ಜರ್ಮನಿಯಲ್ಲಿ ವಿದ್ಯಾಭ್ಯಾಸ; ಅತ್ಯುತ್ತಮ ಶಿಕ್ಷಣದ ಜತೆಗೆ ಫ್ರೀ ಟ್ಯೂಷನ್ ಒದಗಿಸುವ ವಿಶ್ವವಿದ್ಯಾಲಯಗಳಿವು
ಜರ್ಮನಿಯು ತನ್ನ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೂಲಕ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ (ಬೋಧನಾ-ಮುಕ್ತ ಶಿಕ್ಷಣ) ಅನ್ನು ಒದಗಿಸುವುದಕ್ಕೆ ಹೆಸರುವಾಸಿಯಾಗಿದೆ.

ವಿದೇಶಿ ಶಿಕ್ಷಣದ ವ್ಯಾಮೋಹ ಹೆಚ್ಚಾಗಿದೆ. ತಮಗೆ ನೆಚ್ಚಿನ ದೇಶಗಳತ್ತ ವೃತ್ತಿಪರ ಕೋರ್ಸ್ಗಳ ಅಧ್ಯಯನಕ್ಕೆ ಭಾರತೀಯ ವಿದ್ಯಾರ್ಥಿಗಳು ದೌಡಾಯಿಸುತ್ತಿರುವ ಸಂಖ್ಯೆ ದುಪ್ಪಟ್ಟಾಗಿದೆ. ಮತ್ತೊಂದೆಡೆ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುವ ಸಲುವಾಗಿ ಆಯಾ ದೇಶಗಳ ವಿಶ್ವವಿದ್ಯಾಲಯಗಳು ವಿವಿಧ ಆಫರ್ಗಳನ್ನೂ ನೀಡುತ್ತಿವೆ. ಈ ಪಟ್ಟಿಗೆ ಜರ್ಮನಿಯ ಸಾರ್ವಜನಿಕ ವಿಶ್ವವಿದ್ಯಾಲಯಗಳೂ ಸೇರಿವೆ.
ಜರ್ಮನಿಯು ತನ್ನ ಸಾರ್ವಜನಿಕ ವಿಶ್ವವಿದ್ಯಾಲಯಗಳ ಮೂಲಕ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ (ಬೋಧನಾ-ಮುಕ್ತ ಶಿಕ್ಷಣ) ಅನ್ನು ಒದಗಿಸುವುದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಫ್ರೀ ಟ್ಯೂಷನ್ ನೀಡುವ ವಿಶ್ವವಿದ್ಯಾಲಯಗಳಿಗೆ ವಿವಿಧ ಪದವಿ ಪೂರ್ವ-ಸ್ನಾತಕೋತ್ತರ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. 2014ರಲ್ಲೇ ಜರ್ಮನಿಯ 16 ರಾಜ್ಯಗಳು ಟ್ಯೂಷನ್ ಫೀಸ್ ರದ್ದುಗೊಳಿಸಿದವು. ಅಂದಿನಿಂದ ಇದು ಜಾರಿಯಲ್ಲಿದೆ.
ಟ್ಯೂಷನ್ ಫೀಸ್ ಉಚಿತವಾಗಿದ್ದರೂ ವಿದ್ಯಾರ್ಥಿಗಳು 150 ಯುರೋಗಳಿಂದ (ಸುಮಾರು 14,500) 350 ಯುರೋಗಳವರೆಗೆ (ಸುಮಾರು 29,000) ಸೆಮಿಸ್ಟರ್ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಆಡಳಿತಾತ್ಮಕ ವೆಚ್ಚಗಳನ್ನು ಭರಿಸುತ್ತದೆ. ಆದರೆ ಜರ್ಮನಿಯ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಜರ್ಮನ್ ಭಾಷೆಯನ್ನು ತಿಳಿದಿರಬೇಕು. ಏಕೆಂದರೆ ಅದು ಬೋಧನೆಗೆ ಮಾಧ್ಯಮದ ಮೂಲವಾಗಿದೆ.
ಅಂತಹ ವಿದ್ಯಾರ್ಥಿಗಳು ಜರ್ಮನ್ ಭಾಷೆಯಲ್ಲಿ ಪ್ರಮಾಣ ಪತ್ರ ಕೋರ್ಸ್ ಅನ್ನು ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸುವಾಗ ಅದನ್ನು ಪುರಾವೆಯಾಗಿ ಬಳಸಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ಸರ್ಟಿಫಿಕೇಟ್ (ಹಿಂದಿನ ವಿಶ್ವವಿದ್ಯಾಲಯ ಅಥವಾ ಶಾಲೆಯ ಅಧಿಕೃತ ಶೈಕ್ಷಣಿಕ ದಾಖಲೆಗಳು), ಶಿಫಾರಸು ಪತ್ರ ಒದಗಿಸಬೇಕು, ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT)ಯಲ್ಲಿ ಉತ್ತೀರ್ಣರಾಗಿರಬೇಕು.
ನೀವು ಅರ್ಜಿ ಸಲ್ಲಿಸಲು ಕಾರಣ, ನಿಮ್ಮ ಗುರಿಯನ್ನು, ನೀವು ವಿಶ್ವವಿದ್ಯಾಲಯಕ್ಕೆ ಏಕೆ ಪ್ರವೇಶ ಪಡೆಯುತ್ತೀರಿ ಎಂಬುದರ ವಿವರಗಳನ್ನು ಒಳಗೊಂಡಿರುವ ಉದ್ದೇಶದ ಹೇಳಿಕೆಯನ್ನು (SOP) ಒದಗಿಸಬೇಕು. ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಪ್ರಮಾಣೀಕೃತ ಪರೀಕ್ಷೆ ತೆಗೆದುಕೊಳ್ಳಬೇಕು.
ಜರ್ಮನಿಯಲ್ಲಿ ಉಚಿತ ಶಿಕ್ಷಣ ನೀಡುವ ಉನ್ನತ ಸಾರ್ವಜನಿಕ ವಿಶ್ವವಿದ್ಯಾಲಯಗಳ ಪಟ್ಟಿ
ಮ್ಯೂನಿಚ್ ತಾಂತ್ರಿಕ ವಿಶ್ವವಿದ್ಯಾಲಯ
ಲುಡ್ವಿಗ್ ಮ್ಯಾಕ್ಸಿಮಿಲಿಯನ್ ಮ್ಯೂನಿಚ್ ವಿಶ್ವವಿದ್ಯಾಲಯ
ಬರ್ಲಿನ್‌ನ ಹಂಬೋಲ್ಟ್ ವಿಶ್ವವಿದ್ಯಾಲಯ
ಬಾನ್ ವಿಶ್ವವಿದ್ಯಾಲಯ
ಫ್ರೀಬರ್ಗ್ ವಿಶ್ವವಿದ್ಯಾಲಯ
ಹ್ಯಾಂಬರ್ಗ್ ವಿಶ್ವವಿದ್ಯಾಲಯ
ಆರ್ಡಬ್ಲ್ಯುಟಿಹೆಚ್ ಆಚೆನ್ ವಿಶ್ವವಿದ್ಯಾಲಯ
ಕಲೋನ್ ವಿಶ್ವವಿದ್ಯಾಲಯ
ಲೀಪ್‌ಜಿಗ್ ವಿಶ್ವವಿದ್ಯಾಲಯ
ಜರ್ಮನಿಯಲ್ಲಿ ಜೀವನ ವೆಚ್ಚ ಮತ್ತು ವಿದ್ಯಾರ್ಥಿವೇತನ
ವಿದ್ಯಾರ್ಥಿಗಳು ತಿಂಗಳಿಗೆ 800 ಯೂರೋಗಳಿಂದ 1200 ಯೂರೋಗಳವರೆಗೆ (ಸುಮಾರು 77,500 ರಿಂದ 1.16 ಲಕ್ಷದ ತನಕ) ವೆಚ್ಚವನ್ನು ನಿರೀಕ್ಷಿಸಬೇಕು. ವಿದ್ಯಾರ್ಥಿಗಳು ತಮ್ಮ ವೆಚ್ಚಗಳನ್ನು ಭರಿಸಲು ವರ್ಷಕ್ಕೆ 120 ದಿನಗಳವರೆಗೆ ಪೂರ್ಣ ಸಮಯದ ಉದ್ಯೋಗ ಮತ್ತು 240 ದಿನಗಳವರೆಗೆ ಅರ್ಧ ಸಮಯದ ಉದ್ಯೋಗ ಮಾಡಬಹುದು.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆರ್ಥಿಕವಾಗಿ ಬೆಂಬಲಿಸಲು ಜರ್ಮನಿಯಲ್ಲಿ ವಿವಿಧ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತದೆ. ಕೆಲವು ವಿದ್ಯಾರ್ಥಿವೇತನಗಳು ಸೇರಿವೆ.
ಡಿಎಎಡಿ ವಿದ್ಯಾರ್ಥಿವೇತನ: ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ ನೀಡುವ ಡಿಎಎಡಿ ವಿದ್ಯಾರ್ಥಿವೇತನ ವಿವಿಧ ಕೋರ್ಸ್ಗಳಿಗೆ ಆರ್ಥಿಕ ನೆರವು ನೀಡುತ್ತದೆ.
ಡಾಯ್ಚ್‌ಲ್ಯಾಂಡ್ ವಿದ್ಯಾರ್ಥಿ ವೇತನ: ಉನ್ನತ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಅರ್ಹತೆ ಆಧಾರಿತ ವಿದ್ಯಾರ್ಥಿವೇತನ.
ಎರಾಸ್ಮಸ್+ ಕಾರ್ಯಕ್ರಮ: ಯುರೋಪ್ ಒಳಗೆ ವಿದೇಶದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಹಣಕಾಸಿನ ಅವಕಾಶ ಒದಗಿಸುತ್ತದೆ.
ಅರ್ಜಿ ಸಲ್ಲಿಸುವ ಮೊದಲು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳನ್ನು ಪೂರೈಸಲು ತಮ್ಮ ಕಾಲೇಜು ವಿಶ್ವವಿದ್ಯಾಲಯವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಮತ್ತು ವಿವಿಧ ವಿಶ್ವವಿದ್ಯಾಲಯಗಳ ಶಿಕ್ಷಣ ವ್ಯವಸ್ಥೆಯನ್ನು ಹೋಲಿಸಬೇಕು.