Explainer: ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ವ್ಯತ್ಯಾಸವೇಕೆ; ಕೆಲವು ವಿದ್ಯಾರ್ಥಿಗಳು ನಿಧಾನವಾಗಿ ಕಲಿಯಲು ಕಾರಣಗಳೇನು?
ಎಲ್ಲಾ ಮಕ್ಕಳ ಕಲಿಕಾ ಸಾಮರ್ಥ್ಯ ಒಂದೇ ರೀತಿ ಇರುವುದಿಲ್ಲ. ಕೆಲವು ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿದ್ದರೆ, ಇನ್ನೂ ಕೆಲವು ಮಕ್ಕಳು ಕಲಿತಿದ್ದನ್ನು ಬೇಗನೆ ಮರೆತು ಬಿಡುತ್ತಾರೆ. ಯಾಕೆ ಹೀಗಾಗುತ್ತೆ? ಇದಕ್ಕೆ ಕಾರಣಗಳೇನು? ಎಲ್ಲಾ ಮಕ್ಕಳ ಕಲಿಕಾ ಸಾಮರ್ಥ್ಯ ಒಂದೇ ರೀತಿ ಯಾಕಿರುವುದಿಲ್ಲ. ತಿಳಿಯೋಣ ಬನ್ನಿ.

'ಪಕ್ಕದ ಮನೆ ಮಗು ಡಿಸ್ಟಿನ್ಶನ್ನಲ್ಲಿ ಪಾಸಾಗಿದೆ. ಆದರೆ ನಮ್ಮನೆ ಮಗು ಜಸ್ಟ್ ಪಾಸ್. ದಿನಾ ಓದಿದ್ರೂ ಮಾರ್ಕ್ಸ್ ಬಂದಿಲ್ಲ' ಎಂದು ದೂರುವ ಪೋಷಕರಿದ್ದಾರೆ. ಮಕ್ಕಳಿಗೆ ಒತ್ತಾಯ ಮಾಡಿ ಓದಲು ಹೇಳಿ ಹೆಚ್ಚು ಮಾರ್ಕ್ಸ್ ಬರಬೇಕೆಂದು ಒತ್ತಡ ಹಾಕುವ ತಂದೆ-ತಾಯಿ ನಮ್ಮ ನಿಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಇದು ತಪ್ಪು. ಎಲ್ಲಾ ಮಕ್ಕಳು ಅಥಾ ವ್ಯಕ್ತಿಗಳು, ಒಂದೇ ವೇಗದಲ್ಲಿ ಕಲಿಯಲು ಸಾಧ್ಯವಿಲ್ಲ. ಕೆಲವೊಬ್ಬರಿಗೆ ತ್ವರಿತವಾಗಿ ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಇದೇ ವೇಳೆ ಇನ್ನೂ ಕೆಲವೊಬ್ಬರಿಗೆ ಗ್ರಹಿಸಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಸಮಯ ಮತ್ತು ಶ್ರಮದ ಅಗತ್ಯವಿರುತ್ತದೆ. ಜ್ಞಾಪಕ ಶಕ್ತಿಯಲ್ಲೂ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸಗಳಿರುತ್ತವೆ.
ಹಲವು ಬಾರಿ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯದ ನಡುವಣ ವ್ಯತ್ಯಾಸಗಳು ಹಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಕೆಲವರು ಮಾತ್ರ ಇತರರಿಗಿಂತ ವೇಗವಾಗಿ ಏಕೆ ಕಲಿಯುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣಗಳೂ ಇವೆ. ಪ್ರತಿ ಮಕ್ಕಳ ಕಲಿಕೆ, ಗ್ರಹಿಸುವ ಸಾಮರ್ಥ್ಯ, ನೆನಪಿನ ಶಕ್ತಿಯಲ್ಲಿನ ಏರುಪೇರುಗಳಿಗೆ ಜೈವಿಕ, ಮಾನಸಿಕ ಮತ್ತು ಪರಿಸರ ಅಂಶಗಳು ಕೂಡಾ ಕಾರಣವಾಗುತ್ತವೆ. ಕಲಿಕೆಯ ಪ್ರತಿ ಹಂತದಲ್ಲಿ ವೇಗದಲ್ಲಿ ವ್ಯತ್ಯಾಸಗಳಾಗುತ್ತವೆ.
ಆನುವಂಶಿಕ ಅಂಶಗಳು
ಮಕ್ಕಳ ಕಲಿಕೆ ಸಾಮರ್ಥ್ಯದ ಮೇಲೆ ಆನುವಂಶಿಕ ಅಂಶಗಳು ಪ್ರಭಾವ ಬೀರುತ್ತವೆ. ಕೆಲವು ಮಕ್ಕಳು ಅವರ ಅಪ್ಪ -ಅಮ್ಮನಂತೆ ಶಾರ್ಪ್ ಇರ್ತಾರೆ. ನೋಡಿದವರು ಕೂಡಾ ಇದೇ ಮಾತನ್ನು ಹೇಳುತ್ತಾರೆ. ಕಲಿಕೆಯ ವೇಗ ಸೇರಿದಂತೆ ಅರಿವಿನ ಸಾಮರ್ಥ್ಯಗಳಲ್ಲಿನ ವ್ಯತ್ಯಾಸಕ್ಕೆ ಆನುವಂಶಿಕ ಪ್ರಭಾವಗಳು ಕಾರಣವೆಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಸಿನಾಪ್ಟಿಕ್ ಪ್ಲಾಸ್ಟಿಟಿಗೆ ಸಂಬಂಧಿಸಿದ ಜೀನ್ಗಳಲ್ಲಿನ ವ್ಯತ್ಯಾಸ, ಕಲಿಕೆಗೆ ಪ್ರತಿಕ್ರಿಯೆಯಾಗಿ ನ್ಯೂರಾನ್ಗಳು ಸಂಪರ್ಕಗಳನ್ನು ಹೊಂದಿಕೊಳ್ಳುವ ಮತ್ತು ಬಲಪಡಿಸುವ ಪ್ರಕ್ರಿಯೆ, ಕಲಿಕೆಯಲ್ಲಿ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ.
ಮಾನಸಿಕ ಅಂಶಗಳು
ಜ್ಞಾಪಕ ಶಕ್ತಿ, ಯಾವುದೂ ಬೇಕು ಬೇಡ ಎಂಬ ಸಂಸ್ಕರಣಾ ವೇಗ ಮತ್ತು ಗಮನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅರಿವಿನ ಸಾಮರ್ಥ್ಯಗಳಲ್ಲಿ ಮಕ್ಕಳಿಂದ ಮಕ್ಕಳಿಗೆ ವ್ಯತ್ಯಾಸಗಳಿರುತ್ತವೆ. ಇಂಥಾ ವೈಯಕ್ತಿಕ ವ್ಯತ್ಯಾಸಗಳಿಂದ ಕಲಿಕೆಯ ವೇಗದಲ್ಲಿ ಬದಲಾವಣೆಗಳಾಗುತ್ತವೆ. ಹೆಚ್ಚು ನೆನಪಿನ ಶಕ್ತಿ ಹೊಂದಿರುವರು ಏಕಕಾಲದಲ್ಲಿ ಹೆಚ್ಚಿನ ಮಾಹಿತಿಯನ್ನು ತಲೆಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲರು. ಎಲ್ಲಾ ಕೆಲಸವನ್ನೂ ತಮ್ಮ ಕೌಶಲ್ಯದಿಂದ ನಿರ್ವಹಿಸಬಲ್ಲರು.
ಸುತ್ತಮುತ್ತಲಿನ ಪರಿಸರ ಅಂಶಗಳು
ಹುಟ್ಟಿ ಬೆಳೆಯುವ ವಾತಾವರಣ, ಶೈಕ್ಷಣಿಕ ಅವಕಾಶಗಳ ಲಭ್ಯತೆ, ಬೋಧನಾ ವಿಧಾನಗಳು ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಸೇರಿದಂತೆ ವಿವಿಧ ಪರಿಸರ ಅಂಶಗಳು ಕೂಡಾ ಕಲಿಕೆಯ ಫಲಿತಾಂಶಗಳ ಮೇಲೆ ಗಾಢ ಪ್ರಭಾವ ಬೀರುತ್ತವೆ. ಹಳ್ಳಿಯಲ್ಲಿ ಕಲಿಯುವ ವಿದ್ಯಾರ್ಥಿಗೂ, ನಗರದ ವಾತಾವರಣದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ವ್ಯತ್ಯಾಸಗಳಿವೆ. ಗುಣಮಟ್ಟದ ಶಿಕ್ಷಣ, ಕಲಿಕಾ ಪರಿಸರಗಳು ಮತ್ತು ಅಗತ್ಯ ಶೈಕ್ಷಣಿಕ ಸಂಪನ್ಮೂಲಗಳನ್ನು ಪಡೆಯುವ ವಿದ್ಯಾರ್ಥಿಗೂ, ಸೀಮಿತ ಸಂಪನ್ಮೂಲಕಗಳೊಂದಿಗೆ ಕಲಿಯುವ ವಿದ್ಯಾರ್ಥಿಗಗೂ ವ್ಯತ್ಯಾಸಗಳಿವೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಗತ್ಯವಾದ ಸಾಧನಗಳು ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರ ಕಲಿಕೆಯ ವೇಗವನ್ನು ಹೆಚ್ಚಿಸಬಹುದು.
ಜೈವಿಕ ಅಂಶಗಳು
ಪ್ರತಿಯೊಬ್ಬರ ಕಲಿಕೆಯ ವೇಗದ ಮೇಲೆ ಪ್ರಭಾವ ಬೀರುವ ಪ್ರಮುಖ ನಿರ್ಣಾಯಕ ಅಂಶವಿದು. ಮೆದುಳಿನ ರಚನೆ ಮತ್ತು ಕಾರ್ಯವು ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾಗಿರುತ್ತದೆ. ಮೆದುಳಿನ ಅಂಗರಚನಾಶಾಸ್ತ್ರ ಮತ್ತು ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ನರವೈಜ್ಞಾನಿಕ ಸಂಶೋಧನೆಯು ಬಹಿರಂಗಪಡಿಸಿದೆ. ಉದಾಹರಣೆಗೆ, ಹೆಚ್ಚಿನ ಮಟ್ಟದ ಡೋಪಮೈನ್ ಹೊಂದಿರುವ ವ್ಯಕ್ತಿಗಳು, ಕಲಿಕೆಗೆ ಸಂಬಂಧಿಸಿದಂತೆ ಹೆಚ್ಚು ಗಮನ ವಹಿಸುವುದರಿಂದ ಮತ್ತು ತೊಡಗಿಸಿಕೊಳ್ಳುವಿಕೆಯಿಂದ ವೇಗವಾಗಿ ಕಲಿಯುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದಕ್ಕೂ ಹೆಚ್ಚುವರಿಯಾಗಿ ನರ ಸಂಪರ್ಕದಲ್ಲಿನ ವ್ಯತ್ಯಾಸಗಳು ಕಲಿಕೆಯ ದಕ್ಷತೆಯಲ್ಲಿನ ವ್ಯತ್ಯಾಸಕ್ಕೆ ಕೊಡುಗೆ ನೀಡುತ್ತವೆ.
ಇನ್ನಷ್ಟು ಶೈಕ್ಷಣಿಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಕೊಲೆಸ್ಟ್ರಾಲ್ ನಿಯಂತ್ರಣದಿಂದ ಜೀರ್ಣಕ್ರಿಯೆ ಹೆಚ್ಚುವವರೆಗೆ; ಹರಿವೆ ಸೊಪ್ಪಿನ ಆರೋಗ್ಯ ಪ್ರಯೋಜನ ತಿಳಿದ್ರೆ ತಪ್ಪದೇ ತಿಂತೀರಿ