ಕನ್ನಡ ಸುದ್ದಿ  /  Lifestyle  /  Education News How To Improve Memory Power 20 Memorization Techniques To Boost Your Memory Study Tips In Kannada Pcp

Study Tips: ಓದಿದ್ದು ನೆನಪಾಗದೆ ಪರೀಕ್ಷೆಯಲ್ಲಿ ಪರಿತಪಿಸುವಿರಾ, ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇಲ್ಲಿದೆ 20 ಟಿಪ್ಸ್‌

ಶಾಲಾ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಮರೆವಿನ ಕಾಟ ಹೆಚ್ಚಿರುತ್ತದೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿ 20 ವಿಧಾನಗಳನ್ನು ನೀಡಲಾಗಿದೆ. ನೆನಪಿನ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಎಂಬ ಪ್ರಶ್ನೆ ಇರುವವರು, ಜ್ಞಾಪಕಶಕ್ತಿ ಹೆಚ್ಚಿಸಲು ಬಯಸುವವರು ಈ ಸಲಹೆಗಳನ್ನು ಮರೆಯದೇ ಓದಿ.

ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇಲ್ಲಿದೆ 20 ಟಿಪ್ಸ್‌
ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇಲ್ಲಿದೆ 20 ಟಿಪ್ಸ್‌

ಶಾಲಾ ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ಆಗಾಗ "ಎಲ್ಲಾ ಮರೆತು ಹೋಗುತ್ತದೆ, ನೆನಪಿನ ಶಕ್ತಿಯೇ ಕಳೆದುಕೊಂಡಿದ್ದೀನಿ" ಎಂಬ ಭಾವ ಆಗಾಗ ಮೂಡುತ್ತದೆ. ಪ್ರತಿನಿತ್ಯ ಗಂಟೆಗಟ್ಟಲೆ ಓದಿದರೂ ಪರೀಕ್ಷೆಯಲ್ಲಿ ಉತ್ತರಿಸಲಾಗದ ವಿದ್ಯಾರ್ಥಿಗಳು ಅನೇಕ ಜನರು ಇರುತ್ತಾರೆ. ಮನೆಯಲ್ಲಿ ಈಗ ಒಂದೆಲಗದ ಪಲ್ಯ, ಚಟ್ನಿ ಮಾಡಿಕೊಡುವುದು ಅಪರೂಪ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಒಂದೆಲಗದ ಎಲೆ ತಿನ್ನಿ ಎನ್ನುವವರು ಈಗ ಕಡಿಮೆ ಆಗಿದ್ದಾರೆ. ಆದರೆ, ಮರೆವು ಎಂಬ ಮರೆವನ್ನು ಮರೆಸಿ, ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವು ದಾರಿಗಳಿವೆ. ಅವುಗಳಲ್ಲಿ 20 ಸಲಹೆಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ನೆನಪಿನ ಶಕ್ತಿ ಎಂದರೇನು?

ಓದಿದ್ದು, ಕೇಳಿದ್ದು, ನೋಡಿದ್ದನ್ನು ನೆನಪಿಟ್ಟುಕೊಂಡು, ಬೇಕಾದಗ ಹೊರಕ್ಕೆ ತೆಗೆಯುವಂತಹ ವಿಶೇಷ ಶಕ್ತಿಯೇ ಜ್ಞಾಪಕಶಕ್ತಿ. ವಿದ್ಯಾರ್ಥಿಗಳಿಗೆ ಈ ನೆನಪಿನ ಶಕ್ತಿ ಅತ್ಯಂತ ಅಗತ್ಯವಾಗಿರುತ್ತದೆ.

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು 20 ವಿಧಾನಗಳು

 1. ಪುನರ್‌ಮನನ: ಓದಿದ ವಿಷಯಗಳನ್ನು ಪದೇ-ಪದೇ ಓದಬೇಕು ಹಾಗೂ ಓದು ಮುಗಿದ ನಂತರ ಅದನ್ನು ಪುನರ್‌ಮನನ ಮಾಡಬೇಕು.
 2. ಟಿಪ್ಪಣಿ: ಓದು ಮುಗಿದ ನಂತರ ಅದನ್ನು ನೆನಪಿನಲ್ಲಿಟ್ಟುಕೊಂಡು ಟಿಪ್ಪಣಿ ರೂಪದಲ್ಲಿ ಬರೆದಿಟ್ಟುಕೊಳ್ಳಬೇಕು.
 3. ಅರ್ಥಮಾಡಿಕೊಳ್ಳುವಿಕೆ: ಬಾಯಿಪಾಠ ಮಾಡುವ ವಿಧಾನಕ್ಕಿಂತ ವಿಷಯ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ತಿಳಿದುಕೊಂಡ ವಿಷಯ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ.
 4. ಸ್ಪರ್ಧಾತ್ಮಕ ಪರೀಕ್ಷೆಗೆ ಅಥವಾ ಶಾಲಾ ಕಾಲೇಜುಗಳ ಪರೀಕ್ಷೆಗೆ ಓದುವಾಗ ಸಾಧ್ಯವಾದಷ್ಟು ಚಿತ್ರಗಳು, ರೇಖೆಗಳು ಹಾಗೂ ನಕಾಶೆಗಳನ್ನು ಉಪಯೋಗಿಸುವುದು ಉತ್ತಮ.
 5. ಓದಿದ ವಿಷಯಗಳನ್ನು ನಿಮೋನಿಕ್ಸ್‌ ರೂಪದಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು. mnemonics ವಿಧಾನ ಏನೆಂದು ಗೂಗಲ್‌ನಲ್ಲಿ ಹುಡುಕಿ ತಿಳಿದುಕೊಳ್ಳಿ.
 6. ಅಧ್ಯಯನ ವಿಷಯಗಳನ್ನು ಅಥವಾ ಓದುವ ವಿಷಯಗಳನ್ನು ವಿಂಗಡಣೆ ಮಾಡಿಕೊಂಡು ಓದಬೇಕು. ಇದರಿಂದ ಓದಿನಲ್ಲಿ ಆಸಕ್ತಿ ಉಂಟಾಗುತ್ತದೆ.
 7. ನಕಾರಾತ್ಮಕ, ನಿರಾಶಾವಾದಿ ಮತ್ತು ಅಸಹಕಾರ ವ್ಯಕ್ತಿತ್ವ ಕಳೆದುಕೊಳ್ಳಿ. ಸಕಾರಾತ್ಮಕ, ಆಶಾವಾದಿ ಮತ್ತು ಸಹಕಾರ ಮನೋಭಾವ ಬೆಳೆಸಿಕೊಳ್ಳಿ. ಇದು ಕೂಡ ನೆನಪಿನಶಕ್ತಿ ಹೆಚ್ಚಿಸಲು ಪೂರಕ. ಮೆದುಳಿನಲ್ಲಿ ಇರುವ ಕಾರ್ಟಿಸಾಲ ಒತ್ತಡ ಹಾರ್ಮೋನ್‌ ಕಡಿಮೆಯಾಗಬೇಕಾದರೆ ಪ್ರತಿದಿನ ಸಂತೋಷ ಹಾಗೂ ಸ್ಪೂರ್ತಿಯಿಂದ ಇರಬೇಕು.
 8. ಮೆದುಳಿನ ವಿಷ ಪದಾರ್ಥಗಳಾದ ಚಹಾ, ಕಾಫಿ, ಅಲ್ಕೋಹಾಲ್‌, ತಂಬಾಕು, ಧೂಮಪಾನ, ಗಾಂಜಾ ಇವುಗಳಿಂದ ದೂರ ಇರಬೇಕು. ಇವುಗಳು ಮೆದುಳಿನ ನ್ಯೂರಾನ್‌ಗಳನ್ನು ನಾಶಮಾಡುತ್ತವೆ. ಮೆದುಳಿಗೆ ನಿರಂತರವಾಗಿ ಆಮ್ಲಜನಕ, ಗ್ಲೂಕೋಸ್‌ ಪೂರೈಕೆಯಾಗಬೇಕು. ಇವುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ನೆನಪಿನಶಕ್ತಿ ಕಡಿಮೆಯಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ಯೋಗಾಸನ ಮಾಡಬೇಕು.
 9. ಒಂಟಿಯಾಗಿ ಇರುವುದರಿಂದ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿ ಎಲ್ಲರ ಜೊತೆ ಬೆರೆಯಿರಿ. ಇದು ಆಂತರಿಕ ಸಂತೋಷ ಉಂಟು ಮಾಡುತ್ತದೆ.
 10. ರಾತ್ರಿ ಮಲಗುವ ಮುಂಚೆ ಆ ದಿನ ಓದಿದ ವಿಷಯವನ್ನು ನೆನಪಿಸಿಕೊಳ್ಳಬೇಕು. ಈ ರೀತಿ ಮಾಡುವದರಿಂದ ಮೆದುಳಿನಲ್ಲಿ ನ್ಯೂರಾನ್‌ಗಳು ಹೆಚ್ಚು ಕ್ರಿಯಾಶೀಲವಾಗುವವು.
 11. ಬೆಳಗ್ಗೆಯಿಂದ ಸಾಯಂಕಾಲದವರಿಗೆ ಶಿಸ್ತನ್ನು ರೂಢಿಸಿಕೊಳ್ಳಬೇಕು. ಸ್ನಾನ, ತಿಂಡಿ, ಊಟ, ಆಟ, ಮನರಂಜನೆ, ನಿದ್ರೆ ಓದು ಎಲ್ಲದಕ್ಕೂ ಒಂದು ನಿರ್ದಿಷ್ಟ ಸಮಯ ನಿಗದಿ ಮಾಡಿಕೊಳ್ಳಬೇಕು.
 12. ಒಂದೇ ಸಮಯದಲ್ಲಿ ಒಂದೇ ಕೆಲಸ ಎಂಬ ತತ್ವವನ್ನು ಅನುಸರಿಸಬೇಕು. ಇದರಿಂದ ಏಕಾಗ್ರತೆ ಅಧಿಕಗೊಳ್ಳುವದು. ಒಂದೇ ಸಮಯದಲ್ಲಿ ವಿವಿಧ ಕಾರ್ಯಗಳನ್ನು ಮಾಡುವುದರಿಂದ ಏಕಾಗ್ರತೆ ಉಂಟಾಗುವದಿಲ್ಲ. ಮಲ್ಟಿ ಟಾಸ್ಕಿಂಗ್‌ ಬೇಡ.
 13. ಅಯ್ಯೋ ನನಗೆ ಮರೆತು ಹೋಗುತ್ತದೆ ಎಂದು ಕೀಳರಿಮೆ ಬೆಳೆಸಿಕೊಳ್ಳಬೇಡಿ. ನಿಮ್ಮ ಸ್ವಂತ ಜ್ಞಾಪಕಶಕ್ತಿಯನ್ನು ಕೀಳರಿಮೆಯಿಂದ ನೋಡಬೇಡಿ ಮತ್ತು ಇತರರ ಜ್ಞಾಪಕಶಕ್ತಿ ಉತ್ತಮವಾಗಿದೆ ಎಂದುಕೊಳ್ಳಬಾರದು. ಪ್ರತಿನಿತ್ಯ ತಮ್ಮನ್ನು ಉತ್ತಮ ಮಾಡಿಕೊಳ್ಳುವ ಬಯಕೆ ಇರಬೇಕು. ಇದರಿಂದ ಇತರರಿಗಿಂತ ಪ್ರತಿನಿತ್ಯ ಒಂದು ಹೆಜ್ಜೆ ಮುನ್ನಡೆ ಸಾಧಿಸುತ್ತೇವೆ.
 14. ಮೆದುಳು ಗಟ್ಟಿಯಾಗಬೇಕಾದರೆ, ಉತ್ತಮ ಆಹಾರ ಸೇವನೆ ಮಾಡಬೇಕು. ಇದು ಮೆದುಳಿನಲ್ಲಿಯ ವಿಷ ಪದಾರ್ಥಗಳನ್ನು ಹೊರಹಾಕುತ್ತದೆ.
 15. ಓದಿದ ವಿಷಯವು ಹೆಚ್ಚು ನೆನಪಿನಲ್ಲಿ ಉಳಿಯಬೇಕಾದರೆ, ಪ್ರತಿನಿತ್ಯ ಒಂದು ಗಂಟೆ ಗುಂಪು ಚರ್ಚೆ ಮಾಡಬೇಕು.
 16. ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು. ಇದರಿಂದ ಪ್ರಶ್ನೆಗಳ ಸ್ವರೂಪ ಹಾಗೂ ಲಕ್ಷಣ ಗೊತ್ತಾಗುತ್ತದೆ.
 17. ಪಾಠಗಳನ್ನು ಓದಿದ ನಂತರ ಸ್ವಂತ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಬೇಕು. ಸ್ವಂತ ಪ್ರಶ್ನೆ ಪತ್ರಿಕೆ ತಯಾರಿಸುವದರಿಂದ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.
 18. ಹೆಚ್ಚು ನೀರು ಕುಡಿಯಿರಿ, ಮೆದುಳು ಶೇಕಡಾ 80ರಷ್ಟು ನೀರಿನಾಂಶದಿಂದ ಕೂಡಿದೆ. ಪ್ರತಿನಿತ್ಯ 6 ರಿಂದ 8 ಗ್ಲಾಸ್‌ ನೀರು ಕುಡಿಯಬೇಕು.
 19. ಚಿಂತೆ, ಸಿಟ್ಟು , ಖಿನ್ನತೆಯಿಂದ ಮೆದುಳಿನಲ್ಲಿ ಪ್ರಿರಾರ‍ಯಡಿಕಲ್‌ ಉತ್ಪತ್ತಿಯಾಗುವವು. ಇವುಗಳು ಮಾಹಿತಿ ವರ್ಗಾವಣೆಗೆ ಅಡ್ಡಿ ಉಂಟು ಮಾಡುವವು. ಅವುಗಳಿಂದ ದೂರ ಇರುವ ಅಭ್ಯಾಸ ಮಾಡಿಕೊಳ್ಳಬೇಕು. ಸ್ವಾಭಿಮಾನ, ಛಲ ಹಾಗೂ ನಂಬಿಕೆಯನ್ನು ಬೆಳೆಸಿಕೊಂಡು ಹೆಜ್ಜೆ ಹಾಕಿರಿ. ಇದು ಓದಿನಲ್ಲಿ ಆಸಕ್ತಿ ಉಂಟು ಮಾಡುತ್ತದೆ.
 20. 4 ರಿಂದ 6 ತಾಸು ನಿದ್ರೆ ಮಾಡುವದಕ್ಕಿಂತ 6 ರಿಂದ 8 ತಾಸು ನಿದ್ರೆ ಮಾಡುವವರು ಹೆಚ್ಚು ಯಶಸ್ವಿಯಾಗಿದ್ದಾರೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಅದಕ್ಕಾಗಿ ನಿದ್ರೆಗೆಟ್ಟು ಅಭ್ಯಾಸ ಮಾಡಬೇಡಿ.