Karnataka Board Exam: ಮಾನಸಿಕವಾಗಿ ಕಿರಿಕಿರಿಯಾಗುತ್ತಿದೆ; ಬೋರ್ಡ್‌ ಪರೀಕ್ಷೆ ಗೊಂದಲದ ವಿಚಾರವಾಗಿ ಪೋಷಕರ ಅಳಲು
ಕನ್ನಡ ಸುದ್ದಿ  /  ಜೀವನಶೈಲಿ  /  Karnataka Board Exam: ಮಾನಸಿಕವಾಗಿ ಕಿರಿಕಿರಿಯಾಗುತ್ತಿದೆ; ಬೋರ್ಡ್‌ ಪರೀಕ್ಷೆ ಗೊಂದಲದ ವಿಚಾರವಾಗಿ ಪೋಷಕರ ಅಳಲು

Karnataka Board Exam: ಮಾನಸಿಕವಾಗಿ ಕಿರಿಕಿರಿಯಾಗುತ್ತಿದೆ; ಬೋರ್ಡ್‌ ಪರೀಕ್ಷೆ ಗೊಂದಲದ ವಿಚಾರವಾಗಿ ಪೋಷಕರ ಅಳಲು

Education News: ಬೇಸಿಗೆ ಕಾಲ ಹತ್ತಿರ ಬರುತ್ತಿದ್ದಂತೆ ಮಕ್ಕಳು ಪರೀಕ್ಷೆಗಳನ್ನು ಮುಗಿಸಿ ರಜೆಗಾಗಿ ಅಜ್ಜಿ ತಾತನ ಮನೆಗೆ ಹೋಗುವುದು ನೆನಪಾಗುತ್ತದೆ. ಆದರೆ ಈಗ ಶಿಕ್ಷಣ ವ್ಯವಸ್ಥೆ ಬಹಳ ಬದಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಬೋರ್ಡ್‌ ಪರೀಕ್ಷೆ ಗೊಂದಲ ತಾರಕಕ್ಕೆ ಏರಿದೆ. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಕೋರ್ಟ್‌ ತೀರ್ಪಿಗಾಗಿ ಕಾಯುತ್ತಿದ್ದಾರೆ.

ಬೋರ್ಡ್‌ ಪರೀಕ್ಷೆ ಗೊಂದಲದ ವಿಚಾರವಾಗಿ ಪೋಷಕರ ಅಳಲು
ಬೋರ್ಡ್‌ ಪರೀಕ್ಷೆ ಗೊಂದಲದ ವಿಚಾರವಾಗಿ ಪೋಷಕರ ಅಳಲು (PC: Unsplash)

Education News: 5, 8, 9 ಹಾಗೂ 11ನೇ ತರಗತಿ ಮಕ್ಕಳಿಗೆ ಬೋರ್ಡ್‌ ಎಕ್ಸಾಂ ನಡೆಸುವ ವಿಚಾರದ ಬಗ್ಗೆ ಸರ್ಕಾರ ಹಾಗೂ ಶಾಲೆಗಳ ನಡುವಿನ ತಕರಾರು ಕೋರ್ಟ್‌ ಮೆಟ್ಟಿಲೇರಿದೆ. ಬೋರ್ಡ್ ಪರೀಕ್ಷೆಗಳ ರದ್ದುಗೊಳಿಸಿದ್ದರ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಕಾಯ್ದಿರಿಸಿದೆ. ಇದು ಶಿಕ್ಷಕರು, ವಿದ್ಯಾರ್ಥಿಗಳಿಗೆ ಮಾತ್ರವಲ್ಲ ನಮಗೂ ಬಹಳ ಸಮಸ್ಯೆ ಆಗುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಬೋರ್ಡ್‌ ಪರೀಕ್ಷೆ ನಡೆಸುವ ಬಗ್ಗೆ ನಮಗೆ ತಕರಾರಿಲ್ಲ. ಆದರೆ ಇದೀಗ ಕೋರ್ಟ್‌ ತೀರ್ಪು ವಿಳಂಬವಾಗುತ್ತಿದ್ದು, ಇದರಿಂದ ಮಕ್ಕಳು ಮಾತ್ರವಲ್ಲ, ಪೋಷಕರು ಹಿಂಸೆ ಅನುಭವಿಸುವಂತಾಗಿದೆ. ಓದುವ ವಿಚಾರದಲ್ಲಿ ಮೊದಲೇ ಮಕ್ಕಳಿಗೆ ಹೊಡೆದು ಬಡಿದು ಮಾಡಬೇಕು. ಈಗಂತೂ ಬೋರ್ಡ್‌ ಪರೀಕ್ಷೆ ಯಾವಾಗ ನಡೆಯುತ್ತದೆ ಎನ್ನುವ ಬಗ್ಗೆ ಸ್ವಷ್ಟನೆ ಸಿಗುತ್ತಿಲ್ಲ. ಕೋರ್ಟ್‌ ಆದಷ್ಟು ಬೇಗ ತೀರ್ಪು ನೀಡಿ ಗೊಂದಲಗಳಿಗೆ ಪರಿಹಾರ ನೀಡಬೇಕು.

-ಜಯರಾಮ್‌, 5 ತರಗತಿ ಮಗುವಿನ ತಂದೆ-ಕೋಲಾರ

ಕರ್ನಾಟಕ ಬೋರ್ಡ್‌ ಎಕ್ಸಾಂ ಬಗ್ಗೆ ಕೋರ್ಟ್‌ ತೀರ್ಪು ವಿಳಂಬವಾಗುತ್ತಿದ್ದು, ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಎದುರಾಗಲಿದೆ, ಮಕ್ಕಳು ಪುಸ್ತಕಗಳನ್ನು ಬದಿಗೆ ಸರಿಸಿ, ಓದುವ ಗೋಚಿಗೆ ಹೋಗುತ್ತಿಲ್ಲ. ಪರೀಕ್ಷೆಗಳು ಇಂದು, ನಾಳೆ ಎಂದು ಮುಂದಕ್ಕೆ ಹೋಗುತ್ತಲೇ ಇದೆ. ಕೋರ್ಟ್‌ ತೀರ್ಪು ಬರದೇ ಪರೀಕ್ಷೆ ನಡೆಸಲು ಸಾಧ್ಯವಿಲ್ಲದ ಕಾರಣ ನಮ್ಮ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಮಕ್ಕಳ ಭವಿಷ್ಯದ ಜೊತೆ ಆಟವಾಡುವುದು ತಪ್ಪು. ಇದರಿಂದ ಮುಂದಿನ ತರಗತಿಗಳಿಗೂ ತೊಂದರೆ ಆಗಬಹುದು. ಅಲ್ಲದೇ ಕಷ್ಟಪಟ್ಟು ಪರೀಕ್ಷೆ ಓದಿದ್ದೆಲ್ಲವನ್ನೂ ಅವರು ಮರೆಯುತ್ತಿದ್ದಾರೆ. ಹೀಗೆ ಆದರೆ ಪರೀಕ್ಷೆಯಲ್ಲಿ ಪಾಸ್‌ ಆಗುವುದು ಕಷ್ಟ. ಕೋರ್ಟ್‌ ತೀರ್ಪಿಗೆ ನಾವು ಉಸಿರು ಬಿಗಿ ಹಿಡಿದು ಕಾಯುವ ಪರಿಸ್ಥಿತಿ ಎದುರಾಗಿದೆ.

-ಶೈಲಜಾ, 9ನೇ ತರಗತಿ ವಿದ್ಯಾರ್ಥಿಯ ತಾಯಿ -ಉಡುಪಿ

ಕೋವಿಡ್‌ ಸಮಯದಲ್ಲಿ ಮಕ್ಳಳು ಸರಿಯಾದ ಪಾಠ ಇಲ್ಲದೆ ಸಮಸ್ಯೆ ಅನುಭವಿಸಿದ್ದರು. ಅದೆಲ್ಲಾ ಕಳೆದು ಎಲ್ಲಾ ಸರಿ ಆಗುತ್ತಿದೆ ಎಂದರೆ ಪರೀಕ್ಷೆ ವಿಚಾರದಲ್ಲಿ ಒಂದಲ್ಲಾ ಒಂದು ಸಮಸ್ಯೆ ತಲೆದೋರುತ್ತಲೇ ಇದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಈ ರೀತಿ ಎಂದಿಗೂ ಸಮಸ್ಯೆಗಳಾಗಬಾರದು. ಇಲ್ಲಿ ಶಿಕ್ಷಕರು, ಮಕ್ಳಳಿಗೆ ಮಾತ್ರವಲ್ಲ ಪೋಷಕರೂ ಕಳವಳ ವ್ಯಕ್ತಪಡಿಸುವಂತೆ ಆಗಿದೆ. ಪ್ರತಿದಿನವೂ ಇದೇ ವಿಚಾರಕ್ಕೆ ಆಂತಕ ಪಡುವಂತೆ ಆಗಿದೆ. ಒಮ್ಮೆ ಮಕ್ಳಳ ಪರೀಕ್ಷೆ ಮುಗಿದರೆ ಸ್ವಲ್ಪ ದಿನಗಳು ನೆಮ್ಮದಿಯಿಂದ ಕಾಲ ಕಳೆಯಬಹುದು. ನ್ಯಾಯಾಲಯ ತೀರ್ಪು ವಿಳಂಬ ಮಾಡದೆ ಆದಷ್ಟು ಬೇಗ ಒಂದು ನಿರ್ಧಾರಕ್ಕೆ ಬಂದು ಎಲ್ಲಾ ಗೊಂದಲಗಳಿಗೆ ಫುಲ್‌ ಸ್ಟಾಪ್‌ ಇಡಬೇಕು.

-ಪದ್ಮಜಾ, 8ನೇ ತರಗತಿ ವಿದ್ಯಾರ್ಥಿನಿಯ ತಾಯಿ-ಮೈಸೂರು

ಶಿಕ್ಷಣ ಎನ್ನುವುದು ಮಕ್ಕಳಿಗೆ ಎಷ್ಟು ಅಗತ್ಯ ಅನ್ನೋದು ಗೊತ್ತಿರುವ ವಿಚಾರ. ಅಂತದ್ದರಲ್ಲಿ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಏಕೆ ಬಂದಿದೆ? ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆ ನಡೆಸುವ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ? ಈ ವೇಳೆಗಾಗಲೇ ಪರೀಕ್ಷೆ ಮುಗಿಯಬೇಕಿತ್ತು. ನಮಗೆಲ್ಲಾ ಬೋರ್ಡ್‌ ಪರೀಕ್ಷೆ ಇರಲಿಲ್ಲ. ಆದರೂ ಮಕ್ಕಳಿಗೆ ಓದು ಎಷ್ಟು ಮುಖ್ಯವೋ ರಜೆಯೂ ಅಷ್ಟೇ ಮುಖ್ಯ, ಪರೀಕ್ಷೆ ಮುಗಿಸಿ ರಜೆಯನ್ನು ಎಂಜಾಯ್‌ ಮಾಡಬೇಕು ಎಂದುಕೊಂಡಿದ್ದ ಮಕ್ಕಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದು ಮಕ್ಕಳಿಗೆ ಮಾತ್ರವಲ್ಲ ನಮಗೂ ಒಂದು ರೀತಿಯ ಮಾನಸಿಕ ಸಮಸ್ಯೆ, ದಯವಿಟ್ಟು ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಈ ರೀತಿ ಸಮಯ ವ್ಯರ್ಥ ಮಾಡಬೇಡಿ. ಆದಷ್ಟು ಬೇಗ ತೀರ್ಪು ಪ್ರಕಟಿಸಿ.

Whats_app_banner