ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ತೆಗೆಯುವ ಜತೆ ಜಗತ್ತು ಎದುರಿಸಲು ಸಿದ್ಧವಾದರಷ್ಟೇ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ - ಮನದ ಮಾತು
ಭವ್ಯಾ ವಿಶ್ವನಾಥ್ ಬರಹ: ಶಿಕ್ಷಕರು ಹಾಗೂ ಪೋಷಕರು ಮಕ್ಕಳು ಶೇ 95 ಅಂಕ ಗಳಿಸುವುದೇ ಯಶಸ್ಸು ಎಂದು ಭಾವಿಸುವುದರ ಬದಲು, ಅವರು ಜಗತ್ತನ್ನು ಎದುರಿಸಲು ನಿಜವಾಗಿಯೂ ಸಿದ್ಧರಾಗಿದ್ದಾರಾ ಎಂದು ತಿಳಿದುಕೊಳ್ಳಿ. ಆಗ ಆರೋಗ್ಯಕರ ಶಿಕ್ಷಣ ಮತ್ತು ಮಕ್ಕಳ ಉಜ್ವಲ ಭವಿಷ್ಯ ಎರಡನ್ನೂ ಕಾಣಬಹುದು.

ಈ ಬಾರಿಯ ಹತ್ತು ಮತ್ತು ಹನ್ನೆರಡನೇ ತರಗತಿಯ ಫಲಿತಾಂಶಗಳು ಬಿಡುಗಡೆಯಾಗಿವೆ. 12ನೇ ತರಗತಿಯ 24,000 ಸಿಬಿಎಸ್‌ಇ (cbse) ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಮತ್ತು 1.1 ಲಕ್ಷದ ವಿದ್ಯಾರ್ಥಿಗಳು ಶೇ 90 ದಾಟಿದ್ದಾರೆ. 10ನೇ ತರಗತಿಯ 2 ಲಕ್ಷದ ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. (Source - cbseresults.nic.in)
ಫಲಿತಾಂಶ ಬಿಡುಗಡೆಯಾಗುತ್ತಿದ್ದಂತೆಯೇ ಶಾಲೆಯ ಹೊರಗಡೆ, ದೊಡ್ಡ ಗಾತ್ರದ ಹೋರ್ಡಿಂಗ್‌ಗಳು ನೇತಾಡುವುದಕ್ಕೆ ಪ್ರಾರಂಭವಾದವು. ಹೆಚ್ಚಿನ ಅಂಕಗಳನ್ನು ಗಳಿಸಿರುವ ಮಕ್ಕಳ ಫೋಟೊಗಳು ಮತ್ತು ಅವರ ಪರ್ಸೆಂಟೇಜ್‌ಗಳನ್ನು (%) ಈ ಹೋರ್ಡಿಂಗ್‌ಗಳು ಪ್ರದರ್ಶಿಸುತ್ತಿವೆ. ಇಂತಹ ವಿದ್ಯಾರ್ಥಿಗಳ ಪೋಷಕರಿಗೆ ಇದು ಸಂತೋಷ ಮತ್ತು ಹೆಮ್ಮೆಯ ವಿಚಾರವೆೇ ಸರಿ.
ಒಂದು ಕಾಲದಲ್ಲಿ, ಶೇ 100 ನೂರಕ್ಕೆ ನೂರು ಅಥವಾ 90 ಗಳಿಸುವುದು ಕೂಡ ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿತ್ತು. ಸಮಾಜಶಾಸ್ತ್ರ ಮತ್ತು ಭಾಷಾ ಪರಿಕ್ಷೆಗಳಲ್ಲಿ ಪೂರ್ಣ ಅಂಕಗಳನ್ನು ಪಡೆಯುವುದು ಅಪರೂಪವಾಗಿತ್ತು. ಆದರೆ ಈಗಿನ ಕಾಲದಲ್ಲಿ ಇವೆಲ್ಲವೂ ಸಾಕಷ್ಟು ಸಾಮಾನ್ಯವಾಗಿದೆ.
ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ಫಲಿತಾಂಶಗಳನ್ನು ಶಾಲೆಗಳಲ್ಲಿ ವಿಪರೀತವಾಗಿ ಪ್ರದರ್ಶನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದಾಗುವ ಮಾನಸಿಕ ಪರಿಣಾಮಗಳೇನಿರಬಹುದು?
ಸಿಬಿಎಸ್‌ಇಯಲ್ಲಿನ ಈ ಬದಲಾವಣೆ ಸ್ವಾಗತಾರ್ಹ
ಈ ಕುರಿತಾಗಿ Cbse board ಕೆಲವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿದೆ. ಕೋವಿಡ್ ನಂತರ, CBSE ಮೆರಿಟ್ ಪಟ್ಟಿಗಳನ್ನು ಘೋಷಿಸುವುದನ್ನು ಅಥವಾ ಟಾಪರ್‌ಗಳ ಹೆಸರುಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ. ಅನಾರೋಗ್ಯಕರ ಸ್ಪರ್ಧೆ ಮತ್ತು ಮಾನಸಿಕ ಆರೋಗ್ಯ ಒತ್ತಡವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
'ಫಸ್ಟ್ ಡಿವಿಷನ್', 'ಸೆಕೆಂಡ್ ಡಿವಿಷನ್' ಪದಗಳನ್ನು ನಿವೃತ್ತಿಗೊಳಿಸಲಾಗಿದೆ. 'ಫೇಲ್' ಎಂಬ ಪದವನ್ನು ಸಹ ಇನ್ನು ಮುಂದೆ ಬಳಸಲಾಗುವುದಿಲ್ಲ. ಅದನ್ನು 'ಎಸೆನ್ಷಿಯಲ್ ರಿಪೀಟ್' ನಿಂದ ಬದಲಾಯಿಸಲಾಗಿದೆ, ಇದು ಅತಿ ಹಾನಿಕಾರಕವಲ್ಲದ ಹೆಚ್ಚು ಬೆಳವಣಿಗೆ-ಆಧಾರಿತ ಹೇಳಿಕೆ ಎನ್ನಬಹುದು.
ಈ ಬದಲಾವಣೆಗಳು ಶಿಕ್ಷಣ ವ್ಯವಸ್ಥೆಯನ್ನು ಮಾನವೀಯಗೊಳಿಸುವ ಉದ್ದೇಶವನ್ನು ಹೊಂದಿವೆ, ಹೊರತು ಇವುಗಳು ಆಳವಾದ ಸಮಸ್ಯೆಯನ್ನು ಪರಿಹರಿಸುವುದಿಲ್ಲ - ಬೋರ್ಡ್ ಪರೀಕ್ಷೆಯ ಯಶಸ್ಸು ಮತ್ತು ನಿಜವಾದ ಕಲಿಕೆಯ ನಡುವಿನ ಸಂಪರ್ಕವನ್ನು ಅರಿತು ಸುಧಾರಣೆಗಳಾಗಬೇಕಾಗಿದೆ.
10 ಮತ್ತು 12ನೇ ಫಲಿತಾಂಶವು ಮೊದಲ ನೋಟದಲ್ಲಿ ಒಂದು ವಿಜಯೋತ್ಸವದಂತೆ ಭಾಸವಾಗುತ್ತದೆ. ಆದರೆ ಆಳವಾಗಿ ವಿಷ್ಲೇಶಿಸಿದಾಗ ಕೆಲವು ಆತಂಕಕಾರಿ ಚಿತ್ರಣಗಳು ಹೊರಹೊಮ್ಮಲು ಪ್ರಾರಂಭಿಸುತ್ತವೆ.
ಇದನ್ನು ಗಮನಿಸಿದಾಗ ಮನಸ್ಸಿಗೆ ಸಂತೋಷ ಮತ್ತು ಕಸಿವಿಸಿ ಎರಡೂ ಆಗುತ್ತದೆ. ವಿದ್ಯಾರ್ಥಿಗಳು ಹಗಲು ರಾತ್ರಿ ಶ್ರಮಪಟ್ಟು ಓದಿದಕ್ಕೆ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದರು ಎಂದು ಒಂದು ಕಡೆ ಖುಷಿಯಾದರೆ, ಇನ್ನೊಂದು ಕಡೆ ಬೇಸರವೂ ಆಗುತ್ತದೆ.
ಕಾರಣವಿಷ್ಟೇ,
- ಈ ಹೆಚ್ಚಿನ ಅಂಕಗಳು ನಿಜವಾಗಿಯೂ ಅರ್ಥಪೂರ್ಣವಾದ ಕಲಿಕೆಯೇ ಅಥವಾ ಕೇವಲ ಅಂಕಿಗಳನ್ನು ಹಿಂಬಾಲಿಸುವ ಸ್ಪರ್ಧೆಯನ್ನು ಸೂಚಿಸುತ್ತಿವೆಯೇ?
- ಇಂತಹ ಫಲಿತಾಂಶಗಳು ಅನಾರೋಗ್ಯಕರ ಹೋಲಿಕೆಗಳು ಮತ್ತು ಪೈಪೋಟಿಯನ್ನು ಸೃಷ್ಟಿಸುವುದಲ್ಲವೇ?
- ವಿದ್ಯಾರ್ಥಿಗಳ ನಡುವೆ ಹೆಚ್ಚಿನ ಅಸೂಯೆ, ಭೇದ ಭಾವಗಳು ಉಂಟಾಗುವುದಿಲ್ಲವೇ?
- ಕಡಿಮೆ ಅಂಕಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಮೇಲೆ ಕೀಳರಿಮೆ ಹುಟ್ಟುವುದಿಲ್ಲವೇ
- ಮುಂಬರುವ ಪರೀಕ್ಷೆಗಳಲ್ಲಿಯೂ (12ನೇ/ ಪಿಯುಸಿ/ NEAT/JEE/ಸಿವಿಲ್ ಸರ್ವೀಸ್ ಪರೀಕ್ಷೆಗಳು ಇತ್ಯಾದಿ) ಕೂಡ ಹೀಗೆ ಉತ್ತೀರ್ಣರಾಗಬೇಕೆಂಬ ಅಪೇಕ್ಷೆಯ ಒತ್ತಡ ವಿದ್ಯಾರ್ಥಿಗಳ ಮೇಲೆ ಪ್ರಾರಂಭವಾಗಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಹೀಗೆ ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗಬೇಕೆಂಬ ಮಾನದಂಡ ನಿರ್ಮಿತವಾಗುವ ಸಾಧ್ಯತೆಯಿದೆ. ಹಾಗೆಯೇ, ಒಂದು ವೇಳೆ ಸಾಧ್ಯವಾಗದಿದ್ದರೆ ಆತ್ಮಹತ್ಯೆ, ಖಿನ್ನತೆಯಂತಹ ಮಾನಸಿಕ ತೊಳಲಾಟಕ್ಕೆ ತುತ್ತಾಗಬಹುದು.
- ಇನ್ನು ಶಾಲೆಗಳಿಗೆ ಒಂದು ಕಡೆ ಹೆಮ್ಮೆಯ ವಿಚಾರವೆನಿಸಿದರೆ ಇನ್ನೊಂದು ಕಡೆ ಅವರ ಉದ್ದೇಶ ಬಹುತೇಕ ಮಟ್ಟಿಗೆ ಫಲಿತಾಂಶದ ಪ್ರದರ್ಶನದ ಮಾಡಿ ಶಾಲೆಯ ಖ್ಯಾತಿಯನ್ನು ಹೆಚ್ಚಿಸಿ, ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಸಿಕೊಳ್ಳುವುದು (admission).
- ಈ ಅಂಕಗಳು ವಿದ್ಯಾರ್ಥಿಗಳು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ನಿಜವಾಗಿಯೂ ತೋರಿಸುತ್ತಿವೆಯೇ?
ಈ ಬಾರಿ ಕೆಲವು ವಿದ್ಯಾರ್ಥಿಗಳು ಒಟ್ಟಾರೆಯಾಗಿ ಶೇ 100 ಪರಿಪೂರ್ಣ ಅಂಕಗಳನ್ನು ಗಳಿಸಿದ್ದಾರೆ. ಆದರೆ ಹತ್ತಾರು ಸಾವಿರ ವಿದ್ಯಾರ್ಥಿಗಳು ಸುಲಭವಾಗಿ ಶೇ 95 ಅಂಕಗಳನ್ನು ದಾಟುತ್ತಿದ್ದಾರೆ. ಹಾಗಾದರೇ ಇವರೆಲ್ಲರೂ ನೈಜ ಜಗತ್ತಿನ ಸವಾಲುಗಳಿಗೆ ಉತ್ತಮವಾಗಿ ಸಿದ್ಧರಾಗಿದ್ದಾರೆಯೇ ಎನ್ನುವುದನ್ನು ನಾವು ಅವಲೋಕಿಸಬೇಕು.
ಭಾವನಾತ್ಮಕ ಬುದ್ಧಿವಂತಿಕೆಯೂ ಬೇಕು
ಶಿಕ್ಷಣ, ವಿದ್ಯಾಭ್ಯಾಸವು ವಿದ್ಯಾರ್ಥಿಗಳಿಗೆ ಎಷ್ಟು ಮುಖ್ಯವೋ ಅಷ್ಟೇ ಮಹತ್ವವಾದುದು ಪರಿಸ್ಥಿತಿಗಳನ್ನು ಎದುರಿಸುವ ಭಾವನಾತ್ಮಕ ಬುದ್ದಿವಂತಿಕೆ, ಕ್ರಿಯಾಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಯ ಕೌಶಲಗಳು.
ಹೆಚ್ಚಿನ ಅಂಕಗಳು ಯಾವಾಗಲೂ ಹೆಚ್ಚಿನ ಜ್ಞಾನವನ್ನು ಅರ್ಥೈಸುವುದಿಲ್ಲ. ಅವು ಸಿದ್ಧತೆ ಎಂದರ್ಥವಲ್ಲ. ಅವು ಆಳವನ್ನು ಅರ್ಥೈಸುವುದಿಲ್ಲ ಮತ್ತು ಮುಖ್ಯವಾಗಿ, ವಿದ್ಯಾರ್ಥಿಗಳು ತರಗತಿಯ ಆಚೆಗಿನ ಜೀವನಕ್ಕೆ ಉತ್ತಮವಾಗಿ ಸಜ್ಜಾಗಿದ್ದಾರೆ ಎಂದರ್ಥವಲ್ಲ.
ಶಿಕ್ಷಣ-ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಬದಲಾವಣೆಗಳು
- ವಿದ್ಯಾರ್ಥಿಗಳನ್ನು ಒಟ್ಟಾರೆ ಬಲಪಡಿಸಲು ನೈಜ-ಪ್ರಪಂಚದ ಕೌಶಲಗಳಿಗೆ ಹೊಂದಿಕೆಯಾಗುವ ಪಠ್ಯಕ್ರಮಗಳ ನವೀಕರಣಗಳಾಗಬೇಕು.
- ಸಮಾಜ ಸುಧಾರಣೆಗಳ ಚರ್ಚೆಯನ್ನು ಪ್ರೋತ್ಸಾಹಿಸುವ ಶಿಕ್ಷಕರ ತರಬೇತಿ
- ಕೇವಲ ಮಾಹಿತಿ ಸಂಗ್ರಹಣೆಯಲ್ಲ ಬದಲು ತಿಳುವಳಿಕೆಯನ್ನು ಅಳೆಯುವ ಮೌಲ್ಯಮಾಪನ ಶೈಲಿಗಳು
ಈಗ, ಉತ್ತಮ ಅಂಕವನ್ನು ಆಚರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಾವಿರಾರು ಜನರು ಶೇ 95 ಅಂಕಗಳನ್ನು ಗಳಿಸಿ, ಇದೇ ವಿದ್ಯಾರ್ಥಿಗಳು ಮುಂದೆ ಉದ್ಯೋಗದಲ್ಲಿ ಮೂಲಭೂತ ಕೌಶಲಗಳೊಂದಿಗೆ ಕೊರತೆಯಿಂದಾಗಿ ಬಳಲುವಾಗ, ನಾವು ನಿಲ್ಲಿಸಿ ಕೇಳಬೇಕು -- ನಾವು ನಿಜವಾಗಿಯೂ ಏನನ್ನು ಪ್ರೋತ್ಸಾಹಿಸುತ್ತಿದ್ದೇವೆ ಮತ್ತು ಪ್ರಶಂಸುತ್ತಿದ್ದೇವೆೇ?
ಮಕ್ಕಳು ಶೇ 95 ಅಂಕಗಳನ್ನು ಗಳಿಸಿದಾಗ ಯಶಸ್ಸು ಸಿಗುವುದು ಎಂದು ಭಾವಿಸುವುದರ ಬದಲು, ನಮ್ಮ ಯುವಕರಲ್ಲಿ ಶೇ 95 ಜನರು ಜಗತ್ತನ್ನು ಎದುರಿಸಲು ನಿಜವಾಗಿಯೂ ಸಿದ್ಧರಾಗಿದ್ದಾರೆಂದು ಭಾವಿಸಿದರೆ ಆರೋಗ್ಯಕರ ಶಿಕ್ಷಣ ಮತ್ತು ಉಜ್ವಲವಾದ ಮಕ್ಕಳ ಭವಿಷ್ಯ ಎರಡನ್ನೂ ನಾವು ಕಾಣಬಹುದು.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.