SSLC-PUC ಪರೀಕ್ಷೆ ಪೂರ್ವ ತಯಾರಿ; ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡುವುದು ಹೇಗೆ? ಉತ್ತರ ಬರೆದು ಅಭ್ಯಾಸ ಮಾಡಿದರೆ ಇಷ್ಟೆಲ್ಲಾ ಲಾಭ
ಕನ್ನಡ ಸುದ್ದಿ  /  ಜೀವನಶೈಲಿ  /  Sslc-puc ಪರೀಕ್ಷೆ ಪೂರ್ವ ತಯಾರಿ; ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡುವುದು ಹೇಗೆ? ಉತ್ತರ ಬರೆದು ಅಭ್ಯಾಸ ಮಾಡಿದರೆ ಇಷ್ಟೆಲ್ಲಾ ಲಾಭ

SSLC-PUC ಪರೀಕ್ಷೆ ಪೂರ್ವ ತಯಾರಿ; ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡುವುದು ಹೇಗೆ? ಉತ್ತರ ಬರೆದು ಅಭ್ಯಾಸ ಮಾಡಿದರೆ ಇಷ್ಟೆಲ್ಲಾ ಲಾಭ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಓದಿಗೆ ವೇಳಾಪಟ್ಟಿ ರಚಿಸುವುದು, ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಿ ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡರೆ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ. ಮಾದರಿ ಪರೀಕ್ಷೆಗೆ ಉತ್ತರಿಸಿದರೆ, ಮುಖ್ಯ ಪರೀಕ್ಷೆ ಬರೆಯಲು ಸುಲಭವಾಗುತ್ತದೆ.

SSLC-PUC ಪರೀಕ್ಷೆ ಪೂರ್ವ ತಯಾರಿ; ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡುವುದು ಹೇಗೆ
SSLC-PUC ಪರೀಕ್ಷೆ ಪೂರ್ವ ತಯಾರಿ; ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡುವುದು ಹೇಗೆ

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮಕ್ಕಳ ಪೋಷಕರ ಗಮನವೀಗ ಸಂಪೂರ್ಣವಾಗಿ ಪರೀಕ್ಷೆಗಳ ಮೇಲಿದೆ. ಕೆಲವೇ ದಿನಗಳಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಮಾರ್ಚ್ 1ರಿಂದ ಪಿಯುಸಿ ಪರೀಕ್ಷೆಗಳು ಆರಂಭವಾದರೆ, ಮಾರ್ಚ್‌ 21ರಿಂದ 10ನೇ ತರಗತಿಯ ಅಂತಿಮ ಪರೀಕ್ಷೆಗಳು ಶುರುವಾಗಲಿವೆ. ಸದ್ಯ ಮಕ್ಕಳ ಪರೀಕ್ಷೆಯ ಸಿದ್ಧತೆಗಾಗಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಪ್ರಿಪರೇಟರಿ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಅಭ್ಯಾಸ ಪರೀಕ್ಷೆಯಂತಾಗಲಿದೆ. ಇದೇ ಮಾದರಿಯಲ್ಲಿ ಅಂತಿಮ ಪರೀಕ್ಷೆಗಳು ನಡೆಯಲಿದ್ದು, ಪ್ರಶ್ನೆ ಪತ್ರಿಕೆಯ ನೀಲನಕ್ಷೆ, ಸಮಯ ಹೊಂದಾಣಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಈ ಪರೀಕ್ಷೆಗಳು ನೆರವಾಗಲಿವೆ.

ಪರೀಕ್ಷೆಗೆ ಸಿದ್ಧತೆ ನಡೆಸುವುದೆಂದರೆ, ದಿನವಿಡೀ ಓದುತ್ತಾ ಕುಳಿತುಕೊಳ್ಳುವುದಲ್ಲ. ಓದಿಗೊಂದು ವೇಳಾಪಟ್ಟಿ ರಚಿಸಿ, ಅದರಂತೆ ಮನಸಿಟ್ಟು ಅಭ್ಯಾಸ ನಡೆಸುವುದು ಜಾಣ ವಿದ್ಯಾರ್ಥಿಯ ಗುಣ. ಓದುವ ಸಮಯದಲ್ಲಿ ಗುಣಮಟ್ಟದ ಓದು ಸಾಧ್ಯವಾಗಿ, ಅದನ್ನು ಮನಸ್ಸು ಸರಿಯಾಗಿ ಗ್ರಹಿಸಬೇಕು. ಓದಿದ್ದು ನೆನಪಿನಲ್ಲಿ ಉಳಿಯುವಷ್ಟು ಪರಿಣಾಮಕಾರಿಯಾಗಿ ಓದಬೇಕು.

10 ಬಾರಿ ಓದುವುದು 1 ಬಾರಿ ಬರೆದು ಅಭ್ಯಾಸ ಮಾಡುವುದಕ್ಕೆ ಸಮ. ಇದೇ ಕಾರಣಕ್ಕೆ ಪೂರ್ವಸಿದ್ಧತಾ ಪರೀಕ್ಷೆ ನಡೆಸಲಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿಧಾನವನ್ನು ಅರ್ಥಮಾಡಿಸುವ ಉದ್ದೇಶವಿರುತ್ತದೆ. ಇಂತಹಾ ಪೂರ್ವಸಿದ್ಧತಾ ಪರೀಕ್ಷೆಗಳ ಜೊತೆಗೆ ಮಕ್ಕಳು ಹಳೆಯ ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಟ್ಟುಕೊಂಡು ಅದಕ್ಕೆ ಕ್ರಮಬದ್ಧವಾಗಿ ಉತ್ತರ ಬರೆಯುವುದನ್ನು ಅಭ್ಯಾಸ ಮಾಡುವುದು ಉತ್ತಮ. ಅಂದರೆ, ಪರೀಕ್ಷಾ ಕೊಠಡಿಯಲ್ಲಿ ಬರೆದಂತೆ, ಮನೆಯಲ್ಲಿಯೇ ಸಮಯ ನಿಗದಿ ಮಾಡಿಕೊಂಡು ಪರೀಕ್ಷೆ‌ ಬರೆಯಬೇಕು. ಇದು ಮುಖ್ಯ ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯ ಜೊತೆಗೆ ಹಲವು ರೀತಿಯಲ್ಲಿ ನಿಮಗೆ ನೆರವಾಗುತ್ತದೆ.

ಪ್ರಶ್ನೆ ಪತ್ರಿಕೆಗಳು ಎಲ್ಲಿ ಸಿಗುತ್ತವೆ?

ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು, ಶಾಲೆಯಲ್ಲಿರುವ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಪಯೋಗಿಸಬಹುದು. ಇದು ಸಿಗಲಿಲ್ಲವಾದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ (KSEAB) ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮಗೆ ಬೇಕಾದ ಮಾದರಿ ಪ್ರಶ್ನೆ ಪತ್ರಿಕೆಗಳು ಲಭ್ಯವಿರುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಉತ್ತರಿಸಬಹುದು.

ಮಾದರಿ ಪ್ರಶ್ನೆ ಪತ್ರಿಕೆ ಡೌನ್‌ಲೋಡ್‌ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ SSLC ಮಾದರಿ ಪ್ರಶ್ನೆ ಪತ್ರಿಕೆಯನ್ನು ಡೌನ್‌ಲೋಡ್ ಮಾಡಲು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಹಂತವಾರು ವಿವರ ಹೀಗಿದೆ

  • kseab.karnataka.gov.in ಗೆ ಭೇಟಿ ನೀಡಿ
  • ಇಲ್ಲಿ 'documents' ಅಥವಾ ಕನ್ನಡದಲ್ಲಿ 'ಇಲಾಖಾ ದಾಖಲೆಗಳು' ವಿಭಾಗಕ್ಕೆ ಹೋಗಿ
  • ಇಲ್ಲಿ ನಿಮ್ಮ ತರಗತಿಯ ಆಧಾರದ ಮೇಲೆ 'SSLC' ಅಥವಾ 'PUC' ಆಯ್ಕೆ ಮೇಲೆ ಕ್ಲಿಕ್‌ ಮಾಡಿ
  • ಇಲ್ಲಿ Model Question Papers ಮೇಲೆ ಕ್ಲಿಕ್‌ ಮಾಡಿ
  • ನಿಮಗೆ ಯಾವ ವರ್ಷದ ಮಾದರಿ ಪ್ರಶ್ನೆ ಪತ್ರಿಕೆ ಬೇಕೋ ಆ ವರ್ಷವನ್ನು ಆಯ್ಕೆ ಮಾಡಿ
  • ಈಗ ಎಲ್ಲಾ ವಿಷಯಗಳ ಪ್ರಶ್ನೆಪತ್ರಿಕೆಗಳು ಕಾಣಿಸುತ್ತವೆ. ನಿಮ್ಮ ಭಾಷಾ ಮಾಧ್ಯಮ (ಕನ್ನಡ ಅಥವಾ ಇಂಗ್ಲೀಷ್‌) ಅನುಸಾರ ಪ್ರಶ್ನೆ ಪತ್ರಿಕೆ ಯಾವುದು ಬೇಕೆಂದು ನಿರ್ಧರಿಸಿ ಅದರ ಮೇಲೆ ಕ್ಲಿಕ್ ಮಾಡಿ.
  • ಈಗ ನಿಮ್ಮ ಪ್ರಶ್ನೆ ಪತ್ರಿಕೆ ತೆರೆದುಕೊಳ್ಳುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಅಗತ್ಯವಿದ್ದರೆ ಪ್ರಿಂಟ್‌ ತೆಗೆದುಕೊಳ್ಳಿ.
  • ಪಿಯುಸಿ ಪ್ರಶ್ನೆ ಪತ್ರಿಕೆಗಳ ಜೊತೆಗೆ ಬ್ಲ್ಯೂ ಪ್ರಿಂಟ್‌ (ಪ್ರಶ್ನೆಪತ್ರಿಕೆಯ ನೀಲನಕ್ಷೆ) ಕೂಡಾ ಸಿಗುತ್ತದೆ. ಅದರ ಕೆಳಗೆ ಪ್ರಶ್ನೆ ಪತ್ರಿಕೆ ಇರುತ್ತವೆ. ನಿಮಗೆ ಬೇಕಾಗಿರುವುದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇದನ್ನೂ ಓದಿ | ಮಕ್ಕಳೇ, ಓದಿದ್ದು ನೆನಪುಳಿಯಲು ಈ 7 ಸರಳ ತಂತ್ರ ಅನುಸರಿಸಿ

ಮಾದರಿ ಪ್ರಶ್ನೆ ಪತ್ರಿಕೆ ಇಟ್ಟುಕೊಂಡು ಉತ್ತರ ಬರೆದರೆ ಏನು ಪ್ರಯೋಜನ?

  • ಅಕ್ಷರ ಗುಣಮಟ್ಟ ಸುಧಾರಿಸುತ್ತದೆ. ವೇಗದ ಬರವಣಿಗೆ ಅಭ್ಯಾಸವಾಗುತ್ತದೆ.
  • ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹೆಚ್ಚು ಓದುವುದರಲ್ಲಿ ನಿರತರಾಗುತ್ತಾರೆ. ಆಗ ಬರವಣಿಗೆ ಅಭ್ಯಾಸ ಕಡಿಮೆಯಾಗುತ್ತದೆ. ನೇರವಾಗಿ ಪರೀಕ್ಷೆಯಲ್ಲಿ ಬರೆದರೆ ನಿಮ್ಮ ಕೈ ನಿಧಾನಕ್ಕೆ ಓಡಬಹುದು. ಹೀಗಾಗಿ ಪ್ರಶ್ನೆ ಪತ್ರಿಕೆ ನೋಡಿ ಉತ್ತರ ಬರೆಯುತ್ತಾ ಹೋದರೆ ಬರವಣೆಗೆ ವೇಗ ಸುಧಾರಿಸುತ್ತದೆ.
  • ಸಮಯ ನಿರ್ವಹಣೆ ಸುಲಭವಾಗುತ್ತದೆ. ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಬರೆದು ಪೂರ್ಣಗೊಳಿಸಬೇಕು. ಅದಕ್ಕೆ ಕೈ ಪಳಗಬೇಕು. ಮಾದರಿ ಪ್ರಶ್ನೆ ಪತ್ರಿಕೆಯನ್ನು ಕೂಡಾ ನಿಗದಿತ ಸಮಯದ ಅವಧಿಯೊಳಗೆ ಬರೆದು ಅಭ್ಯಾಸ ಮಾಡಿದರೆ, ಮುಖ್ಯ ಪರೀಕ್ಷೆ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಪರೀಕ್ಷೆ ಬರೆಯಬಹುದು.
  • ಅಂತಿಮ ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಪತ್ರಿಕೆಯ ಮೇಲೆ ಹೆಚ್ಚು ಗೊಂದಲಗಳು ಬರುವುದಿಲ್ಲ.
  • ಎಷ್ಟು ಅಂಕದ ಪ್ರಶ್ನೆಗೆ ಎಷ್ಟು ಪ್ರಮಾಣದಲ್ಲಿ ಉತ್ತರ ಬರೆಯಬೇಕು ಎಂಬ ಅಂದಾಜು ಸಿಗುತ್ತದೆ. ಪ್ರಶ್ನೆಗೆ ತಕ್ಕಂತೆ ಉತ್ತರ ಬರೆಯುವುದು ಅಭ್ಯಾಸವಾಗುತ್ತದೆ.
  • ಹೊಸ ಹೊಸ ಪ್ರಶ್ನೆಗಳು ಇರಬಹುದು. ಉತ್ತರ ಹೊಳೆಯದೆ ಗೊಂದಲ ಮೂಡಬಹುದು. ಅಂತಹ ಪ್ರಶ್ನೆಗಳನ್ನು ಪಟ್ಟಿ ಮಾಡಿ ಶಿಕ್ಷಕರಲ್ಲಿ ಕೇಳಿ ಉತ್ತರ ಕಂಡುಕೊಳ್ಳಬಹುದು.

ಇದನ್ನೂ ಓದಿ | ಬೆಳಗ್ಗೆ ಬೇಗ ಅಥವಾ ರಾತ್ರಿ; ಪರೀಕ್ಷೆಗೆ ಓದಲು ಸೂಕ್ತ ಸಮಯ ಯಾವುದು, ಯಾವಾಗ ಓದಿದರೆ ನೆನಪಿಟ್ಟುಕೊಳ್ಳಲು ಸಾಧ್ಯ?

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner