School Admission 2025: ಮಗುವಿಗೆ ಸೂಕ್ತ ಶಾಲೆ ಆಯ್ಕೆ ಮಾಡುವ ಮುನ್ನ ಸ್ಕೂಲ್‌ನಲ್ಲಿ ಈ ಚಟುವಟಿಕೆಗಳು ಇರುವುದೇ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  School Admission 2025: ಮಗುವಿಗೆ ಸೂಕ್ತ ಶಾಲೆ ಆಯ್ಕೆ ಮಾಡುವ ಮುನ್ನ ಸ್ಕೂಲ್‌ನಲ್ಲಿ ಈ ಚಟುವಟಿಕೆಗಳು ಇರುವುದೇ ಗಮನಿಸಿ

School Admission 2025: ಮಗುವಿಗೆ ಸೂಕ್ತ ಶಾಲೆ ಆಯ್ಕೆ ಮಾಡುವ ಮುನ್ನ ಸ್ಕೂಲ್‌ನಲ್ಲಿ ಈ ಚಟುವಟಿಕೆಗಳು ಇರುವುದೇ ಗಮನಿಸಿ

School Admission 2025: ಈಗಾಗಲೇ ವಿವಿಧ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಅಡ್ಮಿಷನ್‌ ಆರಂಭವಾಗಿದೆ. ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಮೊದಲು ಅಲ್ಲಿನ ಕಲಿಕಾ ವಿಷಯಗಳ ಜತೆಗೆ ಇತರೆ ಅಂಶಗಳ ಕಡೆಗೂ ಗಮನ ನೀಡಬೇಕು. ಶಿಕ್ಷಣ ಸಂಸ್ಥೆಯು ನೀಡುವ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಗಮನ ನೀಡಬೇಕು.

ಮಗುವಿಗೆ ಸೂಕ್ತ ಶಾಲೆ ಆಯ್ಕೆ ಮಾಡುವ ಮುನ್ನ ಸ್ಕೂಲ್‌ನಲ್ಲಿ ಈ ಚಟುವಟಿಕೆಗಳು ಇವೆಯೇ ಗಮನಿಸಿ
ಮಗುವಿಗೆ ಸೂಕ್ತ ಶಾಲೆ ಆಯ್ಕೆ ಮಾಡುವ ಮುನ್ನ ಸ್ಕೂಲ್‌ನಲ್ಲಿ ಈ ಚಟುವಟಿಕೆಗಳು ಇವೆಯೇ ಗಮನಿಸಿ

School Admission 2025: ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿರುವ, ಸಣ್ಣ ಪಟ್ಟಣಗಳಲ್ಲಿರುವ ಅಥವಾ ಊರುಗಳಲ್ಲಿ ಇರುವ ಸ್ಟೇಟ್‌, ಸಿಬಿಎಸ್‌ಇ, ಐಸಿಎಸ್‌ಇ ಸ್ಕೂಲ್‌ಗಳಿಗೆ ಅಡ್ಮಿಷನ್‌ ಈಗಾಗಲೇ ಆರಂಭವಾಗಿದೆ. ನಿಮ್ಮ ಮಗುವಿಗೆ ಶಾಲೆಗೆ ದಾಖಲಾಗುವ ವಯೋಮಿತಿಯಾಗಿದ್ದರೆ ಈಗಾಗಲೇ ನೀವು ಹಲವು ಶಾಲೆಗಳಿಗೆ ಭೇಟಿ ನೀಡಿರುತ್ತೀರಿ. ಕೆಲವು ಸ್ಕೂಲ್‌ಗಳು ಫೀಸ್‌ ನಿಮಗೆ ಜಾಸ್ತಿ ಅನಿಸಿರಬಹುದು. ಫೀಸ್‌ ಹೆಚ್ಚಿದ್ದರೂ ಓಕೆ, ಅಲ್ಲಿನ ವ್ಯವಸ್ಥೆ ಸರಿ ಇದೆಯೇ ಎಂದು ಗಮನಿಸಿದಾಗ ಕೆಲವೊಂದು ವಿಷಯಗಳು ನಿಮಗೆ ಇಷ್ಟವಾಗದೆ ಇರಬಹುದು. ಕೆಲವೊಮ್ಮೆ ಆ ಸ್ಕೂಲ್‌ನ ಬಗ್ಗೆ ಆನ್‌ಲೈನ್‌ ರಿವ್ಯೂಗಳನ್ನು ಓದಿದಾಗ ಅಂತಹ ಸ್ಕೂಲ್‌ಗೆ ಮಕ್ಕಳನ್ನು ದಾಖಲಿಸಲು ನಿಮಗೆ ಹಿಂಜರಿಕೆಯಾಗಿರಬಹುದು. ಈಗಾಗಲೇ ಮಕ್ಕಳನ್ನು ಶಾಲೆಗೆ ಸೇರಿಸುವ ಕುರಿತಂತೆ ಹೆತ್ತವರಿಗೆ ನೆರವಾಗುವ ಹಲವು ಸರಣಿ ಲೇಖನಗಳನ್ನು ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದೆ. ಈ ಲೇಖನದಲ್ಲಿ ಮಗುವನ್ನು ಶಾಲೆಗೆ ಸೇರಿಸುವಾಗ ಅಲ್ಲಿನ ಪಠ್ಯೇತರ ಚಟುವಟಿಕೆ ಕುರಿತು ಗಮನಿಸಬೇಕಾದ ಅಂಶಗಳನ್ನು ತಿಳಿಸಲಾಗಿದೆ.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶಾಲೆಯ ಸಾಧನೆ ಹೇಗಿದೆ?

ಕೆಲವೊಂದು ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಸೀಮಿತ ಅವಕಾಶ ಇರುತ್ತದೆ. ಸ್ಕೂಲ್‌ಡೇ ಒಂದು ಅದ್ಧೂರಿಯಾಗಿ ನಡೆಸಬಹುದು. ಬೇರೆ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ಇಲ್ಲದೆ ಇರಬಹುದು. ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಮುನ್ನ ಆ ಶಾಲೆಯ ಸಾಂಸ್ಕೃತಿಕ ಚಟುವಟಿಕೆ ಹೇಗೆ ಇದೆ ಎಂದು ಗಮನಿಸಿ. ಇದಕ್ಕೆ ಸಂಬಂಧಪಟ್ಟಂತೆ ಗೂಗಲ್‌ ರಿವ್ಯೂಗಳನ್ನು ನೋಡಬಹುದು. ಈಗಾಗಲೇ ಆ ಶಾಲೆಗೆ ಹೋಗುವ ಮಕ್ಕಳ ಹೆತ್ತವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಆ ಶಾಲೆಯ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಬಹುದು. ಇಷ್ಟು ಮಾತ್ರವಲ್ಲದೆ ಆ ಶಾಲೆಯ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಗಮನಿಸಬಹುದು. ಗಮನಿಸಿ, ಕೆಲವೊಂದು ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಡಿಮೆ ಅವಕಾಶ ಇರುತ್ತದೆ. ಕೆಲವೊಂದು ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೇ ಹೆಚ್ಚು ಇರುತ್ತವೆ. ಯಾವುದೂ ಕಡಿಮೆಯಾಗಬಾರದು ಮತ್ತು ಯಾವುದೂ ಅತಿಯಾಗಬಾರದು ಎನ್ನುವ ಅಂಶ ಗಮನಿಸಿ.

ನಿಮ್ಮ ಕುಟುಂಬದ ಪದ್ಧತಿಗೆ ಶಾಲೆ ಹೊಂದುತ್ತದೆಯೇ?

ಮಕ್ಕಳು ಬೆಳೆದ ವಾತಾವರಣಕ್ಕೂ ಆ ಶಾಲೆಯ ವಾತಾವರಣಕ್ಕೂ ಹೊಂದಾಣಿಕೆಯಾಗಬಹುದೇ ಎನ್ನುವುದನ್ನು ಗಮನಿಸಿ. ಕೆಲವೊಂದು ಶಾಲೆಗಳು ತುಂಬಾ ಆಧುನಿಕತೆ ಹೊಂದಿರಬಹುದು. ಅಲ್ಲಿಗೆ ದಾಖಲಾಗುವ ಬಹುತೇಕ ಮಕ್ಕಳು ಹೈವೆಲ್‌ನವರು ಆಗಿರಬಹುದು. ಇಂತಹ ಸಮಯದಲ್ಲಿ ನಿಮ್ಮ ಮಗುವಿನ ಮನಸ್ಥಿತಿ, ನಿಮ್ಮ ಕುಟುಂಬದ ಮನಸ್ಥಿತಿಗೆ ಹೊಂದಿಕೆಯಾಗುವುದೇ ಎಂದು ಪರಿಶೀಲಿಸಬಹುದು. ಇದೇ ರೀತಿ ಕೆಲವು ಶಾಲೆಗಳು ಸಾಂಪ್ರದಾಯಿಕ ವಿಚಾರಗಳಿಗೆ ಒತ್ತು ನೀಡುತ್ತವೆ. ಆಧುನಿಕತೆಯಿಂದ ದೂರ ಇರುತ್ತವೆ. ನಿಮ್ಮ ಮಗುವಿಗೆ ಎಂತಹ ಶಾಲೆ ಬೇಕು ಎಂದು ನಿರ್ಧರಿಸಿ ಮುಂದಡಿ ಇಡಿ.

ನಿಮ್ಮ ಮಗುವಿನ ಆಸಕ್ತಿ ಗಮನಿಸಿ

ನಿಮ್ಮ ಮಗುವಿನಲ್ಲಿ ಇರುವ ವಿಶೇಷ ಆಸಕ್ತಿಗಳನ್ನು ನೀವು ಗಮನಿಸಿರಬಹುದು. ಅಂತಹ ಆಸಕ್ತಿಗೆ ಪೂರಕವಾದ ಅಂಶಗಳು ಆ ಶಾಲೆಯಲ್ಲಿ ಇರುವುದೇ ಎಂದು ತಿಳಿದುಕೊಳ್ಳಿ. ಕಲಾ ಶಿಕ್ಷಕರು (ಆರ್ಟ್ ಕ್ರಾಫ್ಟ್) ಇದ್ದಾರೆಯೇ?, ಕರಾಟೆ ತರಬೇತಿ ಇದೆಯೇ, ಸ್ವಿಮ್ಮಿಂಗ್‌ ಆಯ್ಕೆಗಳು ಇವೆಯೇ, ಚರ್ಚಾ ಸ್ಪರ್ಧೆಗಳು ಹೆಚ್ಚು ನಡೆಯುತ್ತವೆಯೇ? ಇತ್ಯಾದಿ ಹಲವು ಅಂಶಗಳನ್ನು ತಿಳಿದುಕೊಂಡು ಮುಂದುವರೆಯಿರಿ.

ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳು

ಕೆಲವು ಶಾಲೆಗಳು ಕೇವಲ ದೈಹಿಕ ಚಟುವಟಿಕೆಗೆ ಆದ್ಯತೆ ನೀಡಬಹುದು. ಇನ್ನು ಕೆಲವು ಶಾಲೆಗಳು ಯೋಗ ಇತ್ಯಾದಿ ಮಾನಸಿಕ ಆರೋಗ್ಯ ಉತ್ತಮಗೊಳ್ಳುವಂತಹ ಚಟುವಟಿಕೆಗೆ ಆದ್ಯತೆ ನೀಡಬಹುದು. ಇವೆರಡು ಸಮಪ್ರಮಾಣದಲ್ಲಿ ಇರುವಂತಹ ಚಟುವಟಿಕೆ ಇರುವಲ್ಲಿಗೆ ಮಕ್ಕಳನ್ನು ಸೇರಿಸುವುದು ಉತ್ತಮ.

ರಿಸರ್ಚ್‌ ಮಾಡಿ

ಶಾಲೆಗೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನವರು ತಿಳಿಸಿದ ಮಾಹಿತಿಯನ್ನಷ್ಟೇ ನಂಬಬೇಡಿ. ಆ ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆ ಕುರಿತು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿ. ಬಹುತೇಕ ಶಾಲೆಗಳು ಈಗ ಮನಿಮೈಂಡೆಡ್‌ ಆಗಿವೆ. ಹೀಗಾಗಿ, ತುಸು ಹೆಚ್ಚೇ ಎಚ್ಚರವಹಿಸಿ ಮಕ್ಕಳಿಗೆ ಸೂಕ್ತ ಶಾಲೆ ಆಯ್ಕೆ ಮಾಡಿ.

Whats_app_banner