ಏನಿದು ಸಿಇಟಿ ಪ್ರಾಯೋಗಿಕ ಪರೀಕ್ಷೆ? ಉನ್ನತ ಶಿಕ್ಷಣಕ್ಕೆ ಕೃಷಿ ಕೋಟಾದಡಿ ವಿಶೇಷ ಅವಕಾಶ ಕಲ್ಪಿಸುವ ಪರೀಕ್ಷೆ ಕುರಿತ ವಿವರ
ಸಿಇಟಿ ಪ್ರಾಯೋಗಿಕ ಪರೀಕ್ಷೆಯ ಮಹತ್ವವೇನು? ರಾಜ್ಯದ ಬಹಳಷ್ಟು ವಿದ್ಯಾರ್ಥಿಗಳಿಗೆ ಕೃಷಿ ಕೋಟಾದಡಿಯಲ್ಲಿ ಈ ಒಂದು ಪರೀಕ್ಷೆ ಇದೇ ಎನ್ನುವುದೇ ತಿಳಿದಿಲ್ಲ, ಇನ್ನು ತಿಳಿದ ಕೆಲವರಿಗೆ ಯಾವ ರೀತಿ ಈ ಪರೀಕ್ಷೆಗೆ ಸಜ್ಜಾಗಬೇಕು ಎಂಬ ಮಾಹಿತಿಯ ಕೊರತೆಯಿರುವುದಂತೂ ಖಚಿತ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಪ್ರಿಲ್ 30 ರಂದು ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ 17 ಕೇಂದ್ರಗಳಲ್ಲಿ ಏಕಕಾಲಕ್ಕೆ ಬೆಳಗ್ಗೆ 9 ಗಂಟೆಗೆ ಸಿಇಟಿ ಪ್ರಾಯೋಗಿಕ ಪರೀಕ್ಷೆ ಪ್ರಾರಂಭವಾಗಲಿದೆ. ಸಿಇಟಿ ಪರೀಕ್ಷೆಯನ್ನು ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಬರೆದಾಗಿದೆ. ಇನ್ನು ಸಿಇಟಿ ಪ್ರಾಯೋಗಿಕ ಪರೀಕ್ಷೆಯ ಮಹತ್ವವೇನು? ರಾಜ್ಯದ ಬಹಳಷ್ಟು ವಿದ್ಯಾರ್ಥಿಗಳಿಗೆ ಕೃಷಿ ಕೋಟಾದಡಿಯಲ್ಲಿ ಈ ಒಂದು ಪರೀಕ್ಷೆ ಇದೇ ಎನ್ನುವುದೇ ತಿಳಿದಿಲ್ಲ, ಇನ್ನು ತಿಳಿದ ಕೆಲವರಿಗೆ ಯಾವ ರೀತಿ ಈ ಪರೀಕ್ಷೆಗೆ ಸಜ್ಜಾಗಬೇಕು ಎಂಬ ಮಾಹಿತಿಯ ಕೊರತೆಯಿರುವುದಂತೂ ಖಚಿತ.
ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಸ್ನಾತಕ ಪದವಿಗಳಿಗೆ ಕೃಷಿಕರ ಕೋಟಾದಡಿಯಲ್ಲಿ(ಶೇ 50) ಅರ್ಹ ವಿದ್ಯಾರ್ಥಿಗಳ ಪ್ರವೇಶಾತಿಗೆ ಪೂರಕವಾಗಿ ಕರ್ನಾಟಕ ಪರೀಕ್ಷಾ ಮಂಡಳಿ ಸಿಇಟಿ ಮೂಲಕ ನಡೆಸುವ ಪ್ರಾಯೋಗಿಕ ಪರೀಕ್ಷೆ ಇದಾಗಿದೆ. ಈ ಪರೀಕ್ಷೆಯು 50 ಪ್ರಶ್ನೆಗಳ 200 ಅಂಕಗಳಿಗೆ ವಿನ್ಯಾಸಗೊಂಡಿದ್ದು, ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. 20 ಪ್ರಶ್ನೆಗಳು ಕೃಷಿ ವಿಭಾಗದಿಂದ, 15 ಪ್ರಶ್ನೆಗಳು ಪಶುವೈದ್ಯ ಮತ್ತು ಪಶುಸಂಗೋಪನೆ, 10 ಪ್ರಶ್ನೆಗಳು ತೋಟಗಾರಿಕೆ ವಿಭಾಗದಿಂದ ಹಾಗೂ 5 ಪ್ರಶ್ನೆಗಳು ಅರಣ್ಯ ವಿಜ್ಞಾನ ವಿಭಾಗದಿಂದ ಬರುತ್ತವೆ. ಚೆನ್ನಾಗಿ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೃಷಿ ವಿಜ್ಞಾನ ಪದವಿಗಳಿಗೆ ಸಿಇಟಿ ಅಂಕಪಟ್ಟಿಯಲ್ಲಿ ಪ್ರತ್ಯೇಕ ರ‍್ಯಾಂಕ್ ನೀಡಲಾಗುತ್ತದೆ. ಈ ರ‍್ಯಾಂಕ್ ಸಹಾಯದಿಂದ ವಿದ್ಯಾರ್ಥಿಗಳು ರಾಜ್ಯದ ಸರ್ಕಾರಿ ಕೃಷಿವಿಶ್ವವಿದ್ಯಾನಿಲಯಗಳಲ್ಲಿನ ಅಗ್ರಿಕಲ್ಚರ್(ಕೃಷಿ), ಹಾರ್ಟಿಕಲ್ಚರ್(ತೋಟಗಾರಿಕೆ), ಸಿರಿಕಲ್ಚರ್(ರೇಷ್ಮೆ), ವೆಟರ್ನರಿ ಸೈನ್ಸ್(ಪಶುವೈದ್ಯಕೀಯ), ಫುಡ್ ಟೆಕ್ನಾಲಜಿ(ಆಹಾರ ತಂತ್ರಜ್ಞಾನ), ಫಾರೆಸ್ಟ್ರಿ (ಅರಣ್ಯ ವಿಜ್ಞಾನ), ಫಿಷರಿ(ಮೀನುಗಾರಿಕೆ), ಹೋಮ್ ಸೈನ್ಸ್(ಗೃಹ ವಿಜ್ಞಾನ), ಅಗ್ರಿಕಲ್ಚರ್ ಎಂಜಿನಿಯರಿಂಗ್, ಡೈರಿ ಟೆಕ್ನಾಲಜಿ (ಪಶುಸಂಗೋಪನೆ ತಂತ್ರಜ್ಞಾನ), ಬಯೋ ಟೆಕ್ನಾಲಜಿ ಹಾಗೂ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ವಿಭಾಗಗಳಲ್ಲಿ ಪದವಿ ಪಡೆಯಲು ಅರ್ಹರಾಗುತ್ತಾರೆ.
ಯಾವೆಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಇದೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಮಂಡ್ಯ, ಚಿಂತಾಮಣಿ, ಹಾಸನ ಹಾಗೂ ಚಾಮರಾಜನಗರ), ಧಾರವಾಡ ಕೃಷಿ ವಿಶ್ವವಿದ್ಯಾಲಯ (ವಿಜಯಪುರ, ಹನುಮನಮಟ್ಟಿ, ಸಿರಸಿ), ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ (ಮುನಿರಾಬಾದ್, ಅರಭಾವಿ, ಬೀದರ್, ಸಿರಸಿ, ಬೆಂಗಳೂರು, ಕೋಲಾರ, ಮೈಸೂರು ಹಾಗೂ ಹಾವೇರಿ), ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ (ಮೂಡಿಗೆರೆ, ಪೊನ್ನಂಪೇಟೆ ಹಾಗೂ ಹಿರಿಯೂರು) ಬೀದರ್‌ನ ಕರ್ನಾಟಕ ಪಶುವೈದ್ಯ, ಪಶುಸಂಗೋಪನಾ ಹಾಗೂ ಮೀನುಗಾರಿಕಾ ವಿಶ್ವವಿದ್ಯಾಲಯ (ಬೆಂಗಳೂರು, ಶಿವಮೊಗ್ಗ, ಮಂಗಳೂರು, ಗುಲ್ಬರ್ಗ, ಹಾಸನ ಹಾಗೂ ಗದಗ), ರಾಯಚೂರಿನ ಕೃಷಿ ವಿಶ್ವವಿದ್ಯಾಲಯಗಳಲ್ಲಿ (ಭೀಮರಾಯನಗುಡಿ, ಗುಲ್ಬರ್ಗ ಹಾಗೂ ಗಂಗಾವತಿ) ಹಾಗೂ ಅವುಗಳಿಗೆ ಸಂಬಂಧಿಸಿದ ಸಬ್ ಕ್ಯಾಂಪಸ್‌ಗಳಲ್ಲಿ ವಿಶೇಷ ಪದವಿಗಳಿಗೆ ಪ್ರವೇಶಾವಕಾಶವಿದೆ.
ವಿದೇಶಗಳಲ್ಲೂ ಬಹುಬೇಡಿಕೆ
ಈ ಪದವಿಗಳನ್ನು ಗಳಿಸುವ ವಿದ್ಯಾರ್ಥಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹುದ್ದೆಗಳ ಜೊತೆಗೆ ಬ್ಯಾಂಕಿನಲ್ಲಿ ಫೀಲ್ಡ್ ಆಫೀಸರ್ಸ್, ಪಶುವೈದ್ಯರು, ಕೃಷಿ ವಿಜ್ಞಾನಿಗಳು, ಬೀಜ-ಗೊಬ್ಬರ-ಕೀಟನಾಶಕ ಕಂಪನಿಗಳಲ್ಲಿ ತಂತ್ರಜ್ಞರು, ಬಯೋಟೆಕ್ನಾಲಜಿ ಕಂಪನಿಗಳಲ್ಲಿ ವಿಜ್ಞಾನಿಗಳೂ, ಖಾದ್ಯ ವಲಯಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ. ಎಂಜಿಯರಿಂಗ್ ಹಾಗೂ ಮೆಡಿಕಲ್ ಕೋರ್ಸುಗಳಿಗೆ ಹೋಲಿಸಿಕೊಂಡರೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುವ ಪದವಿಗಳು ದುಬಾರಿಯಾಗಿರದೆ ಸರ್ವರಿಗೂ ಕೈಗೆಟುಕುವ ಶುಲ್ಕವಿರುತ್ತದೆ. ಪದವಿ ನಂತರ ನಿರುದ್ಯೋಗದ ಭಯವಿಲ್ಲದ ಕ್ಷೇತ್ರ ಇದಾಗಿದೆ. ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಗಳಿಸುವ ಈ ಪದವಿಗಳಿಗೆ ವಿದೇಶಗಳಲ್ಲಿ ಸಾಫ್ಟ್‌ವೇರ್ ಉದ್ಯಮದಷ್ಟೇ ಹೆಚ್ಚಿನ ಬೇಡಿಕೆಯಿದೆ.
ಅಭ್ಯರ್ಥಿಗಳು ಪರೀಕ್ಷೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ದಿನಾಂಕ ಏಪ್ರಿಲ್ 15 (ಬೆಳಗ್ಗೆ 10 ಗಂಟೆಯ ನಂತರ) ರಿಂದ ಏಪ್ರಿಲ್ 28ರ (ಮಧ್ಯಾರಾತ್ರಿ 12 ಗಂಟೆಯ ವರೆಗೆ) ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕಿದೆ. ಕೃಷಿ ಕೋಟಾದಡಿಯಲ್ಲಿ ಅರ್ಹ / ಅರ್ಹರಲ್ಲದ ವಿದ್ಯಾರ್ಥಿಗಳ ಪಟ್ಟಿಯನ್ನು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಅಂರ್ತಜಾಲದಲ್ಲಿ ದಿನಾಂಕ ಮೇ 2ರಂದು ಮಧ್ಯಾಹ್ನ 2 ಗಂಟೆಯ ನಂತರ ಪ್ರಕಟಿಸಲಾಗುವುದು. ಅನರ್ಹ ಅಭ್ಯರ್ಥಿಗಳಿಗೆ ದಾಖಲೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ದಿನಾಂಕ ಮೇ 6ರಂದು ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗೆ ಅರ್ಹತೆ ಪಡೆದ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ದಿನಾಂಕ ಮೇ 8 ರಂದು ಸಂಜೆ 4 ಗಂಟೆಯ ನಂತರ ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳೆಲ್ಲರೂ ದಿನಾಂಕ ಮೇ 10 ರಂದು ಸಂಜೆ 4 ಗಂಟೆಯ ನಂತರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಪ್ರಾಯೋಗಿಕ ಪರೀಕ್ಷೆಯು ನಿಗದಿಯಾಗಿರುವಂತೆ ದಿನಾಂಕ ಏಪ್ರಿಲ್ 30 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದ್ದು ತಡವಾಗಿ ಹಾಜರಾಗುವ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಲಾಗುವುದು.
ಆನ್‌ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲೆಗಳು
1. ಸಿಇಟಿ ಪರೀಕ್ಷಾ ಪ್ರವೇಶ ಪತ್ರ (ಅಡ್ಮಿಶನ್ ಟಿಕೆಟ್)
2. ವ್ಯವಸಾಯಗಾರರ(ಕೃಷಿ) ಅಥವ ಕೃಷಿ ಸಂಬಂಧಿತ ಕೂಲಿ ಕಾರ್ಮಿಕರ ಪ್ರಮಾಣ ಪತ್ರ - ಕಂದಾಯ ಇಲಾಖೆ ಆರ್‌ಡಿ ಸಂಖ್ಯೆಯೊಂದಿಗೆ ನೀಡುವ ಪ್ರಮಾಣ ಪತ್ರ ಅಥವಾ ಆರ್‌ಡಿ ಸಂಖ್ಯೆಯಿರುವ ಸ್ವೀಕೃತ ಪತ್ರ
3. ಅವಿಭಾಜ್ಯ ಕುಟುಂಬವಾದಲ್ಲಿ ಪೂರಕವಾಗಿ ವಂಶವೃಕ್ಷ ಪ್ರಮಾಣ ಪತ್ರ (ತಹಸೀಲ್ದಾರ್ ಆರ್‌ಡಿ ಸಂಖ್ಯೆ ಹಾಗೂ ಕ್ಯುಆರ್ ಕೋಡ್‌ನೊಂದಿಗೆ ನೀಡುವ ಪತ್ರ) ಕಡ್ಡಾಯವಾಗಿ
4. ಆದಾಯ ಪ್ರಮಾಣ ಪತ್ರ - ಕಂದಾಯ ಇಲಾಖೆಯ ತಹಸೀಲ್ದಾರ್ ಆರ್‌ಡಿ ಸಂಖ್ಯೆ ಹಾಗೂ ಕ್ಯುಆರ್ ಕೋಡ್‌ನೊಂದಿಗೆ ನೀಡುವ ಪತ್ರ
5. ಅಫಿಡವಿಟ್ - 1, ಆದಾಯ ಪ್ರಮಾಣ ಪತ್ರದೊಂದಿಗೆ, ಅಭ್ಯರ್ಥಿ / ಪೋಷಕರು ಕಡ್ಡಾಯವಾಗಿ ಕೇವಲ ಕೃಷಿಯೊಂದೇ ಆದಾಯ ಮೂಲವೆಂದು ಸ್ವಯಂಘೋಷಣೆಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು (100 ರೂಪಾಯಿ ಸ್ಟಾಂಪ್ ಪೇಪರ್, ಅಭ್ಯರ್ಥಿ- ಫಸ್ಟ್ ಪಾರ್ಟಿ, ಕೃಷಿ ವಿಶ್ವವಿದ್ಯಾಲಯ - ಸೆಕೆಂಡ್ ಪಾರ್ಟಿ)
6. ವೇತನ ದೃಢೀಕರಣ ಪತ್ರ (ಅಭ್ಯರ್ಥಿ ಪೋಷಕರಿಗೆ ನೌಕರಿಯಿದ್ದಲ್ಲಿ)
7. ಖಾಸಗಿ ವೃತ್ತಿಯಿಂದ ಆದಾಯ ಪತ್ರ (ಅಭ್ಯರ್ಥಿ ಪೋಷಕರಿಗೆ ಸ್ವಂತ ವ್ಯವಹಾರವಿದ್ದಲ್ಲಿ)
8. ಆಫಿಡವಿಟ್ - 2 ಆದಾಯ ಪ್ರಮಾಣ (ಕೃಷಿ ಮತ್ತು ನೌಕರಿಯಿಂದ ಒಟ್ಟು ಆದಾಯ) (100 ರೂಪಾಯಿ ಸ್ಟಾಂಪ್ ಪೇಪರ್, ಅಭ್ಯರ್ಥಿ- ಫಸ್ಟ್ ಪಾರ್ಟಿ, ಕೃಷಿ ವಿಶ್ವವಿದ್ಯಾಲಯ - ಸೆಕೆಂಡ್ ಪಾರ್ಟಿ)
ವಿಶೇಷ ಸೂಚನೆ: ಆದಾಯ ಪ್ರಮಾಣ ಪತ್ರ ಹಾಗೂ ಆಫಿಡವಿಟ್‌ನಲ್ಲಿ ಘೋಷಿಸುವ ಆದಾಯ ಒಂದೇ ಆಗಿರಬೇಕು. ಎಲ್ಲಾ ದಾಖಲೆಗಳೂ ಏಪ್ರಿಲ್ 2023 ರಿಂದ ಮಾರ್ಚ್ 2024ರ ವರೆಗೆ ಮಾನ್ಯವಾಗಿರಬೇಕು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕ್ಕೆ ಐದು ವರ್ಷಗಳವರೆಗೆ ಮಾನ್ಯತೆಯಿದ್ದರೂ, ಏಪ್ರಿಲ್ 2023 ರಿಂದ ಮಾರ್ಚ್ 2024ರ ಒಳಗೆ ಮರುಮುದ್ರಿತವಾಗಿರಬೇಕು.
ಅಭ್ಯರ್ಥಿಗಳು ಆನ್‌ಲೈನ್ ಪರಿಶೀಲನೆಗೆ ಸಲ್ಲಿಸಬೇಕಾದ ಶುಲ್ಕ ರೂ 1000 (ಸಾಮಾನ್ಯ ವರ್ಗ) ಹಾಗೂ ಇತರೆ ರೂ 500 (ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ) ಶುಲ್ಕವನ್ನು ಕೃಷಿವಿಶ್ವವಿದ್ಯಾನಿಲಯಗಳ ಅಧಿಕೃತ ಜಾಲತಾಣಗಳಲ್ಲಿ ನೀಡಲಾಗುವ ಆನ್‌ಲೈನ್ ಸೌಲಭ್ಯದ ಮೂಲಕ ಪಾವತಿಸಬಹುದು. ಶುಲ್ಕ ಪಾವತಿಸಿದ ನಂತರವೇ ರಸೀತಿ ಹಾಗೂ ದಾಖಲೆಗಳನ್ನು ಸಲ್ಲಿಸಿದ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯ.
ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲದೇ, ರಾಷ್ಟ್ರ ಮಟ್ಟದಲ್ಲಿ ಅಭ್ಯಾಸ ಮಾಡಲಿಚ್ಚಿಸುವವರಿಗೆ ಸಿಯುಇಟಿ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಮೂಲಕ ಸೀಟುಗಳು ದೊರೆಯಲಿವೆ. ಐಸಿಎಆರ್ ಮೂಲಕ ಕರ್ನಾಟಕ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ 25 ಸೀಟುಗಳ ಮೀಸಲಾತಿಯಿದೆ.
ಸಿಇಟಿ ಪ್ರಾಯೋಗಿಕ ಪರೀಕ್ಷೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ (ದಾಖಲೆ, ತರಬೇತಿ, ಪರೀಕ್ಷಾ ಮಾದರಿ, ಪ್ರಶ್ನೆಗಳ ಮಾದರಿ, ಅಂಕಗಳು, ಅವಕಾಶಗಳು) ಸಂರ್ಪಕಿಸಿ. ಸಿಇಟಿ ಪ್ರಾಯೋಗಿಕ ಪರೀಕ್ಷೆಗೆ ತರಬೇತಿ ನೀಡುವ ಸಂಸ್ಥೆಗಳೂ ರಾಜ್ಯದಲ್ಲಿ ಅತೀ ವಿರಳ. ಪ್ರಣವಸ್ಯ ಸಂಸ್ಥೆ ಏಪ್ರಿಲ್ 22ನೇ ತಾರೀಖಿನಿಂದ ತುಮಕೂರಿನಲ್ಲಿ ತರಬೇತಿ ಪ್ರಾರಂಭಿಸಲಿದ್ದು, ರಾಜ್ಯದ ಇತರ ಭಾಗದ ವಿದ್ಯಾರ್ಥಿಗಳಿಗೆ ಪಿಜಿ (ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ) ಸೌಲಭ್ಯವೂ ದೊರಕಲಿದೆ. ತುಮಕೂರಿನ ಹಿರೇಹಳ್ಳಿಯ ಕೆವಿಕೆ ಸಹಯೋಗದಲ್ಲಿ ಒಂದು ದಿನದ ಫೀಲ್ಡ್ ತರಬೇತಿಯೂ ಆಯೋಜನೆಯಾಗಿದೆ.
(ಬರಹ: ನಾಗೇಂದ್ರ ಟಿ.ಸಿ, ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ,
ಪ್ರಣವಸ್ಯ ಅಕಾಡೆಮಿ)