ಮಕ್ಕಳ ಓದುವ ಕೋಣೆ ಹೇಗಿದ್ದರೆ ಉತ್ತಮ; ಸ್ಟಡಿ ರೂಮ್‌ನಲ್ಲಿ ಏನಿರಬೇಕು, ಏನಿರಬಾರದು?
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಓದುವ ಕೋಣೆ ಹೇಗಿದ್ದರೆ ಉತ್ತಮ; ಸ್ಟಡಿ ರೂಮ್‌ನಲ್ಲಿ ಏನಿರಬೇಕು, ಏನಿರಬಾರದು?

ಮಕ್ಕಳ ಓದುವ ಕೋಣೆ ಹೇಗಿದ್ದರೆ ಉತ್ತಮ; ಸ್ಟಡಿ ರೂಮ್‌ನಲ್ಲಿ ಏನಿರಬೇಕು, ಏನಿರಬಾರದು?

ಮಕ್ಕಳ ಓದುವ ಕೋಣೆ ಅಚ್ಚುಕಟ್ಟಾಗಿದ್ದರೆ, ಓದಿನ ಗುಣಮಟ್ಟ ಸುಧಾರಿಸುತ್ತದೆ. ಕೋಣೆಯ ಬಣ್ಣದಿಂದ ಹಿಡಿದು, ಅಲ್ಲಿರಬೇಕಾದ ವಸ್ತುಗಳವರೆಗೆ ಎಲ್ಲವೂ ಪ್ರಮುಖ ಅಂಶವೇ. ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ಸಮಯದಲ್ಲಿ, ಮಕ್ಕಳ ಓದುವ ಕೋಣೆ ಹೇಗಿರಬೇಕು ಎಂಬ ಸಲಹೆ ನಿಮಗಾಗಿ.

ಮಕ್ಕಳ ಓದುವ ಕೋಣೆ ಹೇಗಿದ್ದರೆ ಉತ್ತಮ; ಸ್ಟಡಿ ರೂಮ್‌ನಲ್ಲಿ ಏನಿರಬೇಕು, ಏನಿರಬಾರದು?
ಮಕ್ಕಳ ಓದುವ ಕೋಣೆ ಹೇಗಿದ್ದರೆ ಉತ್ತಮ; ಸ್ಟಡಿ ರೂಮ್‌ನಲ್ಲಿ ಏನಿರಬೇಕು, ಏನಿರಬಾರದು? (Pixabay)

ಮನೆ ಸುಂದರವಾಗಿರಬೇಕೆಂದರೆ, ಮನೆ ಕಟ್ಟುವಾಗಿಂದಲೇ ಯೋಜಿಸಿ ಕಟ್ಟಬೇಕು. ಅದೇ ರೀತಿ ಪರೀಕ್ಷೆಗೆ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಬೇಕೆಂದರೆ, ಸಿದ್ಧತೆ ಸರಿಯಾಗಿ ಆಗಬೇಕು. ಆ ಸಿದ್ದತೆ ನಡೆಸುವ ಸ್ಥಳ ಅಚ್ಚುಕಟ್ಟಾಗಿ ಇಲ್ಲದಿದ್ದರೆ, ಓದಿಗೆ ಭಂಗವಾಗುತ್ತದೆ. ಹಾಗಿದ್ದರೆ ಮನೆಯಲ್ಲಿ ಓದುವ ಕೋಣೆ ಅಥವಾ ಸ್ಟಡಿ ರೂಮ್‌ ಹೇಗಿರಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಇದಕ್ಕೆ ಒಂದೊಳ್ಳೆ ಐಡಿಯಾ ನಾವು ಹೇಳಿಕೊಡುತ್ತೇವೆ. ಮಕ್ಕಳ ಓದುವ ಕೋಣೆಯನ್ನು ಅಚ್ಚುಕಟ್ಟಾಗಿ ಯೋಜಿತ ರೀತಿಯಲ್ಲಿ ಇಟ್ಟುಕೊಂಡರೆ, ಓದು ಪರಿಣಾಮಕಾರಿಯಾಗಿ ಆಗುತ್ತದೆ. ಮುಂದೆ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬರುತ್ತಿದ್ದು, ಈ ಸಮಯ ನಿಮ್ಮ ಓದುವ ಕೋಣೆಯನ್ನು ಸರಿಯಾಗಿ ಇಟ್ಟುಕೊಳ್ಳುವ ಸುಸಂದರ್ಭ.

ಗಾಳಿ-ಬೆಳಕಿನ ವ್ಯವಸ್ಥೆ ಸರಿಯಾಗಿರಲಿ

ಸ್ಪಷ್ಟವಾಗಿ ಓದಲು ಕೋಣೆಯಲ್ಲಿ ಬೆಳಕು ಸರಿಯಾಗಿ ಬರಬೇಕು. ಹಗಲು ಹೊತ್ತು ನೈಸರ್ಗಿಕ ಬೆಳಕು ಬರುವಂತೆ ಕಿಟಕಿಗಳಿದ್ದರೆ ಚೆನ್ನ. ಇನ್ನು ರಾತ್ರಿ ವೇಳೆಯೂ ಬೆಳಕು ಸರಿಯಾಗಿರಬೇಕು. ಕಣ್ಣಿಗೆ ಚುಚ್ಚುವಷ್ಟು ಪ್ರಕಾಶಮಾನವಾದ ಬೆಳಕು ಇರಬಾರದು. ಆದರೆ, ಪುಸ್ತಕ ಓದಲು ಆಗುವಷ್ಟು ಸ್ಪಷ್ಟ ಬೆಳಕು ಬೇಕು. ಮಂದ ಬೆಳಕಿನಲ್ಲಿ ಓದಿದರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದೇ ವೇಳೆ ಕೋಣೆಗೆ ನೈಸರ್ಗಿಕ ಗಾಳಿ ಬರುವಂತಿರಲಿ. ಜೊತೆಗೆ ವಾತಾಯನ ವ್ಯವಸ್ಥೆ (ವೆಂಟಿಲೇಷನ್)‌ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.

ಟೇಬಲ್‌ ಹಾಗೂ ಕುರ್ಚಿ ಹೇಗಿರಬೇಕು?

ಓದಲು ಕುಳಿತುಕೊಳ್ಳಲು ಮತ್ತು ಪುಸ್ತಕಗಳನ್ನು ಜೋಡಿಸಲು ಗಟ್ಟಿ ಮೇಲ್ಮೈ ಇರುವ ಮೇಜು ಹಾಗೂ ಕುರ್ಚಿ ಇರಲಿ. ಮರದ ಪೀಠೋಪಕರಣವಾದರೆ ಉತ್ತಮ. ಮುಖ್ಯವಾಗಿ ಕುರ್ಚಿಯು ಗಟ್ಟಿ ಮೇಲ್ಮೈ ಇರುವುದನ್ನೇ ಆರಿಸಿ. ಮೆತ್ತನೆ ಕೂರುವಂಥ ಆಫೀಸ್‌ ಚೇರ್‌ ಅಥವಾ ಇತರ ವಿಧದ ಕುರ್ಚಿಗಳು ಬೇಡ. ಆರಾಮದಾಯಕ ಕುರ್ಚಿಯು ಓದಿಗೆ ಭಂಗ ತರಬಹುದು.

ಪುಸ್ತಕಗಳ ಜೋಡಣೆ ಅಚ್ಚುಕಟ್ಟಾಗಿರಲಿ

ಟೇಬಲ್‌ ಮೇಲೆ ಓದಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಅಚ್ಚುಕಟಾಗಿ ಜೋಡಿಸಿರಿ. ಓದುವ ಪುಸ್ತಕ, ಬರೆಯುವ ನೋಟ್ಸ್‌ ಪುಸ್ತಕ, ಪೆನ್ನು, ಪೆನ್ಸಿಲ್‌ ಮೊದಲಾದ ಬರವಣಿಗೆಗೆ ಬೇಕಾದ ವಸ್ತುಗಳನ್ನು ಒಂದೇ ಕಡೆ ಜೋಡಿಸಿ ಇಟ್ಟುಕೊಳ್ಳಿ. ಟೇಬಲ್‌ನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲವಾದರೆ, ಚಾಪೆ ಹಾಸಿಕೊಂಡು ಓದಬಹುದು. ಆದರೆ, ಪುಸ್ತಕಗಳ ಜೋಡಣೆಗೆ ಟೇಬಲ್‌ ಇದ್ದರೆ ಉತ್ತಮ.

ಓದುವ ಕೋಣೆಯಲ್ಲಿ ಟಿವಿ, ಮೊಬೈಲ್‌ ಫೋನ್‌ ಇರುವುದು ಬೇಡ

ಓದುವ ಕೋಣೆ ಬರೀ ಓದಿಗೆ ಸೀಮಿತವಾಗಿರಲಿ. ಅಲ್ಲಿ ಟಿವಿ, ಮೊಬೈಲ್‌ ಫೋನ್‌ ಸೇರಿದಂತೆ ಇತರ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು ಇರುವುದು ಬೇಡ. ಇವು ನಿಮ್ಮ ಓದಿಗೆ ಅಡ್ಡಿಪಡಿಸುತ್ತವೆ. ಗಮನ ಅದರತ್ತ ಸೆಳೆದು ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುತ್ತವೆ.

ಆಟಿಕೆ ವಸ್ತುಗಳು, ಸೋಫಾ, ಮಂಚ ಇರುವುದು ಬೇಡ

ಓದುವ ಕೋಣೆಯಲ್ಲಿ ಆಟಿಕೆ ವಸ್ತುಗಳು ಇದ್ದರೆ ಅವು ನಿಮ್ಮ ಗಮನ ತಪ್ಪಿಸಬಹುದು. ಇದೇ ವೇಳೆ ಸೋಫಾ ಅಥವಾ ಮಂಚದಂತಹ ಪೀಠೋಪಕರಣಗಳು ನಿಮ್ಮ ಆಲಸ್ಯವನ್ನು ಹೆಚ್ಚಿಸಬಹುದು. ಕೋಣೆಯೊಳಗೆ ಸೋಫಾ ಅಥವಾ ಮಂಚವಿದ್ದರೆ, ಅದು ನಿಮ್ಮನ್ನು ನಿದ್ದೆಯತ್ತ ಎಳೆಯಬಹುದು. ಓದಬೇಕಾದ ಅಮೂಲ್ಯ ಸಮಯದಲ್ಲಿ ನಿದ್ದೆ ಮಾಡಿದರೆ, ವೇಳಾಪಟ್ಟಿಯಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಹೀಗಾಗಿ ಅಂಥಾ ವಸ್ತುಗಳನ್ನು ಕೋಣೆಯಿಂದ ತಪ್ಪಿಸಿ.

ಪ್ರೇರಣಾದಾಯಿ ನುಡಿಮುತ್ತುಗಳು

ಇದು ನಿಮ್ಮ ಆಯ್ಕೆಗೆ ಬಿಟ್ಟ ಅಂಶ. ಕೋಣೆಯೊಳಗೆ ಹಿರಿಯರು ಹೇಳಿದ ನುಡಿಮುತ್ತುಗಳು, ಪ್ರೇರಣೆಯಾಗುವ ವಾಕ್ಯಗಳನ್ನು ಬರೆದು ಅಂಟಿಸಬಹುದು. ಅದನ್ನು ಓದಿದಾಗ ನಿಮಗೂ ಏನಾದರೂ ಸಾಧಿಸಬೇಕು ಎಂಬ ಛಲ ಮೂಡುತ್ತದೆ. ಇದು ನಿಮ್ಮ ಓದುವ, ಕಲಿಯುವ ಅಥವಾ ಉತ್ತಮ ಅಂಕಗಳನ್ನು ಪಡೆಯುವ ಗುರಿ ಸಾಧನೆಗೆ ನೆರವಾಗಬಹುದು.

ಕೋಣೆಯ ಬಣ್ಣ ಹೀಗಿರಲಿ

ಓದುವ ಕೋಣೆ ಗಾಢ ಬಣ್ಣ ಹಾಗೂ ವಿವಿಧ ಚಿತ್ರಗಳಿಂದ ಗಿಜಿಗುಡುವುದು ಬೇಡ. ಕೋಣೆಗೆ ಮಂದವಾದ ಬಣ್ಣ ಬಳಿದಿರುವುದು ಉತ್ತಮ. ಗಾಢ ಬಣ್ಣ ಬೇಡ. ಬಿಳಿ, ಕೆನೆ, ತಿಳಿಹಳದಿ ಹೀಗೆ ಕಣ್ಣಿಗೆ ಶಾಂತವಾಗಿ ಕಾಣುವ ಬಣ್ಣಗಳನ್ನು ಕೋಣೆಗೆ ಬಳಿಯಿರಿ.

ಗಡಿಯಾರ

ಓದಿಗೆ ನೀವು ವೇಳಾಪಟ್ಟಿ ರಚಿಸಿದ್ದರೆ ಓದಿನ ಕೋಣೆಯೊಳಗೆ ಗಡಿಯಾರವೊಂದಿರಲಿ. ಹಾಗಂತಾ ಓದುವ ಸಮಯ ಯಾವಾಗ ಮುಗಿಯುತ್ತಪ್ಪಾ ಎಂದು ಕಾಯುತ್ತಾ ಕೂರಬೇಡಿ. ವೇಳಾಪಟ್ಟಿಯನ್ನು ಪಾಲಿಸುವ ಸಲುವಾಗಿ ಗಡಿಯಾರ ನೆರವಾಗಲಿ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner