ಪೌಷ್ಟಿಕಾಂಶದೊಂದಿಗೆ ಆಕರ್ಷಕವಾಗಿಯೂ ಇರಲಿ ಮಕ್ಕಳ ಲಂಚ್ ಬಾಕ್ಸ್, ಶಾಲೆಗೆ ಹೋಗುವ ಮಗುವಿನ ಅಮ್ಮಂದಿರಿಗಾಗಿ ಈ ಸಲಹೆ
ಮಕ್ಕಳಿಗೆ ಶಾಲೆ ಆರಂಭವಾಗಿ ಕೆಲ ದಿನಗಳು ಕಳೆದಿವೆ. ಇದೀಗ ಅಮ್ಮಂದಿರಿಗೆ ಮಕ್ಕಳ ಟಿಫಿನ್/ಲಂಚ್ ಬಾಕ್ಸ್‌ಗೆ ಏನು ಹಾಕೋದು? ಎಂಬ ಚಿಂತೆ. ಸಾಮಾನ್ಯವಾಗಿ ಮಕ್ಕಳಿಗೆ ಮನೆಯಲ್ಲಿ ಮಾಡಿದ ತಿನಿಸುಗಳಿಗಿಂತ ಹೊರಗಡೆ ಸಿಗುವ ಆಹಾರಗಳೇ ಹೆಚ್ಚು ಇಷ್ಟವಾಗುತ್ತವೆ. ಆದರೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರಗಳಿಗೆ ಆಕರ್ಷಕ ರೂಪ ನೀಡುವ ಮೂಲಕ ಮಕ್ಕಳು ತಿನ್ನುವಂತೆ ಮಾಡಬಹುದು.

ಶಾಲೆಗಳು ಆರಂಭವಾದಾಕ್ಷಣ ಅಮ್ಮಂದಿರಿಗೆ ಮೊದಲು ಕಾಡುವ ಚಿಂತೆ ಎಂದರೆ ಮಕ್ಕಳು ಅಥವಾ ಮಗುವಿನ ಟಿಫಿನ್ ಬಾಕ್ಸ್‌ಗೆ ಏನು ಹಾಕೋದು ಎನ್ನುವುದು. ಇಡ್ಲಿ, ದೋಸೆ, ಉಪ್ಪಿಟ್ಟಿನಂತಹ ಆರೋಗ್ಯಕ್ಕೆ ಹಿತ ಎನ್ನಿಸುವ ತಿನಿಸುಗಳು ಮಕ್ಕಳ ಬಾಯಿಗೆ ರುಚಿ ಎನ್ನಿಸುವುದಿಲ್ಲ. ಹಾಗಂತ ಪ್ರತಿದಿನ ಹೊರಗಡೆ ಸಿಗುವ ಬೇಕರಿ ತಿನಿಸುಗಳನ್ನು ನೀಡಿದರೆ ಆರೋಗ್ಯ ಕೆಡುವುದು ಖಂಡಿತ. ಅದಕ್ಕಾಗಿ ಮಕ್ಕಳ ಟಿಫಿನ್ ಬಾಕ್ಸ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕು. ಆಗ ಮಕ್ಕಳು ನೀವು ಮಾಡಿದ ತಿನಿಸುಗಳನ್ನು ಮರು ಮಾತಿಲ್ಲದೇ ತಿಂದು ಮುಗಿಸುತ್ತವೆ.
ಇಡ್ಲಿ ಸ್ಯಾಂಡ್‌ವಿಚ್
ಮಕ್ಕಳು ಇಡ್ಲಿ ಕೊಟ್ಟರೆ ಖಂಡಿತ ತಿನ್ನುವುದಿಲ್ಲ. ಇಡ್ಲಿ ಸಾಂಬಾರ್ ಅಥವಾ ಇಡ್ಲಿ ಚಟ್ನಿ ಇಂದಿನ ಮಕ್ಕಳಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ಇದಕ್ಕಾಗಿ ಇಡ್ಲಿ ಸ್ಯಾಂಡ್‌ವಿಚ್ ಮಾಡಿ ಕೊಡಿ. ಇಡ್ಲಿಯನ್ನು ಚಿಕ್ಕ, ಅಗಲವಾದ ತಟ್ಟೆಯಲ್ಲಿ ಬೇಯಿಸಿ. ಎರಡು ಇಡ್ಲಿಯ ಮಧ್ಯೆ ಸೌತೆಕಾಯಿ ಟೊಮೆಟೊದಂತಹ ತರಕಾರಿಗಳನ್ನು ಇಟ್ಟು ಮಧ್ಯದಲ್ಲಿ ಸಿಹಿ ರುಚಿ ಬರಲು ಸ್ವಲ್ಪ ಸಾಸ್ ಹಾಕಿ. ಇದು ಮಕ್ಕಳ ಕಣ್ಣಿಗೆ ವಿಶೇಷವಾಗಿ ಕಾಣುವ ಕಾರಣ ಅವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ ಜೊತೆಗೆ ತರಕಾರಿ ಕೂಡ ಪೌಷ್ಟಿಕ ಆಹಾರವಾಗಿದ್ದು ಮಕ್ಕಳಿಗೆ ಆರೋಗ್ಯಕ್ಕೆ ಉತ್ತಮ.
ಚಪಾತಿ ರೋಲ್
ಮಕ್ಕಳು ಶಾಲೆಗೆ ಹೋಗುವಾಗ ಚಪಾತಿ ಕೊಟ್ಟರೆ ತಿನ್ನುವುದಿಲ್ಲ. ಚಪಾತಿಯೊಂದಿಗೆ ಪಲ್ಯವನ್ನು ಬಾಕ್ಸ್‌ನಲ್ಲಿ ಹಾಕಿ ಕೊಟ್ಟಿದ್ದರೆ ಅರ್ಧ ಚಪಾತಿಯನ್ನು ಕೂಡ ತಿಂದು ಮುಗಿಸಿರುವುದಿಲ್ಲ. ಅದರ ಬದಲು ಚಪಾತಿ ರೋಲ್ ಮಾಡಿಕೊಡಿ. ರೋಲ್‌ನಲ್ಲಿ ತರಕಾರಿಯನ್ನು ಚಿಕ್ಕದಾಗಿ ಹೆಚ್ಚಿ ಹಾಕಿ ಅಥವಾ ನೀವು ಮಾಡಿದ ಪಲ್ಯವನ್ನು ತುಂಬಿಸಿ ಇಡಬಹುದು. ಚಪಾತಿ ಮೇಲ್ಗಡೆ ಸ್ವಲ್ಪ ಸಾಸ್ ಸವರಿ ಇಡಿ. ಇದರಿಂದ ಮಕ್ಕಳು ಚಪಾತಿಯನ್ನು ಚೂರು ಬಿಡದೇ ತಿನ್ನುವುದರಲ್ಲಿ ಅನುಮಾನವಿಲ್ಲ.
ತರಕಾರಿ ಉಪ್ಪಿಟ್ಟು
ಉಪ್ಪಿಟ್ಟು ಸಾಮಾನ್ಯವಾಗಿ ಮಕ್ಕಳು ಬಿಡಿ ದೊಡ್ಡವರಿಗೂ ಇಷ್ಟವಾಗುವುದಿಲ್ಲ. ಮಕ್ಕಳು ಉಪ್ಪಿಟ್ಟನ್ನು ಇಷ್ಟಪಟ್ಟು ತಿನ್ನಬೇಕು ಎಂದರೆ ಅದನ್ನು ಆಕರ್ಷಕವಾಗಿ ಮಾಡಬೇಕು. ಅದಕ್ಕೆ ಹಸಿರು ಬಟಾಣಿ, ಕ್ಯಾರೆಟ್, ಬೀನ್ಸ್ ಹೀಗೆ ಬಣ್ಣದ ತರಕಾರಿಗಳನ್ನು ಹಾಕಬೇಕು. ಮಕ್ಕಳು ಉಪ್ಪಿಟ್ಟು, ತರಕಾರಿ ಎರಡನ್ನು ಇಷ್ಟಪಡದಿದ್ದರೂ ಉಪ್ಪಿಟ್ಟಿನ ಮೇಲೆ ಕಾಣುವ ಬಣ್ಣದ ಬಣ್ಣದ ತರಕಾರಿಯಿಂದ ಅವರು ಆಕರ್ಷಿತರಾಗಬಹುದು. ಇದರೊಂದಿಗೆ ಉಪ್ಪಿಟ್ಟು ಮಾಡುವ ಕೊಂಚ ತುಪ್ಪ ಸೇರಿಸಿದರೂ ಅದರ ಪರಿಮಳಕ್ಕೆ ಮಕ್ಕಳು ಉಪ್ಪಿಟ್ಟನ್ನು ಇಷ್ಟಪಟ್ಟು ತಿನ್ನುತ್ತಾರೆ.
ಸೊಪ್ಪಿನ ರೊಟ್ಟಿ/ಚಪಾತಿ
ಮಕ್ಕಳು ಯಾವಾಗಲೂ ಸೊಪ್ಪು ತರಕಾರಿಗಳನ್ನು ನೇರವಾಗಿ ಬೇಯಿಸಿ ಅಥವಾ ಸಾರು, ಸಾಂಬಾರ್ ರೂಪದಲ್ಲಿ ನೀಡಿದರೆ ತಿನ್ನುವುದಿಲ್ಲ. ಇದರ ಬದಲು ನೀವು ತಯಾರಿಸುವ ತಿಂಡಿಯಲ್ಲಿ ಅದನ್ನು ಮಿಕ್ಸ್ ಮಾಡಿ. ಮೆಂತ್ಯೆ ಚಪಾತಿ, ಪಾಲಕ್ ರೊಟ್ಟಿ ಹೀಗೆ ಭಿನ್ನವಾದ ಹೆಸರು ಇಟ್ಟು ಮಕ್ಕಳಿಗೆ ತಿನ್ನಲು ಕೊಟ್ಟರೆ ಇವರು ತಿನ್ನುವ ಮನಸ್ಸು ಮಾಡಬಹುದು.
ಮಿಶ್ರ ಹಣ್ಣುಗಳು
ಮಕ್ಕಳ ಲಂಚ್ ಬಾಕ್ಸ್‌ಗೆ ಒಂದೇ ಬಗೆಯ ಹಣ್ಣು ಹಾಕಿದರೆ ಅವರು ಖಂಡಿತ ತಿನ್ನುವುದಿಲ್ಲ. ಅವರ ಲಂಚ್ ಬಾಕ್ಸ್ ಆಕರ್ಷಕವಾಗಿ ಕಂಡು, ಪೂರ್ತಿ ಖಾಲಿ ಮಾಡಬೇಕು ಅಂದ್ರೆ ಬಗೆ ಬಗೆಯ ತರಕಾರಿಗಳನ್ನು ಹೆಚ್ಚಿ ಹಾಕಬೇಕು. ಹಸಿರು, ಕೆಂಪು, ಕಪ್ಪು ಅಂದರೆ ಕಿವಿ, ಸೇಬು, ದ್ರಾಕ್ಷಿ, ದಾಳಿಂಬೆ ಹೀಗೆ ವಿವಿಧ ಹಣ್ಣುಗಳನ್ನು ಮಿಶ್ರಣ ಮಾಡಿ. ಆಗ ಮಕ್ಕಳು ಇಷ್ಟಪಟ್ಟು ತಿಂತಾರೆ.
ಒಗ್ಗರಣೆ ಮೊಸರನ್ನ
ಮಕ್ಕಳು ಅನ್ನ ತಿನ್ನುವುದೇ ಕಡಿಮೆ, ಅದರಲ್ಲೂ ಲಂಚ್ ಅಥವಾ ಟಿಫಿನ್‌ಗೆ ಅನ್ನ ಹಾಕಿಕೊಟ್ಟರೆ ತಿಂತಾರಾ, ಖಂಡಿತ ಇಲ್ಲ. ಅದಕ್ಕಾಗಿ ನೀವು ಒಗ್ಗರಣೆ ಮೊಸರನ್ನ ಮಾಡಿಕೊಡಬಹುದು. ಮೊಸರನ್ನಕ್ಕೆ ಶೇಂಗಾ, ದಾಳಿಂಬೆ, ಕ್ಯಾರೆಟ್ ತುರಿ, ಸೌತೆಕಾಯಿ ತುರಿ, ಈರುಳ್ಳಿ ಎಲ್ಲಾ ಹಾಕಿ ತಯಾರಿಸಿದ್ರೆ ಮಕ್ಕಳು ಇಷ್ಟಪಟ್ಟು ತಿಂತಾರೆ. ಇದು ಮಕ್ಕಳ ಆರೋಗ್ಯಕ್ಕೂ ಉತ್ತಮ. ಮೊಸರು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ತರಕಾರಿ ಪಡ್ಡು
ಉದ್ದಿನಹಿಟ್ಟಿನ ಪಡ್ಡು ಜೊತೆ ಚಟ್ನಿ ಕೊಟ್ಟರೆ ಮಕ್ಕಳು ಖಂಡಿತ ತಿನ್ನುವುದಿಲ್ಲ, ಅದಕ್ಕಾಗಿ ತುರಿದು ಪಡ್ಡು ತಯಾರಿಸಿ. ಪಡ್ಡುಗೆ ಬಣ್ಣ ನೀಡಿ. ಇದರಿಂದ ಮಕ್ಕಳು ಆಕರ್ಷಿತರಾಗುತ್ತಾರೆ. ಚಿಕ್ಕ ಮಕ್ಕಳು ಸಾಮಾನ್ಯವಾಗಿ ಬಣ್ಣದ ತಿನಿಸುಗಳನ್ನು ಇಷ್ಟಪಡುತ್ತಾರೆ.
ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು ಎಷ್ಟು ಮುಖ್ಯವೋ ಆಕರ್ಷಕವಾಗಿರುವ ಆಹಾರ ನೀಡುವುದು ಅಷ್ಟೇ ಮುಖ್ಯವಾಗುತ್ತದೆ. ನಾವು ಮಾಡುವ ತಿಂಡಿಯನ್ನೇ ಮಕ್ಕಳಿಗಾಗಿ ಕೊಂಚ ಆಕರ್ಷಕವಾಗಿ ಮಾಡಿದ್ರೆ ಮಕ್ಕಳು ಟಿಫಿನ್ ಬಾಕ್ಸ್‌ನಲ್ಲಿ ಹಾಗೇ ಇಟ್ಟು ತರುವ ಪ್ರಮೇಯವೇ ಬರುವುದಿಲ್ಲ.
