದ್ಯೋಗಾವಕಾಶಗಳ ಮಾಹಿತಿ ಪಡೆಯಬಹುದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಇನ್ಮುಂದೆ ಶಿಕ್ಷಣ ಜಗತ್ತು ಅಂಕಣದ ಮೂಲಕ ಒಂದಿಷ್ಟು ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಲಿದೆ. ಭವಿಷ್ಯದಲ್ಲಿ ಅತ್ಯುತ್ತಮ ಕರಿಯರ್‌ ಪಡೆಯಲು ಬಯಸುವವರಿಗೆ ಇದು ನೆರವಾಗಬಹುದು.

ಫೋರೆನ್ಸಿಕ್‌ ಸೈನ್ಸ್‌ ಅಥವಾ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕರಿಯರ್‌

ಶಿಕ್ಷಣ ಜಗತ್ತು ಅಂಕಣದ ಈ ಲೇಖನದಲ್ಲಿ ಅಪರಾಧ ಪತ್ತೆಗೆ ನೆರವಾಗುವ ಪ್ರಮುಖ ಕ್ಷೇತ್ರವಾದ ಫೋರೆನ್ಸಿಕ್‌ ಸೈನ್ಸ್‌ ಕ್ಷೇತ್ರದಲ್ಲಿ ಕರಿಯರ್‌ ರೂಪಿಸಲು ಬಯಸುವವರಿಗೆ ಒಂದಿಷ್ಟು ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಫೋರೆನ್ಸಿಕ್‌ ಸೈನ್ಸ್‌ ಅಥವಾ ವಿಧಿವಿಜ್ಞಾನ ವಿಭಾಗದಲ್ಲಿ ಪರಿಣತಿ ಪಡೆದ ವೃತ್ತಿಪರರಿಗೆ ಬೇಡಿಕೆ ಹೆಚ್ಚುತ್ತಿದೆ. ಅಪರಾಧದ ಸ್ವರೂಪದ ತನಿಖೆಗೆ ಪೂರಕವಾದ ವೈಜ್ಞಾನಿಕ ಆಧಾರವನ್ನು ಒದಗಿಸುವುದು ಫೋರೆನ್ಸಿಕ್‌ ಸೈನ್ಸ್‌ನ ವೈಶಿಷ್ಟ್ಯ. ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಶಿಕ್ಷಣ ಪಡೆದವರು ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬಹುದು. ಸೈಂಟಿಸ್ಟ್‌, ಡಿಫೆನ್ಸ್‌ ಸೈನ್ಸ್‌ ಎಕ್ಸ್‌ಪರ್ಟ್‌ ಆಗಿ ಕಾರ್ಯನಿರ್ವಹಿಸಬಹುದು. ಟೆಕ್ನಾಲಜಿ ಲ್ಯಾಬೋರೇಟರಿ ಟೆಕ್ನಿಷಿಯನ್‌, ರಿಸರ್ಚ್‌ ಟೆಕ್ನಿಷಿಯನ್‌, ಬಯೋಇಂಟರಾಕ್ಷನ್‌ ರಿಸರ್ಚ್‌ ಟೆಕ್ನಿಷಿಯನ್‌, ಅನಲೈಟಿಕಲ್‌ ಕೆಮಿಸ್ಟ್‌, ಟೆಕ್ನಾಲಜಿಸ್ಟ್‌, ಕೆಮಿಸ್ಟ್ರಿ ಟೀಟರ್‌, ಇನ್‌ಸ್ಟ್ರಕ್ಟರ್‌ ಇತ್ಯಾದಿ ಹಲವು ಬಗೆಯ ಉದ್ಯೋಗಗಳನ್ನು ಪಡೆಯಬಹುದಾಗಿದೆ.

ಏನಿದು ಫೋರೆನ್ಸಿಕ್‌ ಸೈನ್ಸ್‌? ವಿಧಿವಿಜ್ಞಾನ ಕ್ಷೇತ್ರದ ವ್ಯಾಖ್ಯಾನ

ಫೋರೆನ್ಸಿಕ್‌ ಎಂಬ ಪದವು ಲ್ಯಾಟಿನ್‌ ಪದ ಫೋರೆನ್ಸಿಸ್‌ನಿಂದ ಉದ್ಭವವಾಗಿದೆ. ಲ್ಯಾಟಿನ್‌ ಪದ ಫೋರೆನ್ಸಿಸ್‌ ಎಂದರೆ ಪಬ್ಲಿಕ್‌ ಅಥವಾ ಸಾರ್ವಜನಿಕ ಎಂದರ್ಥ. ಅಂದರೆ, ಫೋರಮ್‌, ಸಾರ್ವಜನಿಕ ಚರ್ಚೆ ಇತ್ಯಾದಿ ಅರ್ಥಗಳನ್ನು ಹೊಂದಿದೆ. ಆಧುನಿಕ ಜಗತ್ತಿನಲ್ಲಿ ಇದಕ್ಕೆ ಕಾನೂನು, ಕೋರ್ಟ್‌ಗೆ ಸಂಬಂಧಪಟ್ಟ ಅರ್ಥವಿದೆ. ಕಾನೂನಿಗೆ ಸಂಬಂಧಪಟ್ಟ ಯಾವುದೇ ವಿಜ್ಞಾನವನ್ನು ಫೋರೆನ್ಸಿಕ್‌ ಸೈನ್ಸ್‌ ಎಂದು ಕರೆಯಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ ವಿಧಿವಿಜ್ಞಾನ, ಅಪರಾಧ ಪತ್ತೆ ಶಾಸ್ತ್ರ, ಅಪರಾಧ ನ್ಯಾಯಶಾಸ್ತ್ರ ಇತ್ಯಾದಿ ಹಲವು ಅರ್ಥಗಳಿವೆ. ಕಾನೂನು ಪ್ರಕ್ರಿಯೆಯಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ನಿರಾಪರಾಧಿಗಳಿಗೆ ನ್ಯಾಯ ಒದಗಿಸಲು ವಿಧಿವಿಜ್ಞಾನ ಶಾಸ್ತ್ರವು ಸಾಕಷ್ಟು ನೆರವು ನೀಡುತ್ತದೆ. ಕೆಲವೊಂದು ಪತ್ತೆಯಾಗಲು ಕಷ್ಟವಾಗುವಂತಹ ಅಪರಾಧಗಳನ್ನು ಪತ್ತೆಹಚ್ಚಲು ಫೋರೆನ್ಸಿಕ್‌ ಪರಿಣತರು ನೆರವಾಗುತ್ತಾರೆ.

ಫೋರೆನ್ಸಿಕ್‌ ವಿಜ್ಞಾನ ಯಾರು ಕಲಿಯಬಹುದು?

ಫೋರೆನ್ಸಿಕ್‌ ವಿಜ್ಞಾನ ಕಲಿಯಲು ಪಿಯುಸಿಯಲ್ಲಿ ವಿಜ್ಞಾನ ಓದಿರಬೇಕು. ವಿಜ್ಞಾನದಲ್ಲಿ 12ನೇ ತರಗತಿ ಮಾಡಿ ಬಿಎಸ್ಸಿ ಪದವಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಈ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ವೈಜ್ಞಾನಿಕವಾಗಿ ಅಪರಾಧದ ಕುರಿತು ತನಿಖೆ ನಡೆಸುವುದನ್ನು ಇದರಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಮುಖ್ಯವಾಗಿ ಸರಕಾರಿ ಅದರಲ್ಲೂ ಪೊಲೀಸ್‌ ಇಲಾಖೆಗೆ ಸಂಬಂಧಪಟ್ಟ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಲು ಈ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಅಪರಾಧ ಪತ್ತೆಹಚ್ಚುವ ಈ ವಿಧಾನದ ಕುರಿತು ವಿಶೇಷವಾಗಿ ಆಸಕ್ತಿ ಉಳ್ಳವರು ಫೋರೆನ್ಸಿಕ್‌ ವಿಜ್ಞಾನ ಕಲಿತು ಈ ಕ್ಷೇತ್ರದಲ್ಲಿ ಕರಿಯರ್‌ ರೂಪಿಸಿಕೊಳ್ಳಬಹುದು.

ಫೋರೆನ್ಸಿಕ್‌ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೇಗಿದೆ?

ಫೋರೆನ್ಸಿಕ್‌ ಅಥವಾ ವಿಧಿವಿಜ್ಞಾನಕ್ಕೆ ಸಂಬಂಧಪಟ್ಟಂತೆ ಕೋರ್ಸ್‌ನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳು ಪೊಲೀಸ್‌ ಇಲಾಖೆ ಸೇರಿದಂತೆ ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ನಾನಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಸೈಂಟಿಸ್ಟ್‌, ಡಿಫೆನ್ಸ್‌ ಸೈನ್ಸ್‌, ಟೆಕ್ನಾಲಜಿ ಲ್ಯಾಬೊರೇಟರಿ, ರಿಸರ್ಚ್‌ ಟೆಕ್ನಿಷಿಯನ್‌, ಬಯೋಇಂಟರಾಕ್ಷನ್‌ ರಿಸರ್ಚ್‌ ಟೆಕ್ನಿಷಿಯನ್‌, ಅನಲೈಟಿಕಲ್‌ ಕೆಮಿಸ್ಟ್‌, ಟೆಕ್ನಾಲಜಿಸ್ಟ್‌, ಕೆಮಿಸ್ಟ್ರಿ ಟೀಚರ್‌ ಸೇರಿ ಹಲವು ಬಗೆಯ ಉದ್ಯೋಗಗಳನ್ನು ಪಡೆಯಲು ಈ ಕೋರ್ಸ್‌ ನೆರವಾಗುತ್ತದೆ.

ಫೋರೆನ್ಸಿಕ್‌ ಸೈನ್ಸ್‌ ಓದಲು ನೀಟ್‌ ಅರ್ಹತೆ ಬೇಕೆ?

ಖಂಡಿತವಾಗಿಯೂ ಬೇಡ. ರಾಷ್ಟ್ರೀಯ ಅರ್ಹತಾ ಪರೀಕ್ಷೆ ಬರೆಯದೆ ಈ ಕೋರ್ಸ್‌ ಕಲಿಯಬಹುದು. ಫೆಲೋಶಿಪ್‌ ಪಡೆಯುವುದಾದರೆ ಪ್ರವೇಶ ಪರೀಕ್ಷೆ ಇರುತ್ತದೆ. ಎಐಎಫ್‌ಎಸ್‌ಇಟಿ, ಎನ್‌ಇಎಸ್‌ಟಿ ಇತ್ಯಾದಿ ಅರ್ಹತಾ ಪರೀಕ್ಷೆಗಳು ಇರುತ್ತವೆ. ಬಯೊಟೆಕ್ನಾಲಜಿ, ಮೈಕ್ರೊಬಯೋಲಜಿ, ಫಾರೆನ್ಸಿಕ್‌ ಸೈನ್ಸ್‌ ಇತ್ಯಾದಿ ವಿವಿಧ ವಿಜ್ಞಾನ ವಿಷಯಗಳಲ್ಲಿ ಫೆಲೋಶಿಪ್‌ ಕಾರ್ಯಕ್ರಮಗಳಿಗೆ ಆಳ್‌ ಇಂಡಿಯಾ ಫೆಲೋಶಿಪ್‌ ಎಂಟ್ರೆನ್ಸ್‌ ಟೆಸ್ಟ್‌ ಇರುತ್ತದೆ. ಬಯೋಲಜಿ, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್‌ ಇತ್ಯಾದಿ 5 ವರ್ಷದ ಇಂಟಿಗ್ರೇಟೆಡ್‌ ಎಂಎಸ್ಸಿ ಪ್ರೋಗ್ರಾಂಗಳನ್ನು ಕಲಿಯಲು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಷನ್‌ ಆಂಡ್‌ ರಿಸರ್ಚ್‌ (ಎನ್‌ಇಎಸ್‌ಟಿ/ನೆಸ್ಟ್‌) ಪ್ರವೇಶ ಪರೀಕ್ಷೆ ಇರುತ್ತದೆ.

ವಿವಿಧ ವಿಶ್ವವಿದ್ಯಾಲಯಗಳು ಅಪರಾಧ ಪತ್ತೆಗೆ ಸಂಬಂಧಪಟ್ಟಂತೆ ಹಲವು ಕೋರ್ಸ್‌ಗಳನ್ನು ಕಲಿಸುತ್ತವೆ. ಬಿಎಸ್ಸಿ ಇನ್‌ ಫೋರೆನ್ಸಿಕ್‌ ಸೈನ್ಸ್‌, ಬಿಎಸ್ಸಿ ಇನ್‌ ಕ್ರಿಮಿನಾಲಜಿ. ಮಾಸ್ಟರ್‌ ಆಫ್‌ ಫಿಲಾಸಫಿ ಇನ್‌ ಫೋರೆನ್ಸಿಕ್‌ ಸೈನ್ಸ್‌, ಡಿಪ್ಲೊಮಾ ಇನ್‌ ಫೋರೆನ್ಸಿಕ್‌ ಸೈನ್ಸ್‌ ಇತ್ಯಾದಿ ಹಲವು ಬಗೆಯ ಕೋರ್ಸ್‌ಗಳು ಇವೆ. ನಿಮ್ಮ ಅನುಕೂಲಕ್ಕೆ ಮತ್ತು ಆಸಕ್ತಿಗೆ ತಕ್ಕಂತೆ ಸೂಕ್ತವಾದ ಫೋರೆನ್ಸಿಕ್‌ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಶಿಕ್ಷಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in , ht.kannada@htdigital.in

ಸಂಬಂಧಿತ ಲೇಖನ