ಸಿಬಿಎಸ್‌ಇ Vs ಸ್ಟೇಟ್ ಸಿಲಬಸ್: ಎರಡು ಪಠ್ಯಕ್ರಮಗಳ ವ್ಯತ್ಯಾಸವೇನು; ಮಗುವನ್ನು ಶಾಲೆಗೆ ಸೇರಿಸೋ ಮುನ್ನ ಈ ಅಂಶಗಳು ತಿಳಿದಿರಲಿ-education news cbse vs state syllabus pros and cons central board of secondary education karnataka state syllabus jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಬಿಎಸ್‌ಇ Vs ಸ್ಟೇಟ್ ಸಿಲಬಸ್: ಎರಡು ಪಠ್ಯಕ್ರಮಗಳ ವ್ಯತ್ಯಾಸವೇನು; ಮಗುವನ್ನು ಶಾಲೆಗೆ ಸೇರಿಸೋ ಮುನ್ನ ಈ ಅಂಶಗಳು ತಿಳಿದಿರಲಿ

ಸಿಬಿಎಸ್‌ಇ Vs ಸ್ಟೇಟ್ ಸಿಲಬಸ್: ಎರಡು ಪಠ್ಯಕ್ರಮಗಳ ವ್ಯತ್ಯಾಸವೇನು; ಮಗುವನ್ನು ಶಾಲೆಗೆ ಸೇರಿಸೋ ಮುನ್ನ ಈ ಅಂಶಗಳು ತಿಳಿದಿರಲಿ

CBSE Vs State Syllabus: ಸಿಬಿಎಸ್‌ಇ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮದ ನಡುವಿನ ವ್ಯತ್ಯಾಸ ಹಲವರಿಗೆ ತಿಳಿದಿರುವುದಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಈ ಎರಡು ಭಿನ್ನ ಸಿಲೆಬಸ್‌ ಇರುವ ಶಿಕ್ಷಣ ಸಂಸ್ಥೆಗಳ ಕುರಿತ ಮಾಹಿತಿ ಇರುವುದು ಮುಖ್ಯ. ಅದರಂತೆ ಮಕ್ಕಳನ್ನು ಬೇಕಾದ ಶಾಲೆಗೆ ಸೇರಿಸಬಹುದು.

ಸಿಬಿಎಸ್‌ಇ Vs ಸ್ಟೇಟ್ ಸಿಲಬಸ್ ಪಠ್ಯಕ್ರಮಗಳ ವ್ಯತ್ಯಾಸವೇನು; ಈ ಅಂಶಗಳು ನಿಮಗೆ ತಿಳಿದಿರಲಿ
ಸಿಬಿಎಸ್‌ಇ Vs ಸ್ಟೇಟ್ ಸಿಲಬಸ್ ಪಠ್ಯಕ್ರಮಗಳ ವ್ಯತ್ಯಾಸವೇನು; ಈ ಅಂಶಗಳು ನಿಮಗೆ ತಿಳಿದಿರಲಿ

ಪ್ರತಿ ಪೋಷಕರಿಗೂ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಕೊಡಿಸುವ ಆಸೆ-ಕನಸುಗಳಿರುತ್ತವೆ. ಶಿಕ್ಷಣ ವ್ಯವಸ್ಥೆ ಕೂಡಾ ವರ್ಷದಿಂದ ವರ್ಷಕ್ಕೆ ಅಪ್ಡೇಟ್‌ ಆಗುತ್ತಿರುತ್ತದೆ. ಅದಕ್ಕೆ ತಕ್ಕನಾಗಿ ಮಕ್ಕಳನ್ನು ಒಂದೊಳ್ಳೆ ಶಿಕ್ಷಣ ಸಂಸ್ಥೆಗೆ ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪೋಷಕರಿಗೆ ನಿಜವಾದ ಸವಾಲು. ಶಾಲೆಗೆ ಸೇರಿಸುವ ವಿಚಾರ ಬಂದಾಗ ಒಂದಷ್ಟು ಅಂಶಗಳು ಗಣನೆಗೆ ಬರುತ್ತವೆ. ಮಕ್ಕಳ ಸಾಮರ್ಥ್ಯ, ಇಚ್ಛೆ, ಪೋಷಕರ ಆರ್ಥಿಕ ಸಾಮರ್ಥ್ಯ ಹೀಗೆ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಬಹುತೇಕ ಎಲ್ಲಾ ಹೆತ್ತವರ ಮೊದಲ ಕಾಳಜಿಯೇ, ಯಾವ ಶಾಲೆ ಅಥವಾ ಶಿಕ್ಷಣ ಸಂಸ್ಥೆಗೆ ತಮ್ಮ ಮಗುವನ್ನು ಸೇರುಸುವುದು ಎಂಬುದಾಗಿದೆ. ಅಲ್ಲದೆ, ಮಗುವಿನ ಭವಿಷ್ಯದ ದೃಷ್ಟಿಯಿಂದ ಯಾವ ಸಿಲೆಬಸ್‌ ಅಥವಾ ಪಠ್ಯಕ್ರಮವನ್ನು ಆಯ್ಕೆ ಮಾಡುವುದು ಉತ್ತಮ ಎಂಬ ಗೊಂದಲವೂ ಇರುತ್ತದೆ. ಹೆಚ್ಚಿನ ಪೋಷಕರ ಗೊಂದಲ ಸಿಬಿಎಸ್‌ಇ vs ಸ್ಟೇಟ್ ಸಿಲಬಸ್ (CBSE vs State Syllabus). ಇದರಲ್ಲಿ ಯಾವುದನ್ನು ಆಯ್ಕೆ ಮಾಡೋದು ಎಂಬುದಾಗಿರುತ್ತದೆ. ಈ ಸುದ್ದಿಯಲ್ಲಿ ಈ ಎರಡು ಪಠ್ಯಕ್ರಮಗಳ ಕುರಿತು ತಿಳಿಯೋ.

ಹಲವು ಪೋಷಕರಿಗೆ ಸಿಬಿಎಸ್‌ಇ ಪಠ್ಯಕ್ರಮ ಮತ್ತು ರಾಜ್ಯ ಪಠ್ಯಕ್ರಮದ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಈ ಎರಡು ಭಿನ್ನ ಸಿಲೆಬಸ್‌ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕಾ ವಿಧಾನ ಹೇಗಿರುತ್ತದೆ ಎಂಬ ಬಗ್ಗೆ ಮಾಹಿತಿ ಕೊರತೆ ಇರುತ್ತದೆ. ಈ ಕುರಿತ ಸರಳ ವಿವರಣೆ ಇಲ್ಲಿದೆ.

ಸಿಬಿಎಸ್‌ಇ ಮತ್ತು ಸ್ಟೇಟ್‌ ಸಿಲೆಬಸ್‌ ಎಂದರೇನು?

ಸಿಬಿಎಸ್‌ಇ (CBSE) ಅಂದರೆ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ (Central Board of Secondary Education). ಸಿಬಿಎಸ್‌ಇಯಲ್ಲಿ ಭಾರತದಾದ್ಯಂತ ಒಂದೇ ಪಠ್ಯಕ್ರಮವಿರುತ್ತದೆ. ಹೆಸರಲ್ಲಿ ಇರುವಂತೆ ಇದು ಕೇಂದ್ರ ಪಠ್ಯಕ್ರಮ. ಇದೇ ವೇಳೆ ಸ್ಟೇಟ್‌ ಸಿಲೆಬಸ್‌ ಎಂದರೆ ರಾಜ್ಯ ಪಠ್ಯಕ್ರಮ. ಆಯಾ ರಾಜ್ಯಗಳು ಈ ಪಠ್ಯಕ್ರಮವನ್ನು ರೂಪಿಸುತ್ತವೆ.

ಸಿಬಿಎಸ್‌ಇ

  • ಸಿಬಿಎಸ್‌ಇ ಸಿಲೆಬಸ್‌ ಪ್ರಕಾರ, ಭಾರತ ದೇಶದಾದ್ಯಂತ ಒಂದೇ ಪಠ್ಯಕ್ರಮವಿರುತ್ತದೆ. ಯಾವುದೇ ರಾಜ್ಯಕ್ಕೆ ಹೋಗಿ ಸಿಬಿಎಸ್‌ಇ ಸಿಲೆಬಸ್‌ ಇರುವ ಶಾಲೆಗೆ ಸೇರಿಕೊಂಡರೂ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕೆಲಸದ ನಿಮಿತ್ತ ವಿವಿಧ ರಾಜ್ಯಗಳಿಗೆ ಪೋಷಕರ ವರ್ಗಾವಣೆಯಾದರೆ, ಅವರ ಮಕ್ಕಳಿಗೆ ತೊಂದರೆಯಾಗುವುದಿಲ್ಲ. ಮಕ್ಕಳ ಓದಿಗೆ ಅಡ್ಡಿಯಾಗುವುದಿಲ್ಲ.‌
  • ಸಿಬಿಎಸ್‌ಸಿ ಸಿಲೆಬಸ್‌ ಇರುವ ಶಾಲೆಗಳಲ್ಲಿ ಮುಖ್ಯವಾಗಿ ಇಂಗ್ಲಿಷ್‌ ಬೋಧನಾ ಮಾಧ್ಯಮವಾಗಿದೆ. ಕೆಲವೊಂದು ಕಡೆ ಹಿಂದಿ ಮಾಧ್ಯಮವಿದೆ. ಆದರೆ, ರಾಜ್ಯಗಳಿಗೆ ಅನುಸಾರವಾಗಿ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ಭಾಷಾ ವಿಷಯಗಳಾಗಿ ಆಯ್ಕೆ ಮಾಡಿಕೊಳ್ಳಬಹುದು.
  • ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಸಿಬಿಎಸ್‌ಇಗೆ ಪಠ್ಯಕ್ರಮವನ್ನು ನಿಗದಿಪಡಿಸುತ್ತದೆ.
  • ಜೆಇಇ, ನೀಟ್‌ನಂತಹ ಉನ್ನತ ಪ್ರವೇಶ ಪರೀಕ್ಷೆಗಳು ಸಿಬಿಎಸ್‌ಸಿ ಪಠ್ಯಕ್ರಮದ ಆಧಾರದ ಮೇಲೆ ಪ್ರಶ್ನೆಗಳನ್ನು ಸಿದ್ಧಪಡಿಸುತ್ತವೆ. ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಅಂಕಗಳನ್ನು ಗಳಿಸುವುದು ತುಲನಾತ್ಮಕವಾಗಿ ಕಷ್ಠ. ಪಠ್ಯಕ್ರಮ‌ ತುಸು ಕ್ಲಿಷ್ಟಕರ ಏಂದೇ ಹೇಳಬಹುದು.
  • ಸಿಬಿಎಸ್‌ಇ ಪಠ್ಯಕ್ರಮಯಲ್ಲಿ ಪಾಠದ ಹೊರತಾಗಿ ಪ್ರಾಜೆಕ್ಟ್‌ ವರ್ಕ್‌, ಅಸೈನ್‌ಮೆಂಟ್‌ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಒತ್ತು ನೀಡಲಾಗುತ್ತದೆ. ಕಲಿಕಾ ವಿಧಾನವು ವಿದ್ಯಾರ್ಥಿಗಳು ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ನೆರವಾಗುತ್ತವೆ.
  • ಸಿಬಿಎಸ್‌ಇ ಪಠ್ಯಪುಸ್ತಕಗಳ ಜೊತೆಗೆ ಪಠ್ಯಕ್ಕೆ ಸಂಬಂಧಿತ ಇತರ ಬೇರೆ ಪುಸ್ತಕಗಳನ್ನು ಓದಲು ಗೈಡ್‌ ಮಾಡಲಾಗುತ್ತದೆ. ಯಾಕೆಂದರೆ ಪ್ರಶ್ನೆಗಳನ್ನು ಯಾವಾಗಲೂ ಪಠ್ಯಪುಸ್ತಕವನ್ನೇ ಆಧರಿಸಿ ಕೇಳಲಾಗುವುದಿಲ್ಲ. ಮಕ್ಕಳ ಬುದ್ಧಿಮಟ್ಟ ಹಾಗೂ ತಾರ್ಕಿಕತೆಯನ್ನು ಪರೀಕ್ಷಿಸುವ ಉದ್ದೇಶ ಇರುತ್ತದೆ.

ರಾಜ್ಯ ಪಠ್ಯಕ್ರಮ

  • ಸಿಬಿಎಸ್‌ ಪಠ್ಯಕ್ರಮಕ್ಕೆ ಹೋಲಿಸಿದರೆ, ರಾಜ್ಯ ಪಠ್ಯಕ್ರಮ ಸುಲಭ. ಈ ಕುರಿತು ಹೆಚ್ಚಿನವರಿಗೆ ತಿಳಿದಿರುತ್ತದೆ. ರಾಜ್ಯದ ಬಹುಪಾಲು ಪೋಷಕರು ರಾಜ್ಯ ಸಿಲೆಬಸ್‌ ಆಯ್ಕೆ ಮಾಡಿಕೊಳ್ಳುವುದರಿಂದ, ವಿದ್ಯಾರ್ಥಿಗಳಿಗೆ ಸ್ಟೇಟ್‌ ಬೋರ್ಡ್‌‌ ಉತ್ತಮ ಆಯ್ಕೆಯಾಗಿದೆ.
  • ರಾಜ್ಯ ಪಠ್ಯಕ್ರಮವು ರಾಜ್ಯದಿಂದ ರಾಜ್ಯಗಳಿಗೆ ಭಿನ್ನವಾಗಿರುತ್ತದೆ. ಈ ಪಠ್ಯಕ್ರಮದಲ್ಲಿ ಓದಿದ ಮಕ್ಕಳು ಬೇರೆ ರಾಜ್ಯಗಳಿಗೆ ಹೋಗಿ ಓದಲು ಕಷ್ಟ. ಸ್ಟೇಟ್‌ ಬೋರ್ಡ್‌ನಲ್ಲಿ ಆಯಾ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಪಠ್ಯಕ್ರಮ ರೂಪಿಸುತ್ತದೆ. ಹೀಗಾಗಿ ಮಕ್ಕಳು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಬೇರೆ ರಾಜ್ಯಕ್ಕೆ ಹೋಗುವುದು ಕಷ್ಟ.
  • ಸ್ಟೇಟ್‌ ಬೋರ್ಡ್‌ ಸಿಲೆಬಸ್‌ ಓದುವ ಮಕ್ಕಳಿಗೆ ಅಂಕ ಗಳಿಸುವುದು ತುಲನಾತ್ಮಕವಾಗಿ ಸುಲಭ. ಬಹುತೇಕ ಪಠ್ಯಕ್ರಮವನ್ನು ಆಧರಿಸಿ ಪ್ರಶ್ನೆಪತ್ರಿಕೆಯನ್ನು ತಯಾರಿಸಲಾಗುತ್ತದೆ. ಪಠ್ಯದಲ್ಲಿರುವ ಪಾಠಗಳ ಅಧ್ಯಯನದ ನಂತರ ವಿದ್ಯಾರ್ಥಿ ಉತ್ತಮ ಅಂಕಗಳನ್ನು ಗಳಿಸಬಹುದು.
  • ರಾಜ್ಯಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಶಾಲೆಗಳಲ್ಲಿ ಅಧ್ಯಯನ ಶುಲ್ಕವು ಕಡಿಮೆ ಇರುತ್ತದೆ. ಮಧ್ಯಮ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬಗಳಿಗೆ ಉನ್ನತ ಶಿಕ್ಷಣ ಪಡೆಯಲು ಉತ್ತಮ ಆಯ್ಕೆಯಾಗಿದೆ. ಹಲವು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ಅಥವಾ ಉಚಿತವಾಗಿ ಶಿಕ್ಷಣ ನೀಡುತ್ತವೆ.
  • ಕೆಲವೊಂದು ಪ್ರವೇಶ ಪರೀಕ್ಷೆಗಳನ್ನು ಎದುರಿಸುವಾಗ ಈ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಸಿಬಿಎಸ್‌ಇ ಸಿಲೆಬಸ್‌ಗೆ ಹೋಲಿಸಿದರೆ, ರಾಜ್ಯದ ಪಠ್ಯಕ್ರಮವನ್ನು ಓದುವ ಮಕ್ಕಳು ವಿವಿಧ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಪ್ರತ್ಯೇಕ ತರಬೇತಿ ಅಗತ್ಯವಿರುತ್ತದೆ.
  • ರಾಜ್ಯ ಪಠ್ಯಕ್ರಮದಲ್ಲಿ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಐಚ್ಛಿಕ ಭಾಷೆ ಇಂಗ್ಲಿಷ್ ಮತ್ತು ಹಿಂದಿ ಇದ್ದರೂ, ಬೋಧನಾ ಮಾಧ್ಯಮ ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ಇರುತ್ತದೆ.
  • ಸ್ಟೇಟ್‌ ಸಿಲೆಬಸ್‌ ಸಿಬಿಎಸ್‌ಇಯಷ್ಟು ವಿಸ್ತಾರವಾಗಿರುವುದಿಲ್ಲ. ಮಕ್ಕಳಿಗೆ ಒತ್ತಡ ಕೂಡಾ ಕಡಿಮೆ. ಇದರಲ್ಲಿ ಶಿಕ್ಷಕರಿಗೆ ಕಲಿಸಲು ಹಾಗೂ ವಿದ್ಯಾರ್ಥಿಗಳಿಗೆ ಕಲಿಯಲು ಸಮಯ ಇರುತ್ತದೆ.

ಕರ್ನಾಟಕ ರಾಜ್ಯ ಪಠ್ಯಕ್ರಮದ ಸಾಧಕ-ಬಾಧಕಗಳು

ಸಾಧಕ

  • ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಭಾಷೆಗೆ ಒತ್ತು ನೀಡುವ ಮೂಲಕ ಪ್ರಾದೇಶಿಕ ಗಮನ ಹರಿಸಲಾಗುತ್ತದೆ.
  • ರಾಜ್ಯದ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸಲಾಗುತ್ತದೆ.
  • ರಾಜ್ಯ ಮಟ್ಟದ ವಿಶ್ವವಿದ್ಯಾಲಯ, ಶಿಕ್ಷಣಸಂಸ್ಥೆಗಳಿಗೆ ಸುಗಮ ಪ್ರವೇಶ ಸಾಧ್ಯ

ಬಾಧಕ

  • ಸೀಮಿತ ಸಂಪನ್ಮೂಲಗಳು
  • ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳವ ಅವಕಾಶ ಹಾಗೂ ಸಾಧ್ಯತೆ ಕಡಿಮೆ.
  • ಶಾಲೆಗಳಿಂದ ಶಾಲೆಗೆ ಶಿಕ್ಷಣ ಗುಣಮಟ್ಟ ಬದಲಾವಣೆ ಆಗಬಹುದು

ಇದನ್ನೂ ಓದಿ | ಕನ್ನಡ ಅಂಕಲಿಪಿ: ಬಣ್ಣ ಬಣ್ಣದ ಚಿತ್ತಾರದಿಂದಲೇ ಮಕ್ಕಳಿಗೆ ಕನ್ನಡ ಕಲಿಸಿ; 1ರಿಂದ 5 ವರ್ಷದ ಪುಟಾಣಿಗಳಿಗೆ ಇದು ಹೇಳಿ ಮಾಡಿಸಿದ ಪುಸ್ತಕ

CBSE ಸಾಧಕ-ಬಾಧಕಗಳು

ಸಾಧಕ

  • ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ. ದೇಶದ ಯಾವುದೇ ಮೂಲೆಗೆ ಹೋದರೂ ಸಿಬಿಎಸ್‌ಇ ಸಿಲೆಬಸ್‌ ಓದಬಹುದು.
  • ಪ್ರಮಾಣೀಕೃತ ಪಠ್ಯಕ್ರಮದೊಂದಿಗೆ ಶಾಲೆಗಳಲ್ಲಿ ಸ್ಥಿರ ಗುಣಮಟ್ಟದ ಶಿಕ್ಷಣ..
  • ಉತ್ತಮ ಸಂಪನ್ಮೂಲಗಳ ಲಭ್ಯತೆ. ಅಧ್ಯಯನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳು ಇರುತ್ತವೆ.
  • ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಸಿದ್ಧತೆ ಸುಲಭ.

ಬಾಧಕ

  • ಪ್ರಾದೇಶಿಕ ಪ್ರಾಮುಖ್ಯತೆ ಕಡಿಮೆ
  • ಹೆಚ್ಚಿನ ಸ್ಪರ್ಧೆ. ಅನಾರೋಗ್ಯಕರ ಪೈಪೋಟಿಯೂ ನಡೆಯಬಹುದು.
  • ಹೆಚ್ಚು ಶುಲ್ಕ, ಎಲ್ಲ ವರ್ಗದ ಜನರ ಕೈಗೆಟುಕದ ಶಿಕ್ಷಣ.

 

ಈ ಸಂದರ್ಭಗಳಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮ ಆಯ್ಕೆ ಮಾಡಬಹುದು

  • ನಿಮ್ಮ ಮಗು ರಾಜ್ಯ ಮಟ್ಟದ ವಿಶ್ವವಿದ್ಯಾನಿಲಯದಲ್ಲಿ ಓದುವ ಅಥವಾ ವೃತ್ತಿಜೀವನ ರೂಪಿಸುವ ಗುರಿ ಹೊಂದಿದ್ದಾಗ.
  • ಪ್ರಾದೇಶಿಕ ಅಥವಾ ರಾಜ್ಯ ಭಾಷೆ (ಕನ್ನಡ) ಮತ್ತು ಸಂಸ್ಕೃತಿಗೆ ಆದ್ಯತೆ ನೀಡುವುದಿದ್ದರೆ.
  • ಶಾಂತ ಹಾಗೂ ಒತ್ತಡವಿಲ್ಲ ಶೈಕ್ಷಣಿಕ ವಾತಾವರಣ ಬಯಸಿದರೆ.

ಈ ಕಾರಣಗಳಿಗೆ CBSE ಪಠ್ಯಕ್ರಮ ಆಯ್ಕೆ ಮಾಡಬಹುದು

  • ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಬಯಕೆ ಅಥವಾ ಅನಿವಾರ್ಯತೆ ಇದ್ದರೆ.
  • ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಗುರು ಇಟ್ಟುಕೊಂಡಿದ್ದರೆ.
  • ಪ್ರಮಾಣೀಕೃತ ಹಾಗೂ ದೇಶದಾದ್ಯಂತ ಗುರುತಿಸಲ್ಪಟ್ಟ ಪಠ್ಯಕ್ರಮವೇ ಬೇಕು ಎಂದಿದ್ದರೆ.
  • ಅಧ್ಯಯನಕ್ಕೆ ಬೇಕಾದ ಸಮಗ್ರ ಸಂಪನ್ಮೂಲಗಳು ಲಭ್ಯವಾಗುವ ವಾತಾವರಣ ಬೇಕೆಂದಿದ್ದರೆ.

ಇನ್ನಷ್ಟು ಶಿಕ್ಷಣ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಒಟ್ಟಿನಲ್ಲಿ ಪಠ್ಯಕ್ರಮವನ್ನು ಆರಿಸುವ ಮುನ್ನ ನಿಮ್ಮ ಮಗುವಿನ ಸಾಮರ್ಥ್ಯ, ಆಸಕ್ತಿ ಹಾಗೂ ಅವರ ಗುರಿಗಳತ್ತ ಗಮನವಿರಲಿ. ಪೋಷಕರ ಆರ್ಥಿಕ ಸಾಮರ್ಥ್ಯವೂ ಮುಖ್ಯ. ಮಕ್ಕಳ ಇಷ್ಟಾನುಸಾರ ಅವರಿಗೆ ಎರಡೂ ಪಠ್ಯಕ್ರಮಗಳ ಅರಿವು ಮೂಡಿಸಿ ಬೇಕಾದ ಶಾಲೆಗಳಿಗೆ ಸೇರಿಸುವುದು ಜಾಣತನ.

mysore-dasara_Entry_Point