ಅಮೆರಿಕದಲ್ಲಿ ಓದೋಕೆ ವರ್ಷಕ್ಕೆ ಎಷ್ಟು ಲಕ್ಷ ಖರ್ಚಾಗುತ್ತೆ; ಫೀಸ್, ವಾಸ್ತವ್ಯಕ್ಕೆ ಯುಎಸ್‌ನ ಯಾವ ರಾಜ್ಯ ಉತ್ತಮ
ಅಮೆರಿಕದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ಹಲವು ವಿದ್ಯಾರ್ಥಿಗಳ ಕನಸು. ಆದರೆ ಅಲ್ಲಿನ ಜೀವನಮಟ್ಟ, ಶೈಕ್ಷಣಿಕ ವೆಚ್ಚ ಭರಿಸುವುದು ಒಂದು ಸವಾಲು. ಯುಎಸ್‌ನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದಿದ್ದರೆ, ವರ್ಷಕ್ಕೆ ಎಷ್ಟು ಖರ್ಚಾಗುತ್ತದೆ? ಈ ಲೆಕ್ಕಾಚಾರ ಇಲ್ಲಿದೆ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಶಿಕ್ಷಣ ಹಾಗೂ ಉದ್ಯೋಗ ಪಡೆಯುವುದೆಂದರೆ ಭಾರತೀಯರಿಗೆ ಒಂದು ಪ್ರತಿಷ್ಠೆ. ಗುಣಮಟ್ಟದ ಶಿಕ್ಷಣ ಉದ್ದೇಶದಿಂದಲೂ ಹಲವು ಭಾರತೀಯರು ಯುಎಸ್‌ನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶಗಳು ಹೆಚ್ಚು. ಪ್ರತಿವರ್ಷ ಹಲವಾರು ವಿದ್ಯಾರ್ಥಿಗಳು ಅಮೆರಿಕ ಪ್ರಯಾಣಿಸಿ ಅಲ್ಲಿನ ವಿಶ್ವವಿದ್ಯಾನಿಲಯಗಳಿಗೆ ಸೇರಿಕೊಳ್ಳುತ್ತಾರೆ. ಮಧ್ಯಮ ವರ್ಗದ ಹಲವರಿಗೆ ಇಲ್ಲಿ ಶಿಕ್ಷಣ ಪಡೆಯುವ ಆಸೆ ಕನಸುಗಳಿರುತ್ತವೆ. ಆದರೆ, ಆರ್ಥಿಕ ಸಾಮರ್ಥ್ಯ ಉತ್ತಮವಾಗಿರುವುದಿಲ್ಲ. ಹೀಗಾಗಿ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಅಮೆರಿಕ ಹಾರುವ ಹಣಕಾಸಿನ ಯೋಜನೆಯನ್ನು ಸಮರ್ಪಕವಾಗಿ ಮಾಡಿಕೊಳ್ಳುವುದು ಜಾಣತನ. ಭಾರತ ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಯುಎಸ್ ವಿಶ್ವವಿದ್ಯಾನಿಲಯದಲ್ಲಿ ಶುಲ್ಕ ಹೇಗಿರುತ್ತವೆ, ವಾಸ್ತವ್ಯ ಹೂಡಲು ಎಷ್ಟು ಖರ್ಚಾಗುತ್ತದೆ, ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ಅಮೆರಿಕದಲ್ಲಿ ಹಲವಾರು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳಿವೆ. ಉನ್ನತ ಶಿಕ್ಷಣಕ್ಕೆ ಬೋಧನಾ ಶುಲ್ಕವೇ ಪ್ರಾಥಮಿಕ ವೆಚ್ಚವಾಗಿದೆ. ಸಾಮಾನ್ಯವಾಗಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಪಬ್ಲಿಕ್ ಅಥವಾ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಬೋಧನಾ ವೆಚ್ಚ ಕಡಿಮೆ ಇರುತ್ತವೆ. ಉನ್ನತ ಶಿಕ್ಷಣದ ವೆಚ್ಚವು ನೀವು ಆಯ್ಕೆ ಮಾಡುವ ಪದವಿ ಮತ್ತು ಆಯಾ ಶಿಕ್ಷಣ ಸಂಸ್ಥೆಯನ್ನು ಆಧರಿಸಿ ಬದಲಾಗುತ್ತದೆ.
ಅಂದಾಜು ಲೆಕ್ಕಾಚಾರದ ಪ್ರಕಾರ ಹೇಳುವುದಾದರೆ, ಭಾರತೀಯ ವಿದ್ಯಾರ್ಥಿಗಳಿಗೆ ಯುಎಸ್‌ನಲ್ಲಿ ಅಧ್ಯಯನ ಮಾಡಲು ವರ್ಷವೊಂದಕ್ಕೆ ಸಾಮಾನ್ಯವಾಗಿ 35,000 ಡಾಲರ್‌ನಿಂದ 85,000 ಡಾಲರ್ ಬೇಕಾಗುತ್ತದೆ. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ 29,28,000ದಿಂದ 70,66,00ವರೆಗೆ ಖರ್ಚು ಆಗಬಹುದು. ಈ ಖರ್ಚು ಕನಿಷ್ಠದಿಂದ ಗರಿಷ್ಠ ಲೆಕ್ಕವಾಗಿದ್ದು, ನೀವು ಆಯ್ಕೆ ಮಾಡುವ ರಾಜ್ಯ, ಸಂಸ್ಥೆಯ ಪ್ರಕಾರ (ಸರ್ಕಾರಿ ಅಥವಾ ಖಾಸಗಿ) ಮತ್ತು ನಿರ್ದಿಷ್ಠ ಸ್ಥಳವನ್ನು ಅವಲಂಬಿಸಿದೆ.
ಸಾರ್ವಜನಿಕ ಅಥವಾ ಸರ್ಕಾರಿ ವಿವಿಗಳಲ್ಲಿ ಆಗುವ ಅಂದಾಜು ವೆಚ್ಚ
ಪದವಿ ಮಟ್ಟ | ಸರಾಸರಿ ಬೋಧನಾ ಶುಲ್ಕ (ರೂಪಾಯಿಗಳಲ್ಲಿ) |
ಪದವಿಪೂರ್ವ | ವರ್ಷಕ್ಕೆ 16,62,700- 29,09,700 |
ಪದವೀಧರ | ವರ್ಷಕ್ಕೆ 20,78,300- 37,41,000 |
ಸ್ನಾತಕೋತ್ತರ ಪದವೀಧರ | ವರ್ಷಕ್ಕೆ 24,94,000- 41,56,700 |
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ವೆಚ್ಚ
ಪದವಿ ಮಟ್ಟ | ಸರಾಸರಿ ಬೋಧನಾ ಶುಲ್ಕ (ರೂಪಾಯಿಗಳಲ್ಲಿ) |
ಪದವಿಪೂರ್ವ | ವರ್ಷಕ್ಕೆ 24,90,000 - 49,80,000 |
ಪದವೀಧರ | ವರ್ಷಕ್ಕೆ 29,05,000 - 58,10,000 |
ಸ್ನಾತಕೋತ್ತರ ಪದವಿ | ವರ್ಷಕ್ಕೆ 33,20,000 - 62,25,000 |
ಯುಎಸ್‌ಎ ವಿವಿಧ ರಾಜ್ಯಗಳ ಜೀವನ ವೆಚ್ಚ
ರಾಜ್ಯ | ವೆಚ್ಚ (ಪ್ರತಿ ತಿಂಗಳು/ರೂ) |
ಕ್ಯಾಲಿಫೋರ್ನಿಯಾ | 205,000 - 287,000 |
ನ್ಯೂಯಾರ್ಕ್ | 229,600 - 311,600 |
ಟೆಕ್ಸಾಸ್ | 123,000 - 205,000 |
ಫ್ಲೋರಿಡಾ | 139,400 - 221,400 |
ಇಲಿನಾಯ್ಸ್ | 147,600 - 229,600 |
ಮ್ಯಾಸಚೂಸೆಟ್ಸ್ | 188,600 - 270,600 |
ಪೆನ್ಸಿಲ್ವೇನಿಯಾ | 131,200 - 213,200 |
ವಾಷಿಂಗ್ಟನ್ | 164,000 - 246,000 |
ಅಮೆರಿಕದಲ್ಲಿ ಹಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿವೆ. ಜಾಗತಿಕ ಮನ್ನಣೆ ಗಳಿಸಿರುವ ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುವುದು ವಿದ್ಯಾರ್ಥಿಗಳಿಗೂ ಒಂದು ಪ್ರತಿಷ್ಠೆಯಾಗಿದೆ.