ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿ, ಓದಿನಲ್ಲಿ ಆಸಕ್ತಿ ಮೂಡಲು ಸಹಾಯ ಮಾಡುವ ಮಂತ್ರಗಳಿವು; ಇವನ್ನು ಪ್ರತಿನಿತ್ಯ ಪಠಿಸಿ
ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಅಂಕ ಗಳಿಸಬೇಕು ಎಂದರೆ ಏಕಾಗ್ರತೆ ಹಾಗೂ ಜ್ಞಾನ ಸಂಪಾದನೆ ಅತಿ ಮುಖ್ಯ. ವಿದ್ಯಾರ್ಥಿಗಳಲ್ಲಿ ಗಮನಶಕ್ತಿ ಹೆಚ್ಚಿ, ಓದಿನ ಮೇಲೆ ಆಸಕ್ತಿ ಮೂಡಲು ಕೆಲವು ಮಂತ್ರಗಳು ಸಹಾಯ ಮಾಡುತ್ತವೆ. ಅಂತಹ ಆರು ಪ್ರಸಿದ್ಧ ಮಂತ್ರಗಳ ಬಗ್ಗೆ ಇಲ್ಲಿದೆ ವಿವರ.
ಇದು ಸ್ಪರ್ಧಾ ಜಗತ್ತು, ಇಲ್ಲಿ ಎಲ್ಲವೂ ಸ್ಪರ್ಧೆಯೇ. ಇತ್ತೀಚಿನ ದಿನಗಳಲ್ಲಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಸಿಲುಕಿಕೊಂಡಿರುವುದು ವಿದ್ಯಾರ್ಥಿಗಳ ಎನ್ನಬಹುದು. ಉತ್ತಮ ಅಂಕ ಪಡೆಯಬೇಕು ಎಂಬ ರೇಸ್ನಲ್ಲಿರುವ ಮಕ್ಕಳು ಆಗಾಗ ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳಬಹುದು ಅಥವಾ ಈ ಸ್ಪರ್ಧಾತ್ಮಕ ಜಗತ್ತು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಬಹುದು. ಹೀಗಾಗಿ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆಯೂ ಪೋಷಕರು ಹೆಚ್ಚು ಗಮನ ಹರಿಸಬೇಕು.
ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿ ಓದಿನಲ್ಲಿ ಆಸಕ್ತಿ ಮೂಡಿಸಲು ಕೆಲವು ಮಂತ್ರಗಳು ಸಹಾಯ ಮಾಡುತ್ತವೆ. ಆ ಮಂತ್ರಗಳನ್ನು ಪ್ರತಿನಿತ್ಯ ಪಠಿಸುವುದರಿಂದ ಹಲವು ಉಪಯೋಗಗಳಿವೆ. ಅಂತಹ ಮಂತ್ರಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಓಂ
ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿರುವ ಒಂದು ಸರಳ ಮಂತ್ರವೆಂದರೆ ಅದು ‘ಓಂ’. ಓಂ ಎಂಬ ಪದದಿಂದ ಹೊರಡುವ ತರಂಗಗಳು ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಪದಕ್ಕೆ ಸನಾತನ ಧರ್ಮದಲ್ಲಿ ಬಹಳ ಮಹತ್ವವವಿದೆ. ಓಂ ಮಂತ್ರ ಪಠಿಸುವುದರಿಂದ ಮಾನಸಿಕ ಶಾಂತಿ ವೃದ್ಧಿಯಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು, ಒತ್ತಡದ ಜೀವನಶೈಲಿಯಿಂದ ವಿಶ್ರಾಂತಿ ಹೊಂದಲು ಇವೆಲ್ಲದ್ದಕ್ಕೂ ಓಂ ಮಂತ್ರ ಪಠಿಸುವುದೇ ಪರಿಹಾರ. ಯಾವ ವಿದ್ಯಾರ್ಥಿಯು ಪ್ರತಿನಿತ್ಯ ಓದುವ ಮುನ್ನ ಓಂ ಎಂದು ಪಠಣ ಮಾಡುತ್ತಾನೋ ಆತನಿಗೆ ಏಕಾಗ್ರತೆ ಹೆಚ್ಚುವುದರ ಜೊತೆಯಲ್ಲಿ ಓದಿನ ಮೇಲೆ ಅತಿಯಾದ ಆಸಕ್ತಿ ಮೂಡಲಿದೆ.
ಮಹಾಮೃತ್ಯುಂಜಯ ಮಂತ್ರ
ಮಂತ್ರ: ಓಂ ತ್ರಯಂಬಕಂ ಯಜಾಮಹೇ, ಸುಗಂಧಿಂ ಪುಷ್ಟಿವರ್ಧನಂ, ಉರ್ವಾರುಕಮಿವ ಬಂಧನಾನ್, ಮೃತ್ಯೋರ್ಮುಕ್ಷೀಯ ಮಾಮೃತಾತ್
ಮಹಾಮೃತ್ಯುಂಜಯ ಮಂತ್ರವನ್ನು ಹಿಂದೂ ಧರ್ಮದ ಅತ್ಯಂತ ಶಕ್ತಿಶಾಲಿ ಮಂತ್ರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಈ ಮಂತ್ರವು ನಿಮಗೆ ಮಾನಸಿಕವಾಗಿ ಸ್ಥಿಮಿತವನ್ನು ನೀಡಲು ಹಾಗೂ ಆಂತರಿಕವಾಗಿ ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಲ್ಲದೇ ನಿಮ್ಮೊಳಗಿನ ಭಯವನ್ನು ಹೋಗಲಾಡಿಸಲು ಮತ್ತು ನಿಮ್ಮೆದುರು ಇರುವ ಸವಾಲುಗಳನ್ನು ಎದುರಿಸಲು ಈ ಮಂತ್ರದ ಪಠಣವು ನಿಮಗೆ ಶಕ್ತಿಯನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ವಿದ್ಯಾರ್ಥಿಗಳು ಈ ಮಂತ್ರವನ್ನು ಪಠಿಸುವ ಮೂಲಕ ತಮ್ಮೆದುರು ಇರುವ ಸವಾಲನ್ನು ಎದುರಿಸಲು ಶಕ್ತರಾಗುತ್ತಾರೆ.
ಗಣೇಶ ಮಂತ್ರ
ಮಂತ್ರ: ಓಂ ಗಂಗಣಪತಯೇ ನಮಃ
ಗಣೇಶ ದೇವರನ್ನು ವಿಘ್ನ ನಿವಾರಕ ಎಂದೇ ಕರೆಯಲಾಗುತ್ತದೆ. ಗಣೇಶನ ಮಂತ್ರವನ್ನು ಪಠಿಸುವುದರಿಂದ ವಿದ್ಯಾರ್ಥಿಗಳು ಗಣಪತಿಯ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲದೇ ತಮ್ಮೆದುರು ಇರುವ ಎಲ್ಲಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಇದರಿಂದ ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.
ಸರಸ್ವತಿ ಮಂತ್ರ
ಮಂತ್ರ: ಓಂ ಮಹಾ ಸರಸ್ವತೇ ನಮಃ
ಸರಸ್ವತಿ ದೇವಿಯನ್ನು ವಿದ್ಯೆಯ ಅಧಿಪತಿ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಪುಸ್ತಕಗಳನ್ನು ಸರಸ್ವತಿಗೆ ಹೋಲಿಸಲಾಗುತ್ತದೆ. ಹೀಗಾಗಿ ಯಾರ ಮೇಲೆ ಸರಸ್ವತಿಯ ಕೃಪೆ ಇರುತ್ತದೆಯೋ ಅವರಿಗೆ ಓದು ಬರಹ ಕೂಡ ಚೆನ್ನಾಗಿಯೇ ಒಲಿದಿರುತ್ತದೆ. ಈ ಮಂತ್ರವನ್ನು ಪಠಿಸುವ ಮೂಲಕ ಆಕೆಯಿಂದ ಶೈಕ್ಷಣಿಕ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದಂತೆ ಆಶಿರ್ವದಿಸು ಎಂದು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಬಹುದಾಗಿದೆ.
ಗಾಯತ್ರಿ ಮಂತ್ರ
ಮಂತ್ರ: ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್
ಋಗ್ವೇದ ಕಾಲದಿಂದ ಬಂದಿರುವ ಗಾಯತ್ರಿ ಮಂತ್ರವು ಗಾಯತ್ರಿ ದೇವಿಗೆ ಸಮರ್ಪಿತವಾದ ಮಂತ್ರವಾಗಿದೆ. ಈ ಮಂತ್ರ ಕೂಡ ಅತ್ಯಂತ ಶಕ್ತಿಶಾಲಿಯಾಗಿದ್ದು ಒಬ್ಬ ವ್ಯಕ್ತಿಯ ಜೀವನದಲ್ಲಿರುವ ಅಂಧಕಾರಗಳನ್ನು ಹೋಗಲಾಡಿಸಿ ಬೆಳಕಿಗೆ ಕರೆದುಕೊಂಡು ಬರುತ್ತದೆ. ಈ ಮಂತ್ರವನ್ನು ಪಠಿಸುವ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟತೆ ಗಳಿಸಲು ಸಾಧ್ಯ.
ಹಂಸವಾಹಿನಿ ಮಂತ್ರ
ಮಂತ್ರ: ಓಂ ಸರಸ್ವತಿ ಮಾಯಾ ದ್ರಿಷ್ಟ್ವಾ, ವೀಣಾ ಪುಸ್ತಕ ಧಾರಿಣಿಂ, ಹಂಸ ವಾಹಿನಿ ಸಂಯುಕ್ತ ಮಾ ವಿದ್ಯಾದಾನ ಕರೋತು ಮೆ ಓಂ
ಸಂಸ್ಕೃತದಲ್ಲಿರುವ ಈ ಸರಸ್ವತಿಯ ದೇವಿಯ ಮಂತ್ರವು ಶಾರದಾ ಮಾತೆಯಲ್ಲಿ ಹೆಚ್ಚಿನ ಜ್ಞಾನವನ್ನು ಕರುಣಿಸು ಎಂದು ಕೇಳಿಕೊಳ್ಳುವುದಾಗಿದೆ. ಈ ಮಂತ್ರವು ಸರಸ್ವತಿ ದೇವಿಯು ತನ್ನ ಕೈಗಳಲ್ಲಿ ವೀಣೆ, ಧರ್ಮಗ್ರಂಥಗಳನ್ನು ಹಿಡಿದು ಕುಳಿತಿದ್ದಾಳೆ ಎಂಬುದನ್ನು ತಿಳಿಸುತ್ತದೆ. ಈ ಮಂತ್ರವನ್ನು ಪಠಿಸುವ ಮೂಲಕ ವಿದ್ಯಾರ್ಥಿಗಳು ತಾಯಿ ಶಾರದೆಯ ಬಳಿಯಲ್ಲಿ ನಮಗೆ ಓದು ಹಾಗೂ ಜ್ಞಾನವನ್ನು ವರವಾಗಿ ನೀಡು ಎಂದು ಕೇಳಿಕೊಳ್ಳಬಹುದಾಗಿದೆ.
ಗಮನಿಸಿ: ಇದು ಪ್ರಚಲಿತ ನಂಬಿಕೆಗಳು ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ.
(This copy first appeared in Hindustan Times Kannada website. To read more like this please logon to kannada.hindustantimes.com )
ಇದನ್ನೂ ಓದಿ: Education News: ಸ್ಪರ್ಧಾ ಜಗತ್ತಿನ ಒತ್ತಡ, ಹೆಚ್ಚಿದ ಆತ್ಮಹತ್ಯೆ; ಹೆತ್ತವರಿಗೆ ವಿದ್ಯಾರ್ಥಿನಿಯ ಕಾಲ್ಪನಿಕ ಪತ್ರ